ಭಾರತವು ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದು. ಮಾತ್ರವಲ್ಲ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನಮ್ಮ ದೇಶವು ವಿಶ್ವದಲ್ಲಿ ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಅತೀ ಹೆಚ್ಚಿನ ಯುವ ಪೀಳಿಗೆಯನ್ನು ಹೊಂದಿರುವುದೂ ನಮ್ಮ ರಾಷ್ಟ್ರದ ಹೆಗ್ಗಳಿಕೆ. ʼಏಳಿ ಎದ್ದೇಳಿ ,ಗುರಿ ಮುಟ್ಟುವ ತನಕ ನಿಲ್ಲದಿರಿʼ ಎಂದು ಕರೆ ನೀಡಿದ್ದ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ನಾವು ʼಯುವ ದಿನʼವನ್ನೂ ಆಚರಿಸುತ್ತೇವೆ. ಆದರೆ, ಪ್ರಸ್ತುತ ನಮ್ಮ ಯುವ ಜನಾಂಗವು ಯಾವ ದಾರಿಯಲ್ಲಿ ಸಾಗುತ್ತಿದೆ? ಭಾರತೀಯ ಯುವ ಜನತೆ ತಮ್ಮ ಸಾಧನೆಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆಯನ್ನು ಮುಗಿಲಿಗೇರಿಸುತ್ತಿದ್ದರೆ, ಇನ್ನು ಹಲವರು ಶೀಘ್ರವಾಗಿ ದೊರೆಯುವ ಪ್ರಸಿದ್ಧಿಯ ಬೆನ್ನಿಗೆ ಬಿದ್ದು ತಮ್ಮ ದೇಶದ ವಿರುದ್ಧ ಪಿತೂರಿ ನಡೆಸುವುದಕ್ಕೂ ಹಿಂದೆ ಬೀಳುತ್ತಿಲ್ಲ ಎನ್ನುವುದೇ ವಿಪರ್ಯಾಸ.
ಹೌದು, ಇಂದಿನ ಯುಗ ಅತ್ಯಂತ ವೇಗವಾಗಿ ತಿರುಗುತ್ತಿದೆ. ಉತ್ತಮ ಸುದ್ದಿಗಳಾಗಿರಬಹುದು ಅಥವಾ ಕೆಟ್ಟ ಸುದ್ದಿಗಳಿರಬಹುದು, ಬೆರಳ ತುದಿಯಲ್ಲಿ ಅತ್ಯಂತ ಕ್ಷಿಪ್ರವಾಗಿ ಸಾಗುತ್ತದೆ. ಸಾಮಾಜಿಕ ಜಾಲತಾಣಗಳು ವ್ಯಕ್ತಿಯೊಬ್ಬರನ್ನು ಎಷ್ಟು ವೇಗವಾಗಿ ಆಕಾಶಕ್ಕೇರಿಸುತ್ತದೋ, ಅಷ್ಟೇ ವೇಗವಾಗಿ ಪಾತಾಳಕ್ಕೂ ತಳ್ಳುತ್ತದೆ. ಆದರೂ ಇಂದಿನ ಯುವ ಜನಾಂಗವು ಕ್ಷಿಪ್ರವಾಗಿ ದೊರೆಯುವ ಪ್ರಸಿದ್ಧಿಯ ಬೆನ್ನು ಹತ್ತಿ ಒಳಿತು ಕೆಡುಕುಗಳನ್ನು ಮರೆಯುತ್ತಿರುವುದು ಅತ್ಯಂತ ದುರದೃಷ್ಟಕರ ವಿಚಾರ. ಭಾರತದಲ್ಲಿ ಹಲವಾರು ದಿನಗಳಿಂದ ರೈತರ ಪ್ರತಿಭಟನೆಗಳು ನಡೆಯುತ್ತಿವೆ. ರೈತರ ಒಳಿತಿಗಾಗಿ ಸರಕಾರ ತೆಗೆದುಕೊಂಡಿರುವ ನಿಯಮಗಳ ವಿರುದ್ಧ ರಾಜಕೀಯ ಪ್ರೇರಿತ ಪ್ರತಿಭಟನೆಗಳು ನಡೆಯುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಇದು