ಭಾರತೀಯರು ಕ್ರಿಕೆಟ್ ಬಿಟ್ಟು ಬೇರೆ ಯಾವ ಕ್ರೀಡೆಗೂ ಮಹತ್ವ ನೀಡಲಾರರು ಎಂಬ ಮಾತು ಈಗ ಸುಳ್ಳಾಗಿದೆ. ಒಂದು ಕಾಲದಲ್ಲಿ ಮೂಲೆಗುಂಪಾಗಿದ್ದ ಅಪ್ಪಟ ನಮ್ಮ ನೆಲದ ಕಬಡ್ಡಿ ಈಗ ಮನೆ ಮನೆ ಮಾತಾಗಿದೆ. ಕೇಳುವವರೇ ಇಲ್ಲದಂತಿದ್ದ ಕಬಡ್ಡಿ ಆಟಗಾರರು ಈಗ ಕ್ರಿಕೆಟ್ ಸ್ಟಾರ್ಗಳಂತೆ ಮಿಂಚುತ್ತಿದ್ದಾರೆ. ಗ್ರಾಮೀಣ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಕಬಡ್ಡಿ ಈಗ ನಗರಗಳಲ್ಲೂ ವ್ಯಾಪಿಸಿದೆ. ಫಲಕಗಳನ್ನು ಹಿಡಿದು, ಬಾವುಟ ಹಾರಿಸುವ, ಶಿಳ್ಳೆ ಹೊಡೆಯುವ ಅಭಿಮಾನಿಗಳು ಕ್ರಿಕೆಟ್ಗೆ ಮಾತ್ರ ಇಲ್ಲ, ನನಗೂ ಇದ್ದಾರೆ ಎಂಬುದನ್ನು ತೋರಿಸಿಕೊಟ್ಟಿದೆ ಕಬಡ್ಡಿ.
ಕಬಡ್ಡಿ ಈ ಪರಿಯಾಗಿ ಭಾರತೀಯರ ಮನ-ಮನೆಗಳಲ್ಲಿ ಆವರಿಸಲು ಅನುವು ಮಾಡಿಕೊಟ್ಟಿದ್ದು ಪ್ರೋ ಕಬಡ್ಡಿ ಲೀಗ್. ಗ್ರಾಮೀಣ ಮಣ್ಣಿನ ಈ ಕ್ರೀಡೆಗೆ ಕಾರ್ಪೋರೇಟ್ ಟಚ್ ಕೊಟ್ಟು, ಐಪಿಎಲ್ ಮಾದರಿಯಂತೆ ಇದು ಯಶಸ್ವಿಯಾಗಲು ಕಾರಣೀಕರ್ತವಾಗಿದ್ದು ಮಷಲ್ ಸ್ಪೋರ್ಟ್ಸ್ ಸಂಸ್ಥೆ. 2014ರಲ್ಲಿ ಇದು ಆರಂಭಿಸಿದ ಪ್ರೋ ಕಬಡ್ಡಿ ಲೀಗ್ ದೇಶದ ಕಬಡ್ಡಿಗೆ ಹೊಸ ಆಯಾಮವನ್ನೇ ನೀಡಿತು. ಇದರ ಉದ್ಘಾಟನಾ ಕಾರ್ಯಕ್ರಮವನ್ನೇ 2 ಕೋಟಿಗಿಂತಲೂ ಅಧಿಕ ಮಂದಿ ವೀಕ್ಷಿಸಿದ್ದರು. ಮೊದಲ ಆಟ ಮುಗಿದ ಐದು ಗಂಟೆಗಳಲ್ಲಿ 1 ಕೋಟಿ 40 ಲಕ್ಷ ಮಂದಿ ಲೀಗ್ ಪರವಾಗಿ ಟ್ವಿಟ್ ಮಾಡಿದ್ದರು. ಕಬಡ್ಡಿ ಜನರನ್ನು ಅಷ್ಟೊಂದು ಆಕರ್ಷಿಸಿತ್ತು. ಪೂರ್ಣ ಲೀಗನ್ನು ದೇಶದ 43 ಕೋಟಿ ಜನರು ಟಿವಿಯಲ್ಲಿ ವೀಕ್ಷಿಸಿದ್ದಾರೆ ಎಂದು ಪ್ರೋ ಕಬಡ್ಡಿ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಹೇಳಿಕೊಂಡಿದೆ. ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವೀಕ್ಷಿಸಲ್ಪಟ್ಟ ಎರಡನೇ ಕ್ರೀಡಾಕೂಟ ಇದಾಗಿದೆ.
ಕಳೆದ ವರ್ಷದ ಪ್ರೋ ಕಬಡ್ಡಿ ಲೀಗ್ನ ಯಶಸ್ಸು ದೇಶದ ಕಬಡ್ಡಿ ಅಭಿಮಾನಿಗಳನ್ನು, ಆಟಗಾರರನ್ನು ಪುಳಕಿತಗೊಳಿಸಿದೆ. ಮೂಲೆಯಲ್ಲಿದ್ದ ಕಬಡ್ಡಿ ಆಟಗಾರರು ಖ್ಯಾತಿಗೆ ಬರುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತ ಕಬಡ್ಡಿ ತಂಡ ಹಿಂದಿನಿಂದಲೂ ಉತ್ತಮ ಸಾಧನೆಯನ್ನು ಮಾಡುತ್ತಿದೆ. ಆದರೆ ಈ ಆಟಗಾರರನ್ನು ಗುರುತಿಸುವವರಾಗಲಿ, ಪ್ರೋತ್ಸಾಹಿಸುವವರಾಗಲಿ ಇರಲಿಲ್ಲ. ಆದರೆ ಪ್ರೋ ಕಬಡ್ಡಿಯಿಂದಾಗಿ ಅವರೆಲ್ಲ ಸ್ಟಾರ್ಗಳಾಗಿದ್ದಾರೆ. ಅದುವರೆಗೆ ಗ್ರಾಮೀಣ ಭಾಗದ ಮಣ್ಣಲ್ಲಿ ಆಡಲಾಗುತ್ತಿದ್ದ ಕಬಡ್ಡಿಯನ್ನು ಈಗ ನಗರದ ಶ್ರೀಮಂತರು ಒಳಾಂಗಣದಲ್ಲಿ ಆಡುತ್ತಾರೆ.
