ಬೆಳ್ತಂಗಡಿ : ನೆರಿಯದಲ್ಲಿ ಭೂಮಾಲಕರು, ಪಾಳೆಗಾರರು ಮೂಲನಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಾ ಬಂದಿದ್ದು ಆದಿವಾಸಿಗಳ ಸಹನೆಯ ಕಟ್ಟೆಯೊಡೆದಿದೆ. ದೌರ್ಜನ್ಯದ ವಿರುದ್ದ ದ್ವನಿಯೆತ್ತುವವರನ್ನು ಮಟ್ಟ ಹಾಕುವ ಪ್ರಯತ್ನ ನಡೆಯುತ್ತಿದೆ. ಜೀವದ ಹಂಗುತೊರೆದು ಹೋರಾಟಕ್ಕೆ ಇಳಿದಿದ್ದೇವೆ. ಈ ಭೂಮಾಲಕರನ್ನು ಮಟ್ಟಹಾಕುವ ವರೆಗೆ ವಿರಮಿಸುವ ಪ್ರಶ್ನೆಯೆ ಇಲ್ಲ ಎಂದು ಮಲೆಕುಡಿಯರ ಸಂಘದ ಮಾಜಿ ಅಧ್ಯಕ್ಷ ಜನಪರ ಹೋರಾಟಗಾರ ಎಲ್ಯಣ್ಣ ಮಲೆಕುಡಿಯ ಕೋಲೋಡಿ ಹೇಳಿದರು.
ಅವರು ಸೋಮವಾರ ನೆರಿಯ ಗ್ರಾಮದ ಅಣಿಯೂರಿನಲ್ಲಿ ಮಲೆಕುಡಿಯರ ಸಂಘದ ಗ್ರಾಮಸಮಿತಿಯ ನೇತೃತ್ವದಲ್ಲಿ ಸುಂದರ ಮಲೆಕುಡಿಯ ಅವರ ಕೈ ಕತ್ತರಿಸಿದ ಘಟನೆಯನ್ನು ವಿರೋಧಿಸಿ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ನೆರಿಯದಲ್ಲಿ ಭೂಮಾಲಕರ ದೌರ್ಜನ್ಯಕ್ಕೆ ದಶಕಗಳ ಇತಿಹಾಸವಿದೆ . ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೆ ಕಳೆದರೂ ಇಲ್ಲಿನ ಮೂಲನಿವಾಸಿಗಳು ಜೀತದಾಳುಗಳಾಗಿದ್ದರು. ಕಳೆದೆರಡು ದಶಕಗಳಿಂದ ಇಲ್ಲಿ ಒಂದಿಷ್ಟು ಸ್ವಾತಂತ್ರ್ಯದ ಗಾಳಿ ಬೀಸಲಾರಂಭಿಸಿದ್ದರೂ ಅದನ್ನು ಸಹಿಸದ ಭೂಮಾಲಕರುಗಳು ಇಂತಹ ದೌರ್ಜನ್ಯ ನಡೆಸುತ್ತಿದ್ದಾರೆ. ಮಲೆಕುಡಿಯರ ನಂಬಿಕೆಗಳನ್ನು ದುರುಪಯೋಗ ಪಡಿಸಿ ಅವರಿಂದ ದೇವರ ಮುಂದೆ ಪ್ರಮಾಣ ಮಾಡಿಸಿ ಅವರ ವಿರುದ್ದ ಮಾತನಾಡದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೀಗ ಕೈ ಕತ್ತರಿಸಿದ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದು ಗ್ರಾಮಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದಾರೆ ಹಾಗೇನಾದರೂ ಮಾಡಿದರೆ ಆತನನ್ನು ಗ್ರಾಮಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಕರ ಲಾಯಿಲ ಮಾತನಾಡಿ ಸುಂದರ ಮಲೆಕುಡಿಯ ಅವರ ಕೈ ಕತ್ತರಿಸಿದ ಘಟನೆ ನಡೆದು ವಾರವೇ ಕಳೆದಿದ್ದರೂ ಆರೋಪಿಗಳನ್ನು ಬಂಧಿಸಲು ಪೋಲೀಸರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ನಾಚಿಕೆಗೇಡಿನ ವಿಚಾರ. ಆತನನ್ನು ಎಲ್ಲಿದ್ದರೂ ಹುಡುಕಿ ತರುವ ಕಾರ್ಯವನ್ನು ಪೋಲೀಸರು ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರರೀತಿಯ ಹೋರಾಟಗಳನ್ನು ರಾಜ್ಯದಾಧ್ಯಂತ ನಡೆಸುವುದಾಗಿ ಎಚ್ಚರಿಸಿದರು. ನೆರಿಯದಲ್ಲಿರುವ ಜಮೀನು ಅಕ್ರಮಣಗಳ ಬಗ್ಗೆ ಸರಕಾರ ಕೂಡಲೇ ಗಮನ ಹರಿಸಿ ಭೂ ಮಾಲಕರು ತಮ್ಮ ಬಳಿ ಇರಿಸಿಕೊಂಡಿರುವ ನೂರಾರು ಎಕ್ರೆ ಅಕ್ರಮ ಜಮೀನುಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆಕುಡಿಯರ ಸಂಘದ ಅಧ್ಯಕ್ಷ ಸಂಜೀವ ಮಲೆಕುಡಿಯ ವಹಿಸಿ ಅನ್ಯಾಯದ ವಿರುದ್ದದ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸುವಂತೆ ಕರೆ ನೀಡಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ ಎಂ ಭಟ್, ದಲಿತ ಸಂಘರ್ಷ ಸಮಿತಿ (ಅಂಬೆಡ್ಕರ್ವಾದ) ತಾಲೂಕು ಸಂಚಾಲಕ ರಮೇಶ್ ಆರ್, ಮಲೆಕುಡಿಯರ ಸಂಘದ ಜಿಲ್ಲಾ ಕಾರ್ಯದರ್ಶಿ ಜಯರಾಮ ಮಲೆಕುಡಿಯ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ಸಂಜೀವ ಆರ್, ಸಾಮಾಜಿಕ ಹೋರಾಟಗಾರ ದಮ್ಮಾನಂದ, ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ವೇದಿಕೆಯಲ್ಲಿ ಆದಿವಾಸಿ ಸಮುದಾಯದ ಮುಖಂಡರುಗಳಾದ ಕಾಂತಪ್ಪ ಮಲೆಕುಡಿಯ, ವಸಂತಿ ಕುತ್ಲೂರು, ಲಲಿತ,ಮೀನಕ್ಷಿ ಮತ್ತಿತರರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರತಿಭಟನಾಕಾರರು ಅಣಿಯೂರು ಸಮೀಪ ಬಯಲಿನಿಂದ ಪ್ರತಿಭಟನಾ ರ್ಯಾಲಿ ನಡೆಸಿದರು. ಪ್ರತಿಭಟನೆಯ ಬಳಿಕಗ್ರಾಮ ಪಂಚಾಯತಿಗೆ ತೆರಳಿ ತಮಗೆ ನ್ಯಾಯ ಒದಗಿಸುವಂತೆ ಹಾಗು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಹಿರಿಯ ಅಧಿಕಾರಿಗಳಿಗೆ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಎಲ್ಲಿಯೋ ಆದ ಘಟನೆಗೆ ನೆರಿಯಾದಲ್ಲಿ ಧರ್ಮದ ಹೆಸರಿನಲ್ಲಿ ಪ್ರತಿಭಟನೆ ಮಾಡುವವರು ಈಗ ಎಲ್ಲಿದ್ದಾರೆ ಸುಂದರ ಮಲೆಕುಡಿಯನ ಪರಿಚಯ ಅವರಿಗಿಲ್ಲವೇ? ಮಂಗಳೂರಿನಲ್ಲಿ ರಕ್ತಕ್ಕಾಗಿ ಕಷ್ಟಪಟ್ಟಾಗ ಅಪರಿಚಿತರಾದ ಎಸ್ ಡಿ ಪಿ ಐ ಯವರು ನಮ್ಮ ಕಷ್ಟ ಅರಿತು ರಕ್ತದ ವ್ಯವಸ್ತೆ ಮಾಡಿದ್ದರು.– ಸುಂದರ ಮಲೆಕುಡಿಯ ಆಲಂಗಾಯಿ, ಸಂತ್ರಸ್ತರ ಸಂಬಂಧಿಕ.
ಗೋಪಲಗೌಡ ಅಕ್ರಮವಾಗಿ ಇರಿಸಿಕೊಂಡಿರುವ ಜಮಿನನ್ನು ವಶಪಡಿಸಿಕೊಳ್ಳಲು ಸರಕಾರ ಮುಂದಾಗದಿದ್ದರೆ ಮುಂದಿನ ಹಂತದಲ್ಲಿ ಭೂರಹಿತರು ಈ ಜಮೀನನ್ನು ವಶಪಡಿಸಿಕೊಂಡು ಮನೆ ನಿರ್ಮಿಸಲಿದ್ದಾರೆ. ತಡೆಯಲು ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ.- ಬಿ ಎಂ ಭಟ್, ಸಿಪಿಐ ಎಂ ತಾಲೂಕು ಕಾರ್ಯದರ್ಶಿ.
ಆರೊಪಿಯ ಬಂಧನಕ್ಕೆ ಸರಕಾರ ಮೀನಮೇಷ ಎಣಿಸುತ್ತಿದೆ, ಪೋಲೀಸ್ ಇಲಾಖೆಗೆ ಅಂತಿಮ ಗಡುವನ್ನು ನೀಡುತ್ತಿದ್ದೇವೆ ಬಂಧನವಾಗದಿದ್ದರೆ ತಾಲೂಕು ಕೇಂದ್ರದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಪ್ರತಿಭಟಿಸಲಾಗುವುದು. – ಶೇಖರ ಎಲ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ.
ನ್ಯಾಯ ಸಿಗದಿದ್ದರೆ ಮುಂದಿನ ಹಂತದಲ್ಲಿ ಜನಪ್ರತಿನಿಧಿಗಳ ಮನೆಗಳ ಮುಂದೆಯೆ ಪ್ರತಿಭಟನೆ ಹಮ್ಮಿಕೊಳ್ಳಲು ಮುಂದಾಗಲಿದ್ದೇವೆ.– ಸಂಜೀವ ಆರ್ ದಲಿತ ಸಂಘರ್ಷ ಸಮಿತಿ ಮುಖಂಡರು.
ಪೋಲೀಸರು ನಮ್ಮ ಮನೆಗಳಿಗೆ ಮಧ್ಯರಾತ್ರಿ ಬಂದೂಕು ಹಿಡಿದು ಬಂದು ಬೆದರಿಸುತ್ತಾರೆ ಆದರೆ ಇದೀಗ ಕೈಕತ್ತರಿಸಿದ ಆರೋಪಿಗಳನ್ನು ಬಂಧಿಸುವ ಶಕ್ತಿ ಅವರಿಗಿಲ್ಲವೇ.
– ಜಯರಾಮ ಮಲೆಕುಡಿಯ, ಜಿಲ್ಲಾ ಕಾರ್ಯದರ್ಶಿ ಮಲೆಕುಡಿಯರ ಸಂಘ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.