ಸಂಪೂರ್ಣವಾಗಿ ದೇಶದ ಆಂತರಿಕ ವಿಚಾರ. ಈ ಪ್ರತಿಭಟನೆಯು ಗಣರಾಜ್ಯೋತ್ಸವ ದಿನದಂದು ಅದೆಷ್ಟು ಕೆಟ್ಟ ತಿರುವನ್ನು ಪಡೆದಿತ್ತೆಂಬುದನ್ನೂ ನಾವೆಲ್ಲರೂ ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ಪರಿಸರ ಹೋರಾಟಗಾರ್ತಿ ಎನ್ನುವ ʼಗ್ರೇಟಾ ಥನ್ಬರ್ಗ್ʼ ಈ ವಿಚಾರವಾಗಿ ಟ್ವೀಟ್ ಒಂದನ್ನು ಮಾಡುತ್ತಾರೆ. ಈ ಟ್ವೀಟ್ ಮಾಡುವಂತೆ ಅವರಿಗೆ ʼಟೂಲ್ ಕಿಟ್ʼ ಅನ್ನು ಒದಗಿಸಿದ ಆಪಾದನೆಯ ಮೇರೆಗೆ ಬೆಂಗಳೂರಿನ 22 ವರ್ಷದ ದಿಶಾ ರವಿ ಎಂಬ ಯುವತಿಯ ಬಂಧನವಾಗುತ್ತದೆ. ಬಂಧನವಾದ ಬಳಿಕ ಸಮಾಜಿಕ ಜಾಲತಾಣಗಳಲ್ಲಿ 22 ವರ್ಷದ ಯುವತಿಯನ್ನು ಬಂಧಿಸಬಾರದಿತ್ತು. ಆಕೆ ಇನ್ನೂ ಚಿಕ್ಕವಳು ಎಂಬ ರೀತಿಯಲ್ಲಿ ಅನೇಕರು ಬಂಧಿತೆಯ ಸಮರ್ಥನೆಗೆ ಇಳಿದು ಬಿಟ್ಟಿದ್ದಾರೆ.
ಇಲ್ಲಿ ಗಮನಿಸಬೇಕಾದ ಅನೇಕ ವಿಚಾರಗಳಿವೆ. ಮೊದಲನೆಯದಾಗಿ ಸರಿಯಾದ ಸಾಕ್ಷಿ ಆಧಾರಗಳಿಲ್ಲದೆ ಪೊಲೀಸರು ಅವರನ್ನು ಬಂಧಿಸಲು ಸಾಧ್ಯವಿಲ್ಲ. ಎರಡನೆಯದಾಗಿ ʼಟೂಲ್ ಕಿಟ್ʼ ಅನ್ನು ಅಂತಾರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯೊಬ್ಬರಿಗೆ ತಲುಪಿಸುವಷ್ಟು ಪರಿಚಯಗಳನ್ನು ಹೊಂದಿರುವ ಯುವತಿಯನ್ನು ಏನೂ ಅರಿಯದ ಮುಗ್ಧೆ ಎಂಬಂತೆ ಏಕೆ ಬಿಂಬಿಸಲಾಗುತ್ತಿದೆ? ಈ ರೀತಿಯಲ್ಲಿ ಸಾಧಾರಣವಾಗಿ ಇದೆ ವಯಸ್ಸಿನ ಯುವತಿಯರು ಈ ರೀತಿಯಾಗಿ ತಪ್ಪು ಕಾರಣಕ್ಕಾಗಿ ಕುಖ್ಯಾತಿಯನ್ನು ಪಡೆಯುವುದೂ ಬಂಧನಕ್ಕೊಳಗಾಗುವುದೂ ಮೊದಲೇನಲ್ಲ. ಯಾರಿಗೂ ಪರಿಚಯವಿಲ್ಲದ, ಅಷ್ಟೇನೂ ಪ್ರಸಿದ್ದರಲ್ಲದ ಇಂತಹ ಕೆಲವು ಯುವತಿಯರು ಒಮ್ಮಿಂದೊಮ್ಮೆಲೆ ಒಂದು ವರ್ಗದ ಕಣ್ಮಣಿಗಳಾಗುವುದು ಹೇಗೆ? ಕೆಲವು ಸಮಯದ ಹಿಂದಷ್ಟೇ ನಮ್ಮದೇ ರಾಜ್ಯದಲ್ಲಿ ದೇಶ ವಿರೋಧಿ ಘೋಷಣೆಯನ್ನು ಕೂಗಿದ್ದ ಯುವತಿಯೊಬ್ಬಳು ಬಂಧನಕ್ಕೊಳಗಾದದ್ದನ್ನೂ ನಾವು ಇದೆ ಸಂದರ್ಭದಲ್ಲಿ ಸ್ಮರಿಸಬಹುದು. ಆ ಸಂದರ್ಭದಲ್ಲೂ ಇದೆ ರೀತಿಯಾಗಿ ಯುವತಿಯ ವಯಸ್ಸನ್ನು ಮುಂದಿರಿಸಿಕೊಂಡು ಆಕೆ ಮುಗ್ದೆ ಎಂದು ಬಿಂಬಿಸುವ ಪ್ರಯತ್ನವೂ ನಡೆದಿತ್ತು ಎಂಬುದನ್ನೂ ನಾವು ಮರೆತಿಲ್ಲ.