ಭಾಷೆ…ವ್ಯಾವಹಾರಿಕ ಭಾಷೆ, ಗ್ರಾಂಥಿಕ ಭಾಷೆ ಹೀಗೆ ಭಾಷೆಗಳಲ್ಲಿ ಅನೇಕ ವೈವಿಧ್ಯತೆಯಿದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಾಷೆಗಳು ಬದಲಾಗುತ್ತಾ ಹೋಗುತ್ತವೆ. ಹಲವು ಭಾಷೆಗಳು ಆಡುಭಾಷೆಗಳಾಗಿ ಮಾತ್ರ ಬಳಕೆಯಲ್ಲಿದ್ದರೆ ಹಲವು ಭಾಷೆಗಳು ಪ್ರತ್ಯೇಕ ಲಿಪಿಗಳನ್ನೂ ಹೊಂದಿದೆ. ಸಾಧಾರಣವಾಗಿ ಎಲ್ಲಾ ಭಾಷೆಗಳ ಮಧ್ಯದಲ್ಲಿ ಕೆಲವಷ್ಟಾದರೂ ಸಾಮ್ಯತೆಗಳು ಕಂಡು ಬರುತ್ತದೆ. ಉದಾಹರಣೆಗೆ ಕನ್ನಡ, ಮಂಗಳೂರಿನ ಕನ್ನಡ ಗ್ರಾಂಥಿಕವಾಗಿದ್ದರೆ, ಮೈಸೂರಿನ ಕನ್ನಡ ಮತ್ತು ಗುಲ್ಬರ್ಗ, ಹುಬ್ಬಳ್ಳಿ, ರಾಯಚೂರಿನಲ್ಲಿ ಬೇರೆಯ ರೀತಿಯ ಕನ್ನಡ ಬಳಕೆಯಲ್ಲಿದೆ. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಶ್ರೀಮಂತಿಕೆಯಿದೆ, ಅದರದ್ದೇ ಆದ ಘನತೆ ಹಾಗೂ ಸಾಂಸ್ಕೃತಿಕ ಹಿನ್ನಲೆಯಿದೆ.
ಜಗತ್ತಿನ ಪ್ರಾಚೀನ ಭಾಷೆ ಸಂಸ್ಕೃತ. ಇದನ್ನು ಇತರೆಲ್ಲ ಭಾಷೆಗಳ ತಾಯಿ ಎಂದು ಕರೆಯಲಾಗುತ್ತದೆ. ಭಾರತೀಯ ಅನೇಕ ಪ್ರಾದೇಶಿಕ ಭಾಷೆಗಳ ಹಲವು ಶಬ್ದಗಳು ಸಂಸ್ಕೃತ ಶಬ್ದಗಳ ತದ್ಭವ ರೂಪಗಳಾಗಿದೆ. ಭಾರತದ ಭಾಷೆಗಳನ್ನು ಬದಿಗಿಟ್ಟು ಇಂಗ್ಲಿಷ್, ಅರೇಬಿಕ್ ಅಥವಾ ಲ್ಯಾಟಿನ್, ಗ್ರೀಕ್ ಭಾಷೆಗಳಲ್ಲೂ ಸಂಸ್ಕೃತ ಭಾಷೆಯ ಪ್ರಭಾವ ಸಾಕಷ್ಟಿದೆ. ಉದಾಹರಣೆಗೆ ನಾಸ್ ಎಂಬುದು ಸಂಸ್ಕೃತದ ಪದ ,ಇದರ ಅರ್ಥ ಮೂಗು. ಲ್ಯಾಟಿನ್ ಭಾಷೆಯಲ್ಲಿ ಇದನ್ನು ನಾಸುಸ್ ಎಂದೂ ಇಂಗ್ಲಿಷ್ ನಲ್ಲಿ ನೋಸ್ ಎಂದೂ ಹೇಳಲಾಗತ್ತದೆ. ಬಾಗಿಲನ್ನು ಸಂಸ್ಕೃತದಲ್ಲಿ ದ್ವಾರ ಎಂದು ಕರೆಯಲಾಗುತ್ತದೆ ಇಂಗ್ಲಿಷ್ ನಲ್ಲಿ ಡೋರ್ ಎಂದು. ಸಹೋದರನನ್ನು ಸಂಸ್ಕೃತದಲ್ಲಿ ಬಾತೃ ಎಂದು ಕರೆದರೆ ಗ್ರೀಕಿನಲ್ಲಿ ಪ್ರಾಥರ್ ಎಂದು ಮತ್ತು ಇಂಗ್ಲೀಷಿನಲ್ಲಿ ಬ್ರದರ್ ಎಂದೂ ಕರೆಯುತ್ತಾರೆ. ಭಾರತೀಯ ಭಾಷೆಯಾದ ಹಿಂದಿಯಂತೂ ಕಾಲಕ್ರಮೇಣ ಬದಲಾದ ಸಂಸ್ಕೃತದ ರೂಪವೇ ಆಗಿದೆ. ಕನ್ನಡದಲ್ಲೂ ಸಂಸ್ಕೃತದ ಹಲವಾರು ಪದಗಳಿವೆ. ಸಂಸ್ಕೃತವು ಇಂಡೋ ಯುರೋಪಿಯನ್ ಭಾಷೆ , ಆರ್ಯರು ಈ ಭಾಷೆಯನ್ನು ಭಾರತಕ್ಕೆ ಪರಿಚಯಿಸಿದರು ಎಂದು ಕುತರ್ಕವನ್ನು ಮಂಡಿಸುವ ಗುಂಪೊಂದಿದೆ, ದಕ್ಷಿಣ ಭಾರತದ ಯಾವ ಭಾಷೆಗಳಿಗೂ ಸಂಸ್ಕೃತಕ್ಕೂ ಯಾವುದೇ ಸಂಬಂಧವಿಲ್ಲ, ದಕ್ಷಿಣ ಭಾರತದಲ್ಲಿ ದ್ರಾವಿಡ ಭಾಷೆಯನ್ನು ಉಪಯೋಗಿಸಲಾಗುತ್ತಿದ್ದು, ಆರ್ಯರಿಂದ ಪರಿಚಯಿಸಲ್ಪಟ್ಟ ಸಂಸ್ಕೃತಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂಬ ಮೊಂಡು ವಾದ ಇವರದ್ದಾಗಿದೆ.
ಇನ್ನೊಂದು ಗುಂಪಿನ ಜನರ ಪ್ರಕಾರ ಸಂಸ್ಕೃತ ಮನುವಾದಿಗಳ ಭಾಷೆ, ಅದನ್ನು ಕೇವಲ ಮೇಲ್ವರ್ಗದ ಅಥವಾ ನಿರ್ದಿಷ್ಟ ಪಂಗಡವೊಂದಕ್ಕೆ ಸೇರಿದ ವ್ಯಕ್ತಿಗಳು ಮಾತ್ರ ಬಳಸುತ್ತಾರೆ. ಹಲವಾರು ವರ್ಷಗಳ ಮುನ್ನ ಭಾರತವು ಸುಸಂಸ್ಕೃತವೂ ಸಮೃದ್ಧವೂ ಆಗಿತ್ತು ಹಾಗೂ ಜನರೆಲ್ಲರೂ ವಿದ್ಯಾವಂತರೂ ವಿಚಾರವಂತರೂ ಆಗಿದ್ದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಯಾಕೆಂದರೆ ಯಾರಿಗೂ ಅರ್ಥವಾಗದ ಭಾಷೆಯಲ್ಲಿ ಯಾವ ಕವಿಯೂ ಕಾವ್ಯವನ್ನೂ, ನಾಟಕಕಾರನು ನಾಟಕವನ್ನೂ ರಚಿಸಲಾರ. ಆದ್ದರಿಂದ ಸಂಸ್ಕೃತವು ಹಲವು ವರ್ಷಗಳಿಗೂ ಮುನ್ನ ಆಡುಭಾಷೆಯಾಗಿಯೂ, ವ್ಯಾವಹಾರಿಕ ಭಾಷೆಯಾಗಿಯೂ ಖಂಡಿತವಾಗಿಯೂ ಚಾಲನೆಯಲ್ಲಿತ್ತು.
