ಅಭಿವೃದ್ಧಿ ವಿಷಯದಲ್ಲಿ ಭಾರತ ಇಂದು ಒಂದು ಹಂತಕ್ಕೆ ತಲುಪಿದೆ. ಪ್ರಪಂಚ ಭಾರತದ ಕಡೆ ತಿರುಗಿ ನೋಡುತ್ತಿದೆ. ಯಾಕೀ ಬದಲಾವಣೆ?. ಬಿಜೆಪಿ ಅಧಿಕಾರಕ್ಕೆ ಬಂದಿದೆ ಅದಕ್ಕೆಯೇ?. ಖಂಡಿತಾ ಅಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಅದೊಂದೇ ಕಾರಣವಲ್ಲ. ಜೊತೆಗೆ ಭಾರತ ವಿಶ್ವದಲ್ಲಿ ಗುರುತಿಸಿಕೊಳ್ಳುವ ರೀತಿ ಬದಲಾಗಿದೆ, ಓರ್ವ ಪ್ರಧಾನ ಸೇವಕ ʼನಮ್ಮ ದೇಶ ಹಾವಾಡಿಗರ ದೇಶವಲ್ಲ, ವೇದಗಳ ದೇಶʼ ಎಂದು ತೋರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆ ಪ್ರಧಾನ ಸೇವಕನನ್ನು ಭಾರತದ ಜನರು ನೋಡುವ ರೀತಿ ಬದಲಾಗಿದೆ. ಜನರಲ್ಲಿ ಅವರು ಬಂದದ್ದೇ ಭಾರತದ ಅಭಿವೃದ್ಧಿ ಕೆಲಸ ಮಾಡಲು ಎಂಬ ಭಾವನೆ ಬಂದಿದೆ. ಸಹಜವಾಗಿಯೇ ನಿರೀಕ್ಷೆಗಳೂ ಹೆಚ್ಚುತ್ತಾ ಹೋಗುತ್ತಿವೆ. ತೆಗಳಲಿ, ಹೊಗಳಲಿ ಅವರ ಕೆಲಸವನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂಬುದು ಸಣ್ಣ ಮಗುವಿಗೂ ತಿಳಿದಿರುವ ವಿಷಯ.
ಅದೇ ರೀತಿ ದೇಶದಲ್ಲಿ ರಾಜಕರಣವೂ ಒಂದು ದಾರಿಯಲ್ಲಿ ಸಾಗುತ್ತಿದೆ. ಭಾಜಪಾದ 60% ಕ್ಕೂ ಹೆಚ್ಚಿನ ಜನಪ್ರತಿನಿಧಿಗಳು ಗೆದ್ದು ಬರುತ್ತಿರುವುದೇ ಪ್ರಧಾನಿ ಮೋದಿ ಹೆಸರಲ್ಲಿ ಎಂದರೂ ತಪ್ಪಲ್ಲ! ಅದು ಗ್ರಾಮ ಪಂಚಾಯತ್ ಇರಬಹುದು, ಲೋಕಸಭೆಯ ಚುನಾವಣೆಯೇ ಇರಬಹುದು. ಜನರು ಮೋದಿ ಅವರನ್ನು ನಂಬಿ, ಅದೇ ರೀತಿಯಲ್ಲಿ ಕೆಲಸಗಳು ನಮ್ಮ ಕ್ಷೇತ್ರದಲ್ಲಿಯೂ ಆಗಲಿ ಎಂಬ ಆಶಯದ ಜೊತೆಗೆ ಸ್ಥಳೀಯ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದವರಿಗೆ ಈ ಅಂಶವೇ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ ಎಂಬುದನ್ನೂ ನಾವು ಅಲ್ಲಗಳೆಯುವಂತಿಲ್ಲ. ಆಯ್ಕೆ ಮಾಡಿದ ಮೇಲೆ ಆತನಿಂದ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿದೆಯೇ? ಇದಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ ಜನರೇ ಉತ್ತರಿಸಬೇಕು.
