‘ಯಾರು ಸಿಂಧೂ ನದಿಯಿಂದ ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದು ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು’ ಎಂದು ‘ಹಿಂದೂ’ ಶಬ್ದಕ್ಕೆ ವಿಶಾಲಾರ್ಥದ ವ್ಯಾಖ್ಯಾನ ನೀಡಿದ ವಿನಾಯಕ್ ದಾಮೋದರ ಸಾವರ್ಕರ್ ಅವರು ‘ವೀರ ಸಾವರ್ಕರ್’ ಎಂದೇ ಚಿರಪರಿಚಿತರಾದವರು. ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಜನಿಸಿದ ಸಾವರ್ಕರ್ ಅವರು ಓರ್ವ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. ವಿರೋಧಿಗಳ ಪಾಲಿಗೆ ಅವರೊಬ್ಬ ಕೋಮುವಾದಿ ಎಂಬ ದೃಷ್ಟಿಕೋನದಿಂದಲೇ ಗುರುತಿಸಿಕೊಂಡವರು.
ವಿನಾಯಕ ದಾಮೋದರ ಸಾವರ್ಕರ್ ಅವರು ಮಹಾರಾಷ್ಟ್ರದ ನಾಸಿಕ್ನ ಬಾಗೂರಿನವರು. 1883 ಮೇ 28 ರಂದು ದಾಮೋದರಪಂತ – ರಾಧಾಬಾಯಿ ಅವರ ಪುತ್ರನಾಗಿ ಜನಿಸುತ್ತಾರೆ. ನಾಸಿಕದ ಶಿವಾಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸುತ್ತಾರೆ. ತಮ್ಮ ಒಂಬತ್ತನೇ ವರ್ಷದಲ್ಲೇ ತಾಯಿಯನ್ನು ಕಳೆದುಕೊಂಡ ಸಾವರ್ಕರ್ ಅವರು ಬೆಳೆದದ್ದು ತಂದೆಯ ಆಶ್ರಯದಲ್ಲೇ. ಇಂತಹ ಸಂದರ್ಭದಲ್ಲೇ ಮಹಾಮಾರಿ ಪ್ಲೇಗ್ ಸೋಂಕಿಗೆ ಅವರ ತಂದೆಯೂ ತುತ್ತಾಗುತ್ತಾರೆ. ಅದಾದ ಬಳಿಕ 1901 ರಲ್ಲಿ ಯಮುನಾಬಾಯಿ ಎಂಬವರ ಜೊತೆಗೆ ಸಾವರ್ಕರ್ ವಿವಾಹವಾಗುತ್ತದೆ. 1902 ರಲ್ಲಿ ಹೆಚ್ಚಿನ ವಿದ್ಯಾಭ್ಯಾಸದ ದೃಷ್ಟಿಯಿಂದ ಪುಣೆಯ ಫರ್ಗುಸನ್ ಕಾಲೇಜಿಗೆ ಸೇರಿಕೊಳ್ಳುತ್ತಾರೆ. ಜೂನ್ 1906 ರಲ್ಲಿ ಶಿಷ್ಯವೃತ್ತಿ ದೊರೆತು ಲಂಡನ್ನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಾರೆ.
