ದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಎಂದು ಗುರುತಿಸಿಕೊಂಡಿದ್ದ ಹಲವು ನಾಯಕರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ತೊರೆದು ದೇಶದ ಅತಿದೊಡ್ಡ ಪಕ್ಷ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ.
ಕಳೆದ ಸೋಮವಾರ ಈ ಹಿಂದೆ ಕಾಂಗ್ರೆಸ್ ವಕ್ತಾರೆಯಾಗಿದ್ದ ಬಹುಭಾಷಾ ನಟಿ ಖುಷ್ಬು ಸಹ ಕಾಂಗ್ರೆಸ್ನ ದುರಾಡಳಿತದಿಂದ ಬೇಸತ್ತು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 2019 ರ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷ ತ್ಯಜಿಸಿದ ಐದನೇ ವಕ್ತಾರರಾಗಿದ್ದಾರೆ ಖುಷ್ಬು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಮಣ್ಣು ಮುಕ್ಕಿಸುವ ಮೂಲಕ ಬಿಜೆಪಿ ವಿಜಯ ಪತಾಕೆ ಹಾರಿಸಿತ್ತು. ಕಾಂಗ್ರೆಸ್ನ ಸ್ವಾರ್ಥ ರಾಜಕಾರಣ, ಕುಟುಂಬ ರಾಜಕಾರಣಕ್ಕೆ ಬೇಸತ್ತ ಜನರು ದೇಶದ ಅಭಿವೃದ್ಧಿ ನೈಜಾರ್ಥದಲ್ಲಿ ಸಾಧ್ಯವಾಗಬೇಕಾದರೆ ಅದು ಬಿಜೆಪಿ ಪಕ್ಷದಿಂದ ಮಾತ್ರವೇ ಸಾಧ್ಯ ಎಂದು ಅರ್ಥೈಸಿಕೊಂಡು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ದೇಶದ ಅಧಿಕಾರವನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಪ್ಪಿಸಿದ್ದರು.
ಇದಾದ ಬಳಿಕ ಕಾಂಗ್ರೆಸ್ನ ಕುಟುಂಬ ರಾಜಕಾರಣ, ಕಾಂಗ್ರೆಸ್ ಪಕ್ಷದ ದುರಾಡಳಿತ ಸೇರಿದಂತೆ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಅನೇಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಜೈ ಎಂದಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಮೊದಲು ಟಾಮ್ ವಡಕ್ಕನ್ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಜೆಪಿ ಗೆ ಸೇರ್ಪಡೆಯಾದರು. ಪುಲ್ವಾಮ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಾಕ್ಷಿ ಕೇಳಿದ್ದಕ್ಕಾಗಿ ತಾನು ಕಾಂಗ್ರೆಸ್ ತೊರೆದದ್ದಾಗಿಯೂ ಅವರು ಹೇಳಿದ್ದರು. ದೇಶದ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ನಿಲುವು ಸರಿಹೊಂದದೆ ತಾವು ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದರು.
ಇವರಾದ ಬಳಿಕ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದ ಪ್ರಿಯಾಂಕ್ ಚತುರ್ವೇದಿ ಕಾಂಗ್ರೆಸ್ ಪಕ್ಷದ ದುರಾಡಳಿತ, ಕಾಂಗ್ರೆಸ್ ನಾಯಕರ ದುರ್ವರ್ತನೆಗೆ ಬೇಸತ್ತು ಶಿವಸೇನೆಯತ್ತ ಮುಖ ಮಾಡುತ್ತಾರೆ. ಅವರಾದ ಬಳಿಕ ಜಾರ್ಖಂಡ್ನ ಕಾಂಗ್ರೆಸ್ ಪಕ್ಷದ ನಾಯಕ, ವಕ್ತಾರರಾಗಿ ಗುರುತಿಸಿಕೊಂಡಿದ್ದ ಅಜಯ್ ಕುಮಾರ್ ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷದತ್ತ ಮುಖ ಮಾಡಿದ್ದರು. ಬಳಿಕ ಅಲ್ಲಿಂದ ತಮ್ಮ ಮಾತೃ ಪಕ್ಷಕ್ಕೆ ಪಕ್ಷಾಂತರವಾಗಿದ್ದಾರೆ. ಇದೀಗ ಬಹುಭಾಷಾ ನಟಿ , ಕಾಂಗ್ರೆಸ್ ಪಕ್ಷದ ವಕ್ತಾರರಾಗಿದ್ದ ಖುಷ್ಬು ಸಹ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ ತೊರೆದಿದ್ದಾರೆ. ಬಿಜೆಪಿ ಪಕ್ಷದ ಕಾರ್ಯವೈಖರಿಗೆ ಮೆಚ್ಚಿ ಸೋಮವಾರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಇವರಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ದುರಾಡಳಿತದ ಕಾರಣದಿಂದ ಇನ್ನೂ ಅನೇಕ ಮಂದಿ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಆ ಮೂಲಕ ಕಾಂಗ್ರೆಸ್ನಲ್ಲಿ ಹೆಚ್ಚಿನ ವಿಚಾರಗಳು ಸರಿಯಾಗಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ. ಹೌದು, ಕರ್ನಾಟಕದಲ್ಲಿ ಕಾಂಗ್ರೆಸ್ ರಾಜಕೀಯದ ವಿಚಾರಕ್ಕೆ ಬಂದರೆ ಬೆಂಗಳೂರು ಕಾಂಗ್ರೆಸ್ ಪಕ್ಷದ ನೀಚ ರಾಜಕೀಯದ ಅರಿವು ನಮಗಾಗುತ್ತದೆ. ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಹೇಳುವುದಾದರೆ ಅವರ ಪಕ್ಷದವರೇ ಸ್ವ ಪಕ್ಷದ ಇನ್ನೊಬ್ಬ ನಾಯಕನ ಮನೆಗೆ ಬೆಂಕಿ ಹಚ್ಚಲು ಹುನ್ನಾರ ನಡೆಸಿದ ಬಗ್ಗೆ ಸಿಬಿಐ ತನಿಖೆಯ ಎಫ್ಐಆರ್ ನಲ್ಲಿಯೇ ದಾಖಲಾಗಿದೆ. ಇದೆಲ್ಲಾ ಕಾನೂನಿಗೆ ಸಂಬಂಧಿಸಿದ ವಿಚಾರ. ಅವರೇ ಇತ್ಯರ್ಥ ಮಾಡುತ್ತಾರೆ. ಹೀಗಿದ್ದರೂ ಈ ಆರೋಪವನ್ನು ಬಿಜೆಪಿ ಪಕ್ಷದ ತಲೆಗೆ ಕಟ್ಟಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂದೆಲ್ಲಾ ಸಮಾಜದ ದಾರಿ ತಪ್ಪಿಸುವ ಕೆಲಸವೂ ಕಾಂಗ್ರೆಸ್ನಿಂದ ನಡೆಯುತ್ತದೆ. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಾ ತಮ್ಮ ಮುಖಕ್ಕೆ ತಾವೇ ಮಸಿ ಬಳಿದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ.
