ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯನ್ನು ತಂಬಾಕು ಸೇವನೆ ಮುಕ್ತ(ಕೋಟ್ಪಾ ಕಾಯಿದೆ) ಜಿಲ್ಲೆಯೆಂದು ಘೋಷಿಸುವ ಸಲುವಾಗಿ ನಡೆಯುವ ವಿಶೇಷ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳಿಗೆ, ಶಾಲಾ ಕಾಲೇಜುಗಳು ಮುಖ್ಯಸ್ಥರುಗಳಿಗೆ, ಶಿಕ್ಷಕರುಗಳಿಗೆ ಮತ್ತು ಅಂಗಡಿಗಳ ಮಾಲಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಗುರುವಾರ ಬೆಳ್ತಂಗಡಿ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾ ಭವನದಲ್ಲಿ ನಡೆಯಿತು.
ನೋಡೆಲ್ ಅಧಿಕಾರಿ ಡಾ|ಜಾನ್ ಮಾತನಾಡಿ ತಂಬಾಕು ಸೇವನೆಯಿಂದ ಪ್ರತಿ ನಿತ್ಯ ರಾಜ್ಯದಲ್ಲಿ 20 ರಿಂದ 25 ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಅತ್ಯಂತ ಗಂಭೀರ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ತಂಬಾಕು ಉತ್ಪನ್ನಗಳ ಸೇವನೆಯಿಂದ ಮುಕ್ತಗೊಳಿಸುವ ಮೊದಲ ಹೆಜ್ಜೆಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ಕಾಯಿದೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಕಾಯ್ದೆಯನ್ವಯ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಮಾಡಿದಲ್ಲಿ ಸ್ಥಳದಲ್ಲೇ ರೂ. 200 ದಂಡ ವಿಧಿಸಲು ವಿವಿಧ ಸರಕಾರಿ ಅಧಿಕಾರಿಗಳಿಗೆ ನೇರವಾಗಿ ಅಧಿಕಾರವನ್ನು ನೀಡಲಾಗಿದೆ.
ಶಾಲಾ ಕಾಲೇಜು, ಸರಕಾರಿ ಕಚೇರಿ, ಹೊಟೇಲುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ತಂಬಾಕು ನಿಷೇಧದ ಬಗ್ಗೆ ಫಲಕವನ್ನು ಅಳವಡಿಸಬೇಕು. ಇದನ್ನು ಅಳವಡಿಸದಿದ್ದರೆ ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಕಚೇರಿಗಳಲ್ಲಿ ಬೀಡಿ,ಸಿಗರೇಟುಗಳ ಅವಶೇಷಗಳನ್ನು ಕಂಡಬಂದಲ್ಲಿ ಸಂಬಂಧಿಸಿದ ಕಚೇರಿಯ ಅಧಿಕಾರಿಯೇ ದಂಡ ಪಾವತಿಸಬೇಕಾಗುತ್ತದೆ. ತಮ್ಮ ತಮ್ಮ ಕಚೇರಿಗಳ ಪರಿಸರದಲ್ಲಿ ತಂಬಾಕು ವಸ್ತುಗಳ ಉಪಯೋಗವಾಗದಂತೆ ಅವರು ಎಚ್ಚರ ವಹಿಸಬೇಕು ಎಂದರು.
ಸಭೆಯಲ್ಲಿ ಬೆಳ್ತಂಗಡಿ ತಹಸೀಲ್ದಾರ್ ಪುಟ್ಟಶೆಟ್ಟಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ್, ವೃತ್ತ ನಿರೀಕ್ಷಕ ಲಿಂಗಪ್ಪ ಬಿ.ಆರ್., ಲೋಕೋಪಯೋಗಿ ಇಲಾಖಾ ಕಾರ್ಯನಿರ್ವಾಹಕ ಇಂಜಿನಿಯರ್ ಸುಭಾಶ್ಚಂದ್ರ, ಬೆಳ್ತಂಗಡಿ,ವೇಣೂರು, ಪುಂಜಾಲಕಟ್ಟೆ ಠಾಣಾಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.