ಒಂದು ಔಪಚಾರಿಕವಾದ ಚರ್ಚೆಯಲ್ಲೂ, ಅಥವಾ ಅನೌಪಚಾರಿಕ ಮಾತುಕತೆಗಳಲ್ಲೋ ಎದುರು ಕುಟಿಲ ವ್ಯಕ್ತಿಯ ಬಳಿಯಲ್ಲಿ ಸ್ವಾತಂತ್ರ್ಯ ಯಾವಾಗ ದೊರಕಿತು ಎಂದು ಕೇಳಿ. ಪ್ರಶೆಯನ್ನು ಮುಗಿಸುವುದಕ್ಕೂ ಮುನ್ನವೇ ಆ ವ್ಯಕ್ತಿ ಉತ್ತರವನ್ನು ನೀಡುತ್ತಾರೆ, ಎರಡನೆಯದಾಗಿ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ನಡೆಯಿತು ಎಂದು ಕೇಳಿ. ನೂರರಲ್ಲಿ 50 ರಿಂದ 60 ಜನರು ಈ ಪ್ರಶ್ನೆಗೆ ಉತ್ತರಿಸುತ್ತಾರೆ. ಆದರೆ ಗಾಂಧೀಜಿ, ನೆಹರು, ಸುಭಾಷ್ ಚಂದ್ರ ಬೋಸ್, ಅಜಾದ್, ಭಗತ್ ಸಿಂಗ್, ರಾಣಿ ಲಕ್ಷ್ಮಿಬಾಯಿಯನ್ನು ಹೊರತು ಪಡಿಸಿ ಹತ್ತೇ ಹತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಹೇಳುವಂತೆ ಕೇಳಿ, ನೂರರಲ್ಲಿ ತೊಂಭತ್ತು ಜನರು ಈ ಪ್ರಶ್ನೆಗೆ ಉತ್ತರಿಸುವುದಿಲ್ಲ. ಮತ್ತೂ ಕೆಲವರು ತಡವರಿಸುತ್ತಾ ಒಂದು ಐದಾರು ಹೆಸರುಗಳನ್ನೂ ಹೇಳಬಹುದು ಅಷ್ಟೇ. ಇದಕ್ಕೆ ಕಾರಣವೇನು ಎಂಬುದು ಎಷ್ಟು ಗಂಭೀರವಾಗಿ ಆಲೋಚಿಸಬೇಕಾದ ವಿಚಾರವೋ, ಅದಕ್ಕೆ ಪರಿಹಾರವೇನು ಎಂಬುದೂ ಅಷ್ಟೇ ಗಂಭೀರವಾಗಿ ಆಲೋಚಿಸಬೇಕಾದ ವಿಚಾರವಲ್ಲವೇ? ಅನೇಕ ವರ್ಷಗಳಿಂದ ನಮ್ಮ ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಕೆಲವೇ ಕೆಲವು ಸ್ವಾತಂತ್ರ ಹೋರಾಟಗಾರರ ಕುರಿತಾದ ವಿಚಾರಗಳೇಕೆ ಅನೇಕ ಬಾರಿ ಕಲಿಸಲ್ಪಡುತ್ತದೆ.? ಸ್ವಾತಂತ್ರ್ಯ ಹೋರಾಟಗಾರ ಸುರೇಂದ್ರ ಸಾಯಿಯವರ ಬಗ್ಗೆ ನಮಗೆಷ್ಟು ಗೊತ್ತು?
