ನಾವು ಕಲಿತ ಕೆಲವೊಂದು ಕಲೆ ಎಷ್ಟೇ ಹಳೆಯದಾದರೂ ಅದು ಯಾವತ್ತು ಮಾಸುವುದಿಲ್ಲ. ಒಂದಲ್ಲ ಮತ್ತೊಂದು ರೂಪದಲ್ಲಿ ಅದು ಜೀವಂತಿಕೆಯನ್ನು ಪಡೆಯುತ್ತಲೇ ಇರುತ್ತದೆ. ಈ ಮಾತನ್ನು ನಿಜ ಮಾಡಿ ತೋರಿಸಿದವರು ದೆಹಲಿಯ 75 ವರ್ಷದ ಮಹಿಳೆ ಆಶಾ ಪುರಿ. ಅವರಿಗೆ ಕೈಯಲ್ಲಿ ಹೆಣೆದು ಸ್ವೆಟರ್, ಮಫ್ಲರ್, ಶಾಲುಗಳನ್ನು ತಯಾರಿಸುವ ಹವ್ಯಾಸವಿದೆ. ಸುಮಾರು 50 ವರ್ಷಗಳಿಂದ ಅವರು ಈ ಹವ್ಯಾಸವನ್ನು ನಿರಂತರವಾಗಿ ರೂಢಿಸಿಕೊಂಡು ಬಂದಿದ್ದಾರೆ. ಆದರೆ ಮಿಷಿನ್ ಹೊಲಿಗೆಯ ಈ ಕಾಲದಲ್ಲಿ ತನ್ನ ಕೈಯಲ್ಲಿ ಹೆಣೆದ ಬಟ್ಟೆಗಳಿಗೆ ಬೇಡಿಕೆ ಇರಬಹುದು ಎಂಬ ಕಲ್ಪನೆ ಕೂಡ ಅವರಿಗೆ ಇರಲಿಲ್ಲ. ಕೈ ಹೊಲಿಗೆ ಅವರಿಗೆ ಒಂದು ಹವ್ಯಾಸವಾಗಿತ್ತೇ ಹೊರತು ಜನರಿಂದ ಅದಕ್ಕೆ ಬೇಡಿಕೆ ಬರಬಹುದು ಎನ್ನುವ ಊಹೆಯನ್ನು ಅವರು ಮಾಡಿರಲಿಲ್ಲ.
ಆದರೆ ಮೂರು ವರ್ಷಗಳ ಹಿಂದೆ ಅವರ ಕೈಯಲ್ಲಿ ಹೆಣೆದ ಬಟ್ಟೆಗಳಿಗೆ ಬೇಡಿಕೆ ಬಂದಿದೆ. ಇಂದು ಅವರು ತಮ್ಮದೇ ಸಂಸ್ಥೆಯನ್ನು ಹುಟ್ಟು ಹಾಕಿ ಪ್ರತಿ ತಿಂಗಳಿಗೆ ಕನಿಷ್ಠ ನೂರು ಆರ್ಡರ್ ಪಡೆಯುತ್ತಿದ್ದಾರೆ. ಮಾತ್ರವಲ್ಲ, 16 ಮಂದಿಗೆ ಕೆಲಸ ನೀಡಿದ್ದಾರೆ. ಈ ಹದಿನಾರು ಮಂದಿಯಲ್ಲಿ ಅರ್ಧದಷ್ಟು ಜನ ಆಶಾ ಅವರಂತೆ ಹಿರಿಯ ನಾಗರಿಕರು ಎಂಬುದು ವಿಶೇಷ.
