ಭಾರತದ ದಕ್ಷಿಣದ ಸಮುದ್ರ ದಂಡೆಯಿಂದ ಉತ್ತರರದ ಗಿರಿಶಿಖರಗಳವರೆಗೆ, ಪೂರ್ವ- ಪಶ್ಚಿಮದ ಭೌಗೋಳಿಕ ಗಡಿಯಂಚಿನವರೆಗೆ ಯಾವ ಊರಿಗೆ ಪ್ರವೇಶಿಸಿದರೂ ಅಲ್ಲೊಂದು ಶ್ರೀರಾಮನ ಕುರುಹಿದೆ, ಜನಪದದ ನೆನಪಿದೆ. ಈ ನೆನಪುಗಳಿಗೆ ಸಾವಿರಾರು ವರ್ಷಗಳ ಚರಿತ್ರೆಯಿರುವ ವಾಲ್ಮೀಕಿ ಕಟ್ಟಿದ ರಾಮನ ಚರಿತೆಯಾದ ಶ್ರೀ ರಾಮಾಯಣಕ್ಕಿರುವಷ್ಟೇ ಗೌರವವಿದೆ. ಆಯಾಯ ಊರೊಳಗೆ ರೂಪುಗೊಂಡ ರಾಮ ಕಥಾನಕಗಳು ನಮ್ಮ ಜನಮಾನಸದಲ್ಲಿ ರಾಮನ ನೆನಪು – ಆದರ್ಶಗಳನ್ನು ಹಸಿರಾಗಿರಿಸಿದೆ. ಆಯೋಧ್ಯೆಯಿಂದ ಹೊರಟ ಶ್ರೀರಾಮ ಎಲ್ಲೆಲ್ಲಾ ಸಂಚರಿಸಿರಬಹುದು ಎಂದು ಕೇಳಿದರೆ ರಾಮಾಯಣದೊಳಗೆ ಶ್ರೀರಾಮನ ಸಂಚಾರದ ಪಥವನ್ನು ಗುರುತಿಸಬಹುದು. ಆದರೆ ಶ್ರೀರಾಮನ ಪಥ ಕೇವಲ ರಾಮಾಯಣದ ಪಥವಲ್ಲ! ಆತ ನಮ್ಮೂರುಗಳಲ್ಲಿ ಓಡಾಡಿದ್ದಾನೆ. ಪಟ್ಟ ತ್ಯಾಗಮಾಡಿ ಪತ್ನಿ ಸೀತಾಮಾತೆ ಮತ್ತು ಸಹೋದರ ಲಕ್ಷ್ಮಣನ ಜತೆ ಹೊರಟಾತ ನಮ್ಮೂರ ಮೂಲಕ ಹಾದು ಹೋಗಿದ್ದಾನೆ. ಅಲ್ಲೇ ನದಿ ದಂಡೆಯಲ್ಲಿ ಮೈ ತೊಳೆದುಕೊಂಡಿದ್ದಾರೆ, ಕಾಡಂಚಿನ ಹಣ್ಣು – ಹಂಪಲು ಸಂಗ್ರಹಿಸಿದ್ದಾರೆ, ಬೆಟ್ಟದ ಬದಿಯಲ್ಲಿ ಕಲ್ಲು ನೆಟ್ಟು ಒಲೆ ಹೂಡಿದ್ದಾರೆ, ಉಂಡಿದ್ದಾರೆ, ಮೈ ಚಾಚಿದ್ದಾರೆ. ಆ ಸಾಕ್ಷಿಗಳನ್ನು ಸಾರುವ ಕುರುಹುಗಳಿಗೆ ಶ್ರೀರಾಮ, ಸೀತೆ, ಲಕ್ಷ್ಮಣರ ಹೆಸರಿದೆ. ಬೆಟ್ಟದ ಮೇಲೆ, ಬಂಡೆಯ ನಡುವೆ ಮೂಡಿದ ಹೆಜ್ಜೆ ಗುರುತುಗಳಲ್ಲಿ, ಬೆಟ್ಟದ ಮೇಲಿದ್ದರೂ ಎಂದೂ ಬತ್ತಿಹೋಗದ ವಿಸ್ಮಯದ ಕೊಳಗಳಲ್ಲಿ ಶ್ರೀರಾಮನ ಸ್ಮರಣೆಯಿದೆ. ಇದು ಯಾವುದೋ ಒಂದು ಊರಿಗೆ, ಪ್ರದೇಶಕ್ಕೆ ಸೀಮಿತವಾದ ಕಥನವಲ್ಲ. ದೇಶದೆಲ್ಲೆಡೆ ಭಾಷೆ, ಪ್ರಾಂತ, ಜಾತಿ, ಜನಸಂಖ್ಯೆಗಳನ್ನು ಮೀರಿ ಮೂಡಿದ ಶ್ರೀರಾಮನ ಗುರುತುಗಳು ಇವು.
