ನಿನ್ನೆ ದೇಶದ 77 ನೇ ವರ್ಷದ ಗಣರಾಜ್ಯೋತ್ಸವ. ಈ ಸಂದರ್ಭದಲ್ಲಿ ನವದೆಹಲಿ ಕೆಂಪುಕೋಟೆ ‘ಅಕ್ಷಮ್ಯ’ ಅಪರಾಧವೊಂದಕ್ಕೆ ಸಾಕ್ಷಿಯಾಗಿದೆ. ಕೃಷಿ ಕಾಯ್ದೆಯನ್ನು ವಿರೋಧಿಸಿ, ದೇಶದ ಹೆಮ್ಮೆಯ ಪತಾಕೆಯನ್ನೇ ಬದಲಾಯಿಸಿ ‘ಖಲಿಸ್ಥಾನ’ ದ ಪತಾಕೆಯನ್ನು ಹಾರಿಸಲಾಗಿದೆ. ಆ ಮೂಲಕ ದೇಶದ ಬೆನ್ನೆಲುಬು ‘ನಿಜವಾದ ರೈತರಿಗೆ’ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಣರಾಜ್ಯೋತ್ಸವದಂದೇ ಮಸಿ ಬಳಿದಿದ್ದಾರೆ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವ ‘ಸೋ ಕಾಲ್ಡ್ ರೈತರು’ ಎಂಬುದು ದುರಂತ.
ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾಯ್ದೆಗಳ ಬಗ್ಗೆ ವಿರೋಧಿಸಿ ರೈತ ಸಂಘಟನೆಗಳೆಂದು ಹೇಳಿಕೊಂಡು ನವದೆಹಲಿಯ ಘಾಜಿಯಾಬಾದ್ ಗಡಿಯಲ್ಲಿ ಕಳೆದ ಸುಮಾರು ಎರಡರಿಂದ ಎರಡೂವರೆ ತಿಂಗಳಿನಿಂದ ಪ್ರತಿಭಟನೆ ಮಾಡುತ್ತಿರುವವರು ನಿಜವಾದ ರೈತರೋ ಅಥವಾ ಯಾರದ್ದೋ ಕುಮ್ಮಕ್ಕಿನಿಂದ, ಮೋದಿ ಮೇಲಿನ ವಿರೋಧದಿಂದ, ವಿಪಕ್ಷಗಳ ಬೆಂಬಲದಿಂದ ಅಥವಾ ವಿರೋಧಿಸಲೇ ಬೇಕು ಎಂಬ ಚಟಕ್ಕೆ ವಿರೋಧಿಸುತ್ತಿರುವವರೋ ಎಂದು ಗೊತ್ತಾಗದಿರುವಷ್ಟು ಅವರ ‘ಪ್ರತಿಭಟನೆ’ಯ ಕಾವು ಉರಿಯುತ್ತಿದೆ. ಅವರ ಪ್ರತಿಭಟನೆಯಿಂದ ಈ ವರೆಗೆ, ಅಂದರೆ ನಿನ್ನೆ ನಡೆದ ಟ್ರಾಕ್ಟರ್ ರ್ಯಾಲಿಯ ವರೆಗೆ ದೇಶಕ್ಕೆ ಅದೆಷ್ಟು ನಷ್ಟವಾಗಿದೆಯೋ ದೇವರೇ ಬಲ್ಲ. ಇಲ್ಲಿ ಉದ್ಭವವಾಗುವ ಒಂದು ಪ್ರಶ್ನೆ, ನೈಜ ರೈತನೊಬ್ಬ ತಿಂಗಳಾನುಗಟ್ಟಲೆ ದುಡಿಯದೇ ಹೋದರೆ ಅವನನ್ನು ನಂಬಿಕೊಂಡಿರುವ ಅವನ ಕುಟುಂಬ ಬೀದಿಗೆ ಬೀಳುವುದಿಲ್ಲವೇ? ಎಂಬುದು. ಜೊತೆಗೆ ಈ ಎರಡೂವರೆ ತಿಂಗಳಿಗೂ ಹೆಚ್ಚಿನ ಪ್ರತಿಭಟನೆಗೆ ಅವರಲ್ಲಿ ಅಷ್ಟು ದೊಡ್ಡ ಪ್ರಮಾಣದ ‘ಆರ್ಥಿಕ ಸಂಪತ್ತು’ ಕ್ರೋಢೀಕರಣಗೊಂಡಿರುವುದರ ಹಿಂದಿನ ಕಾಣದ ‘ಕೈ’ ಗಳಾದರೂ ಯಾವುದು? ಎಂದು. ಅವರ ಪ್ರತಿಭಟನೆಗಳೇನೇ ಇರಲಿ. ಅದನ್ನು ಪ್ರಜಾಪ್ರಭುತ್ವದ ಹಕ್ಕು ಎಂದೇ ಪರಿಭಾವಿಸೋಣ. ಆದರೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವಾಗುವಂತೆ ಮಾಡುವುದನ್ನು, ವಿನಾಕಾರಣ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡುವುದನ್ನು ಸರಿ ಎಂದು ಯಾವ ಪ್ರಜಾಪ್ರಭುತ್ವ ಸಹ ಹೇಳಿಲ್ಲ. ಇದು ತಪ್ಪಲ್ಲವೇ. ಹಾಗೆಯೇ ಇನ್ನೊಂದು ಅಕ್ಷಮ್ಯ ಮತ್ತು ಅವರನ್ನು ಭಾರತೀಯರಾ? ಎಂದು ಎಚ್ಚೆತ್ತ ಸಾರ್ವಜನಿಕರು ಪ್ರಶ್ನಿಸಲು ಕಾರಣವಾದಂತಹ ಒಂದು ದೊಡ್ಡ ತಪ್ಪು ‘ಭಾರತದ ತಿರಂಗದ ಜಾಗದಲ್ಲಿ ಖಲಿಸ್ಥಾನಿ ಧ್ವಜ’ ಹಾರಿಸಿರುವುದು. ಹೇಳಿ, ಇವರನ್ನು ಹೇಗೆ ನೈಜ ರೈತರೆಂದು ಹೇಳುವುದು?.
ಹೌದು, ಒಪ್ಪೋಣ. ನಿಜವಾದ ರೈತ ಪ್ರತಿಭಟನೆ ಮಾಡಲು ಸಾಧ್ಯ. ರ್ಯಾಲಿ ಮಾಡಲು ಸಾಧ್ಯ. ಆದರೆ ದೇಶದ ಧ್ವಜಕ್ಕೆ ಅವಮರ್ಯಾದೆ ತೋರುವ ಕೆಲಸವನ್ನು ನೈಜ ರೈತ ಮಾಡುವುದು ಸಾಧ್ಯವೇ ಇಲ್ಲ. ನೂರಕ್ಕೆ ನೂರರಷ್ಟು ಸಾಧ್ಯವಿಲ್ಲ ಎಂದು ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯನೂ ಎದೆ ತಟ್ಟಿ ಹೇಳಬಹುದಾಗಿದೆ. ಆದರೆ, ನಿನ್ನೆ ನಡೆದಿರುವುದೇನು. ಕೇವಲ ರ್ಯಾಲಿಯೇ? ಅಲ್ಲ. ಖಡ್ಗ, ಕತ್ತಿ ಹಿಡಿದುಕೊಂಡ ‘ರೈತ’ ಎಂದು ಹೇಳಿಕೊಳ್ಳುವವರು ಮಾಡಿರುವ ಕೆಲಸವನ್ನು ಯಾರು ತಾನೇ ಒಪ್ಪಲು ಸಾಧ್ಯ. ಹೌದು ಸ್ವಾಮಿ, ಅವರು ಪ್ರತಿಭಟನೆ ಮಾಡಲಿ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ದೇಶಕ್ಕೆ ಅಗೌರವ ತೋರಿರುವ ಬಗ್ಗೆ ಮಾತ್ರ ನಮ್ಮ ಸಹಮತ ಖಂಡಿತಾ ಇಲ್ಲ. ಇದಕ್ಕೆ ಅವರಿಗೆ ಶಿಕ್ಷೆಯಾಗಲೇ ಬೇಕು. ರೈತರಲ್ಲಿ ಹೋರಾಟದ ಕಿಚ್ಚಿರಬೇಕು ನಿಜ, ಆದರೆ ಇರುವ ವ್ಯವಸ್ಥೆಯನ್ನು ಹಾಳು ಮಾಡುವ, ದೇಶದ ಗೌರವಕ್ಕೆ ಚ್ಯುತಿ ತರುವ ಹೀನ ಮನಸ್ಥಿತಿ ಇರಲೇಬಾರದು. ಒಂದು ವೇಳೆ ಅವರಿಗೆ ಎಲ್ಲಾ ಸಮಗಳನ್ನು ‘ಅಸಮ’ಗೊಳಿಸುವುದೇ ಉದ್ದೇಶವಾದರೆ ಅವರ ಹೋರಾಟಕ್ಕೆ ಅರ್ಥ ಬರುವುದೂ ಸಾಧ್ಯವಿಲ್ಲ. ಜೊತೆಗೆ ಅವರ ವಿರೋಧಿಸಲೇ ಬೇಕು ಎಂದು ವಿರೋಧಿಸುವ, ಆ ಹೆಸರಲ್ಲಿ ಹಿಂಸಾಚಾರ ನಡೆಸುವ ದುಷ್ಟ ಉದ್ದೇಶಕ್ಕೆ ಫಲ ಸಿಗುವುದೂ ಸಾಧ್ಯವಿಲ್ಲ.
