ಬೆಂಗಳೂರು: ರೈತರ ಸಬಲೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ನೇತೃತ್ವದ ತಂಡ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.
ರಾಜ್ಯಾದ್ಯಂತ ಪ್ರವಾಸ ಮಾಡಿ ಅನೇಕ ಪ್ರಗತಿಪರ ರೈತರೊಂದಿಗೆ ಸಂವಾದಗಳನ್ನು ನಡೆಸಿದ ಸಂದರ್ಭದಲ್ಲಿ ರೈತರ ಸಬಲೀಕರಣಕ್ಕಾಗಿ ಕೆಲವು ಅಂಶಗಳನ್ನು ಪ್ರಸ್ತಾಪಿಸಿದ್ದು ಇದನ್ನು ಪರಿಗಣಿಸಿ ಅನುಷ್ಟಾನ ಮಾಡುವಂತೆ ಮನವಿ ಮಾಡಿತು.
ರೈತರ ಉತ್ಪನ್ನಗಳಿಗೆ ಬೆಲೆ ಕುಸಿತವಾದಾಗ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ಅನಿವಾರ್ಯವಾಗಿ ಸಣ್ಣ ರೈತರು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಿ ಆರ್ಥಿಕ ಸಂಕಷ್ಠಕ್ಕೆ ಸಿಲುಕಬೇಕಾಗುತ್ತಿದೆ. ಆದ್ದರಿಂದ ಬೆಳೆ ರೈತರ ಕೈಗೆ ಬಂದಾಗ ಖರೀದಿ ಕೇಂದ್ರಗಳನ್ನು ತೆರೆದು, ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದರ ಮುಖಾಂತರ ರೈತರಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ಮಾಡಬೇಕಾಗಿ ವಿನಂತಿಸಲಾಯಿತು.
ಕೃಷಿ ಪರ ಸರ್ಕಾರದ ಯೋಜನೆಗಳನ್ನು ನೀಡುವಾಗ ರೈತರಲ್ಲಿ ಜಾತಿ ವರ್ಗಿಕರಣ ಮಾಡದೆ ಎಲ್ಲಾ ರೈತರಿಗೂ ಯೋಜನೆಯ ಲಾಭ ಸಿಗುವಂತೆ ಅವಕಾಶ ನೀಡಬೇಕು. ಮನರೇಗಾ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ, ಜಾಬ್ ಕಾರ್ಡ್ಗಳನ್ನು ನೀಡುವುದರ ಮುಖಾಂತರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕರಿಸಬೇಕು. ಈಗಾಗಲೇ ತೋಟಗಾರಿಕೆಯನ್ನು ಸೇರಿಸಲಾಗಿದ್ದು, ಆಹಾರ ಧಾನ್ಯಗಳು, ವಾಣಿಜ್ಯ ಬೆಳೆಗಳನ್ನು ಸೇರಿಸಬೇಕಾಗಿದೆ ಎಂದು ಕೋರಲಾಯಿತು.
1964ರಲ್ಲಿ ಸರ್ಕಾರದಿಂದ ಸಾಮೂಹಿಕ ಸರ್ವೆ ಕಾರ್ಯ ಆಗಿದ್ದು, ನಂತರ ಇಲ್ಲಿಯ ತನಕ ಸರ್ವೇ ಕಾರ್ಯ ನಡೆಸಿಲ್ಲವಾದ್ದರಿಂದ ಅನೇಕ ರೈತರ ಜಮೀನುಗಳಲ್ಲಿ ಗಡಿ ತಕರಾರುಗಳಿದ್ದು, ಸರ್ವೆಗೆ ಅರ್ಜಿ ಹಾಕಿದರೂ ನೆರೆ-ಹೊರೆಯವರು ತಕರಾರು ಮಾಡುತ್ತಿರುವುದರಿಂದ ಸರ್ವೆ ಕಾರ್ಯ ಇತ್ಯರ್ಥವಾಗದೆ ರೈತರಿಗೆ ಕಿರುಕುಳವಾಗುತ್ತಿದೆ. ಸಾಲ ಸೌಲಭ್ಯ ಸಿಗುತ್ತಿಲ್ಲ, ಸರ್ಕಾರದ ಯೋಜನೆಗಳನ್ನು ಪಡೆಯಲು ಆಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ, ಆದ್ದರಿಂದ ಸರ್ಕಾರದಿಂದಲೇ ರಾಜ್ಯಾದ್ಯಂತ ಸರ್ವೇ ಮಾಡಿಸಿ, ರೈತರಿಗೆ ಪಹಣಿ ಪತ್ರಗಳನ್ನು ಒದಗಿಸಬೇಕಾಗಿ ಮನವಿ ಮಾಡಲಾಯಿತು.