ಹಾಗಾದರೆ ಈ ದೇಶದ ಜನ ರಾಮನಲ್ಲಿ ಕಂಡದ್ದೇನು? ರಾಮನನ್ನು ನೆನಪಿಸುವ ಕುರುಹುಗಳೇಕೆ ದೇಶದೆಲ್ಲೆಡೆ ಹರಡಿದೆ ಎಂದು ಯೋಚಿಸಿದರೆ ಹೊಳೆಯುವ ಉತ್ತರ ಶ್ರೀರಾಮ ಈ ದೇಶದ ಜನರಿಗೆ ಕೇವಲ ಒಂದು ಅವತಾರವಷ್ಟೇ ಅಲ್ಲ. ಈ ನೆಲದ ಸಂಸ್ಕøತಿಯ ಆತ್ಮವೇ ಆತ. ಆತ್ಮವು ಶರೀರದ ಯಾವ ಭಾಗದಲ್ಲಿದೆ ಎಂದು ಹುಡುಕಿದರೆ ದೇಹದೆಲ್ಲೆಲ್ಲೂ ಇರಬಹುದಾದಂತೆ ದೇಶದ ಆತ್ಮ ಸ್ವರೂಪಿ ರಾಮನ ಗುರುತುಗಳೂ ದೇಶದೆಲ್ಲೆಡೆಯೂ ಕಾಣುತ್ತಿದೆ. ಅಂತಹ ಆತ್ಮಸ್ವರೂಪಿ ಶ್ರೀರಾಮನಿಗೆ ಆತನ ಜನ್ಮಸ್ಥಾನದಲ್ಲಿ ಕಟ್ಟಿದ್ದ ಮಂದಿರವನ್ನು ಯಾರಾದರೂ ಕೆಡವಿದರೆ? ಅಲ್ಲಿನ ಆರಾಧ್ಯ ಮೂರ್ತಿಗಳನ್ನು ಭಗ್ನಗೊಳಿಸಿದರೆ? ಅದು ಕೇವಲ ಒಂದು ಕಟ್ಟಡದ ಮೇಲಿನ ದಾಳಿಯಷ್ಟೇ ಆಗುವುದಿಲ್ಲ. ಯಾಕೆಂದರೆ ದಾಳಿಕೋರರ ಉದ್ದೇಶ ಯಾವುದೋ ಒಂದು ಕಟ್ಟಡವನ್ನು ಕೆಡಹುವುದಾಗಿರಲಿಲ್ಲ. ಉದ್ದೇಶವಿದ್ದುದೇ ಈ ದೇಶದ ಕೋಟ್ಯಂತರ ಜನರ ಶ್ರದ್ಧೆಯ ಕೇಂದ್ರವಾದ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರವನ್ನೆ ಕೆಡಹಬೇಕು ಮತ್ತು ಹಾಗೆ ಮಾಡುವ ಮೂಲಕವೇ ಇಲ್ಲಿನ ಜನರನ್ನು ಅವಮಾನಿಸಲು ಸಾಧ್ಯ. ಜನರ ಬದುಕಿನ ನಂಬಿಕೆಯ ಸೂತ್ರವನ್ನು ತಪ್ಪಿಸಲು ಸಾಧ್ಯ ಎಂದರಿತೇ ಮಂದಿರವನ್ನು ದ್ವಂಸ ಮಾಡಿದ್ದು. ಈ ಚರಿತ್ರೆಯನ್ನು ಮರೆಯಲು ಸಾಧ್ಯವೇ? ಮರೆತರೆ ಎಂತಹ ಸತ್ವಹೀನ ತಲೆಮಾರೊಂದು ಕಾಣಿಸಬಹುದೆನ್ನುವುದಕ್ಕೆ ಉತ್ತಮ ನಿದರ್ಶನವೊಂದನ್ನು ಗಮನಿಸಬಹುದು. ಇತ್ತೀಚೆಗೆ ದೇಶದ ಜನಪ್ರಿಯ ಪತ್ರಿಕೆಯೊಂದರ ವಿಶೇಷ ಲೇಖನವೊಂದರ ಸಾಲುಗಳು ಆರಂಭವಾದುದು ಹೀಗೆ. “ The temple is being constructed on land in Ayodhya, previously known as Faizabad, where there once