ನವದೆಹಲಿ: ಪರೀಕ್ಷೆಗಳ ಬಗ್ಗೆ ಯಾವುದೇ ರೀತಿಯ ಭಯ ಬೇಡ. ಭಯ, ಒತ್ತಡ ರಹಿತರಾಗಿ ಪರೀಕ್ಷೆ ಬರೆದಲ್ಲಿ ಉತ್ತಮ ಫಲಿತಾಂಶ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಜೊತೆಗೆ ನಡೆಸಿದ ʼಪರೀಕ್ಷಾ ಪೆ ಚರ್ಚಾʼ ಕಾರ್ಯಕ್ರಮದಲ್ಲಿ ಕಿವಿಮಾತು ಹೇಳಿದರು.
ಜೀವನದಲ್ಲಿ ಪರೀಕ್ಷೆಯೇ ಕೊನೆಯ ಅವಕಾಶ ಅಲ್ಲ. ನಾವು ಪರೀಕ್ಷೆಗಳ ಬಗ್ಗೆ ಯೋಚಿಸುಚಷ್ಟು, ಚಿಂತಿಸುವಷ್ಟು ಜೀವನದ ಬಗ್ಗೆ ಚಿಂತಿಸುತ್ತಿಲ್ಲ. ಪರೀಕ್ಷೆಯ ಬಗ್ಗೆ ಹೆಚ್ಚು ಭಯ ಪಡುವುದಲ್ಲ. ಬದಲಾಗಿ ನಿರಾಳತೆಯಿಂದ ಪರೀಕ್ಷೆಗಳನ್ನು ಎದುರಿಸಬೇಕು. ಪರೀಕ್ಷೆಯ ಕಾರಣವನ್ನಿಟ್ಟುಕೊಂಡು ಪೋಷಕರೂ ವಿದ್ಯಾರ್ಥಿಗಳಿಗೆ ಒತ್ತಡ ಹೇರುವುದು ಸರಿಯಲ್ಲ. ಒತ್ತಡ ಹೇರದೇ ಹೋದಲ್ಲಿ ಅವರಿಗೂ ಪರೀಕ್ಷೆ ಬರೆಯುವುದಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯಕ್ಕಿಂತ ಹೆಚ್ಚು, ಒತ್ತಡದ ಭಯವೇ ಇರುತ್ತದೆ. ಆದ್ದರಿಂದ ಪೋಷಕರೂ ಈ ಬಗ್ಗೆ ಗಮನಹರಿಸಿ ಎಂದು ಕಿವಿಮಾತು ಹೇಳಿದರು.
ಪರೀಕ್ಷೆಯೇ ಜೀವನದ ಅಂತಿಮ ಆಕಾಂಕ್ಷೆಯಲ್ಲ. ಅದರ ಹೊರತಾಗಿಯೂ ಆಲೋಚಿಸುವ ಕ್ರಮವನ್ನು ಅಳವಡಿಸಿಕೊಳ್ಳಬೇಕಿದೆ. ಜೀವನದ ಬಗೆಗೂ ನಾವು ಯೋಚಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ನಮ್ಮೊಳಗಿನ ಅವಲೋಕನ ನಡೆಸುವ ಗುಣವೂ ನಮ್ಮಲ್ಲಿರಬೇಕು ಎಂದು ಹೇಳಿದರು. ನೀವು ಮೆಚ್ಚುವ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗುರಿ ಸಾಧಿಸಿ ಎಂಬುದಾಗಿಯೂ ವಿದ್ಯಾರ್ಥಿಗಳಿಗೆ ತಿಳಿಸಿದರು. ಇನ್ನು ವಿದ್ಯಾರ್ಥಿಗಳಿಗೆ ವಿಷಯಗಳ ಬೋಧನೆಯ ಸಂದರ್ಭದಲ್ಲಿ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ನುಡಿದರು. ಪರೀಕ್ಷೆಗಳು ಏಕಾಏಕಿ ಬರುವುದಲ್ಲ. ಆದ್ದರಿಂದ ಸಿದ್ಧತೆಗಳನ್ನು ಸಮಯೋಚಿತವಾಗಿ ಮಾಡಿಕೊಳ್ಳುವ ಮೂಲಕ ಒತ್ತಡ ಮುಕ್ತರಾಗಬಹುದು ಎಂದು ನುಡಿದರು.
ಜೀವನದಲ್ಲಿ ಯಶಸ್ಸು ಕಂಡವರೆಲ್ಲರೂ ತಮ್ಮ ನೆಚ್ಚಿನ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ಮುಂದೆ ಬಂದವರು ಎಂದು ಅವರು ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹ ತುಂಬಿದರು. ಪರೀಕ್ಷೆಗಳಲ್ಲಿಯೂ ಮೊದಲು ನಮಗೆ ತಿಳಿದಿರುವ ಸರಳ ಪ್ರಶ್ನೆಗಳಿಗೆ ಉತ್ತರ ನೀಡುವುದರತ್ತ ಗಮನ ಹರಿಸಬೇಕು. ಆ ಬಳಿಕ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕು ಎಂದು ಅವರು ನುಡಿದರು. ಎಲ್ಲರೂ ಎಲ್ಲಾ ವಿಷಯಗಳಲ್ಲಿಯೂ ಪರಿಣಿತಿ ಪಡೆದಿರುವುದು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ವಿಷಯದ ಕಲಿಕೆಗೂ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಹಂಚಿಕೆ ಮಾಡಿಕೊಳ್ಳುವ ಕಲೆಯನ್ನು ಅರಿಯಬೇಕು. ಮಕ್ಕಳು ಹೊಸ ಕಲಿಕೆಗಳತ್ತ ತಮ್ಮನ್ನು ತಾವು ತೆರೆದುಕೊಳ್ಳುವತ್ತ ಚಿಂತಿಸಬೇಕು ಎಂದು ಅವರು ತಿಳಿಸಿದರು. ಹಾಗೆಯೇ ಬಿಡುವಿನ ವೇಳೆಯಲ್ಲಿ ಡ್ರಾಯಿಂಗ್, ಕ್ರೀಡೆ ಮೊದಲಾದ ಸೃಜನಾತ್ಮಕ ಕಲಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳಿಗೆ ಗದರಿಸಿ ಹೇಳುವ ಬದಲು ಪ್ರೀತಿಯಿಂದ ಅವರನ್ನು ತಿದ್ದುವ, ತಿಳಿ ಹೇಳುವ ಕೆಲಸವನ್ನು ಹೆತ್ತವರು, ಪೋಷಕರು, ಶಿಕ್ಷಕರು ಮಾಡಬೇಕು. ಕಠಿಣ ಪ್ರಶ್ನೆಗಳನ್ನು ನಿಭಾಯಿಸುವ ಕಲೆಯನ್ನು ಅವರಿಗೆ ತಿಳಿಸಿ ಹೇಳುವ, ಮನವರಿಕೆ ಮಾಡುವ ಕೆಲಸವಾಗಬೇಕು. ಕಷ್ಟದ ವಿಷಯದಿಂದ ದೂರ ಸರಿಯುವ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಪೋಷಕರು ಮಾಡಬೇಕಿದೆ ಎಂದು ಮೋದಿ ನುಡಿದರು. ಹಾಗೆಯೇ ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಪೋಷಕರಿಗೆ ನೆರವಾಗಿ. ಬಿಡುವಿನ ಸಮಯ ಪ್ರತಿಯೊಬ್ಬರಿಗೂ ಅತ್ಯಗತ್ಯ. ಇಲ್ಲವಾದಲ್ಲಿ ರೊಬೋಟ್ಗಳಂತಾಗುತ್ತೇವೆ ಎಂದು ಮೋದಿ ಹೇಳಿದರು.
