ಇದೀಗ ಹಲವು ವರ್ಷಗಳ ಬಳಿಕ ಒಂದು ಪುನರವಲೋಕನದ ಸಂದರ್ಭವನ್ನು ಕೈಗೆತ್ತಿಕೊಳ್ಳೋಣ. ಬಾಂಗ್ಲಾ ಇಂದಿಗೂ ತನ್ನ ಭಾಗ್ಯದ ಬೆಳ್ಳಿರೇಖೆಗಳಿಗಾಗಿ ಭಾರತಕ್ಕೆ ಮೊರೆಯಿಡುತ್ತದೆ. ಅದು ಪ್ರಕಟಗೊಂಡಿರುವ ಐತಿಹಾಸಿಕ, ಪ್ರಾದೇಶಿಕ ಸ್ವರೂಪವೇ ಹಾಗಿದೆ. ಅದು ತೀನ್ ಬೀಘಾವನ್ನು ಕೇಳಿತು: ನಾವು ಕೊಟ್ಟಿದ್ದೇವೆ. ಅದು ಗಂಗಾಜಲ ಹಂಚಿಕೆ ಪ್ರಸ್ತಾವ ಮಂಡಿಸಿತು; ನಾವು ಒಪ್ಪಿದ್ದೇವೆ. ಬಹುಶಃ ಮೂರುಕಡೆ ಭಾರತದಂಥ ಉದಾತ್ತಾ ಮಾನವತೆಯಿಂದಲೂ ಒಂದೆಡೆ ಗಂಗಾಸಾಗರದಂಥ ಭಾರತೀಯ ಆಖಾತದಿಂದಲೂ ಸುತ್ತು ವರಿದ ಬಾಂಗ್ಲಾ ಜಗತ್ತಿನಲ್ಲೇ ಅತಿ ಹೆಚ್ಚು ಸುರಕ್ಷಿತ ರಾಷ್ಟ್ರ ಎನ್ನಬಹುದೇನೋ! ನಮಗೂ ಅನಿಸುತ್ತದೆ- ಅಂದಿನಿಂದ ಇಂದಿಗೂ ಮುಂದೆ ಎಂದೆಂದಿಗೂ ಬಾಂಗ್ಲಾ ಸಂರಕ್ಷಣೆಯ ಹೊಣೆ ನಮ್ಮದೇ.
ಬಾಂಗ್ಲಾ ನೆಮ್ಮದಿ ಪಡಬಹುದು. ಸ್ವತಂತ್ರಗೊಂಡ ಶೈಶವದಲ್ಲೇ ಬಾಂಗ್ಲಾ ಲಕ್ಷಾಂತರ ಚಕ್ಮಾಗಳನ್ನು ಭಾರತದ ಗಡಿಯೊಳಕ್ಕೆ ತೂರಿತು. ನಾವು ಸಹಿಸಿದ್ದೇವೆ. ಎಂತಿದ್ದರೂ ತಾನು ‘ಮುಸ್ಲಿಂ ಮಾನಸಿಕತೆಯ ಶಿಶುವೇ ಹೊರತು ಪ್ರಜಾಸತ್ತೆಯ ಪರವಲ್ಲ’ ವೆಂಬುದನ್ನು ಶೇಖ ಮುಜಿಬರ್ ರೆಹಮಾನ್ ಹತ್ಯಾಕಾಂಡದಲ್ಲಿ ಜಗವರಿಯೆ ಪ್ರದರ್ಶಿಸಿತು. ನಾವು ಪ್ರತಿಭಟನೆಯ ಪ್ರತಿಕ್ರಿಯೆ ತೋರಲಿಲ್ಲ. ಬಾಂಗ್ಲಾದಲ್ಲಿ ಅಳಿದುಳಿದಿರುವ ಹಿಂದುಗಳು-ಇತರ ಅಲ್ಪಸಂಖ್ಯಾತರ ಮೇಲೆ ತನ್ನ ಬರ್ಬರ ಮತೀಯತೆಯನ್ನು ಇಂದಿಗೂ ಮುಂದುವರಿಸುತ್ತಿದೆ, ನಾವು ವಿವರಣೆ ಕೇಳಿಲ್ಲ. ಇನ್ನೂ ಕೇಳಬಹುದು, ಅವರು ಸೊಪ್ಪು ಹಾಕುವುದಿಲ್ಲ.