stand a sixteenth centuries mosque. The Mosque was demolished in 1992 by a mob . . .” ಬರಹಗಾರ ಚರಿತ್ರೆ ಮರೆತರೆ ಇಂತಹ ಅಸಂಬದ್ದ ಅಕ್ಷರತ್ಯಾಜ್ಯ ಉತ್ಪತ್ತಿಯಾಗುತ್ತದೆ. ಆಯೋಧ್ಯೆ ಫೈಝಾಬಾದ್ ಆದದ್ದೂ, ಮಂದಿರ ಕೆಡವಿ ಮಸೀದಿ ಕಟ್ಟಿದ್ದೂ ಈ ಸ್ವಯಂಘೋಷಿತ ಚಿಂತಕರಿಗೆ ಮರೆತೇ ಹೋಗಿದೆ ಅಥವಾ ಮರೆತಂತೆ ನಟಿಸುತ್ತಾರೆ. ಈ ಸಾಲುಗಳನ್ನು ಓದಿಕೊಂಡ ಮುಂದಿನ ತಲೆಮಾರು ಬೆಳೆಸಿಕೊಳ್ಳಬಹುದಾದ ಜ್ಞಾನವಾದರೂ ಯಾವ ಸ್ವರೂಪದ್ದಿರಬಹುದು?
1528 ರಿಂದ 2021 ಈ ಹೊತ್ತಿನವರೆಗೂ ಭಾರತೀಯರೆಲ್ಲರ ಹೃದಯದಲ್ಲೂ ಶ್ರೀರಾಮನ ಮಂದಿರ ನಿರ್ಮಾಣದ ಕನಸು ಜೀವಂತವಾಗಿಯೇ ಇತ್ತು ಎಂದರೆ ಅದು ರಾಜಕೀಯ ಕಾರಣಗಳಿಂದ ಅಲ್ಲ, ಅದು ಜನರ ಧಾರ್ಮಿಕ ಶ್ರದ್ಧೆಯ ಕಾರಣದಿಂದ. ಅಂದು ಶಬರಿ ಕಾಡಿನಲ್ಲಿ ರಾಮನ ಬರುವಿಕೆಗಾಗಿ ಕಾದಿದ್ದಳು. ಅದೇ ರೀತಿ ಕಳೆದ 492 ವರ್ಷಗಳಿಂದ ಭಾರತೀಯರು ಶ್ರೀರಾಮನ ಮಂದಿರ ಪುನರ್ನಿರ್ಮಾಣಕ್ಕಾಗಿ ಕಾದಿದ್ದಾರೆ. ಈ ಕಾಯುವಿಕೆ ಅಕ್ಷರಶಃ ತಪಸ್ಸೆ ಆಗಿತ್ತು. ಹಾಗೆಂದು ಈ ಕಾಯುವಿಕೆ ನಿಷ್ಕ್ರಿಯವಾದ ನಿರೀಕ್ಷೆಯಾಗಿರಲಿಲ್ಲ. ಲಕ್ಷಾಂತರ ಜನ ಸ್ವತಃ ಹವಿಸ್ಸಾಗುವ ಮೂಲಕ ಯಜ್ಞಜ್ವಾಲೆ ಆರಿಹೋಗದಂತೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಹಲವರು ರಾಮಭಕ್ತರನ್ನು ಬಲಿಪಡೆದರೂ ಈ ದೇಶದಲ್ಲಿ ರಾಮನ ಭಕ್ತಿ ಕಡಿಮೆಯಾಗಲಿಲ್ಲ. ಈಗ ಸುಪ್ರಿಂ ಕೋರ್ಟ್ನ ತೀರ್ಪಿನ ಮೂಲಕವೇ ಮಂದಿರ ಪುನರ್ ನಿರ್ಮಾಣಕ್ಕಿದ್ದ ವಿವಾದ, ತೊಡಕುಗಳೆಲ್ಲವೂ ಪರಿಹಾರವಾಗಿದೆ. ರಾಮನ ಜನ್ಮಸ್ಥಾನದಲ್ಲಿ ಮಂದಿರ ನಿರ್ಮಾಣಕ್ಕಾಗಿ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ರಚನೆಯೂ ಆಗಿದೆ.