ಕಳೆದ ಬಾರಿಗಿಂತಲೂ ಈ ಬಾರಿ ಅಭಿಮಾನಿಗಳ ಸಂಖ್ಯೆ ಶೇ.64 ರಷ್ಟು ಹೆಚ್ಚಾಗಿದೆ, ಕ್ರೀಡಾಂಗಣದ ಗ್ಯಾಲರಿಯ ಟಿಕೆಟ್ ದರವೂ ಹೆಚ್ಚಾಗಿದೆ. ದರ ಹೆಚ್ಚಳ ಅಭಿಮಾನಿಗಳ ಉತ್ಸಾಹವನ್ನು ಕಿಂಚಿತ್ತೂ ಕಡಿಮೆ ಮಾಡಿಲ್ಲ. ಕಳೆದ ಬಾರಿ ಪ್ರೋ ಕಬಡ್ಡಿಯ ಟಿಆರ್ಪಿ ಶೇ.0.75 ರಷ್ಟಿತ್ತು. ಆದರೆ ಈ ಬಾರಿ ಅದು 1.23 ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಇಂಗ್ಲೀಷ್, ಹಿಂದಿಯಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ಪ್ರೋ ಕಬಡ್ಡಿ ಈ ಬಾರಿ ಕನ್ನಡ, ಮರಾಠಿ, ತೆಲುಗು ಭಾಷೆಗಳಲ್ಲೂ ಇದು ಮೂಡಿ ಬರುತ್ತಿದೆ.
ಮಂಜೀತ್ ಚಿಲ್ಲರ್, ಶಬ್ಬೀರ್ ಬಾಪು, ಅನುಪ್ ಕುಮಾರ್, ಅಜಯ್ ಠಾಕೂರ್, ರಾಕೇಶ್ ಕುಮಾರ್, ನವನೀತ್ ಗೌತಮ್, ಮುಂತಾದ ಆಟಗಾರರ ಹೆಸರು ಮಕ್ಕಳ ಬಾಯಲ್ಲೂ ನಲಿದಾಡುತ್ತಿದೆ. ಅಮಿತಾಭ್ ಬಚ್ಚನ್ರಂತಹ ಬಾಲಿವುಡ್ ಸ್ಟಾರ್ಗಳಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳೂ ಕಬಡ್ಡಿ ನೋಡಲು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಕ್ರಿಕೆಟ್ನಂತೆ ಈ ಆಟ ಹೆಚ್ಚು ಸಮಯವನ್ನು ಪಡೆದುಕೊಳ್ಳುವುದಿಲ್ಲ. ಕೇವಲ 40 ನಿಮಿಷಗಳಲ್ಲಿ ಇದು ಮುಕ್ತಾಯವಾಗುತ್ತದೆ. ಆಟಗಾರರ ವರ್ಚಸ್ಸಿಗೆ, ಆಟದ ಶೈಲಿಗೆ ಅಭಿಮಾನಿಗಳು ಮಾರು ಹೋಗಿದ್ದಾರೆ. ಆಟಗಾರರ ಕಟೌಟ್ಗಳನ್ನು ಹಿಡಿದು ಅಭಿಮಾನ ಮೆರೆಯುತ್ತಿದ್ದಾರೆ. ಕ್ರಿಕೆಟನ್ನು ಹೊರತು ಪಡಿಸಿ ಬೇರೆ ಆಟಕ್ಕೆ ಇಷ್ಟೊಂದು ಬೆಂಬಲ ವ್ಯಕ್ತವಾಗುತ್ತಿರುವುದು ಭಾರತದಲ್ಲಿ ಇದೇ ಮೊದಲು.
ಪ್ರೋ ಕಬಡ್ಡಿಯಿಂದಾಗಿ ಭಾರತದಲ್ಲಿ ಕಬಡ್ಡಿ ಕ್ರಾಂತಿಯಾಗುತ್ತಿದೆ. ಕಬಡ್ಡಿ ಆಟಗಾರರಿಗೆ ಅವರಿಗೆ ಪ್ರತಿಭೆಗೆ ತಕ್ಕ ಫಲ ಸಿಗುತ್ತಿದೆ. ಮುಂಬರುವ ಯುವಪೀಳಿಗೆಗೂ ಈ ಆಟಗಾರರು ಸ್ಫೂರ್ತಿಯಾಗಲಿದ್ದಾರೆ. ಮಹಿಳೆಯರ ಪ್ರೋ ಕಬಡ್ಡಿಯನ್ನೂ ತರಲು ಆಯೋಜಕರು ಚಿಂತನೆ ನಡೆಸುತ್ತಿದ್ದಾರೆ. ನಮ್ಮ ಮಣ್ಣಿನ ಕ್ರೀಡೆಯೊಂದು ಮತ್ತೆ ಜೀವ ಪಡೆಯುತ್ತಿದೆ ಎಂಬ ಸಂತೋಷ ಭಾರತೀಯರಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.