ಬಹುಶಃ ನಮ್ಮಲ್ಲಿ ಅನೇಕರು ಸುರೇಂದ್ರ ಸಾಯಿ ಎಂಬ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇದೆ ಮೊದಲನೇ ಬಾರಿಗೆ ಕೇಳುತ್ತಿರಬಹುದು. ಸುರೇಂದ್ರ ಸಾಯಿಯವರನ್ನು ಅವರ ಊರಿನ ಮತ್ತು ಒಡಿಶಾದ ಜನರು ಹೆಮ್ಮೆಯಿಂದ ಹಾಗೂ ಪ್ರೀತಿಯಿಂದ “ಬೀರ್ ಸುರೇಂದ್ರ ಸಾಯಿ” ಎಂದು ಕರೆಯುತ್ತಾರೆ. ಬೀರ್ ಅಂದರೆ ವೀರ ಎಂದರ್ಥ. ತನ್ನ ಜೀವನದ ಅಮೂಲ್ಯ 37 ವರ್ಷಗಳನ್ನು ಜೈಲಿನಲ್ಲಿ ಬಂಧಿಯಾಗಿ ಕಳೆದ ವೀರ ಯೋಧನೊಬ್ಬನ ತ್ಯಾಗ ಬಲಿದಾನಗಳ ಬಗ್ಗೆ ನಮಗೆ ಅರಿವಿಲ್ಲದಿರುವುದು ಖೇದಕರ ವಿಚಾರ. ಒರಿಸ್ಸಾದ ಸಂಬಾರಪುರದಿಂದ ಸುಮಾರು 40 ಕಿಲೋಮೀಟರ್ ದೂರದ ಖಿನಿಂದಾ ಎಂಬ ಹಳ್ಳಿಯೊಂದರಲ್ಲಿ 1809 ರ ಜನವರಿ 23 ರಂದು ಸುರೇಂದ್ರ ಸಾಯಿ ಜನಿಸಿದ್ದರು. ಅಂದು ಸಂಬರ್ಪುರ್ ರಾಜ್ಯವನ್ನಾಳುತ್ತಿದ್ದ ರಾಜ ವಂಶದ ಧರ್ಮ ಸಿಂಗರ ಏಳು ಮಕ್ಕಳಲ್ಲಿ ಇವರೂ ಒಬ್ಬರಾಗಿದ್ದರು.
1827 ರಲ್ಲಿ ಉತ್ತರಾಧಿಕಾರಿಯಿಲ್ಲದ ಸಂಬರ್ಪುರದ ರಾಜ ಮಹಾರಾಜ ಸಾಯಿ ಮೃತ್ಯು ಹೊಂದುತ್ತಾರೆ, ಈ ಸಂದರ್ಭದಲ್ಲಿ ಬ್ರಿಟೀಷರು ಅವರ ವಿಧವೆ ಪತ್ನಿ ಮೋಹನ ಕುಮಾರಿಯನ್ನು ರಾಜ್ಯದ ಉತ್ತರಾಧಿಕಾರಿಯನ್ನಾಗಿ ಘೋಶಿಸಿ ಪಟ್ಟವನ್ನು ಕಟ್ಟುತ್ತಾರೆ. ಆದರೆ ಗಂಡು ಮಕ್ಕಳು ಮಾತ್ರ ರಾಜ್ಯವಾಳಬೇಕೆಂಬ ನಿಯಮವನ್ನು ಅನುಸರಿಸುತ್ತಿದ್ದ ರಾಜ್ಯದ ಪಾಳೆಯಗಾರರು ಮತ್ತು ಇತರ ರಾಜವಂಶಸ್ಥರ ಮನದಲ್ಲಿ ಈ ಘಟನೆಯಿಂದ ಅಸಮಾಧಾನವೂ ಭುಗಿಲೇಳುತ್ತದೆ. ಸುರೇಂದ್ರ ಸಾಯಿಯು ರಾಜ್ಯವನ್ನು ಆಳಲು ಎಲ್ಲಾ ವಿಧದಲ್ಲಿಯೂ ತಕ್ಕವರಾಗಿಯೂ ಸಮರ್ಥರೂ ಆಗಿದ್ದರೂ ಅವರಿಗೆ ಪಟ್ಟವನ್ನು ನಿರಾಕರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ರಾಣಿಯು ತೆಗೆದುಕೊಂಡ ಕೆಲ ನಿರ್ಧಾರಗಳಿಂದ ಉಂಟಾದ ಅಸಮಾಧಾನಗಳ ಫಲವಾಗಿ ಬ್ರಿಟೀಷರು ರಾಣಿಯನ್ನು ಉಚ್ಛಾಟಿಸಿ ರಾಜಕುಟುಂಬದ ನಾರಾಯಣ ಸಿಂಗರಿಗೆ ಪಟ್ಟವನ್ನು ಕಟ್ಟುತ್ತಾರೆ. ಸುರೇಂದ್ರ ಸಾಯಿಯವರು ತಮ್ಮ ಹಕ್ಕನ್ನು ಮಂಡಿಸುತ್ತಿದ್ದರೂ ಬ್ರಿಟೀಷರು ಅವರನ್ನು ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ನಾರಾಯಣ ಸಿಂಗರ ಆಡಳಿತದ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾಗುತ್ತದೆ. ಸುರೇಂದ್ರ ಸಾಯಿ ಮತ್ತವರ ಅನುಯಾಯಿಗಳು ಹಾಗೂ ಗೊಂಡ ಜನಾಂಗದ ಜಮೀನ್ದಾರರು ಆಡಳಿತಕ್ಕೆ ಅನೇಕ ತೊಂದರೆಗಳನ್ನು ತಂದೊಡ್ಡುತ್ತಾರೆ. ಈ ಸಂದರ್ಭದಲ್ಲಿ ಬ್ರಿಟೀಷರೊಂದಿಗೆ ನಡೆದ ಯುದ್ಧದಲ್ಲಿ ಸುರೇಂದ್ರ ಸಾಯಿ, ಅವರ ಸಹೋದರ ಉದ್ಯನ್ತ ಸಾಯಿ ಮತ್ತು ಚಿಕ್ಕಪ್ಪ ಬಲರಾಮ ಸಿಂಗ್ರನ್ನು ಬಂಧಿಸಿ ಹಝರಿಬಾಗ್ ಜೈಲಿನಲ್ಲಿ ಇರಿಸಲಾಗುತ್ತದೆ. ಮತ್ತು ಇದೇ ಬಂಧೀಖಾನೆಯಲ್ಲಿ ಸುರೇಂದ್ರ ಸಾಯಿಯವರ ಚಿಕ್ಕಪ್ಪ ಬಲರಾಮ್ ಸಿಂಗ್ ಮೃತಪಡುತ್ತಾರೆ. ಇವೆಲ್ಲದರ ಮಧ್ಯೆ 1849 ರಲ್ಲಿ ರಾಜ ನಾರಾಯಣ ಸಿಂಗ್ ಕೂಡಾ ಅಸುನೀಗುತ್ತಾರೆ. ಉತ್ತರಾಧಿಕಾರಿ ಇಲ್ಲ ಎಂಬ ನಿಯಮದಂತೆ ಸಂಬಲ್ಪುರ ರಾಜ್ಯವನ್ನು ಲಾರ್ಡ್ ಡಾಲ್ ಹೌಸಿಯು 1847 ರಲ್ಲಿ ವಶಪಡಿಸಿಕೊಳ್ಳುತ್ತಾನೆ. 1857 ನೇ ಇಸವಿಯಲ್ಲಿ ಸುರೇಂದ್ರ ಸಾಯಿ ಮತ್ತವರ ಸಹೋದರರು ಬಂಧೀಖಾನೆಯಿಂದ ಸ್ವತಂತ್ರಗೊಳ್ಳುತ್ತಾರೆ. ಈ ಬಾರಿ ಸುರೇಂದ್ರ ಸಾಯಿ ತಮ್ಮ ಸಹೋದರರು, ಪುತ್ರರು ಮತ್ತು ಜಮೀನುದಾರರ ಬೆಂಬಲದೊಂದಿಗೆ ಬ್ರಿಟೀಷರನ್ನು ಎದುರಿಸುತ್ತಾರೆ.