ಮಂದಿರ ನಿರ್ಮಾಣ ಯಾರಿಂದಾಗಬೇಕು? ಎನ್ನುವುದೂ ಬಹು ಮುಖ್ಯವಾದ ಪ್ರಶ್ನೆ. ಈ ದೇಶದಲ್ಲಿ ಓರ್ವ ರಾಜನಿಂದ, ಒಂದು ಕುಟುಂಬ, ಮನೆತನದಿಂದ ನಿರ್ಮಾಣವಾಗಿರುವ ನೂರಾರು ಮಂದಿರಗಳಿವೆ. ಅಂತಹ ಮಂದಿರಗಳಲ್ಲನೇಕ ಆ ವ್ಯಕ್ತಿಯ ಅಥವಾ ಕುಟುಂಬದ ಹೆಸರಿನಿಂದಲೇ ಕರೆಯಲ್ಪಡುತ್ತಿದೆ. ಆದರೆ ಆಯೋಧ್ಯೆಯ ಶ್ರೀರಾಮನ ಮಂದಿರವು ಸರ್ಕಾರದಿಂದ ಅಥವಾ ಯಾರೋ ಒಂದಿಬ್ಬರು ಶ್ರೀಮಂತ ಉದ್ಯಮಿಗಳಿಂದ, ರಾಜಕಾರಣಿಗಳಿಂದ ನಡೆಯುತ್ತಿಲ್ಲ. ಈ ಮಂದಿರದ ವೈಶಿಷ್ಟ್ಯವೇ ಇದು ದೇಶದ ಜನರೆಲ್ಲರ ಮಂದಿರ. ಶ್ರೀರಾಮನನ್ನು ಶ್ರದ್ಧೆಯಿಂದ ಆರಾಧಿಸುವ ಪ್ರತಿಯೊಬ್ಬ ಆಸ್ತಿಕನಿಗೂ ಈ ಮಂದಿರ ನನ್ನದೆನ್ನುವ ಭಾವನೆ ಬರುವಂತಾಗಬೇಕು. ಕೋಟಿ ಕೋಟಿ ಭಾರತೀಯರು ಜತೆಗೂಡಿ ಸಮರ್ಪನಾ ಭಾವದಿಂದ ಕಟ್ಟಿದ ಮಂದಿರವಿದಾಗಬೇಕು. ಇಲ್ಲಿನ ಮತಭೇದ, ಭಾಷಾಭೇದ, ಪಕ್ಷಭೇದ, ಪಂಕ್ತಿಭೇದಗಳನ್ನೆಲ್ಲಾ ಮೀರಿ ಐಕ್ಯತೆಯ ಮಂದಿರವಾಗಬೇಕು. ಪ್ರತಿಯೊಬ್ಬ ಶ್ರದ್ಧಾವಂತ ಹಿಂದೂವಿಗೂ ಈ ಮಂದಿರದ ಇಟ್ಟಿಗೆ ಇಟ್ಟಿಗೆಗಳಲ್ಲಿ ತನ್ನ ಶ್ರಮದ, ಶ್ರದ್ಧೆಯ ಪಾಲೊಂದಿದೆ ಎನ್ನುವ ಭಾವನೆ ಬರುವಂತಾಗಬೇಕು. ಹೀಗಾದಾಗ ಮಾತ್ರ ರಾಮ ಮಂದಿರ ರಾಷ್ಟ್ರ ಮಂದಿರವಾಗುವುದು. ಈ ರಾಷ್ಟ್ರ ಮಂದಿರ ನಮ್ಮನ್ನೆಲ್ಲಾ ಒಗ್ಗಟ್ಟಿನಿಂದ ಬೆಸೆಯುವ ಮಂದಿರವಾಗುತ್ತದೆ.
ನಮ್ಮೂರಿನಲ್ಲಿ ಶ್ರದ್ಧಾಕೇಂದ್ರದ ಪುನರ್ನಿರ್ಮಾಣ ನಡೆದರೆ, ಹೇಗೆ ಊರಿನ ಪ್ರತಿಯೊಂದು ಮನೆಯೂ ಸಾಮಥ್ರ್ಯನುಸಾರ ನಿಧಿಯನ್ನು ಸಮರ್ಪಿಸಿ ಧನ್ಯತೆಯನ್ನು ಕಾಣುತ್ತೇವೆಯೋ, ಹಾಗೇಯೆ, ರಾಮನ ಹೆಸರಿನ ರಾಷ್ಟ್ರಮಂದಿರದಲ್ಲಿ ಈ ನೆಲದ ಪ್ರತಿಯೊಂಬ್ಬನ ಕಾಣಿಕೆಯೂ ಸೇರಬೇಕಾಗಿದೆ. ಅವರವರ ಸಾಮರ್ಥ್ಯಾ ನುಸಾರ ಪ್ರತಿಯೊಬ್ಬರೂ ಈ ಮಹತ್ಕಾರ್ಯದಲ್ಲಿ ಭಾಗಿಯಾಗಬಹುದು. ಶ್ರೀರಾಮನು ಲಂಕೆಗೆ ತೆರಳಬೇಕಾದಾಗ ಪ್ರತಿಯೊಬ್ಬರೂ ಕಲ್ಲು, ಮಣ್ಣು , ಮರಳು ತಂದು ಆ ಕೆಲಸವನ್ನು ಸಾಧ್ಯವಾಗಿಸಲು ದುಡಿದರೆನ್ನುವ ಕಥೆ ಕೇಳಿದ್ದೇವೆ. ಆಗ ಪುಟ್ಟ ಅಳಿಲೊಂದು ತನ್ನ ಒದ್ದೆ ಮೈಯ ಮೂಲಕ ಮರಳು ತಂದು ಸುರಿದು ಶ್ರೀರಾಮನ ಮೆಚ್ಚುಗೆಗೆ ಪಾತ್ರವಾದಂತೆ, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪಾಲಿನ ನಿಧಿಯನ್ನು ಸಮರ್ಪಿಸಿ ಭವ್ಯವಾದ ಮಂದಿರ ಮೇಲೇಳುವಂತೆ ಮಾಡುವ ಅಪೂರ್ವ ಅವಕಾಶ ನಮ್ಮ ಪಾಲಿಗೆ ಒದಗಿಬಂದಿದೆ.
ಯಾವ ದೇಶವೇ ಆದರೂ ಆ ದೇಶ ಕಂಡ ಶ್ರೇಷ್ಟ ಸಾಧಕರನ್ನು, ಲೋಕಪೂಜ್ಯರನ್ನು ಸ್ಮರಿಸುವ, ಅವರುಗಳು ಹುಟ್ಟಿದ ಮನೆ, ಅವರ ಸಾಧನೆಯ ಸಾಧನಾ ಭೂಮಿಯನ್ನು ವಿಶೇಷ ಆಧರದಿಂದ, ಗೌರವದಿಂದ ಮುಂದಿನ ಶತ ಶತಮಾನಗಳ ಕಾಲ ಜೋಪಾನವಾಗಿ ಕಾಪಾಡಿಕೊಂಡು ಬರುತ್ತವೆ. ಉದಾಹರಣೆಗೆ ಭಾರತದಲ್ಲಿ 18-19ನೇ ಶತಮಾನದಲ್ಲಿ ಹುಟ್ಟಿದ ಸಮಾಜ ಸುಧಾರಕರ, ಸ್ವಾತಂತ್ರ್ಯ ಹೋರಾಟಗಾರರ, ಸಾಹಿತಿಗಳನೇಕರ ಮನೆಗಳನ್ನೂ ಸೆರಿದಂತೆ, ಅವರಿಗೆ ಸೇರಿದ ಸ್ಥಳಗಳನ್ನು ಬಹಳ ಗೌರವದಿಂದ ಮುಂದಿನ ತಲೆಮಾರಿಗೆ ಪ್ರೇರಣಾದಾಯಿಯಾಗಿರುವಂತೆ ಉಳಿಸಿಕೊಂಡು ಬರಲಾಗುತ್ತಿದೆ. ಓರ್ವ ಕವಿಗೆ, ಸ್ವಾತಂತ್ರ್ಯ ಹೋರಾಟಗಾರನಿಗೆ, ಸಮಾಜ ಸುಧಾರಕನಿಗೆ ಸೇರಿದ ನೆಲ – ನೆಲೆಗಳು ನೂರಾರು ವರ್ಷಗಳ ಕಾಲ ಪಾಪಾಡಿಕೊಂಡು ಸ್ಮಾರಕವಾಗಿಸುವ ಈ ದೇಶದಲ್ಲಿ, ಅಂತಹ ಸಾವಿರಾರು ಶ್ರೇಷ್ಟ ಸಾಧಕರ ಬದುಕಿನ ಆದರ್ಶವಾಗಿ, ಕೋಟಿ ಕೋಟಿ ಜನರ ನಿತ್ಯದ ಸ್ಮರಣೆ- ಭಜನೆಗಳ ಪ್ರೇರಕ ಶಕ್ತಿಯಾಗಿರುವ, ದೇಶದ ಉದ್ದಗಲಕ್ಕೂ ಅಂತಹ ನೆನೆಪಿನ ಕುರುಹುಗಳು ಶ್ರದ್ಧೇ-ಗೌರವಗಳೇ ಕಾರಣವಾಗಿ ಪಸರಿಸಿದೆ. ಯಾರ ಚಾರಿತ್ರ್ಯವನ್ನು ಬದುಕಿನ ಪರಮಾದರ್ಶವಾಗಿ ಈ ದೇಶ ಸ್ವೀಕರಿಸಿದೆಯೋ, ಅಂತಹ ಶ್ರೀರಾಮನಿಗೆ ವೈಭವದ ಮಂದಿರ ಮೇಲೇಳುವುದು ಎಂದರೆ ಈ ದೇಶದ ಸ್ವಾಭಿಮಾನ ಜಾಗೃತಗೊಳ್ಳುವುದು ಎಂದೇ ಅರ್ಥ.
