ಹಾಗೆ ನೋಡಿದರೆ ಬದುಕಿನ ಪ್ರತಿಯೊಂದು ಮೌಲ್ಯವೂ ಉಳಿದೆಲ್ಲ ಮೌಲ್ಯಗಳ ಜತೆ ಅಂತಃಸಂಬಂಧ ಹೊಂದಿಕೊಂಡೇ ಇದೆ, ಅಂಗಪ್ರತ್ಯಂಗಗಳಂತೆ. ದೃಷ್ಟಾಂತಕ್ಕೆ ಸ್ವಾಭಿಮಾನವನ್ನೇ ತಗೊಳ್ಳಿ; ಪರಾವಲಂಬನೆಯು ಒಂದು ಬಗೆಯ ದೈನ್ಯತೆಯನ್ನು ಹುಟ್ಟುಹಾಕುವುದರಿಂದ, ಹಾಗಾಗಿ ಸ್ವಾಭಿಮಾನಕ್ಕೆ ಧಕ್ಕೆತರುವುದರಿಂದ ಸ್ವಾವಲಂಬನೆ ಇದ್ದಾಗಷ್ಟೆ ಸ್ವಾಭಿಮಾನ ನಿರಂತರ ಇರಲು ಸಾಧ್ಯ! ಸ್ವಾವಲಂಬನೆ ಸುರಳೀತವಾಗಿ ಸಾಧ್ಯವಾಗುವುದು ಸರಳತೆಯಲ್ಲಿ. ಅಂದರೆ; ಜೀವನವು ಸರಳವಾಗಿರದೆ ಸ್ವಾಭಿಮಾನಿಯಾಗಿರಲು ಕಷ್ಟಸಾಧ್ಯ.
ಸಂಕೀರ್ಣ – ವಕ್ರ ಬದುಕನ್ನು ಹೊಂದಿದ ಸ್ವಾಭಿಮಾನವು ಒಂದೋ ತಾತ್ಕಾಲಿಕವಾದುದಾಗಿರುತ್ತದೆ ಇಲ್ಲವೇ ಅಹಂಕಾರದಿಂದ ಕೂಡಿದುದಾಗಿರುತ್ತದೆ. ಬದುಕು ಸರಳವಾಗಿರಬೇಕು. ಅದರ ಮೂಲಕ ಸ್ವಾವಲಂಬಿಯಾಗಬೇಕು. ಸ್ವಾವಲಂಬಿ ಬದುಕಿನಿಂದ ಸ್ವಾಭಿಮಾನದ ಬದುಕು. ಇವು ಮೌಲ್ಯಗಳ ಪಾರಸ್ಪರಿಕತೆಯನ್ನು ಸೂಚಿಸುವ ಒಂದು ಬಗೆಯ ವಾಕ್ಯವಿನ್ಯಾಸ.
ಅದು ಸರಿ, ಈಗ ಈ ಮೌಲ್ಯಗಳ ವ್ಯಾವಹಾರಿಕ ಸ್ವರೂಪ ಹೇಗಿದ್ದರೆ ಚೆನ್ನ? ಅಥವಾ ಹೇಗಿಲ್ಲದಿದ್ದರೆ ಚೆನ್ನ? ಕೆಲವು ಆಯಾಮಗಳಲ್ಲಿ ವ್ಯತಿರಿಕ್ತವಾಗಿ ತೋರಬಲ್ಲ ಪಾರಸ್ಪರಿಕತೆಯ ಮೌಲ್ಯಗಳನ್ನು ನಿರ್ವಹಿಸುವುದೆಂತು? – ಈ ಕುರಿತಾಗಿ ಇದೀಗ ಒಂದು ನೋಟವನ್ನು ಹಾಯಿಸುವುದಾದರೆ;
ತಾನು ಮಾಡಬಾರದ ತನ್ನ ಕೆಲಸ
ತಮ್ಮ ಜೀವಿಕೆಗೆ ಬೇಕಾದ್ದಷ್ಟನ್ನು ತಾವೇ ಬೆಳೆಯುವ, ತಮ್ಮ ಬಟ್ಟೆಗೆ ಬೇಕಾದ್ದಷ್ಟನ್ನು ತಾವೇ ನೂಲುವ, ತಮ್ಮೆಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುವ, ತಮ್ಮೆಲ್ಲ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳುವ ಮಹಾತ್ಮರನ್ನು ಮಹಾಪುರುಷನ್ನು ನಾವು ಮಾದರಿಯಾಗಿ ಕಂಡಿದ್ದೇವೆ, ಓದಿದ್ದೇವೆ. ಸರಳತೆಗೂ ಸ್ವಾವಲಂಬನೆಗೂ ಸ್ವಾಭಿಮಾನಕ್ಕೂ ಮಾದರಿಯಾಗಿ ನಿಲ್ಲಬಲ್ಲ ದೃಷ್ಟಾಂತಗಳಿವು. ಇವುಗಳಿಗೆ ವ್ಯತಿರಿಕ್ತವಾಗಿಯೂ ಕೆಲವು ಮಾದರಿ ದೃಷ್ಟಾಂತಗಳಿರಲು ಸಾಧ್ಯ. ಪಂ. ದೀನದಯಾಳರ ಒಂದು ದೃಷ್ಟಾಂತ ಈ ನಮೂನೆಯದು. ಅವರು ತಮ್ಮೆಲ್ಲ ಕೆಲಸಗಳನ್ನೂ ಬಹುತೇಕ ತಾವೇ ಮಾಡಿಕೊಳ್ಳುತ್ತಿದ್ದರು, ಆದರೆ ಕೆಲವನ್ನು ಬಿಟ್ಟು! ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ಆದರೆ ಇಸ್ತ್ರಿಗಾಗಿ ಇಸ್ತ್ರಿಹಾಕುವವನಿಗೇ ಕೊಡುತ್ತಿದ್ದರು. ಅವರಿಗೆ ಸಹಾಯಕ್ಕೆ ಸಹಾಯಕರ ಕೊರತೆಯೇನೂ ಇರಲಿಲ್ಲ. ಅವರ ಯಾವುದೇ ಕೆಲಸವನ್ನು ಮಾಡಿಕೊಡಲು ನಾಮುಂದು ತಾಮುಂದೆಂದು ಜನ ಇದ್ದೇ ಇದ್ದರು. ಮತ್ತು ಅವರಂತೂ ತಮ್ಮ ಕೆಲಸಗಳನ್ನೆಲ್ಲ ಸ್ವತಃ ತಾವೇ ಮಾಡುವ ಸ್ವಭಾವವುಳ್ಳವರಾಗಿದ್ದರು. ಅಲ್ಲದೆ ಇಸ್ತ್ರಿ ಹಾಕಿದ ಬಟ್ಟೆಗಳನ್ನೇ ತೊಡಬೇಕೆಂಬ ಪ್ರತಿಷ್ಠೆಯಿದ್ದ ವ್ಯಕ್ತಿಯಂತೂ ಅವರಾಗಿರಲಿಲ್ಲ. ಹಾಗಿದ್ದೂ ಬಟ್ಟೆಗಳನ್ನು ಅವಶ್ಯವಾಗಿ ಇಸ್ತ್ರಿ ಮಾಡಿಸುತ್ತಿದ್ದರು, ಮತ್ತು ಇಸ್ತ್ರಿಗಾಗಿ ಇಸ್ತ್ರಿಯವನಿಗೇ ಕೊಡುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಅವರು ರಾಜಿ ಮಾಡಿಕೊಂಡವರಲ್ಲ. ಇದಕ್ಕೆ ಅವರು ಕೊಡುತ್ತಿದ್ದ ವಿವರಣೆ ಇಷ್ಟು: ಇಸ್ತ್ರಿ ಮಾಡುವುದು ಅವನ ಉಪಜೀವಿಕೆ. ನನ್ನ ಬಟ್ಟೆಗೆ ನಾನೇ ಇಸ್ತ್ರಿ ಮಾಡಿಕೊಂಡರೆ ಅವನ ಉಪಜೀವಿಕೆಯನ್ನು ಕಸಿದುಕೊಂಡಂತೆ.
