ಆಯುರ್ವೇದ ಔಷಧಿಗಳನ್ನು ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಆಯುಷ್ ಕಧಾ ಮತ್ತು ಯೋಗದ ರೂಪದಲ್ಲಿ ಕರೋನಾ ರೋಗಿಗಳಿಗೆ ನೀಡಲು ಉತ್ತೇಜಿಸುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಕ್ರಮವನ್ನು ಐಎಂಎ ಪ್ರಶ್ನೆ ಮಾಡಿದ್ದು ನಮಗೆಲ್ಲಾ ತಿಳಿದೇ ಇರುವ ಸಂಗತಿ. ಈ ಇಡೀ ವಿಷಯವು ವಿವಾದವಾಗಿ ತಿರುಗಿತ್ತು ಕೂಡ. ಭಾರತೀಯ ವೈದ್ಯಕೀಯ ಸಂಘದಂತಹ ಮಹತ್ವದ ಸಂಸ್ಥೆಯೊಂದು ಆಯುರ್ವೇದದ ಪ್ರಾಚೀನ ಜ್ಞಾನದ ಬಗ್ಗೆ ಸಾರ್ವಜನಿಕವಾಗಿ ತಿರಸ್ಕಾರದ ಭಾವ ಮೂಡುವಂತೆ ವರ್ತಿಸಿತು.
ಭಾರತ ಭೂಮಿಯ ಪ್ರಾಚೀನ ಜ್ಞಾನದ ಒಳನೋಟಗಳ ಬಗ್ಗೆ ಅನುಮಾನ ಪಡುವಂತಹ ಮನಃಸ್ಥಿತಿಯನ್ನು ಐಎಂಎ ಹೇಳಿಕೆ ಪ್ರಚೋದಿಸಿತು ಎಂದರೆ ಅತಿಶಯೋಕ್ತಿಯಲ್ಲ. ಪ್ರಾಚೀನ ಭಾರತೀಯ ವಿಜ್ಞಾನಗಳನ್ನು ಗ್ರಹಿಸಲು ಮತ್ತು ಇದರ ಪರಿಕಲ್ಪನೆಗಳನ್ನು ಸಾಧಿಸಲು ಆಗದೆ ಭಾರತೀಯರು ಪಾಶ್ಚಿಮಾತ್ಯ ವಿಧಾನವನ್ನು ಅನುಸರಿಸುತ್ತಿದ್ದಾರೆ ಮತ್ತು ಆ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆ ಉದ್ಭವವಾಗಿರುವುದನ್ನು ನಾವು ಕಾಣಬಹುದು. ಈ ಸಮಸ್ಯೆಯನ್ನು ಪರಿಹರಿಸಲು ನಾವು ಪ್ರಾಚೀನ ಭಾರತೀಯರು ವಿಧಾನವನ್ನು ಅಳವಡಿಸಿಕೊಂಡ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕು.
ಭಾರತೀಯ ನಾಗರಿಕತೆಯು ವಿಶ್ವದ ಅತ್ಯಂತ ಪ್ರಾಚೀನ ನಾಗರಿಕತೆ ಎಂಬುದು ಎಲ್ಲರಿಗೂ ತಿಳಿದ ವಿಷಯ ಮತ್ತು ವೈಜ್ಞಾನಿಕವಾಗಿ ಸಾಬೀತಾಗಿದೆ ಕೂಡ. ಜಗತ್ತು ಇತ್ತೀಚೆಗೆ ಈ ಸಂಗತಿಯನ್ನು ಒಪ್ಪಿಕೊಂಡಿದೆ, ಆದರೆ ಭಾರತೀಯರು ಸ್ವತಃ ಭಾರತೀಯ ಭೂಮಿಯಲ್ಲಿ ಅಭಿವೃದ್ಧಿಪಡಿಸಿದ ಮತ್ತು ಶತಮಾನಗಳಿಂದ ಸಂರಕ್ಷಿಸಲ್ಪಟ್ಟ ಸ್ಥಳೀಯ ಜ್ಞಾನವನ್ನು ಸಂಪೂರ್ಣವಾಗಿ ಕಡೆಗಣಿಸಿ ಬಿಟ್ಟಿದ್ದಾರೆ. ಪ್ರಾಚೀನ ಜ್ಞಾನದ ಬಗೆಗಿನ ನಮ್ಮ ಇತ್ತೀಚಿನ ಗ್ರಹಿಕೆ ನಮ್ಮ ಸ್ವಂತ ಜ್ಞಾನದ ಕುಸಿದ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ, ಪ್ರಾಚೀನ ಜ್ಞಾನದ ಮೇಲೆ ನಮ್ಮ ನಂಬಿಕೆ ಕುಸಿಯಲು ವಿದೇಶಿ ಆಡಳಿತವು ಕಾರಣವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೂ, ನಾವು ಸಮಸ್ಯೆ ಏನೆಂದು ತಿಳಿದ ಹಂತದಲ್ಲಿದ್ದೇವೆ ಎಂಬುದು ಸಮಧಾನಕರ, ಆದರೆ ಭಾರತೀಯ ಸಂಸ್ಕೃತಿಯು ಎದುರಿಸುತ್ತಿರುವ ಈ ಗುರುತಿನ ಬಿಕ್ಕಟ್ಟಿಗೆ ಕಾರಣವಾಗಿರುವುದು ಭಾರತ ಜನಿತ ವಿಜ್ಞಾನ ಮತ್ತು ಜ್ಞಾನದ ಸತ್ಯಾಸತ್ಯತೆಯನ್ನು ಸ್ವೀಕರಿಸುವಲ್ಲಿ ನಾವು ಹಿಂದೇಟು ಹಾಕುತ್ತಿರುವುದು.
ಈ ಸಮಸ್ಯೆಗೆ ವಿದೇಶಿ ಆಕ್ರಮಣಗಳ ಸಂಬಂಧ ಇದೆ
ನಮ್ಮ ಮನಸ್ಸನ್ನು ಹೊಡೆಯುವ ಕಾರ್ಯವನ್ನು ಮೊದಲು ಮಾಡಿದ ವಿದೇಶಿ ಆಡಳಿತಗಾರರು, ನಂತರ ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವ ಪ್ರಯತ್ನ ನಡೆಸಿದರು. ಸಹಜವಾಗಿಯೇ, ಪ್ರಾಚೀನ ನಾಗರೀಕತೆಯ ಮೇಲೆ ಸುಮಾರು 2 ಶತಮಾನಗಳ ಸಂಘಟಿತ ಆಡಳಿತವು ಮೊದಲಿನ ಆಕ್ರಮಣಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ವಾಸ್ತವವಾಗಿ, ಬ್ರಿಟಿಷ್ ರಾಜ್ ಅನ್ನು ಆಕ್ರಮಣವೆಂದು ಒಪ್ಪಿಕೊಳ್ಳದ ಸಮಾಜದ ಕೆಲವು ಭಾಗಗಳು ಇನ್ನೂ ಇವೆ, ಬ್ರಿಟಿಷ್ ಸರ್ಕಾರವು ಸಮಾಜದಲ್ಲಿ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದೇ ಕೆಳವರು ನಂಬಿದ್ದರು ಮತ್ತು ಇನ್ನೂ ನಂಬುವವರು ಇದ್ದಾರೆ. ಬ್ರಿಟಿಷ್ ಆಡಳಿತವನ್ನು ಸಮರ್ಥಿಸುವ ಈ ಅಲ್ಪ ತಿಳುವಳಿಕೆಯು ಭಾರತೀಯ ಸಂಸ್ಕೃತಿಯಿಂದ ನಮ್ಮನ್ನು ದೂರ ತಳ್ಳುತ್ತದೆ. ಇದು ಕೇವಲ ಭಾವನಾತ್ಮಕ ಮಾತಲ್ಲ, ವಾಸ್ತವವಾಗಿದೆ.
