ಜಗದ ಜೀವಿಗಳೆಲ್ಲ ತುಡಿಯುವುದು ಮಿಡಿಯುವುದು ಸ್ವಾತಂತ್ರ್ಯಕ್ಕಾಗಿ. ಅದು ಮಾಟವೇ ಹೌದು. ಅಂದರೆ ಅರ್ಥವಾಗದ ಮಾಯೆಯ ಮೋಹದ ಅಭಿಚಾರವಲ್ಲ; ಅರ್ಥಪೂರ್ಣವಾದ ಸಹಜವಾದ ಜೀವ ವ್ಯವಹಾರ. ಸ್ವಾತಂತ್ರ್ಯವು ಪ್ರಕೃತಿದತ್ತ, ಅದೇ ಜೀವಕುಲದ ಸಂರಚನೆ ಎಂಬರ್ಥದಲ್ಲಿ ಅದೊಂದು ಅಪೂರ್ವ ಮಾಟವೇ.
ಮಾತ್ಸ್ಯ ನ್ಯಾಯವನ್ನು ಅಷ್ಟೇ ಪ್ರಕೃತಿ ಸಹಜವೆಂದು ಸ್ವೀಕರಿಸಬೇಕಾಗುತ್ತದೆ. ‘ಜೀವೋ ಜೀವಸ್ಯ ಜೀವನಮ್’ ಜೀವಿಯೇ ಜೀವಿಯ ಆಹಾರ, ಅದರಿದು ಜೀವಿಯ ಬದುಕಿನ ಸ್ವಾತಂತ್ರ್ಯಕ್ಕೆ ಧಕ್ಕೆಯಲ್ಲವೆ? ಬುದ್ದಿಹೀನ ಪ್ರಾಣಿಪ್ರಪಂಚದಲ್ಲಿ ಬಲವುಳ್ಳವರೇ ಬದುಕುಳಿಯುವುದು ಸಾಮಾನ್ಯ. ಆದರೆ ಬುದ್ಧಿವಂತ ಮನುಷ್ಯನೂ ಬಲಪ್ರಯೋಗದಿಂದ ಇತರರ ಬದುಕಿನ ಸ್ವಾತಂತ್ರ್ಯವನ್ನು ಕಸಿಯುವುದೆ?
ಇಲ್ಲೀಗ ನಾವು ಚಿಂತಿಸಬೇಕಾದದ್ದಿದೆ. ಕಳೆದ ಸಹಸ್ರ ಸಹಸ್ರಮಾನಗಳಿಂದಲೂ `ಬುದ್ಧಿವಂತ’ ಮಾನವರು ಸ್ವಾತಂತ್ರ್ಯದ ನಿತ್ಯಸಂಘರ್ಷವನ್ನೇ ಅನುಭವಿಸುತ್ತಿದ್ದಾರೆ. ದುರ್ಬಲರು ಬಲಸಂಪಾದಿಸುವುದೂ ಹಾಗೂ ಬಲಿಷ್ಠರಾಗಿ ದಮನ ಕಾರ್ಯವೆಸಗುವುದೂ ಪುನರಪಿ ಶೋಷಿತ ದುರ್ಬಲರು ಬಲವರ್ಧನೆಗೆಳಸುವುದು ಒಂದು ಚಕ್ರಭ್ರಮಣದಂತೆಯೇ ತೋರುತ್ತದೆ. ಕೆಲವೊಮ್ಮೆ ಅದು ವೇಗವಾಗಿ ಸುತ್ತಿರಬಹುದಷ್ಟೇ. ಅಂಥ ‘ವೇಗ’ವನ್ನೇ ಕ್ರಾಂತಿಯೆಂದು ಬೇರೆ ಹೆಸರಿಂದ ಕರೆಯಲಾಗುತ್ತದೆ. ಕ್ರಾಂತಿವೀರರೆಂದೇ ಪ್ರಥಿತರಾದ ಸಾವರ್ಕರರು ಕ್ರಾಂತಿಯನ್ನು ಹೀಗೆ ಪರಿಭಾವಿಸುತ್ತಾರೆ. ಮಾನವಜಾತಿಯ ಐತಿಹಾಸಿಕ ಬದುಕಿನ ಪುನರ್ವ್ಯವಸ್ಥೆಯೇ ಕ್ರಾಂತಿ.