ನಾವು ಸಂಸ್ಕೃತವನ್ನು ದೇವಾ ವಾಣಿ ಎಂದು ಕರೆಯುತ್ತೇವೆ, ಅಂದರೆ ದೇವತೆಗಳ ವ್ಯಾವಹಾರಿಕ ಭಾಷೆ. ಅದರರ್ಥ ಮನುಷ್ಯರು ಮಾತನಾಡಬಾರದು ಎಂದಲ್ಲ. ಭಾರತದ ಮಹಾಕಾವ್ಯಗಳೆಲ್ಲವೂ ಸಂಸ್ಕೃತದಲ್ಲೇ ರಚಿಸಲ್ಪಟ್ಟವು, ಮಹಾಭಾರತ , ರಾಮಾಯಣ, ವೇದಗಳು ಇತ್ಯಾದಿ. ಅಂದಿನ ಕಾಲಘಟ್ಟದಲ್ಲಿ ಬ್ರಾಹ್ಮಣರು ಮಾತ್ರವಲ್ಲದೆ ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಕೂಡಾ ಸಂಸ್ಕೃತದಲ್ಲೇ ವ್ಯವಹರಿಸುತ್ತಿದ್ದರು. ಮುಂದೆ ಕಾಲಕ್ಕನುಗುಣವಾಗಿ, ವಿವಿಧ ಕಾರಣಗಳಿಂದಾಗಿ ಕ್ರಮೇಣ ಹಲವಾರು ಭಾಷೆಗಳು ಹುಟ್ಟಿಕೊಂಡವು. ಭಾಷೆಯ ಬಗ್ಗೆ ಪುಂಖಾನುಪುಂಖ ಭಾಷಣ ಮಾಡುವವರೂ ಕೂಡ ಈ ವಿಚಾರಗಳನ್ನು ಅಲ್ಲಗೆಳೆಯಲು ಖಂಡಿತಾ ಸಾಧ್ಯವಿಲ್ಲ ಏಕೆಂದರೆ, ಒಂದು ಕಾಲಘಟ್ಟದಲ್ಲಿ ನಾವಿಂದು ಬಳಸುತ್ತಿರುವ ಕನ್ನಡವೂ ಬಳಕೆಯಲ್ಲಿರಲಿಲ್ಲ. ಶಾಸನಗಳಲ್ಲಿ, ಗ್ರಂಥಗಳಲ್ಲಿ ಬಳಸಲಾಗಿರುವ ಕನ್ನಡದ ಲಿಪಿಯಿಂದ ಪ್ರಾರಂಭಗೊಂಡು ಪದಗಳು, ವಾಕ್ಯರಚನೆಗಳು ಹೀಗೇ ಅನೇಕ ರೀತಿಯಲ್ಲಿ ವ್ಯತ್ಯಾಸಗಳಿವೆ.
