ಕ್ರೀಡೆಯಲ್ಲೊದಗಿದ ಗೆಲುವನ್ನು ತಾಯ ಮಡಿಲಿಗೆ ಅರ್ಪಿಸಿ ಸಮರ್ಪಣಾ ಭಾವ ಮೆರೆವ, ತನ್ಮೂಲಕ ರಾಷ್ಟ್ರೀಯ ವ್ಯಕ್ತಿತ್ವ ರೂಪಿಸಿಕೊಳ್ಳುವ ಬಗೆಯೊಂದಿದೆಯಷ್ಟೆ. ನಿಜಕ್ಕಾದರೆ, ಸಮರ್ಪಣೆಯ ಈ ಭಾವವನ್ನೇ ಜಿಜ್ಞಾಸೆಗೊಳಪಡಿಸಬೇಕಾಗಿದೆ.
ಸಮರ್ಪಣೆ ಎಂದರೆ ಕೊಡುವುದು ತಾನೆ! ಕೊಡುವುದೆಲ್ಲವೂ ಸಮರ್ಪಣೆಯಾಗದು ನಿಜ. ಆದರೆ ಸಮರ್ಪಣೆಯಲ್ಲಿ ಕೊಡುವ ಕ್ರಿಯೆ ಇದೆಯಷ್ಟೆ. ಈಗ, ಕೊಡುವ ವಸ್ತು ನಮ್ಮ ಕೈಗೆ ಬಂತೆಲ್ಲಿಂದ ಎಂಬುದೇ ಜಿಜ್ಞಾಸೆ.
ದೋಷಪೂರಿತ ತಿಳಿವು
ಕೇನೋಪನಿಷತ್ತಿನಲ್ಲಿ ಬರುವ ಪ್ರಸಂಗವೊಂದು ಹೀಗಿದೆ: ದೇವತೆಗಳು ಯುದ್ಧದಲ್ಲಿ ಗೆದ್ದಿದ್ದಾರೆ. ಈ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ ಕೂಡ. ಯಾವುದೇ ಬಾಹ್ಯಸಹಾಯ ಪಡೆಯದೆ ಪಡೆದ ಗೆಲುವಿದು. ಅಂಥ ಗೆಲುವಿನ ಸಂಭ್ರಮದ ಸ್ವರೂಪವೇ ಬೇರೆ. ಸ್ವಸ್ವರೂಪವನ್ನು ಮೆರೆಸುವ ಅಲ್ಲ, ಮರೆಸುವ ಗುಣ ಇಂಥ ಸಂಭ್ರಮಕ್ಕಿದೆ. ದೇವತೆಗಳಿಗೂ ಹಾಗೆಯೇ ಆಯಿತು. ಗೆಲುವು ತಮ್ಮಿಂದಲೇ ಎಂದುಕೊಂಡು, ಗೆಲುವನ್ನು ತಮ್ಮದೆಂದೇ ತಿಳಿದರು. ಬಾಹ್ಯನೋಟಕ್ಕೆ ಈ ತಿಳಿವಿನಲ್ಲಿ ಯಾವುದೇ ದೋಷವಿರಲಿಲ್ಲ. ಆದರೆ ಯಾವ ತಿಳಿವಿನಿಂದ ಮೇಲರಿಮೆ-ಅಹಂಕಾರಗಳು ವರ್ಧಿಸುತ್ತ ಹೋಗುತ್ತವೆಯೋ ಆ ತಿಳಿವು ದೋಷಪೂರ್ಣವಾಗಿದೆ ಎಂದೇ ತಿಳಿದುಕೊಳ್ಳಬೇಕಾಗಿದೆ.
ಎಂಥ ದೇವತೆಗಳೆಂದರೆ; ಮೇಲರಿಮೆಯಿಂದಾಗಿ ದೋಷಪೂರ್ಣ ತಿಳಿವನ್ನು ಹೊಂದಿದ ದೇವತೆಗಳು, ತಮ್ಮ ತಿಳಿವಿನಲ್ಲಿರುವ ದೋಷವನ್ನು ನಿವಾರಿಸಿಕೊಳ್ಳಬಲ್ಲ ಮನಸ್ಸೂ ಸಾಮರ್ಥ್ಯವೂ ಎರಡೂ ಇರಬಲ್ಲ ದೇವತೆಗಳು, ಮೇಲರಿಮೆಯನ್ನು ಹೊಂದಬಾರದ ದೇವತೆಗಳು, ಮೇಲರಿಮೆಯನ್ನು ಹೊಂದಿಯೂ ಅದನ್ನು ನಿವಾರಿಸಿಕೊಳ್ಳಬಲ್ಲ ದೇವತೆಗಳು.
