ಮಂಗಳೂರು: ನಗರದ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಉದ್ಘಾಟನೆಗೊಂಡಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭ ಸಂಜೆ ನಡೆಯಿತು.
ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೊರೋನಾ ಸಂದರ್ಭದಲ್ಲಿಯೂ ಕ್ರಿಯಾಶೀಲತೆಯನ್ನು ಉಳಿಸಿಕೊಂಡು ಬಂದಿರುವ ಪಕ್ಷ ಬಿಜೆಪಿ. ಪ್ರಸ್ತುತ ವರ್ಷಗಳಲ್ಲಿ ಭಾರತೀಯ ಜನತಾ ಪಕ್ಷ ವಿಶ್ವದ ಬಹುದೊಡ್ಡ ಪಕ್ಷ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ಕೊರೋನಾ ಸಂದರ್ಭದಲ್ಲಿಯೂ ಪಕ್ಷ ವಿಭಿನ್ನ ರೀತಿಯಲ್ಲಿ ಚಿಂತನೆ ನಡೆಸುವುದಕ್ಕೆ, ಆ ಮೂಲಕ ದೇಶವನ್ನು ಹೇಗೆ ಅಭಿವೃದ್ಧಿಗೆ ಪೂರಕವಾಗಿ ಮುನ್ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ. ಇಂದಿನ ಕಾರ್ಯಕ್ರಮವೂ ಸೀಮಿತ ಸಂಖ್ಯೆಯಲ್ಲಿ ಬಹಳ ಉತ್ತಮ ಚರ್ಚೆಗಳ ಜೊತೆ ಕಾರ್ಯಕ್ರಮ ನಡೆದಿದೆ. ಇದು ಪಕ್ಷದ ಕಾರ್ಯವೈಖರಿಗೆ ಸಾಕ್ಷಿ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ರಾಜಕೀಯ ಎಂದರೆ ಹೆಚ್ಚು ಜನರನ್ನು ಒಳಗೊಳ್ಳುವುದು ಎಂದರ್ಥ. ಈ ಕೆಲಸವನ್ನು ಸಂಘಟನೆ ಮಾಡುತ್ತಿದೆ. ಪಕ್ಷ ಮಾಡುತ್ತಿದೆ. ಜೊತೆಗೆ ನಮ್ಮ ಐಡಿಯಾಲಜಿಯನ್ನು ಜನರಿಗೆ ತಿಳಿಸುವುದು, ಅಥವಾ ನಾನು, ನನ್ನದು, ನನ್ನ ಕುಟುಂಬದ್ದು ಎಂಬಂತೆ ರಾಜಕೀಯ ಮಾಡದೇ ಇರುವುದು ಪ್ರಜಾಪ್ರಭುತ್ವದ ರಾಜಕಾರಣವಾಗಿದೆ. ಬಿಜೆಪಿ ಓಟಿಗಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಅಭಿವೃದ್ಧಿಯ ರಾಜಕಾರಣ ಮಾಡುತ್ತಿದೆ ಎಂದು ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರ ಫಲವೇ ಕೇಂದ್ರ ಸರ್ಕಾರದ ರೈತ ಸ್ನೇಹಿ ಕೃಷಿ ಮಸೂದೆ ಎಂದು ಅವರು ತಿಳಿಸಿದರು.
ಬಿಜೆಪಿ ದೇಶದ ಭವಿಷ್ಯ. ಬಿಜೆಪಿಯಲ್ಲಿ ಕುಟುಂಬ ರಾಜಕೀಯಕ್ಕೆ ಅವಕಾಶವಿಲ್ಲ. ಇಲ್ಲಿ ಎಲ್ಲರೂ ಮುಖ್ಯರೇ. ಇದಕ್ಕೆ ಚಹಾ ಮಾರುವಾತ ಪ್ರಧಾನಿ ಆಗಿರುವುದೇ ಸಾಕ್ಷಿ. ಉಳಿದ ಪಕ್ಷಗಳು ಮತ್ತು ಬಿಜೆಪಿಗೆ ಇರುವ ಸೈದ್ಧಾಂತಿಕ ವ್ಯತ್ಯಾಸ ಇದು. ವಿಭಿನ್ನವಾದ ಅಭಿವೃದ್ಧಿಯ ಸಿದ್ಧಾಂತವೇ ಈ ಕೊರೋನಾ ಸಂಕಷ್ಟದ ಅವಧಿಯಲ್ಲಿಯೂ ಜಗತ್ತು ಭಾರತವನ್ನು ನಿಬ್ಬೆರಗಿನಿಂದ ನೋಡುವಂತೆ ಮಾಡಿದೆ ಎಂದು ಅವರು ಹೇಳಿದರು. ಬದ್ಧತೆ ಮತ್ತು ಶ್ರದ್ಧೆಯ ಜೊತೆಗೆ ಪಕ್ಷ ಬಲಗೊಳಿಸುವ ಕೆಲಸ ಮಾಡೋಣ ಎಂದು ಜೋಶಿ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಈಶ್ವರಪ್ಪ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.