ದಂಧೆಯಲ್ಲದ ಉಪಜೀವಿಕೆ
ಇತ್ತೀಚೆಗೆ ಸ್ನೇಹಿತರೊಬ್ಬರ ಮನೆಗೆ ಸ್ವಚ್ಛತೆಗೆ ಸಂಬಂಧಿಸಿದ ಯಾಂತ್ರೀಕೃತ ಸಾಧನಗಳನ್ನು ಮಾರಾಟ ಮಾಡುವವರು ಬಂದರು. ಅವುಗಳ ಉಪಯೋಗವನ್ನು ಬಗೆಬಗೆಯಾಗಿ ಬಣ್ಣಿಸಿದರು. ಕೊಂಡುಕೊಳ್ಳಲು ಒತ್ತಾಯಿಸಿದರು. ಸ್ವಚ್ಛತೆಗೆ ಮನೆಗೆಲಸದವಳಿದ್ದಾಳೆ ಎಂದು ಸ್ನೇಹಿತರು ಅವುಗಳನ್ನು ಕೊಂಡುಕೊಳ್ಳಲಿಲ್ಲ. ಆ ಮಾರಾಟಗಾರರನ್ನು ಸಾಗಹಾಕಲು ಅವರಿಗೆ ಸಾಕೋ ಸಾಕಾಯಿತು.
ನಮ್ಮ ಕೆಲವು ಕೆಲಸವನ್ನು ನಾವೇ ಮಾಡುವುದರಿಂದ ಹೇಗೆ ಇನ್ನೊಬ್ಬರ ಉಪಜೀವಿಕೆಯನ್ನು ಕಸಿದುಕೊಂಡಂತೆ ಆಗವುದೋ, ಯಾಂತ್ರೀಕರಣಗೊಳಿಸುವುದರಿಂದಲೂ ಆಗುವುದು.
ಮನೆಗೆಲಸವನ್ನು, ಸ್ವಚ್ಛತೆಯಂಥ ಮನೆಗೆಲಸವನ್ನು ತಾವುತಾವೇ ಮಾಡಿಕೊಳ್ಳುವುದು ಸ್ವಾವಲಂಬನೆ ದೃಷ್ಟಿಯಿಂದ ಸರಿಯೂ ಹೌದು. ಸರಳಜೀವನವು ಅದರಿಂದ ಸಿದ್ಧಿಸುವುದೂ ಹೌದು. ಸ್ವಾಭಿಮಾನದ ಗರಿ ಲಭ್ಯವಾಗುವುದಂತೂ ಹೌದೇ ಹೌದು. ಆದರೆ ಬದಲಾದ ನಾಗರಿಕ ಬದುಕಿನ ಸನ್ನಿವೇಶದಲ್ಲಿ ವೃತ್ತಿವ್ಯವಸ್ಥೆಯೇ ವ್ಯತ್ಯಸ್ತಗೊಂಡಿದೆ. ಮನೆಗೆಲಸಕ್ಕಾಗಿ ಕೆಲಸಗಾರರನ್ನಿಟ್ಟುಕೊಳ್ಳುವ ಸ್ಥಿತಿಯು ಶ್ರೀಮಂತ ಮನೆಗಳಿಗಷ್ಟೇ ಸೀಮಿತಗೊಂಡಿತ್ತು. ಬದಲಾದ ನಾಗರಿಕ ಬದುಕಿನಲ್ಲಿ ಇದು ಇಂದು ಜನಸಾಮಾನ್ಯರಿಗೂ ಅನಿವಾರ್ಯವಾಗಿಬಿಟ್ಟಿದೆ. ಅದರಿಂದ ಪ್ರತ್ಯೇಕ ಉದ್ಯೋಗವೇ ಸೃಷ್ಟಿಯಾಗಿದೆ. ನೋಡಿ; ಸ್ವಯಂ ತಾಯಂದಿರೇ ಮಾಡಬೇಕಾದ ಶಿಶುಪಾಲನೆಯೂ ಇಂದು ಉದ್ಯೋಗ ಸ್ವರೂಪವನ್ನು ಪಡಕೊಂಡಿದೆ, ಮತ್ತದು ದೊಡ್ಡ ದಂದೆಯೂ ಆಗಿದೆ. ಶಿಶುಪಾಲನೆಯನ್ನೂ ಸ್ವಚ್ಛತೆಯಂಥ ಇತರ ಮನೆಗೆಲಸವನ್ನೂ ಭಿನ್ನಬಗೆಗಳಲ್ಲಿ ನೋಡಬೇಕೆನಿಸುತ್ತದೆ.