ಸಂಭ್ರಮದ ಮರೆವು
ದೋಷಪೂರ್ಣ ತಿಳಿವು ಹಾಗೂ ಅಹಂಕಾರ ಈ ಎರಡನ್ನೂ ಸಹಜವಾಗಿ ಉಳ್ಳ ರಾಕ್ಷಸರು ಅವುಗಳಿಂದ ಮುಕ್ತವಾಗುವುದಶಕ್ಯ. ಅದಕ್ಕೆ ಬೇಕಾದ ಇಚ್ಛಾಶಕ್ತಿ ಹಾಗೂ ಸಾಮರ್ಥ್ಯ ಎರಡೂ ಅವರಲ್ಲಿಲ್ಲ. ಈ ಎರಡೂ ಬಗೆಯ ಸಾಮರ್ಥ್ಯವುಳ್ಳ ದೇವತೆಗಳು ಮಾತ್ರ ಭರವಸೆ. ಬದಲಾಗಬಲ್ಲವರನ್ನು ಬದಲಾಯಿಸಬೇಕು. ದೇವತೆಗಳನ್ನು ಬದಲಾಯಿಸಹೊರಟ ಬ್ರಹ್ಮವು ಯಕ್ಷನಾಗಿ ಅವರ ಬಳಿ ಬಂತಂತೆ. ಅಂದರೆ ಅನತಿ ದೂರದಲ್ಲಿ ನಿಂತುಕೊಂಡಿತು.
ತಮ್ಮ ಪರಮಸಂಭ್ರಮದ ನಡುವೆಯೂ ದೇವತೆಗಳಿಗೆ ಈ ಯಕ್ಷವನ್ನು ಕಡೆಗಣಿಸಲಾಗಲಿಲ್ಲ. ಯಕ್ಷವಾಗಿ ಅದು ಪ್ರಕಟಗೊಂಡ ಬಗೆ ಹಾಗಿತ್ತು. ದೇವತೆಗಳು ಸಂಭ್ರಮದಲ್ಲೇ ಇದ್ದರೂ ಆ ಸಂಭ್ರಮ ಯುದ್ಧದ ನೆಲೆಯಿಂದ ಬಂದುದು. ಹಾಗಾಗಿ ಈಗ ಬಂದ ಈ ಯಕ್ಷ ಯಾರು – ಅತಿಥಿಯೋ? ವೈರಿಯೋ? ಉಳಿದ ಸಂದರ್ಭದಲ್ಲಾಗಿದ್ದರೆ ಮೊದಲು ಉಪಚರಿಸಿ ಬಳಿಕ ವಿಚಾರಿಸುತ್ತಿದ್ದರೇನೋ? ಆದರೆ ಈಗಿನ ಅವರ ಸ್ಥಿತಿ ಯಕ್ಷವನ್ನು ಮೊದಲು ಯಾರೆಂದು ತಿಳಿದುಕೊಳ್ಳುವಂತೆ ಮಾಡಿದೆ.
ಸಂಭ್ರಮದಲ್ಲಿ ತಮ್ಮನ್ನೇ ಮರೆತವರಿಂದ ಅನ್ಯರನ್ನು ತಿಳಿದುಕೊಳ್ಳಲು ಸಾಧ್ಯವೆ?
ಅಹಂಕಾರದ ಕುರುಡುತನ
ಯಕ್ಷವನ್ನು ತಿಳಿದುಕೊಳ್ಳಲು ಎಲ್ಲರೂ ಒಮ್ಮತದಿಂದ ಅಗ್ನಿಯನ್ನು ಕಳಿಸಿದ್ದಾರೆ. ಆತ ಜಾತವೇದ. ಅಂದರೆ ಎಲ್ಲವನ್ನೂ ತಿಳಿದವ. ಆತ ಬೆಂಕಿಯೂ ಹೌದು, ಬೆಳಕೂ ಹೌದು. ಎಲ್ಲವನ್ನೂ ಸುಡಲೂ ಬಲ್ಲ, ಬೆಳಗಲೂ ಬಲ್ಲ. ಈ ಸಾಮರ್ಥ್ಯವಿದ್ದಾಗ, ಎಲ್ಲವೂ ಸರಿ ಇದೆಯೆಂದು ತಿಳಿದಾಗ ಸಮಸ್ಯೆ ಪ್ರಾರಂಭ. ತನ್ನೀ ಸಾಮರ್ಥ್ಯದ ತಿಳಿವಿನಿಂದಲೇ ಅಂದರೆ ಅಹಂಕಾರದಿಂದಲೇ ಅಗ್ನಿ ಯಕ್ಷ ಇದ್ದಲ್ಲಿಗೆ ನಡೆದ. ತಾನು ಅಗ್ನಿ, ಎಲ್ಲ ಸುಡಬಲ್ಲೆ ಎಂದು ಯಕ್ಷ ಪ್ರಶ್ನೆಗುತ್ತರಿಸಿ ನುಡಿದ. ಯಕ್ಷವನ್ನು ವಿಚಾರಿಸಹೊರಟವ ತನ್ನ ಪರಿಚಯದಲ್ಲೇ ಸಂಭ್ರಮಿಸಿದ.