ರೇಷ್ಮೆ ಉತ್ಪನ್ನಗಳು ವಾಣಿಜ್ಯೋದ್ಯಮವಾದರೂ ಸಹ ಬೆಳೆಗಾರರು ರೈತರೇ ಆಗಿರುವುದರಿಂದ ರೇಷ್ಮೆಗೂಡಿಗೆ ಸ್ವಾಮಿನಾಥನ್ ವರದಿ ನೆಲೆಗಟ್ಟಿನಲ್ಲಿ ಬೆಂಬಲ ಬೆಲೆ ನಿಗದಿ ಮಾಡಿ ಮಾರುಕಟ್ಟೆಯ ವ್ಯತ್ಯಾಸದ ಮೊತ್ತಕ್ಕೆ ಸಬ್ಸಿಡಿ ರೂಪದಲ್ಲಿ ರೈತರಿಗೆ ಸಹಾಯಧನ ನೀಡಬೇಕಾಗಿರುತ್ತದೆ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಕಂದಾಯ ಇಲಾಖೆಯ ಹಲವಾರು ಹಳೆಯ ದಾಖಲಾತಿಗಳು ದೇವನಾಗರಿ ಲಿಪಿಯಲ್ಲಿ ದಾಖಲಾಗಿದ್ದು, ಇತ್ತೀಚಿಗೆ ಈ ಲಿಪಿಯನ್ನು ಓದುವರ ಸಂಖ್ಯೆ ವಿರಳವಾಗಿರುವುದರಿಂದ ರೈತರಿಗೆ ಹಳೆಯ ದಾಖಲೆಗಳಲ್ಲಿರುವುದನ್ನು ಓದಲು ತೊಂದರೆ ಆಗುತ್ತಿದೆ. ಆದ್ದರಿಂದ ಸರ್ಕಾರವೇ ದೇವನಾಗರಿ ಲಿಪಿಯಲ್ಲಿರುವ ಎಲ್ಲಾ ದಾಖಲಾತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ, ಗಣಕೀಕರಣ ಮಾಡಿಸಿಕೊಡಬೇಕೆಂದು ವಿನಂತಿಸಲಾಯಿತು.
ರೈತರ ಬೆಳೆಗೆ ಆಕಸ್ಮಿಕ ಬೆಂಕಿ ಬಿದ್ದು, ಬೆಳೆ ನಾಶವಾದ ರೈತರಿಗೆ ಹಳೇ ಕಾನೂನಿನಡಿಯಲ್ಲಿ ಅತ್ಯಂತ ಕಡಿಮೆ ಪರಿಹಾರ ಮೊತ್ತ ಇದ್ದು ರೈತರಿಗೆ ಗರಿಷ್ಠ ಪರಿಹಾರ ಸಿಗುವಂತೆ ಮಾಡಬೇಕಾಗಿದೆ. ಬಳ್ಳಾರಿ ಜಿಲ್ಲೆಯ ಹಗರಿ ಕೃಷಿ ವಿಜ್ಞಾನ ಕೇಂದ್ರವನ್ನು ಕೃಷಿ ವಿಶ್ವವಿದ್ಯಾಲಯವನ್ನಾಗಿ ಮಾಡಬೇಕೆಂದು ಅನೇಕ ವರ್ಷಗಳಿಂದ ಇರುವ ಜಿಲ್ಲೆಯ ಜನತೆಯ ಬೇಡಿಕೆಯನ್ನು ಈಡೇರಿಸುವುದರ ಮುಖಾಂತರ ಈ ಭಾಗದ ರೈತರಿಗೆ ಅನೂಕೂಲ ಮಾಡಬೇಕಾಗಿದೆ.