ಇನ್ನು ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿರುವಾಗಲೇ ಕಾಂಗ್ರೆಸ್ ನಾಯಕರು ಅದಕ್ಕೆಲ್ಲಾ ಯೋಗಿ ಸರ್ಕಾರವೇ ಹೊಣೆ. ಉತ್ತರ ಪ್ರದೇಶದ ಸರ್ಕಾರದ ವೈಫಲ್ಯದಿಂದಾಗಿ ಇಂತಹ ಘಟನೆ ನಡೆದಿದೆ ಎಂದೆಲ್ಲಾ ದೇಶದಾದ್ಯಂತ ಪ್ರತಿಭಟನೆ ನಡೆಸಿದರು. ಈ ನಡುವೆ ಯೋಗಿ ಸರ್ಕಾರ ಈ ಪ್ರಕರಣವನ್ನು ಸಿಬಿಐಗೂ ವಹಿಸಿತು. ಈ ಘಟನೆ ನಡೆದಾಗ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾಧ್ರಾ ಮೊದಲಾದವರು ಬಿಜೆಪಿ ಸರ್ಕಾರದ ವಿರುದ್ಧ ಬೇಕಾಬಿಟ್ಟಿ ತಾವೆಲ್ಲವನ್ನೂ ಕಣ್ಣಾರೆ ಕಂಡಂತೆ ಹೇಳಿಕೆಗಳನ್ನು ನೀಡಲಾರಂಭ ಮಾಡಿದರು. ಪೊಲೀಸರು ತನಿಖೆ ಮಾಡಿ ವರದಿ ನೀಡುವುದಕ್ಕೂ ಮೊದಲು ಇದೆಲ್ಲಕ್ಕೂ ಬಿಜೆಪಿ ಸರ್ಕಾರವೇ ಹೊಣೆ ಎಂಬಂತೆ ಗೂಬೆ ಕೂರಿಸುವ ಸಕಲ ಪ್ರಯತ್ನಗಳೂ ನಡೆದವು. ಈ ನಡುವೆಯೇ ತನಿಖೆಯ ವೇಳೆ ಈ ಘಟನೆಯ ಹಿಂದಿರುವ ಕಾಣದ ‘ಕೈ’ ಗಳ ಕುಮ್ಮಕ್ಕಿನ ಬಗ್ಗೆ ಪೊಲೀಸರು ಕೆಲವೊಂದು ಮಾಹಿತಿ ನೀಡಿದರು. ಯೋಗಿ ಸರ್ಕಾರಕ್ಕೆ ಮಸಿ ಬಳಿಯಲು ಈ ಘಟನೆಯ ನಂತರ ಒಂದಷ್ಟು ಸಂಚು ನಡೆದಿದೆ ಎಂಬುದನ್ನು, ಇದಕ್ಕಾಗಿ ವಿದೇಶದಿಂದ ಸುಮಾರು ನೂರು ಕೋಟಿ ರೂ. ಗಳ ಹಣದ ಹರಿವು ಬಂದಿದೆ ಎಂಬುದಾಗಿಯೂ ತನಿಖೆಯ ವೇಳೆ ತಿಳಿದು ಬಂದಿದೆ ಎಂಬ ಮಾಹಿತಿಗಳನ್ನು ಅಧಿಕಾರಿಗಳು ಬಹಿರಂಗ ಮಾಡಿದರು.
ಅತ್ಯಾಚಾರ ನಡೆದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು. ಇವೆಲ್ಲವೂ ಪೊಲೀಸರು, ಕಾನೂನಿಗೆ ಸಂಬಂಧಿಸಿದಂತೆ ಇರುವ ವಿಚಾರಗಳು. ಅದನ್ನು ತನಿಖೆ ಮಾಡಿ ಸತ್ಯ ಬಯಲಿಗೆಳೆಯುವ ಕೆಲಸವನ್ನು ಅವರೇ ಮಾಡುತ್ತಾರೆ. ಆದರೆ ಅದನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಇದು ಕೇವಲ ಇಂದಿನ ವಿಚಾರವಲ್ಲ. ಬದಲಾಗಿ ಇಂತಹ ಕೀಳು ಮಟ್ಟದ ರಾಜಕೀಯ ಟ್ರಿಕ್ಸ್ಗಳನ್ನು ಬಳಸಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುವ ಮೂಲಕ ಜನರನ್ನು ಓಲೈಕೆ ಮಾಡುವತ್ತ ಪ್ರಯತ್ನ ನಡೆಸುತ್ತಲೇ ಬಂದಿದೆ. ಆದರೆ ಜಾಣ ಮತದಾರ ಕಳೆದ 2019 ರ ಚುನಾವಣೆಯಲ್ಲಿಯೇ ಕಾಂಗ್ರೆಸ್ ಪಕ್ಷದ ಇಂತಹ ಸುಳ್ಳು ರಾಜಕಾರಣಕ್ಕೆ ಹೀನಾಯ ಸೋಲುಣಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾನೆ. ಆದರೂ ಕಾಂಗ್ರೆಸ್ ತಿದ್ದಿಕೊಂಡಿಲ್ಲ. ಬದಲಾಗಿ ಮತ್ತೆ ಅಂತಹದ್ದೇ ನೀಚ ರಾಜಕಾರಣ ಮಾಡುವ ಮೂಲಕ ಮತ್ತೆ ಮತ್ತೆ ಮುಖಕ್ಕೆ ಹೊಡೆಸಿಕೊಳ್ಳುತ್ತಿದೆ.