ಸುರೇಂದ್ರರು, ಅಧಿಕಾರದ ಲಾಲಸೆಯನ್ನು ಹೊಂದಿದ್ದ ಬ್ರಿಟೀಷರಿಂದ ಸದಾ ಕಿರುಕುಳಕ್ಕೊಳಗಾಗುತ್ತಿದ್ದ ಸಂಬಲ್ಪುರ ರಾಜ್ಯದ ಆದಿವಾಸಿ ಜನಾಂಗದ ಜನರ ಭಾಷೆ ಮತ್ತು ಸಂಸ್ಕೃತಿಯನ್ನು ಬೆಂಬಲಿಸುತ್ತಿದ್ದರು. ಅವರು 1827 ರಲ್ಲಿ ತಮ್ಮ 18 ನೆ ವಯಸ್ಸಿನಲ್ಲೇ ಬ್ರಿಟೀಷರ ವಿರುದ್ಧ ಹೋರಾಟಕ್ಕಿಳಿದಿದ್ದ ಸುರೇಂದ್ರ ಸಾಯಿಯವರು ಬಂಧನಕ್ಕೊಳಗಾದಾಗ ಅವರ ಬೆಂಬಲಿಗರು ಕಾರಾಗ್ರಹವನ್ನು ಒಡೆದು ಅವರನ್ನು ಬಿಡುಗಡೆಗೊಳಿಸಿದ್ದರು. ದೇಶದಲ್ಲಿ ಸ್ವಾತಂತ್ರ ಹೋರಾಟವು 1858 ರ ಸಂದರ್ಭದಲ್ಲಿ ಕೊನೆಗೊಳ್ಳುತ್ತಾ ಬಂದು ಬ್ರಿಟೀಷರ ಆಡಳಿತವು ಸ್ಥಿರಗೊಳ್ಳುತ್ತಿದ್ದ ಸಂದರ್ಭದಲ್ಲೂ ಸುರೇಂದ್ರ ಸಾಯಿಯವರು ತಮ್ಮ ಹೋರಾಟವನ್ನು ಕೊನೆಗೊಳಿಸಲಿಲ್ಲ. ಬದಲಾಗಿ ಒರಿಸ್ಸಾದ ದುರ್ಗಮ ಬೆಟ್ಟಗಳನ್ನು ಕೇಂದ್ರವಾಗಿರಿಸಿ ಹೋರಾಟವನ್ನು ನಡೆಸುತ್ತಿದ್ದರು. ಅವರನ್ನು ಸೋಲಿಸಲು ಸಾಧ್ಯವಾಗಾಗ ಬ್ರಿಟೀಷರು ಅವರನ್ನು ಹತ್ತಿಕ್ಕಲು ಹರಸಾಹಸವನ್ನು ಪ್ರದರ್ಶಿಸಿದರು. ಸುರೇಂದ್ರ ಸಾಯಿ ಮತ್ತು ಅವರ ಬೇಬಲಿಗರಿಗೆ ಸರಬರಾಜಾಗುತ್ತಿದ್ದ ಆಹಾರ ಮಾತು ಜೀವನಾವಶ್ಯಕ ವಸ್ತುಗಳನ್ನು ತಡೆಹಿಡಿಯಲಾಯಿತು. ಮತ್ತು ದ್ರೋಹಿಯೊಬ್ಬನ ಮೋಸಕ್ಕೊಳಗಾದ ಸುರೇಂದ್ರ ಸಾಯಿ 1864 ರಲ್ಲಿ ಬಂಧಿಸಲ್ಪಟ್ಟರು. ಸುರೇಂದ್ರ ಸಾಯಿ ಮತ್ತವರ 6 ಸಂಗಡಿಗರನ್ನು ಬ್ರಿಟೀಷರು ಆಸಿರ್ಘಡ್ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಿದ್ದರು. ವೀರ ಸುರೇಂದ್ರ ಸಾಯಿ ತಮ್ಮ ತವರು ನೆಲದಿಂದ ನೂರಾರು ಮೈಲಿ ದೂರದ ಕಾರಾಗೃಹದಲ್ಲಿ 1884 ರ ಫೆಬ್ರವರಿ 28 ರಂದು ಕೊನೆಯುಸಿರೆಳೆದರು. ಸುರೇಂದ್ರ ಸಾಯಿಯವರ ಅಪರಿಮಿತ ಸಾಹಸ ಮತ್ತು ಅವಿರತ ಹೋರಾಟದ ಪರಿಣಾಮವಾಗಿ ಸಂಭಾಲ್ಪುರ ರಾಜ್ಯವು ಅತ್ಯಂತ ಕೊನೆಯದಾಗಿ ಬ್ರಿಟೀಷರ ಕೈವಶವಾಯಿತು.