ತನ್ನನ್ನೇ ಮೆರೆದವ ಬ್ರಹ್ಮದಂಥ ಬ್ರಹ್ಮವನ್ನೂ ಮರೆವುದೇ ಸರಿ. ಬ್ರಹ್ಮದ ಮುಂದೆಯೇ ಬ್ರಹ್ಮವನ್ನು ಮರೆತು ತನ್ನನ್ನು ಮೆರೆದರೆ ಸ್ವಸ್ವರೂಪ ಬಿಡಿ, ಸ್ವಸಾಮರ್ಥ್ಯವಾದರೂ ದಕ್ಕೀತೆ? ಎಲ್ಲ ಸುಡಬಲ್ಲೆನೆಂಬ ಅಗ್ನಿಗೆ ಇದನ್ನು ಸುಡು ಎಂದು ಸಣ್ಣ ಕಡ್ಡಿಯನ್ನು ಮುಂದಿಟ್ಟಿತು ಯಕ್ಷ. ತನ್ನೆಲ್ಲ ಸಾಮರ್ಥ್ಯವನ್ನು ಬಳಸಿಯೂ ಆ ಕಡ್ಡಿ ಸುಡುವಲ್ಲಿ ಅಗ್ನಿ ಸೋತ. ಅಹಂಕಾರಿ ಗೆದ್ದರೆ ಆತನ ಕಣ್ಣಿಗೆ ಯಾರೂ ಕಾಣರು; ಸೋತರೆ ಆತ ಯಾರ ಕಣ್ಣಿಗೂ ಕಾಣ.
ತಿಳಿಯಬಲ್ಲವ ಇಂದ್ರ
ಮರುಕ್ಷಣದಲ್ಲಿ ಅಗ್ನಿ ಅಲ್ಲಿ ನಾಪತ್ತೆ! ಎಲ್ಲವನ್ನು ಸುಡಬಲ್ಲೆನೆಂದವ ಈಗ ಯಕ್ಷಕ್ಕೆ ಮುಖ ತೋರಿಸುತ್ತಾನಾದರೂ ಹೇಗೆ? ಅಗ್ನಿಯಿಂದ ತಿಳಕೊಳ್ಳಲಾಗದ ಯಕ್ಷವನ್ನು ತಿಳಿಕೊಂಡು ಬರಲು ದೇವತೆಗಳು ಬಳಿಕ ಕಳಿಸಿದ್ದು ವಾಯುವನ್ನು. ಒಟ್ಟಾರೆ, ತಿಳಿವ ಈ ಪ್ರಕ್ರಿಯೆಯಲ್ಲಿ ಈತ ಅಗ್ನಿಯ ತಮ್ಮನೇ ಸರಿ. ಅಗ್ನಿಯ ದಾರಿಯಲ್ಲೇ ವಾಯುವೂ ಹೋಗಿ ಬಂದ; ಯಕ್ಷ ಮುಂದಿಟ್ಟ ಕಡ್ಡಿಯನ್ನು ಕೊಂಚವೂ ಅಲುಗಾಡಿಸಲಾಗದೆ, ಯಕ್ಷವನ್ನು ತಿಳಿದುಕೊಳ್ಳಲಾಗದೆ. ಇಷ್ಟಾಗುವಾಗ ಬಹುಶಃ ಉಳಿದವರು ಆತಂಕಗೊಂಡಿರಬೇಕು. ಮತ್ತು ಮೂರನೆಯ ಪ್ರಯತ್ನ, ಅದು ಅಂತಿಮ ಪ್ರಯತ್ನವೂ ಆಗಬೇಕು ತಾನೆ? ಹಾಗಾಗಿ ಇಂದ್ರನೇ ಹೋದ.