ಸಂಸ್ಕೃತ ಮಾತನಾಡುವ ಜನರನ್ನು ಅನಾಗರೀಕರು ,ಹಿಂದುಳಿದವರು ಎಂಬಂತೆ ನೋಡುತ್ತಾ ಅವರು ಕಾಲಕ್ಕೆ ತಕ್ಕಂತೆ ಬದಲಾಗದವರು , ತಂತ್ರಾಜ್ಞಾನದಿಂದ ದೂರವಿದ್ದು ಕೇವಲ ಮಂತ್ರಗಳನ್ನು ಮಾತ್ರ ಪಠಿಸುವವರು ಎಂಬಂತೆ ಚಿತ್ರಿಸಲಾಗುತ್ತದೆ . ಆದರೆ ಸಾಧಾರಣವಾಗಿ ಜನರಿಂದ ಮರೆಯಾಗತೊಡಗಿದ್ದ ಸಂಸ್ಕೃತವನ್ನೇ ಉಸಿರಾಗಿಸಿಕೊಂಡು, ಪರಸ್ಪರ ವ್ಯವಹಾರಗಳನ್ನೂ ಸಂಸ್ಕೃತದಲ್ಲೇ ನಡೆಸುವ ಊರುಗಳೂ ನಮ್ಮ ನಡುವಿನಲ್ಲಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಈ ಗ್ರಾಮಗಳಲ್ಲಿ ಎಲ್ಲಾ ಪಂಗಡಗಳಿಗೆ ಸೇರಿದ ಜನರೂ ಸಂಸ್ಕೃತದಲ್ಲೇ ವ್ಯವಹಾರಿಸುತ್ತಾರೆ. ಇಲ್ಲಿಯ ಜನರು ಬರಿಯ ವೇದ ಹಾಗೂ ಮಂತ್ರ, ಪುರಾಣಗಳನ್ನು ಮಾತ್ರ ಅಧ್ಯಯನ ನಡೆಸಿಲ್ಲ, ಬದಲಾಗಿ ಪ್ರತಿ ಕುಟುಂಬದಲ್ಲೂ ಆಧುನಿಕ ಶಿಕ್ಷಣವನ್ನು ಪಡೆದವರಿದ್ದಾರೆ.
* ಸಸಾನಾ
ಒರಿಸ್ಸಾದ ಕರಾವಳಿ ಜಿಲ್ಲೆಯಾದ ಗಜಪತಿ ಜಿಲ್ಲೆಯ ದೂರದ ಹಳ್ಳಿಯಾದ ಸಸಾನಾದಲ್ಲಿ 300 ಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ಗ್ರಾಮದಲ್ಲಿ 50 ಕುಟುಂಬಗಳುವಾಸವಾಗಿದ್ದು, ಪ್ರತಿಯೊಂದು ಕುಟುಂಬವೂ ಕನಿಷ್ಠ ಒಬ್ಬ ಸಂಸ್ಕೃತ ಪಂಡಿತರನ್ನು ಹೊಂದಿದೆ. 76 ವರ್ಷದ ನಿವೃತ್ತ ಶಿಕ್ಷಕರಾದ ಪಂಡಿತ ಬೈಷ್ಣವ್ ಚರಣ್ ಜೀ ಹೆಮ್ಮೆಯಿಂದ “ನಮ್ಮ ಹಳ್ಳಿಯಲ್ಲಿ ಪ್ರಾಚೀನ ಭಾಷೆಯಾದ ಸಂಸ್ಕೃತವು ಇನ್ನೂ ಜೀವಂತವಾಗಿದೆ” ಎಂದು ಹೆಮ್ಮೆಯಿಂದ ಹೇಳುತ್ತಾರೆ. 2002 ರಲ್ಲಿ ಸಂಸ್ಕೃತ ಭಾರತಿ ಕಾರ್ಯಕರ್ತೆ ವಿಮಲಾ ತಿವಾರಿ ಗ್ರಾಮದಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರವನ್ನು ಪ್ರಾರಂಭಿಸಿದ್ದರು.ಕೇವಲ 1 ವರ್ಷದಲ್ಲೇ ಆಕೆ ಗ್ರಾಮಸ್ಥರಿಗೆ ದೇವಭಾಷೆಯ ಬಗ್ಗೆ ಆಸಕ್ತಿಯನ್ನು ಹುಟ್ಟಿಸಿದ್ದರು. ಅಂದಿನಿಂದ ಈ ಗ್ರಾಮವು ಸಂಪೂರ್ಣ ಸಂಸ್ಕೃತಮಯವಾಗಿದ್ದು ಈಗ ಇಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಮುದುಕರು, ಮಹಿಳೆಯರು, ಅಕ್ಷರಸ್ಥರು ಅನಕ್ಷರಸ್ಥರೆಂಬ ಬೇಧವಿಲ್ಲದೆ ಎಲ್ಲರೂ ಸಂಸ್ಕೃತವನ್ನೇ ಬಳಸುತ್ತಾರೆ.