ಆಶಾ ಅವರ ಕೈಗಳಿಗೆ ಬಟ್ಟೆಗಳಿಗೆ ಬೇಡಿಕೆ ಬರುವಂತೆ ಮಾಡಿದ್ದು ಅವರ ಸೋದರ ಮೊಮ್ಮಗಳು ಕೃತಿಕ . ಆಕೆಯ ಕಾರಣದಿಂದಾಗಿ ಇಳಿ ವಯಸ್ಸಿನಲ್ಲಿ ಆಶಾ ಅವರ ಹವ್ಯಾಸ ಒಂದು ಪೂರ್ಣಪ್ರಮಾಣದ ಉದ್ಯಮವಾಗಿ ಬದಲಾಗಿದೆ.
ತನ್ನ ಅಜ್ಜಿಯ ಕೈ ಹೊಲಿಗೆಯಲ್ಲಿ ಮೂಡಿಬರುತ್ತಿದ್ದ ಸ್ವೆಟರ್, ಮಫ್ಲರ್ ಮುಂತಾದ ಬಟ್ಟೆಗಳ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ದ ಕೃತಿಕಾ ಅವರ ಬಟ್ಟೆಗಳಿಗೆ ಬೇಡಿಕೆ ಬರುವಂತೆ ಮಾಡಿದ್ದಾರೆ. ಅಜ್ಜಿ ಮತ್ತು ಮೊಮ್ಮಗಳು ಇಬ್ಬರೂ ಸೇರಿ ಬಟ್ಟೆಗಳ ಮಾರ್ಕೆಟಿಂಗ್ ಅನ್ನು ಅತ್ಯಂತ ಭಾವನಾತ್ಮಕವಾಗಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಲಿಕೆಯ ಹಿಂದಿನ ಯಶೋಗಾಥೆಯನ್ನು ಆಶಾ ಪುರಿಯವರು ವಿವರಿಸುತ್ತಾ ತಮ್ಮ ಉತ್ಪನ್ನವನ್ನು ಜಾಹೀರಾತು ಮಾಡಿದ್ದಾರೆ. ಇದು ಉತ್ತಮ ರೀತಿಯಲ್ಲಿ ಜನರಿಗೆ ತಲುಪಿದೆ.
ಮೊದಲು ತಿಂಗಳಿಗೆ 1-2 ಗ್ರಾಹಕರು ಅವರ ಬಳಿ ಬರುತ್ತಿದ್ದರು. 2017ರಲ್ಲಿ ಅವರು ತಮ್ಮ ಸಂಸ್ಥೆಯನ್ನು ಹುಟ್ಟುಹಾಕಿದರೂ ಕೂಡ ಅದಕ್ಕೆ ನಿಜವಾದ ಕಾಯಕಲ್ಪ ಸಿಕ್ಕಿದ್ದು ಲಾಕ್ಡೌನ್ ಅವಧಿಯಲ್ಲಿ.
ಕೃತಿಕಾ ಅವರಿಗೆ ಕಂಪನಿಯೊಂದರಲ್ಲಿ ಉದ್ಯೋಗ ದೊರಕಿತ್ತು, ಆಶಾ ಅವರಿಗೆ ಯುಎಸ್ ಹೋಗಬೇಕಾದ ಕಾರಣ ಇವರ ಉದ್ಯಮ ತುಸು ಕಾಲ ನಿಂತಲ್ಲೇ ನಿಂತಿತ್ತು.
ಆದರೆ ಮಾರ್ಚ್ ತಿಂಗಳಲ್ಲಿ ಕೃತಿಕ ಪ್ರಾಜೆಕ್ಟ್ ಅಂತ್ಯವಾಗಿದೆ, ಆಶಾ ಕೂಡಾ ಅಮೆರಿಕದಿಂದ ವಾಪಸಾಗಿದ್ದಾರೆ. ದೇಶವ್ಯಾಪಿಯಾಗಿ ನಂತರ ಲಾಕ್ಡೌನ್ ವಿಧಿಸಲಾಗಿದೆ. ಈ ಬಿಡುವಿನ ವೇಳೆಯನ್ನು ಇಬ್ಬರೂ ಕೂಡ ತಮ್ಮ ಉತ್ಪನ್ನವನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಳಸಿಕೊಂಡಿದ್ದಾರೆ.