ಬಾಂಗ್ಲಾ – ಅಮರ್ ಸೋನಾರ್ ಬಾಂಗ್ಲಾ- ರೆಹಮಾನರ ಕನಸು ಕಲ್ಪನೆಗಳು ಜೀವ ತೆಳಯುದಕ್ಕೆ ಭಾರತದ ಸೈನ್ಯವೇ ಅಂತಿಮ, ಅಪ್ರತಿಮ, ಅಸಾಮಾನ್ಯ ಕಾರಣವಾಗಿತ್ತು- ಇದು ಇತಿಹಾಸ. ಬಾಂಗ್ಲಾದ ಮುಕ್ತವಾಹಿನಿಯು ಸೃಷ್ಟವಾಗಿ ತನ್ನ ಯುದ್ಧನೀತಿ ರೂಪಿಸಿಕೊಂಡದ್ದೂ ಭಾರತದ ನೆಲದಲ್ಲೇ. ವಾಹಿನಿಯದೇನಿದ್ದರೂ ಅದು ಪದಾತಿಗಳ ಹೋರಾಟ. ಆದರೆ ಒಂದೆಡೆ ಬಾಂಗ್ಲಾದಂಥ ನೆಲ- ಜಲಭರಿತ ಪ್ರದೇಶಗಳಲ್ಲಿ ಕೇವಲ ಭೂಸೈನ್ಯ ಕ್ರಮಿಸಬಹುದಾದ ಗತಿ, ಸಾಧಿಸಬಹುದಾದ ಪ್ರಗತಿ ಸಂಶಯಾಸ್ಪದವಾಗಿತ್ತು.
ಪಾಕಿಸ್ಥಾನದ ಬಂಡೆ ಹೃದಯವನ್ನು ಧೃತಿಗೆಡಿಸುವುದು ಸಾಧ್ಯವೇ ಇರಲಿಲ್ಲ. ಪೂರ್ವದಲ್ಲಿ ಬಾಂಗ್ಲಾ ಉದಯಿಸಬೇಕಾದರೆ ಪಶ್ಚಿಮದಲ್ಲಿ ಪಾಕಿಸ್ಥಾನದ ಆಟಾಟೋಪ ಅಸ್ತಮಿಸಲೇಬೇಕಾಗಿತ್ತು. ನೌಕಾ ಬಲ-ವಿಮಾನ ಬಲಗಳಿಂದಷ್ಟೇ ಸಾಧ್ಯವಾಗಬಹುದಾಗಿದ್ದ ಈ ರಕ್ಕಸದಮನದ ಕಾರ್ಯ ಮುಕ್ತಿವಾಹಿನಿಗೆ ಕನಸಿನಲ್ಲೂ ಎಟುಕದ ಎತ್ತರ. ಅಂತರಾಷ್ಟ್ರೀಯವಾಗಿಯೂ ‘ಮಾನವ್ಯದ ರಕ್ಷಣೆ’ಯೆಂಬ ಹಣೆಪಟ್ಟಿ ಕಟ್ಟಿಕೊಂಡು ಪಾಕಿಸ್ಥಾನದ ಸಮರ್ಥನೆಗೆ ಶಸ್ತ್ರಸೇನೆಗಳನ್ನು ಕಳಿಸಿಕೊಟ್ಟ ದೇಶಗಳಿದ್ದವು. ಮಳೆಗಾಲದ ಮುನ್ನ ಯುದ್ಥಕ್ಕೆ ಕಾಲವು ಪ್ರಶಸ್ತವಿರಲಿಲ್ಲ. ಆದರೆ ಒಂದು ಅಸಾಧ್ಯ ಸಾಹಸದ ಕಾರ್ಯ ನಡೆದುಹೋಯಿತು. ಭಾರತದ ಸೈನ್ಯ ಬಂಗಾರದ ಬಾಂಗ್ಲಾವನ್ನು ಮುಕ್ತಗೊಳಿಸಿತು.