ಬ್ರಿಟಿಷರು ಭಾರತಕ್ಕೆ ಬಂದ ಮೊದಲ ವಿದೇಶಿ ಆಡಳಿತಗಾರರಲ್ಲ. ಭಾರತದಲ್ಲಿ ಬ್ರಿಟಿಷರು ತೀವ್ರವಾದ ವ್ಯಾಪಾರ ಮತ್ತು ವ್ಯವಹಾರವನ್ನು ನಡೆಸುವ ಉದ್ದೇಶದಿಂದ ಬಂದವರು. ಆದರೆ, ಪೋರ್ಚುಗೀಸರು ಭಾರತಕ್ಕೆ ಆಗಮಿಸಿದ ಮೊದಲ ಯುರೋಪಿಯನ್ನರು, ನಂತರ ಬ್ರಿಟಿಷ್, ಡಚ್ ಮತ್ತು ಕೊನೆಯದಾಗಿ ಫ್ರೆಂಚರು ಭಾರತಕ್ಕೆ ಬಂದರು. ಪೋರ್ಚುಗೀಸರು ಭಾರತಕ್ಕೆ ಬಂದಾಗ ಅವರ ಪ್ರಾಥಮಿಕ ಉದ್ದೇಶ ವ್ಯಾಪಾರವಾಗಿರಲಿಲ್ಲ, ಯೇಸುಕ್ರಿಸ್ತನ ಮತ್ತು ಕ್ರಿಶ್ಚಿಯನ್ ಧರ್ಮದ ಸಂದೇಶವನ್ನು ಹರಡುವ ಉದ್ದೇಶವಾಗಿತ್ತು, ಈ ಮಿಷನ್ನ ಜೀವನಾಧಾರಕ್ಕಾಗಿ ವ್ಯಾಪಾರವನ್ನು ನಡೆಸಲಾಯಿತು. ನಂತರ ಬ್ರಿಟಿಷರು ಭಾರತಕ್ಕೆ ಬಂದಾಗ, ಮಿಷನ್ ಅನ್ನು ತುಸು ಬದಲಾಯಿಸಲಾಯಿತು ಮತ್ತು ವ್ಯಾಪಾರಕ್ಕೆ ತಕ್ಷಣದ ಆದ್ಯತೆಯನ್ನು ನೀಡಲಾಯಿತು, ನಂತರ ಇದು ಭಾರತದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಹರಡುವ ಪ್ರಕ್ರಿಯೆಯನ್ನು ಸರಾಗಗೊಳಿಸಿತು.
ಭಾರತೀಯ ಸಂಸ್ಕೃತಿ ಎದುರಿಸುತ್ತಿರುವ ಗುರುತಿನ ಬಿಕ್ಕಟ್ಟಿಗೆ ಇದಕ್ಕೂ ಏನು ಸಂಬಂಧವಿದೆ? ಬ್ರಿಟಿಷರು ಭಾರತೀಯ ಸಮಾಜದ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ್ದು, ಇದು ಭಾರತೀಯ ಆರ್ಥಿಕತೆ ಮತ್ತು ರಾಜಕೀಯವನ್ನು ಮಾತ್ರವಲ್ಲದೆ ಭಾರತೀಯ ಭೂಮಿಯ ಸಂಸ್ಕೃತಿಯನ್ನೂ ಸ್ವಾಧೀನಪಡಿಸಿಕೊಳ್ಳಲು ಕೂಡ ಸಹಾಯ ಮಾಡಿತು. 1757 ರಿಂದ 1857 ರವರೆಗೆ ಈಸ್ಟ್ ಇಂಡಿಯಾ ಕಂಪನಿಯ ಶತಮಾನದಷ್ಟು ಅವಧಿಯ ಆಳ್ವಿಕೆಯಲ್ಲಿ, ನಂತರ 1857 ರಿಂದ ಸ್ವಾತಂತ್ರ್ಯದವರೆಗೂ ರಾಣಿಯ ಆಳ್ವಿಕೆಯಲ್ಲಿ, ಬ್ರಿಟಿಷರು ಭಾರತೀಯ ಸಂಸ್ಕೃತಿಯ ಮುಖವನ್ನು ಸಂಪೂರ್ಣವಾಗಿ ಬದಲಾಯಿಸಿದರು.
