1921ರ ಫೆಬ್ರವರಿ 4ರಂದು ಉತ್ತರ ಪ್ರದೇಶದ ಗೋರಖ್ಪುರದ ಸಮೀಪದಲ್ಲಿರುವ ಚೌರಿ ಚೌರಾದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಘಟನೆ 1857ರ ನಂತರದ ಅತ್ಯಂತ ಸಾಹಸಮಯ ಘಟನೆಯಾಗಿತ್ತು. ಚೌರಿ ಚೌರಾದಲ್ಲಿ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಪೊಲೀಸ್ ಠಾಣೆಗೆ ಹಾಕಿದ ಬೆಂಕಿಯ ಬಿಸಿ ವಿದೇಶದವರೆಗೂ ತಲುಪಿತ್ತು. ಕ್ಷಿಪ್ರಗತಿಯಲ್ಲಿ ಈ ಘಟನೆಯ ಬಗೆಗಿನ ವರದಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ದಿನಪತ್ರಿಕೆಗಳಲ್ಲಿ ದೊಡ್ಡ ಶೀರ್ಷಿಕೆಯೊಂದಿಗೆ ಪ್ರಕಟಗೊಂಡು ರಾರಾಜಿಸಿದವು.
ಮಹಾತ್ಮ ಗಾಂಧಿಯವರ ಕರೆಯಂತೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ಅಸಹಕಾರ ಚಳುವಳಿ ದೊಡ್ಡ ಮಟ್ಟದಲ್ಲಿ ದೇಶವ್ಯಾಪಿ ನಡೆದಿತ್ತು. ಚೌರಿಚೌರದ ಜನರು ಕೂಡ ವಿದೇಶಿ ವಸ್ತುಗಳ ಜೊತೆಗೆ ಮಾಂಸ ಮತ್ತು ಮದ್ಯವನ್ನು ಕೂಡ ತೊರೆಯುವ ಸಂಕಲ್ಪ ಮಾಡಿದರು. ಫೆಬ್ರವರಿ ನಾಲ್ಕರಂದು ಇಲ್ಲಿನ ಜನರು ಚೌರಿಚೌರ ಪ್ರದೇಶದಲ್ಲಿ ಅಸಹಕಾರ ಆಂದೋಲನವನ್ನು ಬೆಂಬಲಿಸಿ ಹೋರಾಟವನ್ನು ನಡೆಸಿದ್ದರು. ಈ ವೇಳೆ ಇಲ್ಲಿನ ಬ್ರಿಟಿಷ್ ಪೊಲೀಸರೊಂದಿಗೆ ಘರ್ಷಣೆ ಏರ್ಪಟ್ಟಿತ್ತು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಜನರ ಅಸಮಾಧಾನ ಆಕ್ರೋಶವಾಗಿ ಭುಗಿಲೆದ್ದಿತ್ತು. ಈ ಪ್ರತಿಭಟನೆಯಲ್ಲಿ ಶಾಮೀಲಾದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದರು. ಇದರಲ್ಲಿ ಕೆಲವರು ಮೃತಪಟ್ಟರು ಮತ್ತು ಅನೇಕ ಮಂದಿ ಗಾಯಾಳುಗಳಾದರು. ಆದರೆ ಜನರು ರೊಚ್ಚಿಗೆದ್ದು ಬ್ರಿಟಿಷ್ ಆಡಳಿತದ ವಿರುದ್ಧ ಸಮರ ಸಾರಿದರು. ಇದರಿಂದ ಬೆದರಿದ ಪೊಲೀಸರು ಪೊಲೀಸ್ ಠಾಣೆಯೊಳಗೆ ಅವಿತುಕೊಂಡರು. ಜನರು ಹೊರಗಿನಿಂದ ಠಾಣೆಗೆ ಬೀಗ ಹಾಕಿ ಬೆಂಕಿ ಹಚ್ಚಿದರು. ಘಟನೆಯಲ್ಲಿ 23 ಮಂದಿ ಪೊಲೀಸರು ಅಸುನೀಗಿದರು ಎಂದು ಹೇಳಲಾಗಿದೆ.
ಅಸಹಾಕಾರ ಚಳುವಳಿಗೆ ಕರೆಕೊಟ್ಟು ಅದರ ನೇತೃತ್ವವಹಿಸಿದ್ದ ಮಹಾತ್ಮ ಗಾಂಧಿಜಿಯವರು, ಈ ಘಟನೆ ತಮ್ಮ ಅಹಿಂಸೆಯ ಮಾರ್ಗಕ್ಕೆ ವಿರುದ್ಧವಾಗಿದ್ದುದರಿಂದ ಅಸಹಕಾರ ಚಳುವಳಿಯನ್ನು 12 ಫೆಬ್ರವರಿ 1922 ರಂದು ಕೊನೆಗೊಳಿಸಿದರು.
ಆದರೆ ಈ ಘಟನೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮರೆಯಲಾಗದ ಘಟನೆಯಾಗಿ ಸ್ಮರಿಸಲ್ಪಟ್ಟಿದೆ. ಬ್ರಿಟಿಷ್ ಆಡಳಿತದ ವಿರುದ್ಧ ಜನರ ಆಕ್ರೋಶ ಎಷ್ಟು ತೀವ್ರವಾಗಿತ್ತು ಎಂಬುದನ್ನು ಈ ಘಟನೆ ಸಾಕ್ಷೀಕರಿಸುತ್ತದೆ. ಈ ಘಟನೆ ನಡೆದು ಇಂದಿಗೆ 100 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ನಡೆಸಲು ಸರ್ಕಾರ ಯೋಜನೆಗಳನ್ನು ರೂಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.