ಮಂಗಳೂರು: ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳಕ್ಕೆ ಸಂಬಂಧಿಸಿದಂತೆ ಮಾಹಿತಿಯೊಂದು ಹೊರಬಿದ್ದಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕಂಬಳ ನಡೆಸುವುದೋ, ಬೇಡವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದ್ದು ಜ. 31 ರಿಂದ ತೊಡಗಿದಂತೆ ಮಾರ್ಚ್ 31 ರ ವರೆಗೆ ಏಳು ಕಂಬಳ ಓಟವನ್ನು ನಡೆಸಲು ನಿಧರಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂಬಳದ ಸಂಘಟಕರು ಮತ್ತು ಮಾಲೀಕರ ನಡುವಿನ ವಾಷಿಕ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಇತರ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕಂಬಳವನ್ನು ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆ ಮೂಲಕ ಈ ಬಾರಿಯೂ ಕಂಬಳ ಪ್ರಿಯರ ಆಸೆಯನ್ನು ಈಡೇರಿಸುವ ಸಲುವಾಗಿ ಕಂಬಳದ ಆಯೋಜಕರು ಮಹತ್ವದ ಹೆಜ್ಜೆಯನ್ನು ಇರಿಸಿದ್ದಾರೆ.
ಕೊರೋನಾ ಹಿನ್ನೆಯಲ್ಲಿ ಪೂರಕ ಅಭ್ಯಾಸಗಳಿಗೆ ಸಮಯಾವಕಾಶ ದೊರೆಯದೇ ಇರುವ ಹಿನ್ನೆಲೆಯಲ್ಲಿ ಈ ವರೆಗೆ ತಮ್ಮ ಕೋಣಗಳನ್ನು ಕಂಬಳದ ಗದ್ದೆಗೆ ಇಳಿಸುತ್ತಿದ್ದ ಕೋಣಗಳ ಮಾಲಿಕರು ಕಂಬಳದಲ್ಲಿ ಭಾಗವಹಿಸುತ್ತಿಲ್ಲ ಎಂದು ಜಿಲ್ಲಾ ಕಂಬಳ ಸಮಿತಿಯು ಮಾಹಿತಿ ನೀಡಿದೆ. ಈ ಬಾರಿ ಕಂಬಳ ನಡೆಸುವುದಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳಿದ್ದ ಹಿನ್ನೆಲೆಯಲ್ಲಿ ವೇಳಾಪಟ್ಟಿ ಪ್ರಕಟಿಸುವುದು ಸಹ ವಿಳಂಬವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕೊರೋನಾ ಸಾಂಕ್ರಾಮಿಕ ಸೋಂಕು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡು ಕಂಬಳ ನಡೆಸಲಾಗುತ್ತದೆ ಎಂದು ಕಂಬಳ ಸಮಿತಿ ಮಾಹಿತಿಯನ್ನು ನೀಡಿದೆ. ಜೊತೆಗೆ ಕಂಬಳ ನಡೆಯುವಲ್ಲಿ ಜನಸಂದಣಿಯನ್ನು ತಪ್ಪಿಸುವ ಸಲುವಾಗಿ, ಕಂಬಳವನ್ನು ಆನ್ಲೈನ್ ಮೂಲಕ ನೇರಪ್ರಸಾರ ಮಾಡಲಾಗುತ್ತದೆ ಎಂದು ಸಮಿತಿ ತಿಳಿಸಿದೆ.
ವರ್ಷಂಪ್ರತಿ ಕಂಬಳವನ್ನು ಸಂಜೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಕಂಬಳವನ್ನು ಮುಂಜಾನೆ 7.30 ರಿಂದ ಸಂಜೆ 6 ರ ವರೆಗೆ ನಡೆಸಲಾಗುತ್ತದೆ ಎಂದು ಜಿಲ್ಲಾ ಕಂಬಳ ಸಮಿತಿ ಮಾಹಿತಿ ನೀಡಿದೆ. ಹೊಕ್ಕಡ್ಗೊಳಿಯಲ್ಲಿ ಜನವರಿ 30 ಮತ್ತು 31, ಐಕಳ ಭಾವದಲ್ಲಿ ಫೆಬ್ರವರಿ 6 ಮತ್ತು 7, ವಾಮಂಜೂರಿನ ತಿರುವೈಲುಗುತ್ತಿನಲ್ಲಿ ಫೆ. 13 ಮತ್ತು 14, ಮೂಡಬಿದ್ರೆಯಲ್ಲಿ ಫೆ.20, 21, ಮಿಯಾರಿನಲ್ಲಿ ಫೆ. 27, 28, ಬಂಗ್ರೆ ಕೂಳೂರಿನಲ್ಲಿ ಮಾರ್ಚ್ 6 ರಂದು ಕಂಬಳ ನಡೆಯಲಿದೆ. ಪೆರ್ಮುಂಡ ಮತ್ತು ವೇಣೂರಿನಲ್ಲಿ ಮಾರ್ಚ್ 20, 21 ರಂದು ಅಂತಿಮ ಪಂದ್ಯ ನಡೆಯಲಿದೆ ಎಂದು ಜಿಲ್ಲಾ ಕಂಬಳ ಸಮಿತಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.