* ಮತ್ತೂರು
ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಪುಟ್ಟದೊಂದು ಗ್ರಾಮವಾದ ಮತ್ತೂರಿನಲ್ಲಿ ತರಕಾರಿ ಮಾರಾಟಗಾರರಿಂದ ಹಿಡಿದು ಎಲ್ಲರೂ ಕೂಡಾ ಸಂಸ್ಕೃತದಲ್ಲೇ ಸಂವಹನ ನಡೆಸುತ್ತಾರೆ. ಇಲ್ಲಿ ಮಕ್ಕಳು ಕ್ರಿಕೆಟ್ ಆಡುವಾಗ ಕಮೆಂಟರಿಯನ್ನೂ ಸಂಸ್ಕೃತದಲ್ಲೇ ಹೇಳಬಲ್ಲರು. ಇಲ್ಲಿ ಪ್ರತಿ ಮನೆಯ ಗೋಡೆಗಳಲ್ಲೂ ಸಂಸ್ಕೃತ ಬರಹಗಳಿವೆ. ಇಲ್ಲಿನ ಕುಟುಂಬಗಳು ಹೆಮ್ಮೆಯಿಂದ ತಮ್ಮ ಮನೆಯ ಬಾಗಿಲಲ್ಲಿ ಸಂಸ್ಕೃತದಲ್ಲಿ ಸಂಭಾಷಣೆಯನ್ನು ನಡೆಸಬಹುದೆಂದು ಚಿಹ್ನೆಯನ್ನೂ ಬಳಸುತ್ತಾರೆ. ಮತ್ತೂರಿನ ಹಲವು ಶಾಲೆಗಳು ಅತ್ಯುತ್ತಮ ಶೈಕ್ಷಣಿಕ ದಾಖಲೆಗಳನ್ನು ಹೊಂದಿವೆ. ಮತ್ತೂರಿನ ಅನೇಕ ಯುವಕರು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವೀಧರರಾಗಿದ್ದು ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೂ ಹೋಗಿದ್ದಾರೆ. ರಾಜ್ಯದ ಹಲವು ವಿಶ್ವ ವಿದ್ಯಾನಿಲಯಗಳಲ್ಲಿ ಮತ್ತೂರಿನ 30ಕ್ಕೂ ಹೆಚ್ಚಿನ ಸಂಸ್ಕೃತ ಪ್ರಾಧ್ಯಾಪಕರಿದ್ದಾರೆ. ಹಲವಾರು ಪ್ರಸಿದ್ಧ ವ್ಯಕ್ತಿಗಳ ತವರಾಗಿರುವ ಮತ್ತೂರು ಭಾರತೀಯ ವಿದ್ಯಾಭವನದ ಮತ್ತೂರು ಕೃಷಮೂರ್ತಿ, ಪಿಟೀಲು ವಾದಕ ವೆಂಕಟರಮಣಂ ಮತ್ತು ಖ್ಯಾತ ಗಮಕ ಕಲಾ ನಿಪುಣ ಎಚ್ .ಅರ್ ಕೇಶವ ಮೂರ್ತಿಗಳ ಜನ್ಮಸ್ಥಾನವೂ ಆಗಿದೆ.