ಈ ಉದಾಹರಣೆಗಳನ್ನು ಗಮನದಲ್ಲಿರಿಸಿ ವಿಮರ್ಶಿಸಬೇಕಾದ ವಿಚಾರಗಳು ಅನೇಕವಿದೆ. ಈ ರೀತಿಯಾಗಿ ಇವರನ್ನು ಪ್ರೋತ್ಸಾಹಿಸುತ್ತಿರುವ ಕಾಣದ ಕೈಗಳು ಯಾರವು? ಒಮ್ಮಿಂದೊಮ್ಮೆಲೆ ಈ ಯುವತಿಯರ ಪರವಾಗಿ ಕರುಣಾಜನಕ ಮತ್ತು ಅನುಭೂತಿ ಹುಟ್ಟಿಸುವ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಲು ಪೂರ್ವ ನಿರ್ಧರಿತವಲ್ಲದೆ ಹೋದರೆ ಸಾಧ್ಯವಾಗುವುದಾದರೂ ಹೇಗೆ? ಇಂತಹ ಆಪತ್ತುಗಳನ್ನು ಬರಮಾಡಿಕೊಂಡ ಬಳಿಕ ಕಾನೂನುಗಳ ಸಲಹೆ ಮತ್ತು ಇತರ ಖರ್ಚು ವೆಚ್ಚಗಳನ್ನು ಮಧ್ಯಮ ವರ್ಗದ ಕುಟುಂಬಗಳಿಗೆ ಭರಿಸುವುದು ಹೇಗೆ ಸಾಧ್ಯವಾಗುತ್ತದೆ? ಇತ್ಯಾದಿ ವಿಚಾರಗಳನ್ನು ನಾವೆಲ್ಲರೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇದೆಯಲ್ಲವೇ.
ಅಂದು ಸ್ವಾತಂತ್ರ್ಯಕ್ಕಾಗಿ ಮಡಿದವರೂ 20 ವರ್ಷದ ಆಸುಪಾಸಿನವರೇ ಆಗಿದ್ದರು
ಇಷ್ಟಕ್ಕೂ 22 ವರ್ಷದ ಯುವತಿ, ಇನ್ನೂ ಚಿಕ್ಕ ವಯಸ್ಸು ಎನ್ನುವ ಸಹಾನುಭೂತಿಯನ್ನು ವ್ಯಕ್ತಪಡಿಸುವ ಎಲ್ಲರೂ ಬಹುಷಃ ಇತಿಹಾಸದ ಪುಟಗಳನ್ನೂ ಓದಿಲ್ಲದಿರಬಹುದು. ಸ್ವಾತಂತ್ರ ಹೋರಾಟದ ಯಜ್ಞದಲ್ಲಿ ಹವಿಸ್ಸಾಗಿ ಅರ್ಪಿತರಾದ ರಾಜಗುರು ಮತ್ತು ಸುಖದೇವರು ಹುತಾತ್ಮರಾದಾಗ ಅವರ ವಯಸ್ಸು ಕೇವಲ 24 ಮತ್ತು 23. ಭಗತ್ ಸಿಂಗ್ ಎನ್ನುವ ಯುವಕ ದೇಶದ ಸ್ವಾತಂತ್ರಕ್ಕಾಗಿ ನಿರ್ಭೀತಿಯಿಂದ ಗಲ್ಲಿಗೇರುವಾಗ ಅವರ ವಯಸ್ಸು ಎಷ್ಟಿತ್ತೆಂಬುದನ್ನೂ ನಾವೆಲ್ಲಾ ಮರೆತಿದ್ದೇವೆಯೇ? ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ಜೈಲು ಪಾಲಾದ ಅನೇಕ ಯುವಕ ಯುವತಿಯರಲ್ಲಿ ಬಹುಪಾಲು ವೀರರು 20 ವರ್ಷಕ್ಕೂ ಕಡಿಮೆ ವಯಸ್ಸಿನವರೇ. ಆದರೆ ಅಂದು ದೇಶಕ್ಕಾಗಿ, ದೇಶದ ಸ್ವಾತಂತ್ರಕ್ಕೋಸ್ಕರ ಅವರೆಲ್ಲರೂ ಜೈಲು ಪಾಲಾಗಿದ್ದಾರೆ, ಇಂದು ದೇಶದ ವಿರುದ್ಧ ನಡೆಯುವ ಮೂಲಕ ಯುವಕ ಯುವತಿಯರು ಜೈಲು ಪಾಲಾಗುತ್ತಿದ್ದಾರೆ.
