ಬೆಂಗಳೂರು: ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಶತಸಿದ್ದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರನ್ನು ಬೆಂಬಲಿಸಿ ವಿವಿಧ ಪಕ್ಷಗಳಿಂದ ಬಿಜೆಪಿ ಸೇರಿದ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.
ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವುದರ ಜೊತೆಗೆ ಈ ಭಾಗದ ಅಭಿವೃದ್ಧಿಗೆ ಗರಿಷ್ಠ ಅನುದಾನವನ್ನು ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರಕಾರವು ಕೋವಿಡ್ ಸಂಕಷ್ಟವನ್ನು ಯಶಸ್ವಿಯಾಗಿ ನಿಭಾಯಿಸಿದೆ. ಅಲ್ಲದೆ, ಅತ್ಯುತ್ತಮ ಬಜೆಟ್ ಅನ್ನು ನೀಡಿದೆ ಎಂದು ಅವರು ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯುತ್ತಮ ಜನಪರ ಕಾರ್ಯಗಳನ್ನು ಜನರು ಬೆಂಬಲಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಪ್ರಧಾನಿ ಮೋದಿ ಅವರ ಸರಕಾರವು ಜನಧನ್ ಖಾತೆಗಳ ಮೂಲಕ ಬಡ ಮಹಿಳೆಯರ ಸಶಕ್ತೀಕರಣ, ಶೌಚಾಲಯದ ಸಮಸ್ಯೆ ಇರುವ ಉತ್ತರ ಕರ್ನಾಟಕದ ಮಹಿಳೆಯರ ಸಮಸ್ಯೆ ನಿವಾರಣೆ ಮಾಡಿದೆ. ಉಜ್ವಲ ಯೋಜನೆ ಮೂಲಕ ಸಿಲಿಂಡರ್ ಒದಗಿಸುವ ಕಾರ್ಯ, ಆಯುಷ್ಮಾನ್ ಯೋಜನೆ ಮೂಲಕ ಬಡವರಿಗೆ ವಿಮೆ ಒದಗಿಸುವ ಸತ್ಕಾರ್ಯ ಮಾಡಿದ್ದಲ್ಲದೆ, ಕೋವಿಡ್ ಸಂದರ್ಭದಲ್ಲಿ ಮನೆ ಮನೆಗಳಿಗೆ ಆಹಾರ ಧಾನ್ಯ ಒದಗಿಸಿತ್ತು. ಈ ಎಲ್ಲಾ ಅತ್ಯುತ್ತಮ ಜನಪರ ಯೋಜನೆಗಳನ್ನು ಗಮನಿಸಿ ಮತದಾರರು ಬಿಜೆಪಿಯನ್ನು ನಿರಂತರವಾಗಿ ಬೆಂಬಲಿಸಿದ್ದಾರೆ. ಮುಂದೆಯೂ ಬೆಂಬಲಿಸಲಿದ್ದಾರೆ ಎಂದರು.
ಡಿಕೆಶಿ ಮುಖವನ್ನು ಸಿದ್ದರಾಮಯ್ಯ ಅವರು ನೋಡುತ್ತಿಲ್ಲ. ಸಿದ್ದರಾಮಯ್ಯ ಮುಖವನ್ನು ಡಿಕೆ ಶಿವಕುಮಾರ್ ನೋಡುತ್ತಿಲ್ಲ ಕಾಂಗ್ರೆಸ್ ಒಳಜಗಳ ಬೀದಿ ಜಗಳವಾಗಿ ಪರಿವರ್ತನೆಗೊಂಡಿದೆ. ಜೆಡಿಎಸ್ ರಾಜ್ಯದಲ್ಲಿ ಕಳೆದು ಹೋಗಿದೆ. ಕಾಂಗ್ರೆಸ್ ಪಕ್ಷವು ಒಳಜಗಳದಿಂದಾಗಿ ನೆಲೆ ಕಳೆದುಕೊಳ್ಳಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮನೆ ಖಾಲಿಯಾಗಿದೆ. ಭಾರತೀಯ ಜನತಾ ಪಕ್ಷದ ಹಡಗು ತುಂಬುತ್ತಿದೆ. ಸಿದ್ದರಾಮಯ್ಯ ಅವರು ಅಧಿಕಾರದ ಗದ್ದುಗೆಗೆ ಏರಲು ʼಅಹಿಂದʼವನ್ನು ಬಳಸಿಕೊಂಡರು. ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಪಕ್ಷದ ಮುಖಂಡರು ದಲಿತರಿಗೆ ನ್ಯಾಯವನ್ನು ಒದಗಿಸಿಲ್ಲ. ದಲಿತ ಮುಖಂಡರನ್ನು ಅಧಿಕಾರ ಪಡೆಯಲು ಮಾತ್ರ ಬಳಸಿಕೊಂಡಿದೆ ಎಂದರು.
ಕಾಂಗ್ರೆಸ್ ಪಕ್ಷವು ಕೇವಲ ಡಾ ಪರಮೇಶ್ವರ್ ಅವರನ್ನು ಸೋಲಿಸಿದ್ದಲ್ಲ, ಅದು ಡಾ ಬಿ.ಆರ್. ಅಂಬೇಡ್ಕರ್ ಅವರಿಗೂ ಅನ್ಯಾಯ ಮಾಡಿದೆ. ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರ ಪ್ರಾಣ ತ್ಯಾಗ ಆದಾಗ ಅವರ ಶವ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡದೆ ಅನ್ಯಾಯ ಮಾಡಿದೆ. ಲೋಕಸಭಾ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿದಾಗ ಅವರ ಸೋಲಿಗೆ ಕಾರಣವಾಗಿತ್ತು ಎಂದು ವಿವರಿಸಿದರು.
ದಲಿತ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿಸಿದ ಕಾಂಗ್ರೆಸಿಗರು ಶಾಸಕರ ಮನೆಗೆ ಬೆಂಕಿ ಹಾಕಿದ ಸಂಪತ್ರಾಜ್ನನ್ನು ಈ ವರೆಗೆ ಉಚ್ಚಾಟನೆ ಮಾಡಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ನ್ಯಾಯ ಕೊಟ್ಟಿಲ್ಲ, ಕಾಂಗ್ರೆಸ್ಗೆ ಡಾ ಬಿ.ಆರ್. ಅಂಬೇಡ್ಕರ್ ಅವರ ಶಾಪ ಇದೆ. ಡಾ ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ನೀಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಮಾಡಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಎಸ್.ಸಿ. ಮುಖಂಡ ರವಿ ಗಾಯಕ್ವಾಡ್ ಮತ್ತು ಅವರ ಬೆಂಬಲಿಗರು, ಟೋಕರಿ ಕೋಳಿ ಸಮಾಜದ ತಾಲ್ಲೂಕಿನ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.
ಸಂಸದ ಭಗವಂತ ಖೂಬಾ, ಸಚಿವ ಪ್ರಭು ಚೌಹಾಣ್, ರಾಜ್ಯ ಎಸ್.ಸಿ. ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಟಾಳ್ಕರ್, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.