ಅಷ್ಟಕ್ಕೂ ಸಾಮಾನ್ಯ ಜನರು ಜನಪ್ರತಿನಿಧಿಯನ್ನು ಯಾಕಾಗಿ ಆಯ್ಕೆ ಮಾಡುತ್ತಾರೆ. ತಮ್ಮ ಮನೆ ಉದ್ದಾರ ಆಗಲೆಂದೋ ಅಥವಾ ಆತ ಗೆದ್ದ ಮೇಲೆ ನಮಗೆ ಕಂತೆ ಕಂತೆ ದುಡ್ಡು ಕೊಡುತ್ತಾನೆಂದೋ ಅಲ್ಲ. ಊರಿನ ಸಮಸ್ಯೆಗಳನ್ನು ಬಗೆಹರಿಸಿ ಊರಿನ ಧ್ವನಿಯಾಗಿ ನಿಲ್ಲಬೇಕು ಎಂಬ ಸದುದ್ದೇಶದಿಂದ ಅಷ್ಟೇ. ಆದರೆ ಈಗ ಜನಪ್ರತಿನಿಧಿಗಳು ಎಂದರೆ ಕೈಗೆಟುಕದ VIP ಗಳಾಗಿ ಬದಲಾಗಿದ್ದಾರೆ. ತಾಲ್ಲೂಕು ಪಂಚಾಯತ್ ಗೆದ್ದ ವ್ಯಕ್ತಿಯೇ ನಾನೊಬ್ಬ ದೊಡ್ಡ ಜನ, ನನ್ನನ್ನು ಆಯ್ಕೆ ಮಾಡಿದ್ದು ಜನರ ಸೌಭಾಗ್ಯ ಎಂದು ಕೊಂಡಿರುತ್ತಾರೆ. ಇದು ಮೇಲ್ನೋಟಕ್ಕೆ ಹಾಸ್ಯವಾದರೂ ಸತ್ಯ. ಹೆಸರಲ್ಲೇ ಇದೆ ಜನಪ್ರತಿನಿಧಿ, ನಮ್ಮೆಲ್ಲರ ಪ್ರತಿನಿಧಿ ಆತ. ಅವನಲ್ಲಿ ಊರಿನ ಅಭಿವೃದ್ಧಿ ಕೆಲಸವಾಗಿಲ್ಲ ಎಂದರೆ ಕೇಳುವ ಹಕ್ಕು ನಮಗಿದೆ. ಹಾಗೆಂದು ಆತನ ಬಳಿ ಕೇಳಿದರೆ ಆತನ ಚೇಲಾಗಳು ನಮ್ಮನ್ನು ಸುಮ್ಮನೆ ಬಿಡುತ್ತಾರೆಯೇ? ಇದು ಈಗಿನ ಸ್ಥಿತಿ. ಎಲ್ಲಾ ಪಕ್ಷಗಳಿಂದ ಆಯ್ಕೆಯಾದ ಹೆಚ್ಚಿನ ಜನಪ್ರತಿನಿಧಿಗಳ ಕಥೆಯೂ ಇಷ್ಟೇ.
