ಬೆಂಗಳೂರು: ಕೊರೋನಾ ಕಾರಣದಿಂದ ರಾಜ್ಯದ ಸಾರಿಗೆ ಸಂಸ್ಥೆ ಕೆಎಸ್ಆರ್ಟಿಸಿ ಸಂಸ್ಥೆಯ ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ. ಕೋಟ್ಯಂತರ ರೂ. ನಷ್ಟದಲ್ಲಿದೆ. ಇದೇ ಕಾರಣದಿಂದ ನೌಕರರಿಗೆ ಮಾಸಿಕ ವೇತನವನ್ನು ಒದಗಿಸುವುದಕ್ಕೂ ಕಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ನೌಕರರು ರಾಜ್ಯ ಸರ್ಕಾರದ ಮುಂದೆ ವಿವಿಧ ಬೇಡಿಕೆಗಳನ್ನಿರಿಸಿ ಅವುಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಂಡಿದ್ದರು.
ನೌಕರರ ಸಮಸ್ಯೆ ಅರಿತ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ನೌಕರರ ಪ್ರಮುಖ 5 ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದು, ವರದಿ ಸಲ್ಲಿಸುವಂತೆ ಸಂಸ್ಥೆಗೆ ಸೂಚಿಸಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ತಿಳಿಸಿದ್ದಾರೆ.
ನೌಕರರ ಬೇಡಿಕೆಗಳಲ್ಲಿ ಯಾವ 5 ಬೇಡಿಕೆಗಳನ್ನು ಈಡೇರಿಸಬಹುದು ಎಂಬುದರ ಕುರಿತು ಪರಿಶೀಲಿಸಿ ಪಟ್ಟಿ ನೀಡುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ. ಆರೋಗ್ಯ ಭಾಗ್ಯ, ವಿಮಾ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆ ಮತ್ತು ಅನುದಾನಿತ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆ ಒದಗಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ, ಸಿಜಿಎಚ್ಎಸ್ ದರದ ಅನ್ವಯ ಚಿಕಿತ್ಸಾ ವೆಚ್ಚ ಮರುಪಾವತಿ, ಕೊರೋನಾ ತಗುಲಿ ಮೃತಪಟ್ಟ ನೌಕರನ ಮನೆಯವರಿಗೆ ಉದ್ಯೋಗ ಮತ್ತು 30 ಲಕ್ಷ ರೂ. ಗಳ ಪರಿಹಾರ ಧನ ವಿತರಣೆ ಮಾಡುವುದು, ನೌಕರರಿಗೆ ಸಂಸ್ಥೆಯಲ್ಲಿ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ರೂಪಿಸುವುದು, ಎನ್ಐಎನ್ಸಿ ಪದ್ಧತಿ ಬದಲು ಪರ್ಯಾಯ ಪದ್ಧತಿ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆಯೂ ಸರ್ಕಾರ ಸಂಸ್ಥೆಗೆ ಸೂಚಿಸಿದೆ.
ಕೆಎಸ್ಆರ್ಟಿಸಿಯ ನಾಲ್ಕೂ ಘಟಕಗಳಿಗೆ ಸಂಬಂಧಿಸಿದಂತೆ ಈ ಆದೇಶವನ್ನು ನೀಡಲಾಗಿದೆ. ಈ ಆದೇಶವನ್ನು ಜಾರಿಗೊಳಿಸಿದ ಬಳಿಕ ನಾಲ್ಕೂ ವಿಭಾಗಗಳು ಸರ್ಕಾರಕ್ಕೆ ಮಾಹಿತಿ ನೀಡುವಂತೆಯೂ ಸರ್ಕಾರ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.