ಬದಲಾಯಿಸಲು ಬೇಕಾದ ಆಧಾರ
ಪ್ರತಿಷ್ಠೆಯನ್ನು ಮೆರೆಯುವುದಕ್ಕಾಗಿಯೇ ದುಂದುಗಾರಿಕೆಯಲ್ಲಿ ತೊಡಗುವ ಸಮಾಜಹಿತಮಾರಕವಾದ ದಂದೆಗೂ ಒಬ್ಬಾತ ತನ್ನ ಬದುಕಿಗವಶ್ಯವಾಗಿ ತೊಡಗುವ ಸಮಾಜಹಿತಪೂರಕವಾದ ಉಪಜೀವಿಕೆಗೂ ಅಗಾಧ ಅಂತರವಿದೆ. ಮೇಲುನೋಟಕ್ಕೆ ಒಂದೊಮ್ಮೆ ಅವು ಒಂದೇ ರೀತಿ ಕಂಡರೂ ಅವುಗಳನ್ನು ಒಂದೇ ಬಗೆಯಲ್ಲಿ ನೋಡಲಾಗದು. ಅದಕ್ಕೆ ಪ್ರತ್ಯೇಕವಾದ ಒಂದು ಸವಿವರ ಚರ್ಚೆಯೇ ಮಾಡಬೇಕಾದೀತು, ಬಿಡಿ. ಈಗ, ಬದಲಾದ ಸನ್ನಿವೇಶದಲ್ಲಿ, ಯಾವುದೇ ಬಗೆಯಲ್ಲಿ ಧಕ್ಕೆಯಾಗದ ನಮ್ಮ ಜೀವನಶೈಲಿ ಯಾರದ್ದೋ ಬದುಕಿಗೆ ಉಪಜೀವಿಕೆಯ ಮೂಲಕ ಆಧಾರವಾಗುತ್ತದೆಯೆಂದಾದಲ್ಲಿ ಹಾಗೆ ಆಧಾರವಾಗಿರುವುದೇ ನಮಗೆ ಕರ್ತವ್ಯ. ಈ ಕರ್ತವ್ಯದಿಂದ ಹೊರತಾಗುವ ಅಧಿಕಾರ ನಮಗಿಲ್ಲ.
ಸನ್ನಿವೇಶ ಬದಲಾಗಿದೆ ಎಂದರೆ ಅದು ಬದಲಾಗಿ ಒಂದು ಬಿಂದುವಿನಲ್ಲಿ ನಿಂತುಕೊಂಡೇ ಇರಲಾರದು. ಅದು ನಿರಂತರ ಬದಲಾಗುತ್ತಲೇ ಇರುತ್ತದೆ ಮತ್ತು ಬದಲಾವಣೆಯ ವೇಗವು ನಿರಂತರ ಹೆಚ್ಚುತ್ತಲೇ ಇರುತ್ತದೆ. ಇದು ಒಳಿತನ್ನೂ ತಂದೀತು, ಜತೆಗೆ ಕೆಡುಕನ್ನು ಕೂಡಾ. ಒಳಿತಿನ ನೆಲೆಯಲ್ಲಿ ನಿಂತುಕೊಂಡು ನಾವು ಸಮಷ್ಟಿಹಿತವನ್ನು ಸಾಧಿಸಬಲ್ಲ ಜೀವನಶೈಲಿಯನ್ನು ರೂಪಿಸಿಕೊಳ್ಳಬೇಕಾಗಿದೆ.
ನೋಡಿದಂತೆ ನೋಟ. ಹಾಗಾಗಿ ಬದಲಾದ ಸನ್ನಿವೇಶದಲ್ಲಿ ಕೆಡುಕಿನ ಪ್ರಮಾಣವೇ ಹೆಚ್ಚಿದೆ ಎಂಬ ನೋಟ ಲಭ್ಯವಾದೀತು. ಕೆಡುಕಿನ ಪರಿಣಾಮವೂ ಗಾಢವಾಗಿ ತಟ್ಟೀತು. ಹೀಗಿರಲಾಗಿ, ಸನ್ನಿವೇಶ ಬದಲಾಯಿತೆಂದು ನಾವು ಬದಲಾಗಬೇಕೆ, ನಮ್ಮ ಜೀವನಶೈಲಿ ಬದಲಾಗಬೇಕೆ, ಜೀವನಮೌಲ್ಯಗಳನ್ನು ಬಿಟ್ಟುಕೊಡಬೇಕೆ, ಸ್ವಾವಲಂಬನೆಯಿಂದ ಸರಳವಾಗಿ ಸ್ವಾಭಿಮಾನಿಯಾಗಿ ಬದುಕುವುದನ್ನು ಬಿಡಬೇಕೆ ಇತ್ಯಾದಿ ತಾರ್ಕಿಕ ಪ್ರಶ್ನೆಗಳು ಸಹಜವಾಗಿ ಎದುರಾಗುತ್ತವೆ. ಇವೆಲ್ಲ ಅರ್ಥವಿಲ್ಲದ ಪ್ರಶ್ನೆಗಳೇನೂ ಅಲ್ಲ. ಹಾಗಾಗಿ ಒಮ್ಮೆ ಇವುಗಳ ವಿನ್ಯಾಸವನ್ನು ಗ್ರಹಿಸಿಕೊಂಡು ನಮ್ಮ ನಿಲುಮೆಯನ್ನು ಸ್ಪಷ್ಟಪಡಿಸಿಕೊಳ್ಳುವುದು ಒಳಿತೆನಿಸುತ್ತದೆ.
ಈ ಪ್ರಶ್ನೆಗಳು ಮೂಡಿಬಂದದ್ದು ವ್ಯಕ್ತಿಗತ ಬದುಕಿನ ನೆಲೆಯಲ್ಲಿ. ಸರಳಜೀವನವೊಂದು ಮೌಲ್ಯ. ಅದರಿಂದೊದಗಬಹುದಾದ ಸ್ವಾವಲಂಬಿಜೀವನವೂ ಒಂದು ಮೌಲ್ಯ. ಮತ್ತದರ ಪರಿಣಾಮಸರಣಿಯಲ್ಲಿ ಬರುವ ಸ್ವಾಭಿಮಾನದ ಬದುಕೂ ಒಂದು ಮೌಲ್ಯ. ಇವೆಲ್ಲವೂ ಹೇಗೆ ವ್ಯಕ್ತಿಗತ ಬದುಕಿನಲ್ಲಿ ಇರಬೇಕೋ ಅದೇರೀತಿ ಸಮಷ್ಟಿಗತ ಬದುಕಿನಲ್ಲಿಯೂ ಇರಬೇಕು. ಮತ್ತು; ಅವೆರಡರ ನಡುವೆ ಮುಖ್ಯಾಮುಖ್ಯಪ್ರಶ್ನೆ ಎದುರಾದಾಗ ಸಮಷ್ಟಿಗತ ಬದುಕೇ ಮುಖ್ಯವಾಗಬೇಕು. ಯಾಕೆಂದರೆ ಸಮಷ್ಟಿಗತ ಬದುಕಿನ ಆಧಾರದಲ್ಲೇ ವ್ಯಕ್ತಿಗತ ಬದುಕು ನೆಲೆನಿಂತಿರುವುದು. ಸಮಷ್ಟಿಯ ಬದುಕನ್ನು ಕೆಡಿಸಿ ವೈಯಕ್ತಿಕ ಬದುಕು ಪ್ರತಿಷ್ಠಿತವಾಗುವುದಶಕ್ಯ.
