ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಕಾರ್ಯಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಡಿರುವ ಖಂಡನಾರ್ಹ ಟ್ವೀಟ್ಗಳಿಗೆ ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿದೆ. ನಿಧಿ ಸಂಗ್ರಹಿಸುವ ಕಾರ್ಯಕರ್ತರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಕೇವಲವಾಗಿ ಮಾತನಾಡಿರುವ ಕುಮಾರಸ್ವಾಮಿ ಅವರ ಬಾಲಿಶ ಹೇಳಿಕೆಗಳನ್ನು ವಿಹಿಂಪ ಖಂಡಿಸಿದೆ.
ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ.
1/3— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) February 15, 2021
ಯಾರೊಬ್ಬರೂ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳು ಸರ್ಕಾರದ ಭಾವನೆಗಳನ್ನು ಎತ್ತಿಹಿಡಿದರೆ ಯಾರಿಗೆ ಏನಾಗುತ್ತದೆಯೋ ಗೊತ್ತಿಲ್ಲ.ಇನ್ನೂ ಜನಸಾಮಾನ್ಯರ ಪರಿಸ್ಥಿತಿ ಏನಾಗಬಹುದು? ವಾತಾವರಣವನ್ನು ನೋಡಿದಾಗ ದೇಶದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಂತೂ ನಿಚ್ಚಳವಾಗಿದೆ.
3/3— H D Kumaraswamy (@hd_kumaraswamy) February 15, 2021
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ವಿಶ್ವ ಹಿಂದೂ ಪರಿಷತ್, ಶ್ರೀರಾಮ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ವಿಹಿಂಪವನ್ನು ಒಳಗೊಂಡಂತೆ ಅನೇಕ ಸಂಘ ಸಂಸ್ಥೆಗಳು ನಿಧಿ ಸಮರ್ಪಣಾ ಅಭಿಯಾನದಲ್ಲಿ ತೊಡಗಿಸಿಕೊಂಡಿವೆ. ನಿಧಿ ಸಮರ್ಪಣಾ ಅಭಿಯಾನಕ್ಕೆ ತೆರಳುವ ಯಾವ ಕಾರ್ಯಕರ್ತರೂ ನಿಧಿ ಸಮರ್ಪಣೆ ಮಾಡಲೇ ಬೇಕೆಂದು ಯಾರ ಮೇಲೂ ಒತ್ತಡ ಹೇರುತ್ತಿಲ್ಲ. ಬದಲಾಗಿ ರಾಮನ ಮೇಲೆ ಭಕ್ತಿ ಹೊಂದಿರುವ ಪ್ರತಿಯೊಬ್ಬರೂ ನಿಧಿ ಸಮರ್ಪಣೆ ಮಾಡುವ ಮೂಲಕ ಈ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ ಎಂದು ವಿಹಿಂಪ ತಿಳಿಸಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ಸಂಪೂರ್ಣ ನಿಜಾಂಶಗಳನ್ನು ತಿಳಿದು ಮಾತನಾಡುವ ಅಥವಾ ತಾವು ಹೇಳುವ ವಿಚಾರಗಳಿಗೆ ದಾಖಲೆಗಳನ್ನು ಒದಗಿಸುವ ಕೆಲಸವನ್ನು ಮಾಡಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಕುಮಾರಸ್ವಾಮಿ ನೀಡಿರುವ ಹೇಳಿಕೆಗಳನ್ನೂ ವಿಹಿಂಪ ಖಂಡಿಸುತ್ತದೆ. ಸಾರ್ವಜನಿಕ ವಿಚಾರಗಳಿಗೆ ಸಂಬಂಧಿಸಿದಂತೆ ಕೆಳಮಟ್ಟದ ಹೇಳಿಕೆ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೇಜವಾಬ್ದಾರಿಯ ನಡೆ ಶೋಭೆ ತರುವಂತಹದ್ದಲ್ಲ ಎಂದು ವಿಹಿಂಪ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.