ಕೆಲವೇ ತಿಂಗಳುಗಳ ಹಿಂದೆ ಗಾಲ್ವಾನ್ ನಲ್ಲಿ ನಡೆದ ಘಟನೆಯನ್ನು ಬಹಳಷ್ಟು ಮಂದಿ ಮರೆತಿರಬಹುದು. ತನ್ನ 19 ನೇ ವಯಸ್ಸಿನಲ್ಲೇ ಸೈನ್ಯಕ್ಕೆ ಸೇರಿ ದೇಶಕ್ಕಾಗಿ ತನ್ನ ಪರಮೋಚ್ಚ ಬಲಿದಾನವನ್ನು ನೀಡಿ ಹುತಾತ್ಮರಾದಾಗ ಯೋಧ ಅಂಕುಶ್ ಠಾಕೂರ್ ನ ವಯಸ್ಸು ಕೇವಲ 21 ವರ್ಷಗಳು ಮಾತ್ರ. ಇಂದು 22 ವರ್ಷ ಚಿಕ್ಕ ವಯಸ್ಸು, ಬಂಧನಕ್ಕೊಳಗಾಗುವ ವಯಸ್ಸೇ? ಎಂದು ಪ್ರಶ್ನಿಸುತ್ತಿರುವವರ್ಯಾರೂ ಅಂದು ಯೋಧ ಅಂಕುಶ್ ಹುತಾತ್ಮರಾದಾಗ 21 ವರ್ಷ ಸಾಯುವ ವಯಸ್ಸೇ ಎಂದು ಕೇಳಲಿಲ್ಲ. ಅಷ್ಟು ಚಿಕ್ಕ ವಯಸ್ಸಿನಲ್ಲೇ ಹುತಾತ್ಮನಾದ ಯೋಧನ ಕುರಿತಾಗಿ ಹೆಮ್ಮೆ, ಗೌರವವನ್ನೂ ವ್ಯಕ್ತಪಡಿಸಲಿಲ್ಲ. ಪರಮವೀರ ಚಕ್ರ ಪದಕ ಪುರಸ್ಕೃತ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪರಮೋಚ್ಚ ಬಲಿದಾನ ನೀಡಿದಾಗ ಅವರಿಗಾದದ್ದು ಕೇವಲ 24 ವರ್ಷ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಪರಮವೀರ ಚಕ್ರ ಪದಕದಿಂದ ಪುರಸ್ಕೃತರಾದ ಯೋಗೇಂದ್ರ ಸಿಂಗ್ ಯಾದವ್ ಕಾರ್ಗಿಲ್ ಯುದ್ಧದಲ್ಲಿ ಹೋರಾಡುವಾಗ ಅವರ ವಯಸ್ಸು ಕೇವಲ 19 ವರ್ಷ. ಆದ್ದರಿಂದ 22 ವರ್ಷದ ಯುವತಿಯ ವಯಸ್ಸನ್ನು ಮುಂದಿರಿಸಿ ಆಕೆಯ ಕೃತ್ಯವನ್ನು ಸಮರ್ಥಿಸಿಕೊಳ್ಳುವುದನ್ನು ಸರಿಯೇ?..
ಅಗ್ಗದ ಪ್ರಚಾರ, ಕ್ಷಿಪ್ರ ಪ್ರಸಿದ್ಧಿಗೊಳಗಾಗುವ ಇಂದಿನ ಯುವ ಮನಸ್ಸುಗಳ ಮಾನಸಿಕತೆಯನ್ನು ನಾವಿಂದು ಅರಿಯಬೇಕಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಾವು ಒಳ್ಳೆಯ ಕಾರ್ಯಗಳಿಗಾಗಿಯೂ ಬಳಸಬಹುದು ಅಥವಾ ಸುಳ್ಳುಗಳನ್ನು ಹರಡಲೂ ಬಳಸಬಹುದು. ಆಯ್ಕೆ ನಮ್ಮ ಕೈಯಲ್ಲಿರುತ್ತದೆ. ಇಂತಹ ವಿಚಾರಗಳಿಂದ ದೂರವಿರುವುದು ಮಾತ್ರವಲ್ಲ, ಇಂತಹ ವಿಚಾರಗಳನ್ನು ಪ್ರಶ್ನಿಸುವುದು ಕೂಡಾ ನಮ್ಮೆಲ್ಲ ಕರ್ತವ್ಯ. ಸಮಾಜದಲ್ಲಿ ಸದ್ವಿಚಾರಗಳ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಸಣ್ಣ ಪ್ರಯತ್ನ ನಮ್ಮಿಂದಲೇ ಪ್ರಾರಂಭವಾಗಲಿ ಅಲ್ಲವೇ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.