ಸಮಷ್ಟಿಯ ಹಂಗಿಲ್ಲದ ಬದುಕಿಲ್ಲ
ಸಮಾಜದೊಳಗೆ ಇರುವ ಯಾರದೇ ಬದುಕನ್ನು ಈ ನೆಲೆಯಲ್ಲಿ ನೋಡಬಹುದೆಂಬ ನೋಟವನ್ನು ಬಿಡಿ, ಎಲ್ಲ ರೀತಿಯಲ್ಲೂ ಸಮಾಜದಿಂದ ದೂರವೇ ಇರುವ ಮಂದಿಯ ಬದುಕನ್ನೂ ಇದೇ ನೆಲೆಯಿಂದಲ್ಲದೆ ಬೇರೆ ರೀತಿಯಲ್ಲಿ ನೋಡಲು ಅಸಾಧ್ಯ. ನೋಡಿ; ದೂರದ ಹಿಮಾಲಯದಲ್ಲಿ ಜನರೇ ಹೋಗದಂಥ ಸ್ಥಳದಲ್ಲಿ ಯಾವುದೋ ಗುಹೆಯಲ್ಲಿ ಸಾಧನೆ ಮಾಡುವ ಸಾಧಕನದೂ ಕೂಡ ಸಮಷ್ಟಿಯಾಧಾರಿತ ಬದುಕೇ ಆಗಿರಲಿಕ್ಕೆ ಬೇಕು. ಆತ ತನ್ನ ಆಹಾರವಾಗಿ ತಿಂಗಳುಗಟ್ಟಲೆ ಕಾಲ ರಕ್ಷಿಸಿಡುವ ಆಲೂಗಡ್ಡೆಯನ್ನಾಗಲೀ ಅಥವಾ ಇನ್ನಾವುದೋ ಆಹಾರಧಾನ್ಯವನ್ನಾಗಲೀ ಆತ ತಯಾರಿಸಲಾರ. ಅದನ್ನಾರೋ ಒಬ್ಬ ರೈತ ಬೆಳೆಯುತ್ತಾನೆ. ಭೂಮಿತಾಯಿ ಬೆಳೆಸಿ ಕೊಟ್ಟಿದ್ದಾಳೆ. ಆತನಿಗಲ್ಲಿ ಭಯೋತ್ಪಾದಕರಿಂದಲೋ ಇನ್ನಾರಿಂದಲೋ ಯಾವುದೇ ಹಾನಿಯಾಗದಂತೆ ಸರಕಾರದ ವ್ಯವಸ್ಥೆ ಕೆಲಸ ಮಾಡುತ್ತಿದೆ. ಆತ ಪರದ ಸಾಧನೆಯನ್ನೇ ಮಾಡುತ್ತಿರುವವನಾದರೂ ಇಹದ ಹಂಗನ್ನು ಬಿಟ್ಟಿರಲು ಅಸಾಧ್ಯ. ಪರಕ್ಕೆ ಏಣಿಯಂತಿರುವ ಇಹದ ಕುರಿತು ಕೃತಘ್ನನಾದರೆ ಪರವು ಸಿಕ್ಕೀತೆ? ಸಿಕ್ಕಿದ್ದನ್ನು ಪರವೆನ್ನಲಾದೀತೆ? ಹಿಮಾಲಯದ ಸಾಧಕನಿಗೇ ವ್ಯಕ್ತಿಗತ, ಕೇವಲ ವ್ಯಕ್ತಿಗತ ಬದುಕೆಂಬುದಿಲ್ಲ. ಆತ ಇಹಕ್ಕೆ ನಡಕೊಳ್ಳದೆ ಪರದ ಸಾಧನೆಯನ್ನು ಗೈಯಲು ಸಾಧ್ಯವಿಲ್ಲ. ಇನ್ನು ಇಹದಲ್ಲೇ ಇದ್ದು, ಐಹಿಕ ಬದುಕಿನ ಸಾಧನೆಗೈವವರಿಗೆ ಸಮಷ್ಟಿಯ ಹಂಗು ಇಲ್ಲದಾದೀತೆ? ಇಲ್ಲದಾಗಬೇಕೆ?