ಇಂಥ ಅದೆಷ್ಟು ‘ಪುನರ್ ವ್ಯವಸ್ಥೆ’ಗಳು ಮನುಕುಲದ ಇತಿಹಾಸದಲ್ಲಿ ಘಟಿಸಿದವೋ!
ನಾಳಿನ ಆಗಷ್ಟ್ 15ಕ್ಕೆ ನಮ್ಮ ಸ್ವತಂತ್ರಭಾರತ ಪುನರ್ವ್ಯವಸ್ಥೆಗೊಂಡು ೬೮ನೆಯ ವರ್ಷಕ್ಕೆ ಕಣ್ಣು ತೆರೆಯಲಿದೆ. 68 ವರ್ಷಗಳ ಹಿಂದೆ ಸ್ವಾತಂತ್ರ್ಯ ಪ್ರಾಪ್ತಿ-ಹೊಸದೊಂದು ಪರಿವರ್ತನೆ ಘಟಿಸಿದಾಗ ಈ ದೇಶದ ಕಣ್ಣುಗಳು ಕಾದು ಕೆಂಪಾಗಿದ್ದವು, ಹೊಸ ಆಸೆ ಭರವಸೆಗಳ ಹೂಮಳೆಯ ಮೋಡಗಳಿಗಾಗಿ ಅವು ಅಕ್ಷರಶಃ ತಪಸ್ಸಿಗಾರಂಭಿಸಿದವು. ಎಷ್ಟು ಕಣ್ಣುಗಳು ಮುಚ್ಚಿದವೋ ಇನ್ನೆಷ್ಟು ಮುದುಡಿದವೋ ಮತ್ತೆಷ್ಟು ಬಾಡಿದವೋ ಹೊಸ ಕಂಗಳಿನ್ನೆಷ್ಟು ತೆರದುಕೊಂಡವೋ. ಆದರೆ ಕಂಡದ್ದೇನು? ಕ್ರಾಂತಿಯ ಕನಸಿನಲ್ಲಿದ್ದ ಪುನರ್ವ್ಯವಸ್ಥೆಯ ವೈಭವವನ್ನೆ? ಅಥವಾ ಇನ್ನೊಂದು ಕ್ರಾಂತಿಯ ಸನ್ನಾಹವನ್ನೇ?
ಸಾವರ್ಕರ್ ಹೇಳುತ್ತಾರೆ : ಕ್ರಾಂತಿಗಾಗಿ ಲಕ್ಷಾಂತರ ಜನ ಭೂಮಿಯಲ್ಲಿ ಅವತರಿಸುತ್ತಾರೆ. ಕ್ರಾಂತಿಯಿಂದಾಗಿ ರಾಜ್ಯಸಿಂಹಾಸನಗಳು ಉಧ್ವಸ್ತಗೊಳ್ಳುತ್ತವೆ. ರಾಜ ಮುಕುಟಗಳು ಧಾರಾಶಾಯಿಯಾಗುತ್ತವೆ. ಹೊಸಮುಕುಟಗಳು ಹುಟ್ಟಿಕೊಳ್ಳುತ್ತದೆ. ಕಾಣುವ ಮೂರ್ತಿಗಳೆಲ್ಲ ಕತ್ತರಿಸಿ ಬೀಳುತ್ತವೆ, ನವೀನ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತವೆ. ಕ್ರಾಂತಿ ಘಟ್ಟಿಸಿದಾಗ ಪ್ರಚಲಿತ ಆದರ್ಶಗಳು ಧೂಲಿಧೂಸರಿತವಾಗುತ್ತವೆ; ನವ್ಯ ಆದರ್ಶಗಳು ಹೊಳೆಹೊಳೆಯುತ್ತವೆ. ಕ್ರಾಂತಿಕಾಲದಲ್ಲಿ ಪವಿತ್ರ ಮಾನವ ರಕ್ತವು ಮಡುಗಟ್ಟಿಹರಿಯುದನ್ನೂ ಪ್ರಚಂಡ ಜನತೆ ಒಂದು ಸಾಮಾನ್ಯ ಪ್ರಕ್ರಿಯೆಯೆಂದೇ ಭಾವಿಸುತ್ತದೆ. ಇಂಥ ಕ್ರಾಂತಿಯ ಜ್ವಾಲೆಯನ್ನು ಭುಗಿಲೆಬ್ಬಿಸುವುದಕ್ಕೆ ಅಂಥ ಕೆಲವು ಮಹಾನ್ ತತ್ವಗಳೇ ಕಾರಣವಾಗಿ ಒದಗಿರುತ್ತವೆ.(1857ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ)