ಯಾವ ದೇಶವೂ ತಾನು ಪರಕೀಯರ ದಾಳಿಯಿಂದ ನಾಶವಾದ ತನ್ನ ಶ್ರದ್ಧಾತಾಣವನ್ನು ಅವು ಮುರಿದು ಬಿದ್ದ ಸ್ಥಿತಿಯಲ್ಲೆ ಉಳಿಸಿಕೊಂಡ ಉದಾಹರಣೆಗಳಿರಲಿಕ್ಕಿಲ್ಲ. ಯಾಕೆಂದರೆ ಆಂತಹ ಕುರುಹುಗಳೇ ಗುಲಾಮಿತನವನ್ನು, ಸೋಲನ್ನು, ಅತ್ಯಾಚಾರವನ್ನು ನೆನಪಿಸುವಂತಹದ್ದು. ಆ ಕಾರಣದಿಂದಲೇ ಅಂತಹ ಅನ್ಯಾಯದ ಸಂಕೇತವನ್ನು ತೆಗೆದು ಅಲ್ಲಿ ಶ್ರದ್ಧೇಯ ಸಂಕೇತವನ್ನು ಮರಳಿ ನಿರ್ಮಿಸುವುದೇ ನಿಜವಾದ ಸ್ವಾತಂತ್ರ್ಯದ, ಸ್ವಾಭಿಮಾನದ ಪ್ರತೀಕವಾಗುತ್ತದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ಕೂಡಲೇ ಅತ್ಯಂತ ಸಹಜವಾಗಿಯೇ ರಾಮನ ಮಂದಿರದ ಪುನರ್ ನಿರ್ಮಾಣ ನಡೆಯಬೇಕಾಗಿತ್ತು. ಯಾಕೆಂದರೆ ಶ್ರೀರಾಮ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಸ್ಫೂರ್ತಿಯಾಗಿದ್ದ ಗಾಂಧಿಯ ಕನಸು ‘ರಾಮರಾಜ್ಯ’ವೇ ಆಗಿತ್ತು. ಹೀಗಿದ್ದರೂ ಸ್ವಾತಂತ್ರ್ಯಾ ನಂತರ 70 ವರ್ಷಗಳ ಕಾಲಕ್ಕೂ ಮಿಗಿಲು ಮಂದಿರ ನಿರ್ಮಾಣದ ಕನಸು ರಾಜಕೀಯ ಸೋಗಲಾಡಿತನಕ್ಕೆ , ಮತೀಯ ಓಲೈಕೆಗೆ ಬಲಿಯಾಯಿತು. ಕೋಟಿ ಕೋಟಿ ಶ್ರದ್ಧಾವಂತ ರಾಮ ಭಕ್ತರು ಇರುವ ದೇಶದಲ್ಲಿ, ಅವರೆಲ್ಲರ ಶ್ರದ್ದೆಯ ಕೇಂದ್ರ ಬೀಗ ಜಡಿಯಲ್ಪಟ್ಟ ಸ್ಥಿತಿಯಲ್ಲಿ, ಆಕ್ರಮಣಕಾರರ ವಿಜಯದ ಸಂಕೇತವಾದ ಗುಂಬಜ್ಗಳ ದರ್ಶನದಲ್ಲಿ, ಕೊನೆಗೆ ಜೋಪಡಿಯಲ್ಲಿ ಕಾಣಬೇಕಾಗಿ ಬಂದುದು ಈ ರಾಷ್ಟ್ರದ ದುರದೃಷ್ಟಗಳಲ್ಲಿ ಒಂದೆಂದೇ ಭಾವಿಸಬೇಕು.
