ಬೆಂಗಳೂರು: ಎರಡು ಅವತಾರಗಳನ್ನು ಪೂರ್ಣಗೊಳಿಸಿ ಮೂರನೇ ಅವತಾರದಲ್ಲಿರುವ ಭಾರತೀಯ ಜನತಾ ಪಕ್ಷವು ವಿಶ್ವದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅತಿ ಹೆಚ್ಚು ಸಂಸದರು, ಗರಿಷ್ಠ ಕಾರ್ಯಕರ್ತರು, ಅತಿ ಹೆಚ್ಚು ಶಾಸಕರು, ಅತಿ ಹೆಚ್ಚು ಸಂಖ್ಯೆಯ ಎಸ್.ಸಿ., ಎಸ್ಟಿ ಹಾಗೂ ಮಹಿಳಾ ಶಾಸಕರನ್ನು ಹೊಂದಿದ ಪಕ್ಷವಾಗಿ ಬಿಜೆಪಿ ಬೆಳೆದು ನಿಂತಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಧಾನ ಭಾಷಣ ಮಾಡಿದ ಅವರು, “1951ರಲ್ಲಿ ಜನಸಂಘ ಆರಂಭಗೊಂಡಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ನೆಹರೂ ಅವರ ನಿರ್ಧಾರವನ್ನು ವಿರೋಧಿಸಿ ರಾಷ್ಟ್ರೀಯ ಚಿಂತನೆಯ ಪಕ್ಷವನ್ನು ಶ್ಯಾಮಪ್ರಸಾದ ಮುಖರ್ಜಿ ಅವರು ಆರಂಭಿಸಿದರು. ಪಕ್ಷವು ಕಾಶ್ಮೀರದ ಜೈಲಿನಲ್ಲೇ ಅವರ ಸಾವನ್ನು ಕಾಣುವಂತಾಯಿತು. ಬಳಿಕ ಪಕ್ಷದ ಹಿರಿಯ ಮುಖಂಡ ದೀನದಯಾಳ ಉಪಾಧ್ಯಾಯರ ಕಗ್ಗೊಲೆ ನಡೆಯಿತು. ಹೀಗೆ ನಾಯಕರ ಅನಿರೀಕ್ಷಿತ ಸಾವಿನಿಂದ ಕಂಗೆಡದೆ ಪಕ್ಷ ಮುನ್ನಡೆಯಿತು” ಎಂದು ವಿವರಿಸಿದರು.
ದೇಶದಲ್ಲಿನ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಮತ್ತು ಇಂದಿರಾ ಗಾಂಧಿ ಅವರ ನಿರ್ಧಾರಗಳನ್ನು ಆಕ್ಷೇಪಿಸಿ ಜನತಾ ಪಕ್ಷ ಸ್ಥಾಪನೆಯಾದಾಗ ಅದರಲ್ಲಿ ಅಟಲ್ಜಿ, ಅಡ್ವಾಣಿಜಿ ಅವರು ಹೊಸ ಪಕ್ಷದಲ್ಲಿ ಸೇರಿದರು. 1980ರಲ್ಲಿ ಮುಂಬೈ ಮಹಾಧಿವೇಶನದಲ್ಲಿ ಬಿಜೆಪಿ ಸ್ಥಾಪನೆಗೊಂಡಿತು. ಆರಂಭಿಕ ದಿನಗಳಲ್ಲಿ ಕನಿಷ್ಠ ಸ್ಥಾನ ಪಡೆದರೂ ಈಗ ಅತಿದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ ಎಂದರು.
370ನೇ ವಿಧಿ ರದ್ದು ಮಾಡುವ ಮೂಲಕ ಪಕ್ಷವು ಕಾಶ್ಮೀರಕ್ಕೆ ನ್ಯಾಯ ಸಿಗುವಂತೆ ಮಾಡಿದೆ. ಸಿಎಎ ಜಾರಿ ಮೂಲಕ ನಿರಾಶ್ರಿತರಿಗೆ ನ್ಯಾಯ ನೀಡಿದೆ. ಶ್ರೀರಾಮ ಮಂದಿರ ನಿರ್ಮಾಣ ಕುರಿತ ನಿರ್ಧಾರದ ಮೂಲಕ ದೇಶದ ಸಾಂಸ್ಕøತಿಕ ಅಸ್ಮಿತೆಗೆ ಗೌರವ ನೀಡುವ ಕೆಲಸ ಮಾಡಿದೆ ಎಂದು ಅವರು ವಿವರಿಸಿದರು. ದೇಶದ ಕಟ್ಟ ಕಡೆಯ ಮನುಷ್ಯನಿಗೆ ನೆರವು ನೀಡುವ ಕಾರ್ಯ ಮಾಡಬೇಕೆಂಬ ದೀನದಯಾಳ ಉಪಾಧ್ಯಾಯರ ಕನಸನ್ನು ನನಸು ಮಾಡುವತ್ತ ಬಿಜೆಪಿ ಸರಕಾರಗಳು ಕೆಲಸ ಮಾಡುತ್ತಿವೆ. ಕೃಷಿ ಸಮ್ಮಾನ್, ಜನಧನ್, ಉಜ್ವಲಾ ಹಾಗೂ ಆಯುಷ್ಮಾನ್ ಮತ್ತಿತರ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು.
ಅದಾನಿ, ಅಂಬಾನಿ ಕೇಂದ್ರಿತ ಯೋಜನೆಗಳು ನಮ್ಮದಲ್ಲ. ರಾಜಕೀಯವು ಬದಲಾವಣೆಗೆ ಪೂರಕ ಎಂಬ ಚಿಂತನೆ ನಮ್ಮದು. ಅಧಿಕಾರವೇ ಅಂತಿಮ ಗುರಿಯಲ್ಲ. ದೇಶವನ್ನು ಪರಮ ವೈಭವದತ್ತ ಕೊಂಡೊಯ್ಯುವ ಗುರಿ ನಮ್ಮದು ಎಂದು ವಿವರಿಸಿದರು.
ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಾದ 100 ರೂಪಾಯಿಯಲ್ಲಿ ಕೇವಲ 15 ರೂಪಾಯಿ ಬಳಕೆಯಾಗುತ್ತದೆ ಎಂದು 1986ರಲ್ಲಿ ಕಾಂಗ್ರೆಸ್ನ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು. ಈಗ ಭ್ರಷ್ಟಾಚಾರ ಮುಕ್ತ ಸ್ಥಿತಿ ಇದೆ. 100 ರೂಪಾಯಿಯಲ್ಲಿ 100 ರೂಪಾಯಿಯೂ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ಕೆ.ಎಸ್.ನವೀನ್, ರಾಜ್ಯ ಎಸ್. ಸಿ. ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಕಾಸಲೆ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಬಿ. ನಾರಾಯಣ್, ರಾಜ್ಯ ಮತ್ತು ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.