ಇದಕ್ಕಾಗಿ ಬಾಂಗ್ಲಾ ಭಾರತಕ್ಕೆ ಚಿರಋಣಿಯಾಗಿರಬೇಕಲ್ಲವೇ? ಇಲ್ಲ. ಅಲ್ಲಿಯ ಬಾಂಗ್ಲೋದಯ ಚರಿತ್ರೆಯಲ್ಲಿ ಮುಕ್ತಿವಾಹಿನಿಗೇ ಅಗ್ರಸ್ಥಾನ, ಅಷ್ಟೇಅಲ್ಲ. ಅದೊಂದೇ ಸ್ವಾತಂತ್ರ್ಯ ಸಾಧಿಸಿ ಕೊಟ್ಟಿತು! ಬಾಂಗ್ಲಾಕ್ಕಾಗಿ ಹೋರಾಡಿ ಮಡಿದ ಭಾರತೀಯರ ಸ್ಮಾರಕವಂತಿರಲಿ, ಪಠ್ಯಪುಸ್ತಕಗಳಲ್ಲಿ ಭಾರತೀಯ ಸೈನ್ಯಕ್ಕೆ ಉಲ್ಲೇಖನೀಯ ನ್ಯಾಯವೇ ಇಲ್ಲ. ಈ ಐತಿಹಾಸಿಕ ಹೋರಾಟದಲ್ಲಿ ಪಾಕಿಸ್ತಾನದ ಕೈಸೆರೆಯಾಗಿ ಇಂದಿಗೂ ಕೊಳೆಯುತ್ತಾ ಬಿದ್ದಿರುವ ಭಾರತೀಯ ಸೈನಿಕರ ಬಿಡುಗಡೆಗಾಗಿ ಪಾಕಿಸ್ಥಾನವನ್ನು ಆಗ್ರಹಿಸುವುದಿರಲಿ, ಅವರಿಗಾಗಿ ಒಂದು ಅನುಕಂಪದ ನುಡಿಯನ್ನು ಪ್ರಕಟಿಸುವ ಸಜ್ಜನಿಕೆ ಕೂಡಾ ಬಾಂಗ್ಲಾಕ್ಕಿಲ್ಲ- ಇದು ನಮ್ಮ ಬಗೆಗೆ ಅವರು ತೋರುವ ‘ಕೃತಜ್ಞತೆ’.
ನಮಗಾದರೋ ಎಷ್ಟು ಔದಾರ್ಯ, ನಾವು ಅವರಿಂದ ಏನನ್ನೂ ಬಯಸುದಿಲ್ಲ-ಗಡಿಗಳ ಉಲ್ಲಂಘನೆ ಮಾಡಿರುವುದನ್ನು ಕೂಡಾ.
ವಾಸ್ತವವಾಗಿ ನಮ್ಮ ಪೂರ್ವಾಂಚಲ ಪ್ರದೇಶಗಳನ್ನು ಸುಲಭವಾಗಿ ತಲುಪಲು ಬಾಂಗ್ಲಾದುದ್ದಕ್ಕೂ ಒಂದು ರಹದಾರಿ ನಮಗೆ ಬೇಕಿತ್ತು. ತೀನ್ ಭೀಘಾ ವ್ಯವಹಾರಿಕವೆನಿಸುವಾಗ ರಹದಾರಿ ಯಾಕೆ ವ್ಯವಹಾರಿಕವಾಗುದಿಲ್ಲ?
ಗಡಿಗಳು, ಬಾಂಗ್ಲಾದ ಹಿಂದುಹಿತ ಅವರಿಗೆ ಬೇಡಾದರೆ ನಮಗೂ ಬೇಡವೇ?
ನಾಳೆ ಇನ್ನೊಂದು ‘ಐದು ಸಾವಿರ ವರ್ಷಗಳ ಬಾಂಗ್ಲಾ’ ಎಂಬ ಸೊಲ್ಲೂ ಮೊಳಗೀತು. ಇಂಥ ಕಡಲೆಗಳನ್ನು ಜಗಿಯಬೇಕಾದವರು ಯಾರು? ಅರಗಿಸಕೊಳ್ಳಬೇಕಾದ ವಾರಸಿಕೆ ಯಾರದು?
ಬಾಂಗ್ಲೋದಯದಿಂದ ನಮಗೆ ಅನೇಕ ಅಪಾಯ ಕಣ್ಮರೆಯಾಗಿರಬಹುದು. ಅಥವಾ ನಾವು ಹಾಗೆ ಭಾವಿಸುವ ಸ್ವಾತಂತ್ರ್ಯ ಹೊಂದಿದ್ದೇವೆ. ಪಾಕಿಸ್ಥಾನದ ಕ್ಷಿಪಣಿಯೊಂದು ಭಾರತೀಯ ವಾಯುನೆಲೆಯೊಳಗೆ ಬಂದಾಗಲೂ ‘ನಮಗೇನೂ ಅಪಾಯವಿಲ್ಲೆ’ಂದು ನಮ್ಮ ಪ್ರಧಾನಿ ಸಾರಲಿಲ್ಲವೇ ಆದರೆ ಇದು ವಾಸ್ತವಿಕತೆಯನ್ನು ಮರೆ ಮಾಚುವ ರಾಜಕೀಯ ತಂತ್ರವಲ್ಲವೇ?
ಉಪಯಂ ಚಿಂತಯೇತ್ ಪ್ರಾಜ್ಞಾಃ ತಥಾಪಾಯಂ ಚ ಚಿಂತಯೇತ್|
ಕೃಪೆ: ಅಕ್ಷಿಪಥ
ಲೇಖಕರು: ಡಾ|ಸೋಂದಾ ನಾರಾಯಣ ಭಟ್ಟ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.