ಯಾರದೇ ವ್ಯಕ್ತಿಗತ ಬದುಕು ಸಮಷ್ಟಿಯ ಆಧಾರದಲ್ಲಿ ಇದೆ. ಸಮಷ್ಟಿಯ ಯಾವುದೇ ಹಂಗಿಲ್ಲದ ವ್ಯಕ್ತಿಗತ ಬದುಕೆಂಬುದೊಂದು ಯಾರಿಗೂ ಇರಲಸಾಧ್ಯ. ಪ್ರತಿಯೊಬ್ಬರೂ ಇನ್ನಾರದೋ ಆಧಾರದಿಂದಲೇ ಇರುತ್ತಾರೆ. ಯಾರದೇ ಆಧಾರವಿಲ್ಲದೆ ಯಾರೂ ಇರಲೇ ಅಸಾಧ್ಯ. ಈ ತಿಳಿವು ಮೂಡಿದಾಗ ಕೃತಜ್ಞತೆಯ ಭಾವ ಸುಮ್ಮನಿರಲು ಅಸಾಧ್ಯ. ಆಗ ತಾನೂ ಇನ್ನಾರಿಗೋ ಆಧಾರವಾಗಬೇಕೆಂಬ ತಿಳಿವು, ಯಾರಿಗೆ ಆಧಾರ ಬೇಕಾಗಿದೆಯೋ ಅವರಿಗೆ ಆಧಾರವಾಗುವೆನೆಂಬ ಕರ್ತವ್ಯಜಾಗೃತಿ ಮೂಡುತ್ತದೆ.
ಮೌಲ್ಯದೆಡೆಗೆ ಒಯ್ಯಬಲ್ಲ ಭಾವ
ಸ್ವಾವಲಂಬನೆಯನ್ನು ನೂರಕ್ಕೆ ನೂರು ವ್ಯಕ್ತಿಗತವಾಗಿ ಸಾಧಿಸಲಶಕ್ಯ. ಒಂದಲ್ಲ ಒಂದು ವಿಷಯದಲ್ಲಿ ಎಲ್ಲರೂ ಪರಾವಲಂಬಿಗಳೇ. ಆದರೆ ಪರಾವಲಂಬನೆಯು ಮೌಲ್ಯವಲ್ಲ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಒಬ್ಬರಿಗೊಬ್ಬರು ಅವಲಂಬಿತರೇ ಆಗಿರುವುದರಿಂದ ಪರಸ್ಪರಾವಲಂಬಿತರು ಎನ್ನಬಹುದು. ಇದು ಮೌಲ್ಯವಲ್ಲದಿದ್ದರೂ ಮೌಲ್ಯದೆಡೆಗೆ ಒಯ್ಯಬಲ್ಲ ಶಕ್ತಿಯುಳ್ಳದ್ದು. ಹೇಗೆಂದರೆ; ನಾವು ಇನ್ನೊಬ್ಬರಿಗೆ ಅವಲಂಬಿತ ಎಂಬ ತಿಳಿವಿದ್ದಾಗ ನಮ್ಮನ್ನವಲಂಬಿಸಿದವರ ಕುರಿತ ನಮ್ಮ ಭಾವ ಉನ್ನತಗೊಳ್ಳುತ್ತದೆ. ಆಗ ಅವರು ನಮಗವಲಂಬಿತರು ಎಂಬ ಭಾವಸ್ಥಿತಿ ತಲೆಕೆಳಗಾಗಿ ನಾವವರಿಗೆ ಸಹಾಯಕರು ಎಂಬ ಭಾವೋನ್ನತಸ್ಥಿತಿ ಏರ್ಪಡುತ್ತದೆ. ಪರಾವಲಂಬನೆಯ ದೈನ್ಯಭಾವ ನಷ್ಟಗೊಂಡು ಪರಸ್ಪರಾನುಕೂಲತೆಯ ಆರೋಗ್ಯಕರ ಭಾವ ಮೂಡುತ್ತದೆ.
“ಪರಸ್ಪರಾನುಕೂಲತೆ” ಎನ್ನುವ ಶಬ್ದವನ್ನು ತಾತ್ತ್ವಿಕ ಮಹತ್ತ್ವದಿಂದ ಟಂಕಿಸಿದ್ದು ದೀನದಯಾಳ್ಜೀ. ಅದು ಅವರಿಗೆ ಇಷ್ಟವಾದ ಶಬ್ದ. ಎಲ್ಲರೂ ಪರಸ್ಪರಾನುಕೂಲರಾದಾಗ ಸಮಷ್ಟಿಗತ ಸ್ವಾವಲಂಬನೆ ಸಾಧ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.