ಮಂದಿರ ಕೆಡವಿ ಕಟ್ಟಿದ ಗುಂಬಜ್ಗಳಲ್ಲಿ ದೇಶದ ಮತೀಯ ಸೌಹಾರ್ಧತೆಯನ್ನು ಕಂಡ, ಸೊತ ರಾಜನ ಅರಮನೆಯಿಂದ ಹೆಣ್ಣುಮಕ್ಕಳನ್ನು ಬಲಾತ್ಕಾರದಿಂದ ಹೊತ್ತೊಯ್ದು ಆಕ್ರಮಣಕಾರರೊಂದಿಗೆ ನಡೆಸಿದ ವಿವಾಹದಲ್ಲಿ ಕೌಟುಂಬಿಕ ಸೌಹಾರ್ಧತೆಯನ್ನು ಕಂಡ ಈ ದೇಶದ ಮತಿಹೀನ ನಡವಳಿಕೆಗೆ ಕೊನೆಗೂ ಪರಿಮಾರ್ಜನವಿದು. ದೇಶದ ಆತ್ಮಶಕ್ತಿ ಜಾಗೃತಿಯಾಗುತ್ತಿದೆ. ತನ್ನ ಸ್ವಾಭಿಮಾನದ ಸಂಕೇತಗಳನ್ನು ಮರು ನಿರ್ಮಿಸಿಕೊಳ್ಳುವ, ಪರಕೀಯ ಸಂಕೇತಗಳಿಂದ ಬಿಡುಗಡೆಯಾಗುವ ಎಚ್ಚರ ಭಾರತೀಯ ಸಮಾಜದಲ್ಲಿ ಮೂಡುತ್ತಿದೆ.
ಈ ತಲೆಮಾರಿನ ನಮ್ಮೆಲ್ಲರ ಸೌಭಾಗ್ಯವೆಂದರೆ ಕಳೆದ ಐದು ಶತಮಾನಗಳಿಂದ ಯಾವ ಮಂದಿರದ ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಯಿಂದ ರಾಮ ಭಕ್ತರು ತೆರಳಿ ಸಂಘರ್ಷದ ಪರ್ವದಲ್ಲಿ ಹುತಾತ್ಮರಾಗಿದ್ದರೋ, ಅಂತಹ ನೆಲದಲ್ಲಿ ಭವ್ಯವಾದ ಮಂದಿರ ನಿರ್ಮಿಸುವ ಕನಸು ನನಸಾಗುತ್ತಿದೆ. ನಾವಿಂದು ಬಲಿದಾನವನ್ನು ಮಾಡಬೇಕಾಗಿಲ್ಲ. ನಮ್ಮ ಹಿರಿಯರ ಬಲಿದಾನಕ್ಕೆ ಗೌರವ ಸಲ್ಲಿಸುವ ರೀತಿಯಲ್ಲಿ, ಆಯೋಧ್ಯೆಯ ಪುಣ್ಯಭೂಮಿಯಲ್ಲಿ ಮಂದಿರ ತಲೆ ಎತ್ತಿನಿಲ್ಲುವಂತೆ ಮಾಡಬೇಕಾಗಿದೆ. ಮುಂದಿನ ಪೀಳಿಗೆ ಆ ರಾಮನ ಮಂದಿರವನ್ನು ದರ್ಶಿಸುತ್ತಿದ್ದಂತೆ ಸಾವಿರಾರು ವರ್ಷಗಳಿಂದ ನಿರಂತರ ದಾಳಿಗೆ ತುತ್ತಾದರೂ ಈ ನೆಲ ತನ್ನ ಸಂಸ್ಕೃತಿಯನ್ನು, ನಾಗರಿಕತೆಯನ್ನು ಅಳಿಯದಂತೆ ಕಾಪಾಡಿಕೊಂಡು ಬಂದ ವೀರ ಪರಂಪರೆಯ ಹಿಂದಿನ ಸ್ಫೂರ್ತಿಯಾದ ಧನುರ್ಧಾರಿ ರಾಮನ ಸಂತತಿ ತಾವೆನ್ನುವುದು ನೆನಪಾಗಬೇಕು.