ಸಮಾಜಸೇವೆಯ ಗುಣ ಕೆಲವರಿಗೆ ಜನ್ಮದತ್ತವಾಗಿಯೇ ಬಂದಿರುತ್ತದೆ. ತಾವು ಗಳಿಸಿದ್ದನ್ನು ಇತರರಿಗೆ ನೀಡುವುದರಲ್ಲೇ ಸುಖ ಕಾಣುವ ಹಲವಾರು ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಅಂಥವರಲ್ಲಿ ಉಡುಪಿಯ ಶಿಕ್ಷಕ ಮುರಳಿ ಕಡೇಕಾರ್ ಕೂಡ ಒಬ್ಬರು. ನಿವೃತ್ತಿಯ ದಿನವೇ ತಮ್ಮ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಮನೆಯನ್ನು ಕಟ್ಟಿಕೊಟ್ಟು ಅವರು ಮಾನವೀಯತೆಯನ್ನು ಮೆರೆದಿದ್ದಾರೆ.
ಉಡುಪಿ ಜಿಲ್ಲೆಯ ನಿಟ್ಟೂರು ತಾಲೂಕಿನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಮುರಳಿ ಕಡೇಕಾರ್ ಕಳೆದ ಶನಿವಾರ ನಿವೃತ್ತಿಯನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಕುಕ್ಕುಂಜೆಯಲ್ಲಿ ಪಲಿಮಾರು ಮಠದ ವಿದ್ಯಾದೀಶ ಶ್ರೀಗಳ ಸಮ್ಮುಖದಲ್ಲಿ ವಿದ್ಯಾರ್ಥಿನಿ ನಯನಗೆ ಮನೆ ಹಸ್ತಾಂತರವನ್ನು ಮಾಡಿದ್ದಾರೆ. ಕಳೆದ 32 ವರ್ಷಗಳಿಂದ ಅವರು ನಿಟ್ಟೂರು ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಂತರ ಐದು ವರ್ಷಗಳ ಹಿಂದೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದುಕೊಂಡಿದ್ದರು.
ಜೋಪಡಿಯಲ್ಲಿ ವಾಸಿಸುತ್ತಿದ್ದ ಕೊರಗ ಸಮುದಾಯದ 9ನೇ ತರಗತಿ ವಿದ್ಯಾರ್ಥಿನಿ ನಯನ ಅವರ ಬಡತನವನ್ನು ಅರ್ಥಮಾಡಿಕೊಂಡಿದ್ದ ಶಿಕ್ಷಕ ಆಕೆಗೆ ಮನೆ ಕಟ್ಟಿಕೊಡುವ ನಿರ್ಧಾರವನ್ನು ಮಾಡಿದ್ದರು. ಅದರಂತೆ ಸುಮಾರು ಮೂರುವರೆ ಲಕ್ಷ ರೂಪಾಯಿಗಳನ್ನು ವ್ಯಯಿಸಿ ಅವರು ಸಣ್ಣದೊಂದು ಮನೆಯನ್ನು ಆಕೆಗಾಗಿ ನಿರ್ಮಾಣ ಮಾಡಿದ್ದಾರೆ.
ಮುರಳಿ ಅವರು ತಮ್ಮ ವೇತನದ ಹಣದಲ್ಲಿ ಬಡಮಕ್ಕಳಿಗೆ ಹಣಕಾಸು ನೆರವನ್ನು ಒದಗಿಸುತ್ತ ಬಂದಿದ್ದಾರೆ. ನಿವೃತ್ತಿಯ ದಿನವನ್ನು ವಿಶೇಷವಾಗಿಸುವ ಸಲುವಾಗಿ ಅವರು ವಿದ್ಯಾರ್ಥಿನಿ ನಯನಾಗೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ನಿವೃತ್ತಿಯ ನಂತರವೂ ಅವರು ತಮ್ಮ ಸಮಾಜ ಮುಖ್ಯ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಮುರಳಿ ಕಡೇಕಾರ್ ಅವರ ಕಾರ್ಯಕ್ಕೆ ಜನರಿಂದ ಮೆಚ್ಚುಗೆಗಳು ವ್ಯಕ್ತವಾಗಿದೆ. ಕಷ್ಟದಲ್ಲಿರುವವರನ್ನು ಕಂಡು ಅನುಕಂಪವನ್ನು ವ್ಯಕ್ತಪಡಿಸಿ ಸುಮ್ಮನಾಗುವವರ ನಡುವೆ ಅವರಿಗಾಗಿ ತಮ್ಮ ಗಳಿಕೆಯನ್ನು ವ್ಯಯಿಸಿ ಅವರ ಬದುಕನ್ನು ಸುಂದರವಾಗಿಸುವವರು ಬಲು ಅಪರೂಪ. ಅಂತಹ ಅಪರೂಪದ ವ್ಯಕ್ತಿತ್ವ ಕಡೇಕಾರ್ ಅವರದ್ದು, ಅವರು ಮಾಡಿರುವ ಕಾರ್ಯ ಇತರರಿಗೂ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.