ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತ ಬೀಸುತ್ತಿರುವ ಕಾರಣದಿಂದ ಉಂಟಾದ ತೀವ್ರ ಗಾಳಿ ಹಾಗೂ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಚೆನೈ, ಕಾಂಚೀಪುರಂ, ಚೆಂಗ್ಲೆಪುಟ್, ಕಡಲೂರು, ಪೆರಂಬೂರ್, ಮಧುರಾಂತಕಂ, ಅರ್ಕೊನ್ನಮ್ ಸೇರಿದಂತೆ ಪುದುಚೇರಿ ಮತ್ತು ತಮಿಳುನಾಡಿನ ಇತರ ಕರಾವಳಿ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯು ಎದುರಾಗಿದೆ. ಇದರಿಂಗಾಗಿ ತಗ್ಗು ಪ್ರದೇಶಗಳಲ್ಲಿ ವಾಸವಾಗಿದ್ದ ಸಾವಿರಾರು ಜನರು ಸಂಕಷ್ಟಕ್ಕೊಳಗಾಗಿದ್ದು ಅವರು ವಿವಿಧ ಸರಕಾರಿ ವಸತಿ ಮತ್ತು ತಾತ್ಕಾಲಿಕ ಆಶ್ರಿತ ತಾಣಗಳಲ್ಲಿ ಆಶ್ರಯವನ್ನು ಪಡೆದಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ತತ್ವವೇ ಸೇವೆ. ದೇಶದ ಯಾವುದೇ ಮೂಲೆಯಲ್ಲೂ ಜನರು ಯಾವುದೇ ರೀತಿಯ ಸಂಕಷ್ಟಕ್ಕೆ ಒಳಗಾದರೂ ಮೊದಲಿಗೆ ಧಾವಿಸಿ ಬಂದು ಸಹಾಯ ಹಸ್ತ ಚಾಚುವುದು ಸಂಘದ ವಿಶೇಷತೆ. ಅದರಂತೆಯೇ ಈ ಬಾರಿಯೂ ಸಂಕಷ್ಟಕ್ಕೊಳಗಾಗಿರುವ ತಮಿಳುನಾಡಿನಲ್ಲೂ ಸಹಾಯಕ್ಕಾಗಿ ಧಾವಿಸಿರುವ ಸೇವಾಭಾರತಿಯು ತಮಿಳುನಾಡಿನ ಸರಕಾರಿ ಆಡಳಿತದೊಂದಿಗೆ ಕೈಜೋಡಿಸಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದೆ. ಇದರಂತೆ ಸೇವಾ ಭಾರತೀಯ ಕಾರ್ಯಕರ್ತರು, ಆಹಾರ ಸಾಮಗ್ರಿಗಳು, ಜೀವ ಜಲ, ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಸಲು ಮತ್ತು ಉಗ್ರ ಗಾಳಿಗೆ ತುತ್ತಾಗಿ ಮಾರ್ಗಗಳಲ್ಲಿ ಉರುಳಿರುವ ಮರಗಳ ತೆರವುಗೊಳಿಸುವ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಮೊನ್ನೆ ನವೆಂಬರ್ 25ರ ರಾತ್ರೆ 11.30 ಯ ಸಮಯದಲ್ಲಿ ಪುದುಚೇರಿಗೆ ಅಪ್ಪಳಿಸಿದ ನಿವಾರ್ ಚಂಡಮಾರುತದಿಂದ ಉಂಟಾದ ಸಂಕಷ್ಟದ ಸಂದರ್ಭದಲ್ಲಿ ಸ್ವಯಂಸೇವಕ ಸಂಘದ ಸೇವಾಭಾರತಿ ಕಾರ್ಯಕರ್ತರು ತಕ್ಷಣವೇ ಸಂತ್ರಸ್ತರ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಂಬರಂ ಪ್ರದೇಶದ ಕೊಂಪರೆಟ್ ನಲ್ಲಿನ ಸ್ವಯಂಸೇವಕರು ಸಂತ್ರಸ್ತರ ಸೇವೆಗಾಗಿ ತಕ್ಷಣ ಅಣಿಗೊಂಡು ಸುಮಾರು 1000 ಸಂತ್ರಸ್ತರಿಗಾಗಿ ಆಹಾರ ತಯಾರಿಸಿ ವಿತರಿಸಿದ್ದಾರೆ. ಇತ್ತ ಕಡಲೂರಿನಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಸುಮಾರು 2000 ಜನರಿಗೆ ಆಹಾರದ ಪೊಟ್ಟಣಗಳನ್ನು ಮತ್ತು ಕಾಂಚೀಪುರಂನ ಇರುಳಾರ್ ಸಮುದಾಯದ 300 ಜನರಿಗೂ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.
ಇನ್ನೊಂದೆಡೆಯಲ್ಲಿ ರಕ್ಷಣಾ ಕಾರ್ಯಗಳಲ್ಲೂ ತೊಡಗಿರುವ ಸ್ವಯಂಸೇವಕರು ಅರಕೋಣಂ ಕಂದಾದ ರಾಣಿಪೇಟೆಯಲ್ಲಿ ಸುಮಾರು 300 ಜನರನ್ನು ಮೂರು ತಾತ್ಕಾಲಿಕ ವಸತಿ ಶಿಬಿರಗಳಲ್ಲಿ ಸುರಕ್ಷಿತವಾಗಿ ಇರಿಸಿದ್ದು, ಅವರಿಗೆ ಅವಶ್ಯ ವಸ್ತುಗಳು ಹಾಗೂ ಆಹಾರ ಸಾಮಾಗ್ರಿಗಳನ್ನೂ ನೀಡತ್ತಿದ್ದಾರೆ. ಇನ್ನೊಂದೆಡೆ ಚೆನೈನ ತಿರುವಲ್ಲಿಕೆಣಿಯಲ್ಲಿ ಸ್ವಯಂಸೇವಕರು ತೀವ್ರಗಾಳಿಯ ಪ್ರಭಾವದಿಂದ ರಸ್ತೆಯಲ್ಲಿ ಮುರಿದು ಬಿದ್ದಿರುವ ಮರಗಳನ್ನು ಕತ್ತರಿಸಿ , ರಸ್ತೆಯನ್ನು ತೆರವುಗೊಳಿಸುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.