* ಜಿರಿ
ಮಧ್ಯಪ್ರದೇಶದ ರಾಜಘರ್ ಜಿಲ್ಲೆಯ ಸಾರಂಗ್ಪುರ ತಾಲೂಕಿನಲ್ಲಿರುವ ಜರಿ ಗ್ರಾಮವು ಸಾರಂಗ್ಪುರದಿಂದ 30 ಕಿಲೋಮೀಟರ್ ದೂರದಲ್ಲಿದೆ. ಸುಮಾರು 1000 ಜನರ ವಾಸಸ್ಥಾನವಾಗಿರುವ ಈ ಹಳ್ಳಿಯಲ್ಲಿ ಸ್ಥಳೀಯವಾಗಿ ಮಾಲ್ವಿ ಭಾಷೆಯನ್ನು ಉಪಯೋಗಿಸಲಾಗುತ್ತಿತ್ತು. ಸುಮಾರು 16 ವರ್ಷ ಹಿಂದಿನವರೆಗೂ ಇಲ್ಲಿ ಮಾಲ್ವಿ ಭಾಷೆಯಲ್ಲೇ ಅಧಿಕೃತವಾಗಿ ವ್ಯವಹಾರ ನಡೆಯುತ್ತಿತ್ತು. ಆದರೆ ಇದೀಗ ಇಲ್ಲಿ ಸಂಪೂರ್ಣ ವ್ಯವಹಾರ ಸಂಸ್ಕೃತದಲ್ಲೇ ನಡೆಯುತ್ತದೆ
ಇಷ್ಟೇ ಅಲ್ಲದೆ ಮಧ್ಯ ಪ್ರದೇಶದ ಮೋಹಾದ್ ಗ್ರಾಮ, ಭಾಗುವರ್ ಗ್ರಾಮ, ರಾಜಸ್ಥಾನದ ಗನೋರಾ ಗ್ರಾಮ ಹೀಗೆ ಹಲವಾರು ಸ್ಥಳಗಳಲ್ಲಿ ಸಂಸ್ಕೃತವನ್ನು ಇಂದಿಗೂ ವ್ಯವಹಾರಗಳಲ್ಲಿ ಬಹಳಸಲಾಗುತ್ತದೆ. ಇಲ್ಲಿ ಜಾತಿ ಮತಗಳ ಬೇಧವಿಲ್ಲದೆ ಪ್ರತಿಯೊಬ್ಬರೂ ದೇವಭಾಷೆಯಲ್ಲೇ ಸಂಭಾಷಣೆಯನ್ನು ನಡೆಸುತ್ತಾರೆ. ಸಂಸ್ಕೃತ ಭಾಷೆಯು ಅತ್ಯಂತ ಸರಳ ಹಾಗೂ ಸುಂದರ ಭಾಷೆಯಾಗಿದೆ. ಬಹುತೇಕ ಭಾಷೆಗಳು ಏಕವಚನ ಮತ್ತು ಬಹುವಚನಗಳನ್ನು ಮಾತ್ರ ಹೊಂದಿದ್ದರೆ, ಸಂಸ್ಕೃತದಲ್ಲಿ ಏಕವಚನ, ದ್ವಿವಚನ ಹಾಗೂ ಬಹುವಚನಗಳಿವೆ. ಅನೇಕ ಸುಂದರ ಕಾವ್ಯಗಳೂ, ನಾಟಕಗಳೂ ಗ್ರಂಥಗಳೂ ಸಂಸ್ಕೃತದಲ್ಲಿವೆ. ನಾವೂ ಕೂಡ ಸಂಸ್ಕೃತದಲ್ಲೇ ವ್ಯವಹರಿಸಬಹುದು. ಸಂಸ್ಕೃತ ಭಾರತಿ ಎಂಬ ಸಂಸ್ಥೆಯ ಮುಖಾಂತರ ಉಚಿತವಾಗಿ ಸಂಸ್ಕೃತ ಭಾಷೆಯ ಕುರಿತಾದ ಅರಿವನ್ನೂ, ಸಂಭಾಷಣೆಯನ್ನು ಮಾಡುವ ವಿದ್ಯೆಯನ್ನೂ ಕಲಿಸುತ್ತಾರೆ. ನಾವೂ ಪ್ರಯತ್ನಿಸಿದರೆ ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಭಾಷೆಯನ್ನು ಸ್ವತಃ ಓದಿ ಅರಿಯುವ ಸೌಭಾಗ್ಯ ನಮ್ಮದಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.