ತಮ್ಮ ವ್ಯವಹಾರವನ್ನು ವಿಸ್ತರಿಸಲು ಅವರು ತಮ್ಮದೇ ಸಾಮಾಜಿಕ ವಲಯದಿಂದ ಇತರ ಇಬ್ಬರು ಹಿರಿಯ ನಾಗರಿಕರನ್ನು ಬಳಸಿಕೊಂಡರು. ಒಂದು ತಿಂಗಳಲ್ಲಿ, ತಂಡವು ಬಡ ಕುಟುಂಬಗಳ ಮಹಿಳೆಯನ್ನು ಕೂಡ ಒಳಪಡಿಸಿತು.
ಹೆಣಿಗೆಯ ಅಸಾಧಾರಣ ಪರಿಣತಿ ಮತ್ತು ಶ್ರಮ ವಯಸ್ಸಾದರಲ್ಲಿ ಇನ್ನಷ್ಟು ಚೈತನ್ಯ ತುಂಬಿತು. ಈ ನಡುವೆ, ಕಡಿಮೆ-ಆದಾಯದ ಮಹಿಳೆಯರನ್ನು ಪೂರ್ಣ ಸಮಯದ ನೇಮಕ ಮಾಡುವ ಮೊದಲು ಅವರಿಗೆ ಸ್ವಲ್ಪ ಸಮಯದವರೆಗೆ ತರಬೇತಿಯನ್ನು ಕೂಡ ನೀಡಿದ್ದೇವೆ ಎಂದು ಕೃತಿಕಾ ಹೇಳುತ್ತಾರೆ.
ಇವರ ತಂಡದ ಬಹುಪಾಲು ಸದಸ್ಯರು ಮನೆಯಿಂದಲೇ ಕೆಲಸ ಮಾಡುತ್ತಾರೆ ಮತ್ತು ಬಟ್ಟೆ ಹೆಣೆಯಲು ಬೇಕಾದ ಎಲ್ಲಾ ಕಚ್ಛಾವಸ್ತುಗಳನ್ನು ಅವರ ಮನೆ ಬಾಗಿಲಿಗೆ ತಂದು ತಲುಪಿಸಲಾಗುತ್ತದೆ. ಇದು ಅವರ ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ, ವೃದ್ಧರು ಮತ್ತು ವೃತ್ತಿಪರರು ತಮ್ಮದೇ ಆದ ಸಮಯ ಮತ್ತು ವೇಗದಲ್ಲಿ ಕೆಲಸ ಮಾಡಲು ಸಾಧ್ಯವಾಗುವಂತೆ ಮಾಡುತ್ತದೆ ಎನ್ನುವುದು ಕೃತಿಕಾ ಮಾತು.
ಬಟ್ಟೆ ಕೂಡ ಅತ್ಯಂತ ಗುಣಮಟ್ಟದಿಂದ ಕೂಡಿದೆ. ಇಂದು ಇವರ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಸಮಕಾಲೀನ ಮಾರ್ಕೆಟಿಂಗ್ ಶೈಲಿಯೊಂದಿಗೆ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಹಳೆಯ ತಂತ್ರವು ಭಾರತದಾದ್ಯಂತದ ಗ್ರಾಹಕರನ್ನು ಸೆಳೆಯುವಂತೆ ಮಾಡಿದೆ ಎಂಬುದು ಕೂಡ ನಿಜ.
ಅದೇನೆಯಿರಲಿ 75ನೇ ವಯಸ್ಸಿನಲ್ಲಿ ತನ್ನ ಹವ್ಯಾಸವನ್ನು ಉದ್ಯಮವನ್ನಾಗಿ ಪರಿವರ್ತಿಸಿರುವ ಆಶಾ ಪುರಿ ಅವರು ಇತರ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.