ಸ್ವಾತಂತ್ರ್ಯ ವೀರನಾಗಿ ಸಾವರ್ಕರ್
ವಿದ್ಯಾರ್ಥಿಯಾಗಿದ್ದಾಗಲೇ ಸ್ವದೇಶೀ ಚಳುವಳಿಯಲ್ಲಿ ಭಾಗವಹಿಸುತ್ತಾರೆ. ಬಳಿಕ ತ್ರಿಲಕ್ರ ಸ್ವರಾಜ್ಯ ಪಕ್ಷದ ಸದಸ್ಯರಾಗುತ್ತಾರೆ. ಲಂಡನ್ನಿನಲ್ಲಿಯೇ Free India Socity ಯನ್ನು ಸ್ಥಾಪನೆ ಮಾಡುತ್ತಾರೆ. ಪಂಚಾಗದ ಪ್ರಕಾರ ಬರುವ ಭಾರತೀಯ ಹಬ್ಬಗಳನ್ನು ಈ ಸಂಸ್ಥೆ ಆಚರಣೆ ಮಾಡುತ್ತಿತ್ತು. ಸ್ವಾತಂತ್ರ್ಯ ಸಂಗ್ರಾಮದ ಮೈಲಿಗಲ್ಲುಗಳ ಆಚರಣೆಯೂ ಈ ಸಂಸ್ಥೆಯಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಸಂಪೂರ್ಣ ಸ್ವಾತಂತ್ರ್ಯ ಮತ್ತು ಅದರ ವಿಚಾರವಾಗಿಯೇ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದ ಈ ಸಂಸ್ಥೆಯ ಮೇಲೆ ಬ್ರಿಟಿಷರ ಕೆಟ್ಟ ದೃಷ್ಟಿ ಬೀಳುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಬ್ರಿಟಿಷ್ ಸರ್ಕಾರದ ಕಾನೂನುಗಳ ವಿರುದ್ಧ ಕಾನೂನುಗಳನ್ನು ರಚಿಸಿ, ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವನ್ನು ಸಾಧಿಸುವುದೇ ನಮ್ಮ ಗುರಿಯಾಗಬೇಕು ಎಂಬ ಧ್ಯೇಯದ ಜೊತೆಗೆ ಸಾವರ್ಕರ್ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇದಕ್ಕಾಗಿ ಪೂರಕವಾಗುವ ಎಲ್ಲಾ ಚಟುವಟಿಕೆಗಳನ್ನು ಸಾವರ್ಕರ್ ತಮ್ಮ ಒಡನಾಡಿಗಳ ಜೊತೆಗೆ ಸೇರಿಕೊಂಡು ಮಾಡುತ್ತಿದ್ದರು ಎಂಬುದು ಗಮನಾರ್ಹ.
ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚುವುದಕ್ಕೆ ಪೂರಕ ಎಂಬಂತೆ ಸಾವರ್ಕರ್ ಅವರು 1908 ರಲ್ಲಿ ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ – 1857’ ಎಂಬ ಕೃತಿಯನ್ನು ಬರೆಯುತ್ತಾರೆ. ಆದರೆ ಬ್ರಿಟಿಷ್ ಸರ್ಕಾರ ಇದರ ಪ್ರಕಾಶನವನ್ನು ಭಾರತ ಮತ್ತು ಬ್ರಿಟನ್ಗಳಲ್ಲಿ ನಿಷೇಧಿಸಿತು. ಅದಾದ ಬಳಿಕ ಭಿಕಾಜಿ ಕಾಮಾ ಅವರು ಈ ಪುಸ್ತಕವನ್ನು ಹಾಲೆಂಡ್ನಲ್ಲಿ ಪ್ರಕಟಿಸಿ, ಗುಪ್ತವಾಗಿ ಭಾರತಕ್ಕೆ ಕಳುಹಿಸಿದರು. ಅದನ್ನು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಟದಲ್ಲಿದ್ದ ಕ್ರಾಂತಿಕಾರಿ ವೀರರಿಗೆ ನೀಡಲಾಯಿತು. 