ದೇವತೆಗಳ ರಾಜನೇ ಹೋದರೆ ಅಲ್ಲಿ ಯಕ್ಷ ಮಾಯ. ಬದಲಾಗಿ ಅಲ್ಲೇ ದೇವಿ ಪ್ರತ್ಯಕ್ಷವಾಗಿದ್ದಾಳೆ. ಆಕೆ ಹೈಮವತೀ, ಅಂದರೆ ಹಿಮವಂತನ ಮಗಳು – ಶಿವೆ. ಶಿವ-ಶಿವೆ ಸೇರಿ ಪೂರ್ಣ ಶರೀರ. ಶಿವನ ಅರ್ಧಾಂಗಿನಿ ಶಿವೆ. ಈ ಕಲ್ಪನೆಯೇ ಅದ್ಭುತ. ಶಿವ ನಿರ್ಗುಣ ನಿರಾಕಾರ ಇತ್ಯಾದಿ. ಶಿವೆ ಸಗುಣ ಸಾಕಾರ. ನಿರ್ಗುಣವು ತಿಳಿಯಲಶಕ್ಯ. ಸಗುಣವು ತಿಳಿಯಲು ಶಕ್ಯ. ಸಗುಣದ ಸಹಾಯದಿಂದ ನಿರ್ಗುಣವನ್ನು ತಿಳಿಯಬೇಕು. ಆ ಮೂಲಕ ತನ್ನನ್ನೂ ತಿಳಿಯಬೇಕು.
ಬಂದುದೆಲ್ಲ ಸಮಾಜದಿಂದ
ಇಂದ್ರ, ತಾಯಿಯಿಂದ ಶಿವನ ಕುರಿತು ಅಂದರೆ ಬ್ರಹ್ಮನ ಕುರಿತು ತಿಳಿವಳಿಕೆ ಪಡೆದ. ತಮ್ಮ ಜಯ ತಮ್ಮಿಂದಲ್ಲ, ತಮ್ಮದಲ್ಲ ಎಂದೂ ತಿಳಿದ. ಅಹಂಕಾರ ತೊರೆದ. ಅಹಂಕಾರ ತೊರೆದವನಿಗಷ್ಟೇ ಬ್ರಹ್ಮನ ಕುರಿತು ತಿಳಿವು ಮೂಡಲು ಸಾಧ್ಯ ಎಂಬುದನ್ನು ಸಾಕ್ಷೀಕರಿಸಿದ.
ಹೊರನೋಟಕ್ಕೆ ಜಯ ದೇವತೆಗಳಿಂದಲೇ, ದೇವತೆಗಳದ್ದೇ. ಆದರೆ ನಿಜನೋಟದಲ್ಲಿ ಅದು ಬ್ರಹ್ಮದ್ದು ಮತ್ತು ಅದು ಬ್ರಹ್ಮದಿಂದಲೇ. ಇದೊಂದು ತಾತ್ತ್ವಿಕ ನೋಟ. ಹಾಗಾಗಿ ನಿಜನೋಟವೂ ಕೂಡ.
ಈಗ ನಮ್ಮ ಬದುಕನ್ನೇ ಗಮನಿಸಿದರೆ, ಲೌಕಿಕನೆಲೆಯಲ್ಲೇ ಗಮನಿಸಿದರೆ, ನಮಗದು ದಕ್ಕಿದ್ದು ಎಲ್ಲಿಂದ, ಅದು ದಕ್ಕಬೇಕಾದದ್ದು ಯಾರಿಗೆ ಎಂಬ ಪ್ರಶ್ನೆಗೆ ಕಂಡುಕೊಳ್ಳಬಹುದಾದ ಉತ್ತರ – ಅದು ಸಮಾಜದಿಂದ, ಸಮಾಜಕ್ಕೆ ಎಂದೇ ಅಲ್ಲವೆ?
ಇದು ಲೌಕಿಕನೆಲೆಯ ನಿಜನೋಟದ ಉತ್ತರ.