ಇನ್ನು ಕೃಷಿ ಕಾಯ್ದೆಗಳಿಂದ ನಿಜವಾದ ರೈತರಿಗೆ ಲಾಭವೇ ಹೊರತು ಯಾವುದೇ ನಷ್ಟವಿಲ್ಲ ಎಂದು ತಿಳಿಸಿಕೊಡುವ ಎಲ್ಲಾ ಪ್ರಯತ್ನಗಳೂ ಸರ್ಕಾರದಿಂದಾಗಿದೆ. ಪ್ರಯೋಜನವಾಗಲಿಲ್ಲ. ಸರಿ ಅದನ್ನು ರದ್ದುಪಡಿಸುವುದಿಲ್ಲ, ಆದರೆ ಹೇಗೆ ಬದಲಾವಣೆ ಮಾಡಬೇಕು ಎಂದು ಇದೇ ಪ್ರತಿಭಟನೆ ಮಾಡುತ್ತಿರುವ ರೈತರ ಮುಖಂಡರುಗಳ ಜೊತೆಗೆ ಕೇಂದ್ರ ಸರ್ಕಾರ ಒಂದಲ್ಲ, ಎರಡಲ್ಲ, ಹತ್ತು ಸುತ್ತಿನ ಸಭೆಗಳನ್ನು ನಡೆಸಿದೆ. ಆದರೂ ಈ ರೈತರಿಗೆ ಸಮಾಧಾನವಾಗಿಲ್ಲ. ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ, ದೇಶದ ಹೆಚ್ಚಿನ ರಾಜ್ಯಗಳ ರೈತರು ಕೃಷಿ ಕಾಯ್ದೆಯನ್ನು ಸ್ವಾಗತಿಸಿದ್ದಾರೆ. ಯಾವುದೇ ಪ್ರತಿಭಟನೆಯನ್ನು ಮಾಡದೆ, ಯಾವುದೇ ಗೊಂದಲಕ್ಕೆ ಒಳಗಾಗದೆ ‘ಕಾಯಕವೇ ಕೈಲಾಸ’ ಎಂಬಂತೆ ಹೊಲ, ಗದ್ದೆ, ತೋಟಗಳಲ್ಲಿ ಬೆವರಿಳಿಸಿ ದುಡಿಯುತ್ತಿದ್ದಾರೆ. ಆದರೆ ಪಂಜಾಬ್ನ ರೈತರು ಮಾತ್ರ ಪ್ರತಿಭಟನೆ, ರ್ಯಾಲಿ, ಹಿಂಸಾಚಾರಕ್ಕೆ ಮುಂದಾಗಿದ್ದಾರೆ ಎಂದರೆ ಇದರ ಹಿಂದಿರುವ, ಪ್ರೇರಣೆ ನೀಡುತ್ತಿರುವ ಶಕ್ತಿಗಳಾದರೂ ಯಾವುದಿರಬಹುದು. ಇಷ್ಟು ಮಟ್ಟಿಗೆ ಪ್ರತಿಭಟನೆ ನಡೆಬೇಕಾದರೆ ಅವರ ಹಣದ ಮೂಲವೇನು? ಎಂದೆಲ್ಲಾ ಆಲೋಚಿಸಬೇಕಾಗಿ ಬರುತ್ತದೆ. ಅದೆಲ್ಲಾ ಹೋಗಲಿ, ನಿನ್ನೆ ನಡೆದ ಟ್ರ್ಯಾಕ್ಟರ್ ರ್ಯಾಲಿಯನ್ನೇ ಗಮನಿಸಿದರೆ, ಅಷ್ಟೊಂದು ಟ್ರಾಕ್ಟರ್ಗಳು, ಅವಕ್ಕೆ ಹಾಕಬೇಕಾದ ಇಂಧನದ ಮೊತ್ತ ಎಲ್ಲಾ ಸೇರಿದರೆ ಅದೆಷ್ಟೋ ಕೋಟಿಗಳಾಗುತ್ತವೆ. ಕೃಷಿ ಕಾಯ್ದೆ ರದ್ದುಪಡಿಸಿ, ನಮ್ಮನ್ನು ಉಳಿಸಿ ಎಂದು ಪ್ರತಿಭಟನೆಗೆ ಕುಳಿತ ರೈತ ಇಷ್ಟೊಂದು ಹಣ ವ್ಯಯಿಸಲು ಹೇಗೆ ಸಾಧ್ಯ ಸ್ವಾಮಿ. ಇದು ಸಾಮಾನ್ಯ ಜನರನ್ನು ಕಾಡುವ ಪ್ರಶ್ನೆ. ಇವರ ಮೊಂಡುತನ ದೇಶದ ತಿರಂಗಕ್ಕೆಯೇ ಅವಮಾನ ಮಾಡುವಲ್ಲಿಯವರೆಗೆ ಹೋಗಿರುವುದು ಮಾತ್ರ ದುರಂತ.
ಕಳೆದ ವರ್ಷ ಸಿಎಎ ಪ್ರತಿಭಟನೆ ನವದೆಹಲಿಯಲ್ಲಿ ನಡೆಯಿತು. ಆ ಸಂದರ್ಭದಲ್ಲಿಯೂ ದೇಶ ವಿರೋಧಿ ಘೋಷಣೆ, ಪ್ರತಿಭಟನೆಗೆ ವಿದೇಶಿ ಫಂಡಿಂಗ್ ಮೊದಲಾದ ಅನೇಕ ವಿಚಾರಗಳು ಸದ್ದು ಮಾಡಿದ್ದವು. ಆ ಸಂದರ್ಭದಲ್ಲಿ ಭಾರತೀಯರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದರೂ, ಕಾಣದ ಶಕ್ತಿಗಳ ಪ್ರೇರಣೆಯಿಂದ ಈ ಪ್ರತಿಭಟನೆ ನಡೆಯಿತು ಎಂಬುದು ಮೇಲ್ನೋಟಕ್ಕೆ ಅನಿಸುವ ಸತ್ಯವಾಗಿತ್ತು. ಇದರ ಆಳ, ಅಗಲಗಳನ್ನು ಅಳೆಯಲು ಸಂಬಂಧಪಟ್ಟ ಇಲಾಖೆಯೂ ಎಲ್ಲಾ ತನಿಖೆಗಳನ್ನು ನಡೆಸುತ್ತಿದೆ. ತನಿಖೆಯಿಂದ ಸತ್ಯಾಸತ್ಯತೆ ತಿಳಿಯಲಿ ಎಂಬುದಷ್ಟೇ ನಮ್ಮ ಆಶಯ. ಇದೀಗ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯೂ ದಾರಿ ತಪ್ಪಿರುವ, ತಪ್ಪುತ್ತಿರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ದೇಶಕ್ಕೆ ಅಗೌರವ ತೋರಿದವರು ಯಾರೇ ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ಸ್ವಾಭಿಮಾನ ಹೊಂದಿರುವ ಪ್ರತಿಯೊಬ್ಬ ಭಾರತೀಯನ ಆಶಯ.