ಸರಿ ಹಾಗಾದರೆ ಗೆದ್ದ ಕೂಡಲೇ ಆತ ನಾನೊಬ್ಬ ದೊಡ್ಡ ಜನ ಎಂದು ವರ್ತಿಸಲು ಕಾರಣ ಯಾರು? ಈ ಬಗ್ಗೆ ಯೋಚಿಸಿದಾಗ ನಮಗೆ ದೊರೆಯುವ ಉತ್ತರ ನಾವುಗಳೇ. ಜನ ಪ್ರತಿನಿಧಿಗಳನ್ನು ಜನ ಪ್ರತಿನಿಧಿಯಾಗಿ ನೋಡದೇ ಆತನನ್ನು VIP ರೀತಿ ಟ್ರೀಟ್ ಮಾಡುವ ನಾವೇ ಆತನ ಇಂತಹ ವರ್ತನೆಗೆ ಕಾರಣೀಭೂತರು. ಆತ ಬಂದಲ್ಲೆಲ್ಲ ಹಾರ ತುರಾಯಿಗಳು, ಬೊಕೆಗಳು ಅವನಿಗಾಗಿ ವಿಶೇಷ ಆಸನಗಳು, ವಿಶೇಷ ಭೋಜನ ವ್ಯವಸ್ಥೆ, ಕುಡಿಯಲು ಮಿನರಲ್ ವಾಟರ್, ಹಣ್ಣಿನ ರಸ, ಮಿಲ್ಕ್ ಶೇಕ್ ಇತ್ಯಾದಿ ರಾಜಾತಿಥ್ಯ. ಈಗೀಗ ಒಂದು ನಗರಕ್ಕೆ ಜನಪ್ರತಿನಿಧಿಗಳು ಬರುತ್ತಾರೆಂದರೆ ಮುಂದೆ ಹಿಂದೆ ಸಾಕಷ್ಟು ವಾಹನಗಳು, ಯಾವ ಜನಪ್ರತಿನಿಧಿಯ ಹಿಂದೆ ಹೆಚ್ಚು ವಾಹನಗಳಿರುತ್ತವೆಯೋ ಆತ ಅತೀ ಹೆಚ್ಚು ಜನಪ್ರಿಯ ಎಂಬ ಭಾವನೆ. ಆತ ಊರಿಗೆ ಬರುತ್ತಿದ್ದಾನೆ ಎಂದರೆ ಅವನ ಬಳಿ ಊರಿನಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು, ತೊಂದರೆಗಳನ್ನು ಹೇಳಿಕೊಳ್ಳುವುದಕ್ಕಿಂತ ಹೆಚ್ಚಿನದಾಗಿ, ಆತ ಉಪಯೋಗಿಸುವ ಸೌಕರ್ಯಗಳ ಮೇಲೆ ನಮಗೆ ಹೆಚ್ಚು ಆಸಕ್ತಿ. ಓರ್ವ ಜನಪ್ರತಿನಿಧಿ ಒಂದು ಕಡೆ ಬರುತ್ತಾನೆ ಎಂದರೆ ಇಷ್ಟೆಲ್ಲಾ ಸೌಕರ್ಯಗಳು. ಇವುಗಳನ್ನೆಲ್ಲಾ ಒದಗಿಸಿದಾಗ ಯಾರು ತಾನೇ ಬೇಡ ಅನ್ನುತ್ತಾರೆ.? ಸಹಜವಾಗಿಯೇ ಜನಪ್ರತಿನಿಧಿಯಾದವನ ಗರ್ವ ಹೆಚ್ಚುತ್ತದೆ.
ಓರ್ವ ಪ್ರತಿನಿಧಿ ಗೆದ್ದಾದ ಮೇಲೆ ಆತ ಇಡೀ ಒಂದು ಕ್ಷೇತ್ರದ ಪ್ರತಿನಿಧಿಯೇ ಹೊರತು, ಒಂದು ಪಂಗಡವೋ ಅಥವಾ ಪಕ್ಷದ್ದೋ ಆಗಿರುವುದಿಲ್ಲ. ಆತನ ಸರ್ವೋಚ್ಚ ಗುರಿಯೇ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಆಗಿರಬೇಕು. ಅದು ನಮ್ಮ ವಿರೋಧ ಪ್ರಾಬಲ್ಯವಿರುವ ಕ್ಷೇತ್ರ, ಅಲ್ಲಿ ನಾನು ಕೆಲಸ ಮಾಡಲಾರೆ ಎಂದು ಆತ ಎಂದೂ ಹೇಳುವಂತಿಲ್ಲ. ಊರಿನ ಅಭಿವೃದ್ಧಿಯಲ್ಲಿ ಎಂದು ಆತ ಖುಷಿ ಕಾಣುತ್ತಾನೋ ಅಂದಿಗೆ ನಿಜವಾದ ಅರ್ಥದಲ್ಲಿ ಜನ ಪ್ರತಿನಿಧಿ ಎಂಬ ಶಬ್ದಕ್ಕೆ ಅರ್ಥ ಬಂದಂತಾಗುತ್ತದೆ. ಎಲೆಕ್ಷನ್ ಸಮಯಕ್ಕೆ ಮನೆ ಬಾಗಿಲಿಗೆ ಓಟು ಕೇಳಲು ಬಂದಾತ ಮತ್ತೆ ಜನರೆದುರು ಪ್ರತ್ಯಕ್ಷನಾಗುವುದು ಮರು ಚುನಾವಣೆಯ ಸಂದರ್ಭದಲ್ಲೇ. ಈ ಮಧ್ಯೆ ಅಭಿವೃದ್ಧಿ ಕನಸಾಗಿಯೇ ಉಳಿಯುತ್ತದೆ. ನಾವು ಪಟ್ಟು ಹಿಡಿದು ಯಾಕೆ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ ಎಂದು ಆತನನ್ನು ಪ್ರಶ್ನಿಸಿದರೆ, ಆತ ಹೇಗೆ ತನ್ನ ಕೆಲಸಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ. ಆತನನ್ನು ಪ್ರಶ್ನಿಸುವ ಜನರಿದ್ದಾಗ ಆತನ ಜವಾಬ್ದಾರಿ ಅವನಿಗೆ ನೆನಪಿಸುವ ಪ್ರಮೇಯವೇ ಬರುವುದಿಲ್ಲ. ಈ ಅಂಶವನ್ನು ಜನತೆ ನೆನಪಿಟ್ಟುಕೊಳ್ಳಬೇಕು. ಹಾಗೆಯೇ ಪ್ರಶ್ನಿಸಬೇಕು. ಆತನಿಗೆ ಜನರ ಕ್ಷೇಮ ನೋಡಿಕೊಳ್ಳುವುದು ಬಿಟ್ಟರೆ ಮತ್ಯಾವ ದೊಡ್ಡ ಕೆಲಸ ಇರುತ್ತದೆ? ಹೇಳಿ ನೋಡೋಣ.
ಗೆದ್ದ ಮೇಲೆ ಸಾಕಷ್ಟು ಜನ (90%) ಪ್ರತಿನಿಧಿಗಳು ಕೈಗೆ ಸಿಗುವುದೇ ಕಷ್ಟ ಎಂಬಂತಿದೆ ಸದ್ಯದ ಸ್ಥಿತಿ. ಹೋಗಲಿ, ಆತ ಕ್ಷೇತ್ರದ ಅಭಿವೃದ್ಧಿಯಲ್ಲಿ ತಲ್ಲೀನನಾಗಿ ದಿನದ 16 ಗಂಟೆಯೂ ನನ್ನ ಜನ, ನನ್ನ ಊರು ಎಂದು ಯೋಚನೆ ಮಾಡುತ್ತಾನೆಯೇ? ಅದೂ ಇಲ್ಲ. ಹಾಗಾದರೆ ಆತನಿಗೆ ಕ್ಷೇತ್ರಕ್ಕಿಂತಲೂ, ಕ್ಷೇತ್ರದ ಜನರಿಗಿಂತಲೂ ಮಿಗಿಲಾದ ಕೆಲಸ ಯಾವುದಿರುತ್ತದೆ? ಈ ಬಗ್ಗೆ ಅವನನ್ನು ಆಯ್ಕೆ ಮಾಡಿದ ನಾವೆಂದಾದರೂ ಪ್ರಶ್ನೆ ಮಾಡಿದ್ದೇವೆಯೇ? ಅದೂ ಇಲ್ಲ. ನಾವು ಆಯ್ಕೆ ಮಾಡಿದ ವ್ಯಕ್ತಿ ಸಾಮಾನ್ಯ ವ್ಯಕ್ತಿಯಾಗಿಯೇ ಉಳಿದಿದ್ದಾನೆಯೇ ಎಂದು ಯೋಚಿಸಿದರೆ ಅದೂ ಇಲ್ಲ. ಅದಕ್ಕೊಂದು ಉದಾಹರಣೆ ನೀಡವುದಾದರೆ, ನಾವೆಲ್ಲರೂ ಸರ್ಕಾರಿ ಬಸ್ಸುಗಳಲ್ಲಿ, ರೈಲುಗಳಲ್ಲಿ ಜನಪ್ರತಿನಿಧಿಗಾಗಿ ಕಾಯ್ದಿರಿಸಿದ ಸೀಟು ಎಂದು ನೋಡಿಯೇ ನೋಡಿರುತ್ತೇವೆ. ಆದರೆ ಆ ಸೀಟಿನಲ್ಲಿ ಎಂದಾದರೂ ಆತನನ್ನು ನೋಡಿದ್ದೇವೆಯೇ. ಇಲ್ಲ. ಅದನ್ನು ಕಲ್ಪನೆ ಮಾಡಿಕೊಳ್ಳುವುದೂ ಸಾಧ್ಯವಿಲ್ಲ ಅಲ್ಲವೇ.