ಸಮಾಜವು ರಾಷ್ಟ್ರದ ಜೀವವೂ ಹೌದು, ವ್ಯಕ್ತರೂಪವೂ ಹೌದು. ರಾಷ್ಟ್ರೀಯರಾಗಿ ನಮ್ಮನ್ನು ಗುರುತಿಸಿಕೊಳ್ಳುತ್ತ, ನಾವು ತಿಳಿಯಬೇಕಾದುದು ನಮ್ಮದಾದದ್ದೆಲ್ಲವೂ ಬಂದುದು ಈ ಸಮಾಜದಿಂದಲೇ ಅರ್ಥಾತ್ ರಾಷ್ಟ್ರದಿಂದಲೇ ಎಂದೇ ಅಲ್ಲವೆ? ಅದು ನಮ್ಮದಾಗಿರುವುದಕ್ಕೆ ನಮ್ಮ ಪ್ರಯತ್ನ, ಹಲವರ ಸಹಕಾರ ಕೆಲಸ ಮಾಡಿರಬಹುದು. ಆದರೆ ನಿಜನೋಟದಲ್ಲಿ ನಮ್ಮದು ಎಂಬ ಒಂದೇ ಒಂದು ವಸ್ತುವೂ ಇರಲು ಅಸಾಧ್ಯ.
ನಮ್ಮದಲ್ಲದ ನಮ್ಮದು
ಒಂದು ವಸ್ತು ಎಲ್ಲಿಂದ ಬಂತೋ ಅಲ್ಲಿಗೇ ಹೋಗಬೇಕಾದುದು ಅತ್ಯಂತ ಸಹಜ ನಡಿಗೆ. ಹಾಲಿನಿಂದ ಬಂದದ್ದು ಹಾಲಿಗೆ; ನೀರಿನಿಂದ ಬಂದದ್ದು ನೀರಿಗೆ. ಸಂಗೀತಗಾರರಾದರೆ ಸಂಗೀತವನ್ನು, ಆಟಗಾರರಾದರೆ ಸೋಲು-ಗೆಲುವುಗಳನ್ನೊಳಗೊಂಡ ಒಟ್ಟಾರೆ ಆಟವನ್ನು, ಹಾಗೇ ನಾವು ಪಡೆದ ವಿದ್ಯೆ, ಸಂಪತ್ತು ಇತ್ಯಾದಿ ಎಲ್ಲವನ್ನೂ ಸಮರ್ಪಿಸಬೇಕಾದುದು ಸಮಾಜಕ್ಕೇ.
ಸಮರ್ಪಣೆ ಎಂದರೆ ನಮ್ಮದು ಎಂದಂದುಕೊಂಡಿದ್ದನ್ನು ಕೊಡುವುದಲ್ಲ, ನಮ್ಮದಲ್ಲದ್ದನ್ನು ಕೊಡುವುದು. ನಾವೇ ಬೆವರು ಸುರಿಸಿ ದುಡಿದು ಸಂಪಾದಿಸಿದ್ದನ್ನು ಕೊಡುವುದು. ದುಡಿಮೆ ನಮ್ಮದೇ ಆದರೂ ಸಂಪಾದನೆಯು ಬಂದದ್ದು ಸಮಾಜದಿಂದ. ಹಾಗೆ ಸಮಾಜದಿಂದ ಬಂದುದನ್ನು ಸಮಾಜದ್ದೇ ಎಂದು ತಿಳಿದು ನಮ್ಮ ಅನಿವಾರ್ಯತೆಯನ್ನು ಅದರಿಂದ ಪೂರೈಸಿಕೊಂಡು ಉಳಿದುದನ್ನು ಸಮಾಜಕ್ಕೇ ಹಿಂದಿರುಗಿಸಿದರೆ ದುಡಿಮೆಯು ಕಾಯಕವಾಗುತ್ತದೆ. ನಮ್ಮದಲ್ಲವೆಂಬ ಭಾವದಲ್ಲಿ ಕೊಟ್ಟಾಗ, ಕೊಟ್ಟದ್ದನ್ನು ನಮ್ಮದಲ್ಲವೆಂದು ನಿಜವಾಗಿ ಭಾವಿಸಿದಾಗ ಕೊಟ್ಟದ್ದು ಸಮರ್ಪಣೆಯಾಗುತ್ತದೆ. ಎಂದರೆ ‘ರಾಷ್ಟ್ರಾಯ ಸ್ವಾಹಾ, ರಾಷ್ಟ್ರಾಯ ಇದಂ ನ ಮಮ’ ಎಂಬ ಭಾವ.
ಈ ಭಾವಸಮೃದ್ಧಿ ನಮ್ಮೆಲ್ಲರದಾಗಲಿ.
✍️ ನಾರಾಯಣ ಶೇವಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.