1909 ರಲ್ಲಿ ಸಾವರ್ಕರ್ ಅವರ ನಿಕಟವರ್ತಿ ಮದನ್ಲಾಲ್ ಧಿಂಗ್ರಾ, ಆಗಿನ ವೈಸರಾಯ್ ಲಾರ್ಡ್ ಕರ್ಜನ್ಗೆ ಗುಂಡಿಕ್ಕಿ ಹತ್ಯೆ ಮಾಡಲು ಪ್ರಯತ್ನ ನಡೆಸಿ ವಿಫಲರಾದ ನಂತರದಲ್ಲಿ ಸರ್ ವಾಯ್ಲೀ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡುತ್ತಾನೆ. ಈ ಹತ್ಯೆಯನ್ನು ವೀರ ಸಾವರ್ಕರ್ ಅವರು ಖಂಡಿಸುವುದಿಲ್ಲ. ಅದರಿಂದಾಗಿ ಅವರು ಬ್ರಿಟಿಷರ ಕೆಂಗಣ್ಣಿಗೆ ತುತ್ತಾಗುತ್ತಾರೆ. ಮುಂದೆ ನಾಸಿಕ್ ಪಟ್ಟಣದ ಕಲೆಕ್ಟರ್ ಎಂಎಂಟಿ ಜಾಕ್ಸನ್ನನ್ನು ಯುವಕನೋರ್ವ ಗುಂಡಿಕ್ಕಿ ಹತ್ಯೆ ಮಾಡಿದ ಸಂದರ್ಭದಲ್ಲಿ ವೀರ ಸಾವರ್ಕರ್ ಅವರು ಬ್ರಿಟಿಷ್ ಅಧಿಕಾರಿಗಳ ಬಲೆಗೆ ಬೀಳುತ್ತಾರೆ. ಇಂಡಿಯಾ ಹೌಸ್ ಮತ್ತು ಸಾವರ್ಕರ್ ಅವರ ನಡುವಿನ ನಂಟಿನ ಆಧಾರದಲ್ಲಿ ಅವರನ್ನೂ ಈ ಪ್ರಕರಣದಲ್ಲಿ ಸಿಲುಕಿಸಲಾಯಿತು. 1910 ಮಾರ್ಚ್ 13 ರಂದು ಸಾವರ್ಕರ್ ವಿರುದ್ಧ ಬಂಧನದ ವಾರಂಟ್ ಹೊರಡಿಸಲಾಯಿತು. ಪ್ಯಾರಿಸ್ಸಿನಲ್ಲಿ ಸಾವರ್ಕರ್ ಅವರ ಬಂಧನವೂ ಆಯಿತು. ಮಾರ್ಸೇಲ್ಸ್ನಿಂದ ಪರಾರಿಯಾಗಲು ಪ್ರಯತ್ನ ನಡೆಸಿದರು. ಆದರೆ ಅದು ವಿಫಲವಾಯಿತು. ಬಳಿಕ ಅವರನ್ನು ಮುಂಬೈನ ಯರವಾಡ ಜೈಲಿನಲ್ಲಿರಿಸಲಾಯಿತು. ಆ ಬಳಿಕ 27 ವರ್ಷದ ಸಾವರ್ಕರ್ ಅವರಿಗೆ 50 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಅವರನ್ನು ಅಂಡಮಾನ್ ಗೆ ಕರೆದುಕೊಂಡು ಹೋಗಲಾಯಿತು. 1911 ಮತ್ತು 1913 ರಲ್ಲಿ ಸರ್ ರೆಜಿನಾಲ್ಡ್ ಕ್ರಡಾಕ್ ಭೇಟಿಯ ಸಂದರ್ಭದಲ್ಲಿ ಕ್ಷಮೆಗಾಗಿ ಬ್ರಿಟಿಷ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ. 1920 ರಲ್ಲಿ ಅವರ ಬಿಡುಗಡೆಗಾಗಿ ಹಲವು ಧುರೀಣರು ಕೇಂದ್ರೀಯ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಾರೆ. 1921 ರ ಮೇ 12 ರಂದು ಸಾವರ್ಕರ್ ಅವರನ್ನು ರತ್ನಗಿರಿ ಜೈಲಿಗೆ ಮತ್ತೆ ಅಲ್ಲಿಂದ ಯರವಾಡ ಜೈಲಿಗಿ ಸಾಗಿಸಲಾಗುತ್ತದೆ. ರತ್ನಗಿರಿ ಜೈಲಿನಲ್ಲಿದ್ದಾಗ ಸಾವರ್ಕರ್ ಅವರು ‘ಹಿಂದುತ್ವ’ ಕೃತಿ ಬರೆಯುತ್ತಾರೆ. ಬಳಿಕ ಬ್ರಿಟಿಷ್ ಸರ್ಕಾರ ಸಾವರ್ಕರ್ ಅವರ ಚಟುವಟಿಕೆಗಳು ಹಾಗೂ ತಿರುಗಾಟಕ್ಕೆ ನಿರ್ಬಂಧಗಳನ್ನು ಹೇರಿ 1924 ರ ಜನವರಿ 6 ರಂದು ಜೈಲಿನಿಂದ ಬಿಡುಗಡೆ ಮಾಡುತ್ತಾರೆ.