ರಾಜ್ಯಬಾರ ಹೇಗಿರಬೇಕು, ಪಿತೃಪ್ರೇಮ , ಸಹೋದರ ಪ್ರೇಮಗಳೆನ್ನುವ ಗುಣಗಳ ಜತೆಗೆ, ರಾಕ್ಷಸಿಪ್ರವೃತ್ತಿಯ ದಮನಗೈದ ಆತನ ಗುಣಗಳೇ ಮೈವೆತ್ತ ಜನಾಂಗ ರೂಪುಗೊಳ್ಳಲು ಪ್ರೇರಣೆಯಾಗಬೇಕು. ನಮ್ಮ ನಡುವಿನ ಸಂಘರ್ಷ – ಕಚ್ಚಾಟಗಲೆಲ್ಲವೂ ಕೊನೆಗೊಂಡು ರಾಷ್ಟ್ರದ ಏಳ್ಗೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಭಾಗಿಯಾಗುವ ಕನಸಿನ ಸಾಕಾರದ ಎಚ್ಚರವನ್ನು ಮೂಡಿಸಲಿದೆ. ಆಯೋಧ್ಯೆಯ ಈ ಆಂದೊಲನ ಜಗತ್ತು ಕಂಡ ಅತಿದೊಡ್ಡ ಧಾರ್ಮಿಕ- ಸಾಮಾಜಿಕ ಆಂದೋಲನವೆನ್ನಬಹುದು.ಈ ಆಂದೊಲನವು ಭಾರತದ ಎಲ್ಲಾ ಬಗೆಯ ಭೇದಗಳನ್ನೂ ಮರೆತು ಮೇಲೆದ್ದು ನಿಲ್ಲುವಂತೆ ಮಾಡಿತು. 1989ರಲ್ಲಿ ಶ್ರೀ ಕಾಮೇಶ್ವರ ಚೌಪಾಲರು ಇಟ್ಟ ಶಿಲಾನ್ಯಾಸದ ಮೊದಲ ಇಟ್ಟಿಗೆ, ರಾಷ್ಟ್ರಮಂದಿರದ ಸುಭದ್ರ ತಳಹದಿಯಾಯಿತು.
ರಾಮಮಂದಿರಕ್ಕಾಗಿ ನಿಧಿ ಸಮರ್ಪಣೆ ನಮ್ಮ ಪಾಲಿನ ಸೌಭಾಗ್ಯ ಎಂದು ಭಾವಿಸುತ್ತಲೇ, ನಿಧಿ ಸಮರ್ಪನೆ ಎಂದರೆ ಹಣ ನೀಡುವ ಒಂದು ಕಾರ್ಯಕ್ರಮ ಮಾತ್ರವಲ್ಲ, ಮುಂದಿನ ಶತಶತಮಾನಗಳಲ್ಲಿ ನನ್ನ ಮಂದಿರವನ್ನು ಕೆಡಹಬಲ್ಲ ಯಾವ ದುಷ್ಟಶಕ್ತಿಯೂ ಇತ್ತಕಡೆ ಕಣ್ಣೆತ್ತಿಯೂ ನೋಡಲು ಸಾಧ್ಯವಾಗದ ಸ್ವಯಂ ಜಾಗೃತಿ, ಮಂದಿರವನ್ನು ಕಾಪಾಡಿಕೊಳ್ಳುವ ಸಂಕಲ್ಪಬದ್ಧತೆಯೂ ಆಗಬೇಕು. ಈ ಹಿನ್ನೆಲೆಯಲ್ಲಿ ಶಬರಿ, ಗುಹ, ಜಟಾಯು, ವಿಭಿಷಣನನ್ನು ಪ್ರೀತಿಯಿಂದ ಆಲಿಂಗಿಸಿದ ಶ್ರೀರಾಮನ ಗುಣವೇ ಭಾರತದ ಗುಣ. ಮುಂದಿನ ದಿನಗಳಲ್ಲಿ ಮಂದಿರ ಎಲ್ಲರನ್ನೂ ಬೆಸೆಯುವ ಪ್ರೇಮ ಸೇತುವಾಗಲಿದೆ. ಶ್ರೀರಾಮನೇ ಭಾರತವನ್ನು ಜೋಡಿಸಿದ, ಬೆಸೆದ ಆಧ್ಯಾತ್ಮಿಕ ಬೆಸುಗೆ. ಅಂತಹ ಶ್ರೀರಾಮನಿಗೆ ಕಟ್ಟುವ ಮಂದಿರ ಶತಮಾನಗಳ ಕಾಲ ನಾವು ಅನುಭವಿಸಿದ ಅಪಮಾನಕ್ಕೆ ಮುಕ್ತಿಯಾಗಲಿದೆ.
✍️ ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.