ತಮ್ಮ ಜೀವನದ ಅಮೂಲ್ಯ 37 ವರ್ಷಗಳನ್ನು ಅವರು ಬಂಧಿಯಾಗಿ ಕಳೆದಿದ್ದರು. 1840 ರಿಂದ 1857 ರ ವರೆಗೆ 17 ವರ್ಷಗಳ ಒಂದು ಬಾರಿ ಬಂಧಿಯಾಗಿದ್ದರೆ, 1864 ರಲ್ಲಿ ಬಂಧಿಸಲ್ಪಟ್ಟ ಸುರೇಂದ್ರ ಸಾಯಿ ತಮ್ಮ ಕೊನೆಯ ಉಸಿರನ್ನೂ ಬಂಧನದಲ್ಲೇ ಎಳೆದರು. ಅಂದರೆ ಬರೋಬ್ಬರಿ 20 ವರ್ಷಗಳು. ಹೀಗೆ ಒಟ್ಟು 37 ವರ್ಷಗಳು ಬಂಧಿತರಾಗಿ ಕಳೆಯುವುದು ಸಾಮಾನ್ಯ ವಿಚಾರವೇನಲ್ಲ. 1857 ರಿಂದ 1862 ರ ವರೆಗೆ ಅವರು ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಬ್ರೀಟೀಷರನ್ನು ಎದುರಿಸುತ್ತಿದ್ದರು. ಮೊದಲ ಬಾರಿ ಬಂಧಿಯಾಗಿದ್ದ ಅವರನ್ನು 1857 ರ ಮೊದಲ ಸಿಪಾಯಿ ಸಂಗ್ರಾಮದ ಸಂದರ್ಭದಲ್ಲಿ, ಸಿಪಾಯಿಗಳು ಬಿಡುಗಡೆಗೊಳಿಸಿದ್ದರು. ದಶಕಗಳ ಬಳಿಕವೂ ಬ್ರಿಟೀಷರು ಅವರ ಕುರಿತಾಗಿ ಅದೆಷ್ಟು ಭಯವನ್ನು ಹೊಂದಿದ್ದರೆಂದರೆ, ಅವರ ಮೃತ ದೇಹವನ್ನೂ ಅಂತಿಮ ಕ್ರಿಯೆಗೆ ನೀಡಲು ನಿರಾಕರಿಸಲಾಗಿತ್ತು.
ಕತ್ತಿವರಸೆ, ಕುದುರೆ ಸವಾರಿ ಮತ್ತು ಗೆರಿಲ್ಲಾ ಯುದ್ಧ ತಂತ್ರದಲ್ಲಿ ಪರಿಣತಿಯನ್ನು ಹೊಂದಿದ್ದ ಪರಾಕ್ರಮಿ ಸುರೇಂದ್ರ ಸಿಂಗರನ್ನು ಗೌರವಪೂರ್ವಕವಾಗಿ ವೀರ ಸುರೇಂದ್ರ ಸಾಯಿ ಎಂದು ಕರೆಯಲಾಗುತ್ತದೆ. ಮಣ್ಣಿನ ಸ್ವಾತಂತ್ರ್ಯಕ್ಕಾಗಿ ಪರಕೀಯರ ವಿರುದ್ಧ ಹೋರಾಡಿದ್ದ ಮಹಾಪುರುಷನಿಗೆ ಅಂತಿಮ ಗೌರವವನ್ನೂ ನಿರಾಕರಿಸಲಾಗಿತ್ತು. ಆದರೆ ಭಾರತೀಯರಾದ ನಾವು ಸ್ವಾತಂತ್ರ್ಯ ಬಂದು ದಶಕಗಳೇ ಉರುಳಿದರೂ ಅವರನ್ನು ಸ್ಮರಿಸುವುದರ ಬದಲಾಗಿ ಮರೆತಿದ್ದೇವೆ. ತಾಯ್ನಾಡಿಗಾಗಿ ತಮ್ಮ ಸರ್ವಸ್ವವನ್ನೂ ನೀಡಿ ಹುತಾತ್ಮರಾದ ವೀರರನ್ನು ಸ್ಮರಿಸುವುದು ನಮ್ಮ ಕರ್ತವ್ಯವಲ್ಲವೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಸಮಯ ಬಂದಿದೆ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.