ನಾವೇನು ರೈತ ವಿರೋಧಿಗಳಲ್ಲ. ರೈತರಿದ್ದರೆ ನಾವು ಎಂಬ ವಾದವನ್ನು ಬಲವಾಗಿ ನಂಬಿದವರು. 2019 ರ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಸ್ತುತ ಮೋದಿ ಸರ್ಕಾರ ತಂದಿರುವ ಕೃಷಿ ಕಾಯ್ದೆಗಳ ಜೊತೆಗೆ ಎಪಿಎಂಸಿ ವ್ಯವಸ್ಥೆಯನ್ನೇ ರದ್ದುಗೊಳಿಸುವ ಭರವಸೆಯನ್ನು ನೀಡಿತ್ತು ಎಂಬುದನ್ನೊಮ್ಮೆ ಗಮನಿಸಿ. ಈಗ ಅದೇ ಭರವಸೆಗಳನ್ನು ಇನ್ನೊಂದು ಸರ್ಕಾರ ಜಾರಿಗೊಳಿಸಿದೆ. ಆದರೆ ಎಪಿಎಂಸಿ ವ್ಯವಸ್ಥೆಯನ್ನು ರದ್ದುಮಾಡದೆ, ಅದರ ಜೊತೆಗೆ ರೈತ ಸ್ನೇಹಿ ಮತ್ತಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ. ಈಗ ಕಾಂಗ್ರೆಸ್ ಪಕ್ಷವೇ ಇದನ್ನು ವಿರೋಧಿಸುತ್ತಿದೆ ಎಂದರೆ ಇದು ಹೊಲಸು ರಾಜಕೀಯವಲ್ಲದೆ ಮತ್ತೇನಲ್ಲ.
ನಮ್ಮ ಆಶಯವಿಷ್ಟೇ, ಹೊಲ, ಗದ್ದೆಗಳಲ್ಲಿ ಬೆವರು ಸುರಿಸಿ ಕಷ್ಟಪಡುತ್ತಿರುವ ನಿಜವಾದ ರೈತನ ಮೇಲೆ ನವದೆಹಲಿಯಲ್ಲಿ ನಡೆಯುತ್ತಿರುವ ‘ರೈತರ ಪ್ರತಿಭಟನೆ’ ದುಷ್ಪರಿಣಾಮ ಬೀರದಿರಲಿ ಎಂಬುದು. ಕಾಣದ ಶಕ್ತಿಗಳ ದುಷ್ಪ್ರೇರಣೆಗೆ ಒಳಗಾಗದೆ, ಇನ್ನಾದರೂ ಪ್ರತಿಭಟನಾ ನಿರತರಿಗೆ ಈ ಕಾಯ್ದೆಗಳ ಅನುಕೂಲದ ಬಗ್ಗೆ ಜ್ಞಾನೋದಯವಾಗಲಿ ಎಂಬುದು. ಜೊತೆಗೆ ಬಹಳ ಮುಖ್ಯವಾಗಿ ‘ಪ್ರತಿಭಟನೆಯ ಹೆಸರಲ್ಲಿ ದೇಶಕ್ಕೆ, ರಾಷ್ಟ್ರಧ್ವಜಕ್ಕೆ ಅವಮಾನ’, ಪೊಲೀಸರ ಮೇಲೆ ಹಲ್ಲೆ ಮಾಡುವ ಹೀನ ಮನಸ್ಥಿತಿ ಮರೆಯಾಗಲಿ ಎಂದು. ಕಿಸಾನ್ ದೇಶದ ಶಕ್ತಿ. ಆ ಶಕ್ತಿಯನ್ನು ದುರುಪಯೋಗ ಮಾಡಲು ಹೊರಟ ಕುತಂತ್ರಿಗಳಿಗೆ ತಕ್ಕ ಶಾಸ್ತಿ ಮಾಡುವತ್ತ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಲಿ. ದಾರಿ ತಪ್ಪಿರುವ ರೈತ ಹೋರಾಟವನ್ನು ಮತ್ತೆ ಸರಿದಾರಿಗೆ ತರುವ ಕೆಲಸವಾಗಲಿ. ಆ ಮೂಲಕ ‘ನೈಜ ರೈತ’ರಿಗೆ ನ್ಯಾಯ ಸಿಗುವಂತಾಗಲಿ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.