ಯಾವ ನಾಗರಿಕತೆ ಅಥವಾ ದೇಶ ಸಮಸ್ಯೆಯಿಂದ ಮುಕ್ತವಾಗಿದೆ? ಪ್ರತಿ ದೇಶದ ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿ ನ್ಯೂನತೆಗಳು ಇದ್ದೇ ಇರುತ್ತವೆ ಮತ್ತು ಅದಕ್ಕಾಗಿಯೇ ನೀತಿಗಳನ್ನು ಕಾಲಕಾಲಕ್ಕೆ ನವೀಕರಿಸುವುದು ಅವಶ್ಯಕವಾಗಿದೆ. ಆದರೆ ಬ್ರಿಟಿಷರು ಭಾರತೀಯ ಸಮಾಜದ ನ್ಯೂನತೆಗಳನ್ನು ಭಾರತೀಯರ ಸಂಸ್ಕೃತಿ ಸವೆದು ಹೋಗಿದೆ ಎಂಬುದನ್ನು ಮನವರಿಕೆ ಮಾಡಲು ಸಾಕಷ್ಟು ಅನುಕೂಲಕರ ರೀತಿಯಲ್ಲಿ ಬಳಸಿಕೊಂಡರು ಮತ್ತು ಭಾರತೀಯ ಸಮಾಜ ಮತ್ತು ಸಂಸ್ಕೃತಿಯು ಪಾಶ್ಚಿಮಾತ್ಯ ಪರಿಕಲ್ಪನೆಗಳನ್ನು ಒಪ್ಪಿಕೊಳ್ಳುವ ಅವಶ್ಯಕತೆಯಿದೆ ಎಂಬಂತೆ ಬಿಂಬಿಸಿದರು ಹಾಗೂ ಬ್ರಿಟಿಷರು ಅದರಲ್ಲಿ ಯಶಸ್ಸು ಕೂಡ ಪಡೆದುಕೊಂಡರು.
ಭಾರತೀಯ ಶಿಕ್ಷಣದ ಪಾಶ್ಚಿಮಾತ್ಯೀಕರಣವು ಈ ಪ್ರಕ್ರಿಯೆಯ ಮೊದಲ ಹಂತ, ಇದು ಭಾರತೀಯ ಸಂಸ್ಕೃತಿಯ ಮೂಲಗಳನ್ನು ಗ್ರಹಿಸುವಲ್ಲಿ ವಿಫಲನಾಗುವಂತೆ ಭಾರತೀಯನನ್ನು ಮಾಡಿತು. ಭಾರತದ ಸಮುದಾಯ, ಧರ್ಮ, ಜಾತಿಯ ಮೂಲ ಸಾಮಾಜಿಕ ಪರಿಕಲ್ಪನೆಗಳು ಪಾಶ್ಚಿಮಾತ್ಯ ಪ್ರಪಂಚದ ಮೂಲ ಪರಿಕಲ್ಪನೆಗಳಿಂದ ಭಿನ್ನವಾಗಿವೆ. ನಿಜವೆಂದರೆ, ಧರ್ಮ ಮತ್ತು ಜಾತಿಯ ಪರಿಕಲ್ಪನೆಗಳು ಮೂಲತಃ ಭಾರತೀಯ ವಿಷಯದಲ್ಲಿ ಅಸ್ತಿತ್ವದಲ್ಲಿಲ್ಲ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವೈರುಧ್ಯ ಮತ್ತು ವಿಭಿನ್ನ ವಿಧಾನಗಳ ವಿವಿಧ ತಾತ್ವಿಕ ಶಾಲೆಗಳು ಇದ್ದವು, ಎಲ್ಲವೂ ಒಂದೇ ಸಮಯದಲ್ಲಿ ನಡೆಯುತ್ತಿದ್ದವು. ಆದರೂ, ಯುರೋಪಿಯನ್ ಆಕ್ರಮಣದ ನಂತರವೇ ಈ ಚಿಂತನೆಯ ಶಾಲೆಗಳನ್ನು ಸಂಪೂರ್ಣವಾಗಿ ಧರ್ಮ ಎಂದು ಕರೆಯಲಾಯಿತು. ಮೂಲತಃ ಭಾರತದಲ್ಲಿ ಅಸ್ತಿತ್ವದಲ್ಲಿರದ ಜಾತಿಯ ವಿಷಯದಲ್ಲೂ ಇದೇ ಆಗಿದೆ. ಬ್ರಿಟಿಷರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ವರ್ಣಗಳ ವ್ಯವಸ್ಥೆಯು ಮಧ್ಯಕಾಲೀನ ಆಕ್ರಮಣಕಾರರಿಂದ ಬದಲಾಗಿ ಬಿಟ್ಟಿತು, ಬ್ರಿಟಿಷರು ಇದನ್ನು ಜಾತಿ ವ್ಯವಸ್ಥೆಯೆಂದು ಪರಿಗಣಿಸಿದರು. ಭಾರತೀಯ ಭೂಮಿಯ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳ ಗ್ರಹಿಕೆಯಲ್ಲಿನ ಇಂತಹ ಮೂಲಭೂತ ಬದಲಾವಣೆಗಳು ಪ್ರಾಚೀನ ಭಾರತೀಯ ಜ್ಞಾನದ ಬಗೆಗೆ ಸಂಪೂರ್ಣ ತಪ್ಪು ಕಲ್ಪನೆ ಮೂಡಲು ಕಾರಣವಾಯಿತು.
ಇಲ್ಲಿನ ಸಮಸ್ಯೆ ಏನೆಂದರೆ, ಬ್ರಿಟಿಷ್ ಆಳ್ವಿಕೆಯ ನಂತರ ಇಂದಿನವರೆಗೂ, ಭಾರತೀಯರು ಭಾರತೀಯ ಸಮಾಜದ ಬಗ್ಗೆ ಬ್ರಿಟಿಷರ ಗ್ರಹಿಕೆಯನ್ನೇ ಅನುಸರಿಸುತ್ತಾ ಬರುತ್ತಿದ್ದಾರೆ, ಇದರಿಂದಾಗಿ ಹೆಚ್ಚಿನ ಜನರು ತಮ್ಮದೇ ಆದ ಸಂಸ್ಕೃತಿಯನ್ನು ತ್ಯಜಿಸಿದ್ದಾರೆ. ಪ್ರಸ್ತುತ ಜಾಗತಿಕ ಸನ್ನಿವೇಶವನ್ನು ಗಮನಿಸಿದರೆ, ಭಾರತೀಯರು ನಮ್ಮ ಸಾಂಸ್ಕೃತಿಕ ಗುರುತಿನ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ದುರದೃಷ್ಟವಶಾತ್ ಹೆಚ್ಚಿನ ಭಾರತೀಯರಿಗೆ ತಿಳಿದಿಲ್ಲ ಅಥವಾ ಅದನ್ನು ಅತ್ಯಂತ ಅನುಮಾನಾಸ್ಪದ ರೀತಿಯಲ್ಲಿ ನೋಡುತ್ತಿದ್ದಾರೆ. ಭಾರತೀಯರು ಮೊದಲು ಭಾರತೀಯ ಸಂಸ್ಕೃತಿಯ ಬಗ್ಗೆ ಭಾರತೀಯ ದೃಷ್ಟಿಕೋನದ ಮೂಲಕ ತಿಳಿದುಕೊಳ್ಳುವುದು ಅವಶ್ಯಕ ಮತ್ತು ಪಾಶ್ಚಿಮಾತ್ಯ ವಿಧಾನವನ್ನು ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಬಳಸಬಾರದು. ಆಗ ಮಾತ್ರ ನಮ್ಮ ದೇಶದಲ್ಲಿ ನಮ್ಮದೇ ಆದ ಸಂಸ್ಕೃತಿಗೆ ಸಂಬಂಧಿಸಿದಂತೆ ಗುರುತಿನ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸಲು ನಮಗೆ ಸಾಧ್ಯವಾಗುತ್ತದೆ.
ಮೂಲ ಲೇಖನ: ಹಿಮಾಲಿ ನಲವಾಡೆ
ಕೃಪೆ: ನ್ಯೂಸ್ ಭಾರತಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.