ಬೆಳ್ತಂಗಡಿ: ಜನಸಂಖ್ಯಾ ಸ್ಫೋಟದಿಂದ ಉದ್ಯೋಗಾವಕಾಶಗಳ ಕೊರತೆ ಎದುರಾಗುತ್ತಿದೆ. ಉನ್ನತ ಶಿಕ್ಷಣ ಪಡೆದವರು ವಿದೇಶಗಳತ್ತ ಉದ್ಯೋಗಕ್ಕಾಗಿ ಮುಖ ಮಾಡಿರುವುದನ್ನು ನೋಡಬಹುದು. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಅಗತ್ಯ ಎಂದು ಉಜಿರೆ ಎಸ್ಡಿಎಂ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಹೆಚ್. ಮಹೇಶ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಸೋಮವಾರ ಉಜಿರೆ ಎಸ್ಡಿಎಂ ಪ.ಪೂ.ಕಾಲೇಜು ಸಭಾ ಭವನದಲ್ಲಿ ದ.ಕ.ಜಿ.ಪಂ., ಬೆಳ್ತಂಗಡಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾ.ಪಂ., ಎಸ್ಡಿಎಂ ಪದವಿಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಈಗಾಗಲೇ ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ. ಮುಂಬರುವ ದಿನಗಳಿಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸದಿದ್ದಲ್ಲಿ ಚೀನಾವನ್ನು ಹಿಂದಿಕ್ಕುವ ಸಾಧ್ಯತೆಯಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಕಿಕೊಂಡ ಯೋಜನೆಯನ್ನು ನಾವು ಬೆಂಬಲಿಸಬೇಕಾಗಿದೆ. ಜನಸಂಖ್ಯೆ ಏರಿಕೆಯಿಂದ ನಿರುದ್ಯೋಗ ಸಮಸ್ಯೆ ಮಾತ್ರವಲ್ಲದೆ ದೇಶದ ಅಭಿವೃದ್ಧಿಗೆ ಮಾರಕಾವಾಗುತ್ತದೆ. ದರ ಏರಿಕೆಯಾಗಲಿದೆ. ಸ್ಥಳಾವಕಾಶ ಕಡಿಮೆಯಾಗಿ ಕೃಷಿ, ಕೈಗಾರಿಕೆಗಳು ಕಡಿಮೆಯಾಗುವ ಸಂಭವ ಇದೆ ಎಂದರು.
ದ.ಕ.ಜಿ.ಪಂ.ಅರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ.ಚಂದ್ರಕಲಾ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು ವಹಿಸಿದ್ದರು.
ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ವಿಷ್ಣು ಮರಾಠೆ, ಸದಸ್ಯೆ ವಿಮಲ, ಉಜಿರೆ ಗ್ರಾ.ಪಂ.ಅಧ್ಯಕ್ಷ ಕೆ. ಶ್ರೀಧರ ಪೂಜಾರಿ, ಆರೋಗ್ಯ ಇಲಾಖೆ ತಾಲೂಕು ನೋಡಲ್ ಅಧಿಕಾರಿ ಡಾ|ಸಿಖಂದರ್ ಪಾಷ, ಕಾಲೇಜು ಪ್ರಾಚಾರ್ಯ ಪ್ರೊ.ಎನ್.ದಿನೇಶ್ ಚೌಟ ಅತಿಥಿಗಳಾಗಿ ಉಪಸ್ಥಿತರಿದ್ದರು. ಇಲಾಖೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಮಹಾಂತೇಶ್ ಸ್ವಾಗತಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ|ಕೆ.ಕಲಾಮಧು ಶೆಟ್ಟಿ ಪ್ರಸ್ತಾವಿಸಿದರು. ಆರೋಗ್ಯ ಸಹಾಯಕಿ ಲೋಲಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಅಜಯ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.