‘ಸ್ವ’ತ್ವದ ಸಾಧನೆಯೆಂಬುದು ಕ್ರಾಂತಿಗೆ ಪ್ರೇರಕವಾಗುವ ಮೂಲ ಮಾಹಾತತ್ತ್ವ ಸ್ವಧರ್ಮವಿರಲಿ ,ಸ್ವರಾಜ್ಯವಿರಲಿ, ಸ್ವದೇಶವಿರಲಿ, ಅದು ಇನ್ನಷ್ಟು ಮತ್ತಷ್ಟು ಉಜ್ವಲಗೊಳ್ಳಬೇಕೆಂಬ ಪರಮಾಕಾಂಕ್ಷೆ ಅರಳುವುದೂ ಕೆರಳುವುದೂ ಕ್ರಾಂತಿಗೆ ಹೊರಳುವುದೂ ಮನುಕುಲದ ಇತಿಹಾಸದ ಕಥೆ. ಅಡಿಗರು ಸ್ವಾತಂತ್ರ್ಯಪ್ರಾಪ್ತಿಯ ಹಂಬಲದ ಹಾಡಲ್ಲಿ ನಾನಳಿವೆ ನೀನಳಿವೆ, ನಮ್ಮೆಲುಬುಗಳ ಮೇಲೆ ಮೂಡುವುದು ನವಭಾರತದಲೀಲೆ ಎಂದರೆ ಗುರುಗೋವಿಂದ ಸಿಂಹರು
ಸೂರಾ ಸೋಹೀ ಜಾನಿಯೇ
ಲಡೇ ಧರ್ಮಕೇ ಹೇತು|
ಪುರಜಾ ಪುರಜಾ ಕಟಮರೇ
ತವಹು ನ ಛೋಡೆ ಖೇತ-ಎಂದರು.
ಸಮರ್ಥ ರಾಮದಾಸರು:ಮಾರಿತಾ ಮಾರಿತಾ ಧ್ಯಾವೆ ರಾಜ್ಯ ಆಪುಲೇ| ಎಂದು ಉದ್ಘೋಷಿಸಿದರು.
ಭಾಷೆ ಬೇರೆ, ಭಾವವೊಂದೇ. ಕಾಲ ಬೇರೆ, ಕರೆಯೊಂದೇ. ಅದೇ ಧರ್ಮಾಧಿಷ್ಠಿತ ಸ್ವತಂತ್ರ ನೆಲೆಯ ಹಂಬಲ. ಅದೇ ಸಿದ್ಧಿಯ ಕೊಲ್ಲವ , ಕಳೆಯುವ, ಇಲ್ಲವೇ ಅಳಿಯುವ ಛಲ.
೬೮ವರ್ಷ ಎಂಬುದು ಒಂದು ರಾಷ್ಟ್ರ ಜೀವನದಲ್ಲಿ ಸಣ್ಣ ಅವಧಿಯೇನಲ್ಲ. ಸ್ವಾತಂತ್ರ್ಯಾನಂತರದ ಉದಿತೋದಿತ ಮೂರನೆಯ ತಲೆಮಾರಿಗೆ ನಾವೀಗ ಸಾಗುತ್ತಿದ್ದೇವೆ.
ಚರಿತ್ರೆಯ ನಿಶಾಂತ ಎಚ್ಚರದ ಗಮನವಿರಬೇಕಲ್ಲವೆ?
ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ವರಿತಮಾತ್ಮನಃ|
ಕೃಪೆ: ಅಕ್ಷಿಪಥ
ಲೇಖಕರು: ಡಾ|ಸೋಂದಾ ನಾರಾಯಣ ಭಟ್ಟ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.