ವೀರ ಸಾವರ್ಕರ್ ಅವರು ಲೇಖಕರಾಗಿಯೂ ಗುರುತಿಸಿಕೊಂಡವರು. ಹಾಗೆಯೇ ಜನರನ್ನು ಸ್ವಾತಂತ್ರ್ಯ ಸಂಗ್ರಾಮಗಳಿಗೆ ಧುಮುಕುವಂತೆ ಮಾಡುವ ಸಲುವಾಗಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅಂಡಮಾನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಇವರಿಗೆ ಪೆನ್ನು ಮತ್ತು ಕಾಗದವನ್ನು ಒದಗಿಸುವುದಕ್ಕೂ ಬ್ರಿಟಿಷರು ನಿಷೇಧ ಹೇರಿದ್ದರು. ಕಮಲಾ, ನನ್ನ ಜೀವಾವಧಿ ಶಿಕ್ಷೆ, 1857- ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಕಾಳಾ ಪಾಣಿ (ಅಂಡಮಾನ್ನ ಕಾರಾಗೃಹದ ಕರಿನೀರಿನ ಶಿಕ್ಷೆ), ಬಂಗಾರದ ಆರು ಪುಟಗಳು, ಹಿಂದೂ ಪದಪಾದಶಾಹಿ, ನನ್ನ ಅಜೀವ ಸಾಗಾಟ, ಮಾಪಿಳ್ಳೆಗಳ ಬಂದ್, ಗಾಂಧೀ ಗೊಂದಲ ಮೊದಲಾದ ಕೃತಿಗಳನ್ನು ಸಾವರ್ಕರ್ ಅವರು ಬರೆದಿದ್ದಾರೆ.
ಸಾವರ್ಕರ್ ಅವರು ಸೌಹಾರ್ದತೆ, ಅಲ್ಪಸಂಖ್ಯಾತರ ಉದ್ಧಾರದ ದೃಷ್ಟಿಯಿಂದಲೂ ದುಡಿದಿದ್ದಾರೆ. ಸಮಾಜದಲ್ಲಿ ಸೌಹಾರ್ದತೆ ಹೆಚ್ಚಿಸುವ ಸಲುವಾಗಿ ಮುಸ್ಲಿಂ ಮತ್ತು ಕ್ರೈಸ್ತರ ಮನೆಗಳಿಗೂ ಭೇಟಿ ನೀಡುತ್ತಿದ್ದರು. ಸಮಾಜದ ಪಿಡುಗಾಗಿದ್ದ ಅಸ್ಪೃಶ್ಯತೆ ಹೋಗಲಾಡಿಸಲು ಅವರು ಸಂವಿಧಾನ ಶಿಲ್ಪ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೂ ನೆರವು ನೀಡಿದ್ದರು. ಸಮಾಜದಲ್ಲಿ ಅಸ್ಪೃಶ್ಯರೆಂದು ಗುರುತಿಸಿಕೊಂಡವವರಿಗೆ ದೇಗುಲಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟವರು. ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಿದ್ದವರು.