ಇನ್ನು ಪ್ರಸ್ತಾಪಿಸಲೇ ಬೇಕಾದ ಇನ್ನೊಂದು ವಿಚಾರವೆಂದರೆ ಕೃಷಿ ಮಸೂದೆ. ಈ ಮಸೂದೆಯ ಬಗ್ಗೆ ಜನರಲ್ಲಿ ಇಲ್ಲಸಲ್ಲದ ತಪ್ಪು ಕಲ್ಪನೆಗಳನ್ನು ಬಿತ್ತುವ ಮೂಲಕ ಬಿಜೆಪಿ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಲಾಯಿತು. ರೈತರಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಿದ್ದ ಮಸೂದೆಗಳ ವಿರುದ್ಧ ಸುಳ್ಳು ಹಬ್ಬಲಾಯಿತು. ಇಡೀ ದೇಶದಲ್ಲಿ ಪ್ರತಿಭಟನೆ ನಡೆಸಲಾಯಿತು. ಆದರೆ ನೈಜ ರೈತನಿಗೆ ಇದರಿಂದ ತಮಗಾಗುವ ಅನುಕೂಲತೆಗಳ ಅರಿವಿತ್ತು. ಅವರು ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಲಿಲ್ಲ. ಆ ಮೂಲಕ ಮತ್ತೊಮ್ಮೆ ನೀಚ ಕಾರಣದ ಮೂಲಕ ತಮ್ಮ ಬಂಡವಾಳವನ್ನು ಕಾಂಗ್ರೆಸ್ ಬಯಲು ಮಾಡಿಕೊಂಡಿತು. ಇಡೀ ದೇಶದ ಜನರೆದುರು ಕಾಂಗ್ರೆಸ್ ತನ್ನ ಅಭಿವೃದ್ಧಿಗೆ ಮಾರಕ ನಿಲುವುಗಳು, ಸಮಾಜಕ್ಕೆ ಅಪಾಯಕಾರಿ ಎನಿಸುವ ನಿಲುವುಗಳ ಮೂಲಕವೇ ಬೆತ್ತಲಾಗುತ್ತಾ ಹೋಯಿತು. ಇಂದಿಗೂ ಬೆತ್ತಲಾಗುತ್ತಲೇ ಇದೆ.
ರಾಜಕೀಯ ಬೇಕು. ಆದರೆ ಎಲ್ಲಾ ಕಡೆಗಳಲ್ಲೂ ರಾಜಕೀಯ ಮಾಡಲು ಹೊರಟರೆ ಪಕ್ಷದಲ್ಲಿ ಕೇವಲ ಕುಟುಂಬಸ್ಥರು ಮಾತ್ರವೇ ಕೊನೆಗೆ ಉಳಿಯುವಲ್ಲಿ ಸಂದೇಹವಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷದ ಅಸಲಿ ಬಣ್ಣ ತಿಳಿದು ಪಕ್ಷ ತೊರೆಯುತ್ತಿದ್ದಾರೆ. ಈ ಹಿಂದೆಯೂ ಅನೇಕ ನಾಯಕರು ಕಾಂಗ್ರೆಸ್ನ ಇಂತಹ ನೀತಿಯ ಕಾರಣಕ್ಕಾಗಿಯೇ ದೊಡ್ಡ ನಮಸ್ಕಾರ ಹೊಡೆದಿದ್ದಾರೆ. ಇದೀಗ ಖುಷ್ಬು ಅವರ ಸರದಿ. ಅವರೂ ಕಾಂಗ್ರೆಸ್ನ ಕೀಳು ರಾಜಕೀಯದಿಂದ ಬೇಸತ್ತು ಅದರಿಂದ ಹೊರಬಂದಿದ್ದಾರೆ. ಬಿಜೆಪಿಯ ಆಡಳಿತಾತ್ಮಕ ದೃಷ್ಟಿಕೋನ, ಅಭಿವೃದ್ಧಿ ಮಂತ್ರದಿಂದ ಪ್ರಭಾವಿತರಾಗಿ ಬಿಜೆಪಿ ಸೇರಿದ್ದಾರೆ.
ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಹಿಂದೊಮ್ಮೆ ಕಾಂಗ್ರೆಸ್ ಎಂಬ ಪಕ್ಷವೊಂದಿತ್ತು ಎಂಬುದು ಇತಿಹಾಸದ ಪುಟ ಸೇರಿಬಿಡುತ್ತದೆ. ಈಗಾಗಲೇ ಅವಸಾನದಂಚಿನತ್ತ ಸಾಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲ, ಪ್ರಾದೇಶಿಕ ಪಕ್ಷಗಳನ್ನು ಸೋಲಿಸುವುದೂ ಕಷ್ಟವಾಗಬಹುದೇನೋ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.