ಇನ್ನು ಮಕ್ಕಳು ಮುಂಜಾನೆ ಬೇಗನೆ ಏಳಬೇಕು ಎಂದು ಹೆತ್ತವರು ಬಯಸುತ್ತಾರೆ. ಆದರೆ ಈ ಬಗ್ಗೆ ಮಗುವನ್ನು ತಯಾರಿ ಮಾಡುವಲ್ಲಿಯೂ ಪೋಷಕರು ಹೆಚ್ಚು ಅಸ್ಥೆ ವಹಿಸಬೇಕು. ಯಾವುದೇ ವಿಚಾರವಿರಲಿ ಅದರ ಮೌಲ್ಯವನ್ನು ವಿದ್ಯಾರ್ಥಿಗಳು ಒಮ್ಮೆ ಅರಿತಲ್ಲಿ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.ಪಾರಂಪರಿಕತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕೊರೋನಾ ಸಂಕಷ್ಟ ವಿದ್ಯಾರ್ಥಿಗಳ ಆಟ ಪಾಠಗಳನ್ನು ಕಿತ್ತುಕೊಂಡಿದೆ. ಕೊರೋನಾ ಸಂಕಷ್ಟದ ಅವಧಿ ಎಲ್ಲರ ಜೀವನಲ್ಲಿಯೂ ಒಂದು ಪಾಠವನ್ನು ಹೇಳಿಕೊಟ್ಟಿದೆ ಎಂದು ಅವರು ಹೇಳಿದರು. ಕೊರೋನಾ ಸಂದರ್ಭದಲ್ಲಿ ನಾವು ಅನೇಕ ವಿಚಾರಗಳನ್ನು ಕಳೆದುಕೊಂಡಿದ್ದೇವೆ. ಆದರೆ ಹಲವು ವಿಚಾರಗಳ ಬಗ್ಗೆ ನಮಗೆ ಅರಿವು ಮೂಡಿಸಿದ, ಕುಟುಂಬ ಜೀವನದ ಪರಿಕಲ್ಪನೆಯನ್ನು ತಿಳಿಸಿದ ಕೀರ್ತಿಯೂ ಕೊರೋನಾಗೆ ಸಲ್ಲುತ್ತದೆ ಎಂದು ಮೋದಿ ತಿಳಿಸಿದರು.
ಪರೀಕ್ಷಾ ವಿಚಾರವಾಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಕೆಲಸವಾಗಬೇಕು. ಮಕ್ಕಳ ಭವಿಷ್ಯಕ್ಕೆ ಅಂಕಗಳು ಮಾನದಂಡವಾಗಬಾರದು. ವಿದ್ಯಾರ್ಥಿಗಳು ತಮ್ಮ ಕೆಲಸಗಳನ್ನು ಅವರೇ ಮಾಡಿಕೊಳ್ಳಂತಾಗಬೇಕು. ಈ ನಿಟ್ಟಿನಲ್ಲಿ ಅವರ ಇಚ್ಛೆಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುವಂತೆಯೂ ಮೋದಿ ನುಡಿದರು. ವಿದ್ಯಾರ್ಥಿಗಳು ಎಲ್ಲಾ ವಿಚಾರದಲ್ಲಿಯೂ ಸ್ವಯಂ ಸಮರ್ಥರಾಗುವ ನಿಟ್ಟಿನಲ್ಲಿ ಪೋಷಕರು ಪ್ರೋತ್ಸಾಹ, ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಜೀವನದಲ್ಲಿ ಅವಕಾಶಗಳು ಸಿಕ್ಕಾಗ ಅದನ್ನು ಬಳಸಿಕೊಳ್ಳುವ ಚಾಕಚಕ್ಯತೆ ಮಕ್ಕಳಲ್ಲಿರಬೇಕು. ಅದಕ್ಕಾಗಿ ಅವರವರ ಕೌಶಲ್ಯಗಳನ್ನು ಅಭಿವೃದ್ಧಿ ಮಾಡುವ ಮೂಲಕ ಯಶಸ್ಸು ಪಡೆಯಬೇಕು. ಕನಸುಗಳನ್ನು ಕಾಣಬೇಕು. ಆದರೆ ಕನಸುಗಳಲ್ಲೇ ಕಾಲಕಳೆಯುವ ಬದಲು. ಆ ಕನಸನ್ನು ಕಾರ್ಯರೂಪಕ್ಕೆ ತರುವತ್ತ ನಾವು ಗಮನ ಹರಿಸಿದಲ್ಲಿ ಭವಿಷ್ಯ ಬೆಳಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.