ಅಖಂಡ ಭಾರತ ವಿಭಜನೆಯಾಗಿ ಭಾರತ – ಪಾಕಿಸ್ಥಾನ ಉದಯವಾಗುವ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಅವರು ತೆಗೆದುಕೊಂಡ ಕೆಲವು ನಿಲುವುಗಳ ಬಗ್ಗೆ ವೀರ ಸಾವರ್ಕರ್ ಸೇರಿದಂತೆ ಇನ್ನೂ ಹಲವು ಭಾರತೀಯ ಕ್ರಾಂತಿಕಾರಿಗಳಿಗೆ ವಿರೋಧವಿತ್ತು. ಇದೇ ಕಾರಣಕ್ಕೆ ನಾಥೂರಾಮ್ ಗೋಡ್ಸೆ ಅವರು ಗಾಂಧೀ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಸಂದರ್ಭದಲ್ಲಿ ಈ ವಿವಾದ ಸಾವರ್ಕರ್ ಅವರ ಮೈಗೂ ಸುತ್ತಿಕೊಂಡಿತ್ತು ಎಂಬುದನ್ನು ನಾವಿಲ್ಲಿ ಮರೆಯುವಂತಿಲ್ಲ. ಸಾವರ್ಕರ್ ಅವರ ಮನೆ ಮೇಲೆ ದಾಳಿಗಳೂ ನಡೆದಿದ್ದವು. ಜೊತೆಗೆ ಭಾರತ ಸರ್ಕಾರವೂ ಗಾಂಧೀ ಹತ್ಯೆಯ ಆರೋಪಿ ಎಂಬ ಕಾರಣ ನೀಡಿ ವೀರ ಸಾವರ್ಕರ್ ಅವರನ್ನು ಬಂಧಿಸಿತ್ತು. ಆದರೆ ಸಮರ್ಪಕ ಸಾಕ್ಷ್ಯಾಧಾರಗಳು ಲಭಿಸದೇ ಹೋದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಅವರನ್ನು ಬಿಡುಗಡೆ ಮಾಡಿತು.
ಒಟ್ಟಿನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಕೋಟ್ಯಂತರ ಭಾರತೀಯರಲ್ಲಿ ಕ್ರಾಂತಿಯ ಕಿಡಿ ಹಚ್ಚಿದವರು ವೀರ ಸಾವರ್ಕರ್. ಬದುಕು ಮತ್ತು ಬರಹದ ಮೂಲಕ ಜನರಲ್ಲಿ ದಾಸ್ಯದಿಂದ ಮುಕ್ತರಾಗುವ ಹೋರಾಟದ ಚಿಂತನೆಗಳನ್ನು ತುಂಬಿದ ಇವರು 26 ಫೆಬ್ರವರಿ 1966 ರಂದು ಜೀವನಯಾನ ಮುಗಿಸುತ್ತಾರೆ. ವೀರ ಸಾವರ್ಕರ್ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರು ದೇಶಕ್ಕೆ ನೀಡಿದ ಅದೆಷ್ಟೋ ಕೊಡುಗೆಗಳು, ಅವರ ತತ್ವಗಳು ಇಂದಿಗೂ ನಮ್ಮ ನಡುವೆ ಉಸಿರಾಡುತ್ತಿವೆ ಎಂದರೆ ಅತಿಶಯವಲ್ಲ. ದೇಶದ ಸ್ವಾತಂತ್ರ್ಯ ಮಾತ್ರವಲ್ಲದೆ ಸಮಾನತೆಗಾಗಿ, ಸೌಹಾರ್ದತೆಗಾಗಿ ಹೋರಾಡಿದ ʼವೀರ ಸಾವರ್ಕರ್ʼ ಕೋಟ್ಯಂತರ ಭಾರತೀಯರ ಮನದಲ್ಲಿ ಎಂದೆಂದಿಗೂ ಜೀವಂತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.