ಹುಬ್ಬಳ್ಳಿ: ಭೂಮಿಗೆ ಬಿದ್ದ ಮಳೆಹನಿಯನ್ನು ವ್ಯರ್ಥವಾಗದಂತೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಜಲಶಕ್ತಿ ಅಭಿಯಾನವನ್ನು ಆರಂಭ ಮಾಡಿದ್ದು, ಈ ಯೋಜನೆಯಂತೆ ಭೂಮಿಗೆ ಬಿದ್ದ ಮಳೆ ಹನಿಯನ್ನು ಇಂಗಿಸಿ ಅಂತರ್ಜಲ ವೃದ್ಧಿ ಮಾಡಲು ಪೂರಕ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವೂ ಭರದ ಸಿದ್ಧತೆ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ʼಕ್ಯಾಚ್ ದಿ ರೈನ್ʼ ಕಲ್ಪನೆಯ ಆಧಾರದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.
ರಾಜ್ಯದಲ್ಲಿಯೂ ಜಲಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಎ.9 ರಂದು ರಾಜ್ಯದಲ್ಲಿಯೂ ಇದಕ್ಕೆ ಚಾಲನೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಹುಬ್ಬಳ್ಳಿಯಲ್ಲಿ ಅಧಿಕೃತ ಚಾಲನೆ ದೊರೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ಗಳೂ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿವೆ.
ಈ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಜಲಾಯನ ಪ್ರದೇಶಗಳಲ್ಲಿನ ಅತಿಕ್ರಮಣ ತೆರವು ಮಾಡುವುದು, ಅವುಗಳ ನವೀಕರಣ ಕಾರ್ಯಗಳನ್ನು ಕೈಗೊಳ್ಳುವುದು ನೀರಿನ ಆಕರಗಳ ನವೀಕರಣ ಕಾರ್ಯ, ದುರಸ್ಥಿ ಕಾರ್ಯಗಳನ್ನು ನಡೆಸುವುದು ಸೇರಿದಂತೆ ಇನ್ನೂ ಹಲವಾರು ಕಾರ್ಯಗಳನ್ನು ನಡೆಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಮಣ್ಣಿನ ಸ್ವರೂಪವನ್ನಾಧರಿಸಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ನೀರಿನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಜಿಲ್ಲಾ ಕೇಂದ್ರಗಳಲ್ಲಿ ನೀರಿನ ಜ್ಞಾನ ಕೇಂದ್ರವಾದ ಜಲಶಕ್ತಿ ಕೇಂದ್ರಗಳನ್ನು ಆರಂಭ ಮಾಡುವುದು, ಜಲಾಯನ ಅಭಿವೃದ್ಧಿ ಯೋಜನೆಗಾಗಿ ನರೇಗಾ ಯೋಜನೆಯಡಿ ಕೆಲಸ ಕೈಗೆತ್ತಿಕೊಳ್ಳುವುದು, ಮಳೆ ನೀರು ಕೊಯ್ಲಿಗೆ ಕ್ರಮ ಕೈಗೊಳ್ಳುವುದು ಸೇರಿದಂತೆ ಅಂತರ್ಜಲ ವೃದ್ಧಿಗೆ ಪೂರವಾಗುವ ಅನೇಕ ಕಾರ್ಯಗಳನ್ನು ಈ ಯೋಜನೆಯಡಿಯಲ್ಲಿ ಮೂರ್ತ ಸ್ವರೂಪಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.