ಹಾಗಾದರೆ ಈ ಮನಸ್ಥಿತಿಯಿಂದ ಹಿಂದೆ ಬರಲು ಸಾಧ್ಯವಿಲ್ಲವೇ. ಯಾಕೆ ಸಾಧ್ಯವಿಲ್ಲ? ಕ್ಷಣ ಮಾತ್ರದಲ್ಲಿ ಬರಬಹುದು. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಈ VIP ಸಂಸ್ಕೃತಿಗೆ ಒಂದೊಂದಾಗೆ ಬ್ರೇಕ್ ಹಾಕುತ್ತಾ ಬಂದಿದ್ದಾರೆ. ಮೊದಲು ಕಾರಿನಲ್ಲಿ ಬಳಸುತ್ತಿದ್ದ ಕೆಂಪು ದೀಪಗಳನ್ನು ಕಿತ್ತೆಸೆದರು, ಹೆಚ್ಚಿನದಾಗಿ ಭದ್ರತೆ ನೀಡಿದ್ದನ್ನು ತೆಗೆದರು. ಸಂಸತ್ತಿನ ಕ್ಯಾಂಟಿನ್ ನಲ್ಲಿ ಆಹಾರಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದು ಮಾಡಿದರು. ಎಲ್ಲವನ್ನೂ ಅವರೊಬ್ಬರಿಂದಲೇ ಮಾಡುವುದು ಅಸಾದ್ಯ ಅಲ್ಲವೇ. ಕೆಲವೊಂದನ್ನು ಅವನನ್ನು ಆಯ್ಕೆ ಮಾಡಿದ ನಾವೂ ಮಾಡಬೇಕಾಗುತ್ತದೆ. ನಾವು ಯಾವಾಗ ಅವನ ಮನಸ್ಸಿನಲ್ಲಿ ನಾನು ಜನರ ಪ್ರತಿನಿಧಿ ಅಷ್ಟೇ, ಆತನ ದೊರೆಯಲ್ಲ ಎಂಬ ಭಾವನೆ ಮೂಡಿಸುತ್ತೇವೆಯೋ, ನಾವೆಲ್ಲ ಎಂದು ಅವನನ್ನು ಬಸ್ಸುಗಳಲ್ಲಿ, ರೈಲುಗಳಲ್ಲಿ ಜನಪ್ರತಿನಿಧಿಗಳಿಗಾಗಿ ಕಾಯ್ದಿರಿಸಿದ ಸೀಟಿನಲ್ಲಿ ಕಾಣುತ್ತೇವೆಯೋ, ಅಂದೇ ಭಾರತ ವಿಶ್ವ ಗುರು ಆಗಲು ಸಾಧ್ಯ…
ಈ VIP ಸಂಸ್ಕೃತಿಗೆ ಬ್ರೇಕ್ ಹಾಕಲು ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆಯೇ ಮುದ್ರೆ ಒತ್ತಿದ್ದಾರೆ, ಇದಕ್ಕೆ ನಾವುಗಳು ಮುದ್ರೆ ಒತ್ತುವುದು ಯಾವಾಗ?..
✍️ಕಲಾನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.