ಗರಿಷ್ಟ ಪ್ರಮಾಣದ ಎಥನಾಲ್ ಉತ್ಪಾದನೆಯನ್ನು ಕಡ್ಡಾಯ ಮಾಡಿ, ಪ್ರೆಟೋಲ್ಗೆ ಮಿಶ್ರಣ ಮಾಡಿ ಪೆಟ್ರೋಲ್ ಬೆಲೆಗಳು ಸಾರ್ವಜನಿಕರಿಗೆ ಹೊರೆಯಾಗುವುದನ್ನು ತಪ್ಪಿಸಿ, ಈ ಮೂಲಕ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಬೆಲೆ ದೊರೆಯಲು ಸಹಾಯಕವಾಗುತ್ತದೆ. ಬೇವು, ಹೊಂಗೆ, ಹಿಪ್ಪೆ ಮರಗಳನ್ನು ಎಲ್ಲಾ ದರ್ಜೆಯ ರಸ್ತೆಗಳ ಬದಿಗಳಲ್ಲಿಯೂ, ಕೆರೆಗಳ ಏರಿ, ಗುಂಡು ತೋಪು, ಕಾಲುವೆಗಳ ಪಕ್ಕದಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಳೆಸಿ, ಇವುಗಳ ಬೀಜಗಳಿಂದ ಡೀಸೆಲ್, ಆಯಿಲ್ಗಳಿಗೆ ಪರ್ಯಾಯ ಇಂಧನಗಳನ್ನು ಉಪಯೋಗಿಸಿ ಆತ್ಮನಿರ್ಭರ ನೀತಿಯನ್ನು ಯುದ್ಧ ಸನ್ನದ್ದ ಸ್ಥಿತಿಯಲ್ಲಿ ಕೈಗೊಳ್ಳಬೇಕಾಗಿದೆ. ಇದರಿಂದ ಇಡೀ ದೇಶ ಹಸಿರುಮಯವಾಗಿ ಪರಿಸರ ಮಾಲಿನ್ಯ ತಪ್ಪಿಸಬಹುದಾಗಿದೆ ಎಂದು ತಿಳಿಸಲಾಯಿತು.
ತರಕಾರಿ ಮತ್ತು ಹಣ್ಣು-ಹಂಪಲಗಳನ್ನು ರೈತರು ದಾಸ್ತಾನು ಮಾಡಲು ಸಾಕಷ್ಟು ಶೈತ್ಯಾಗಾರಗಳನ್ನು ನಿರ್ಮಿಸಬೇಕಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಮೈಸೂರು ಜಿಲ್ಲೆಗಳಲ್ಲಿ ಪ್ರಾಣಿ ಮಾನವ ಸಂಘರ್ಷದಿಂದ ರೈತರು ಬೆಳೆಗಾರರು ತೀರ್ವ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ವೈಜ್ಞಾನಿಕ ರೀತಿಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಂತ್ರಸ್ಥರಿಗೆ ಮತ್ತು ನೊಂದವರಿಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಅಲ್ಲದೆ, ರಾಜ್ಯಾದ್ಯಂತ ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಿ ಸಾವಯವ ಕೃಷಿಯನ್ನು ಗ್ರಾಮಮಟ್ಟದಲ್ಲಿ ಅನುಷ್ಟಾನ ಮಾಡಬೇಕಾಗಿ ಮನವಿ ಮಾಡಲಾಗಿದೆ.
ತುಮಕೂರಿನಲ್ಲಿರುವ ಬೈಪ್ ಸಂಸ್ಥೆಯಲ್ಲಿ ದೇಸೀಯ ಹಸುಗಳ ತಳಿಯ ಅಭಿವೃದ್ಧಿಗಾಗಿ ವಿಶೇಷ ಆದ್ಯತೆ ನೀಡಬೇಕು. ರಾಜ್ಯದಲ್ಲಿನ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಸಾವಯವ ಹಣ್ಣು ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕಾಗಿಯೂ ಈ ಮನವಿಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
ಈ ನಿಯೋಗದಲ್ಲಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಉಪಾಧ್ಯಕ್ಷ ಲೋಕೇಶ್ ಗೌಡ, ಷಣ್ಮುಖ ಗುರಿಕ್ಕಾರ, ನಂಜುಂಡೇಗೌಡ, ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೆಕಾಯಿ, ರಾಜ್ಯ ಖಜಾಂಚಿ ಲಲ್ಲೇಶ್ ರೆಡ್ಡಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.