ಹಬ್ಬಗಳ ಋತು ಆಗಮಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ನವರಾತ್ರಿ ಉತ್ಸವ ಆರಂಭವಾಗುತ್ತದೆ. ನಂತರ ಬೆಳಕಿನ ಹಬ್ಬ ದೀಪಾವಳಿಯ ಆಗಮನವಾಗಲಿದೆ. ಕೊರೋನಾ ಪರಿಣಾಮವಾಗಿ ಈ ಬಾರಿಯ ಹಬ್ಬ ಎಂದಿನಂತೆ ಇರುವುದಿಲ್ಲ. ಸರಳವಾಗಿ ಕುಟುಂಬದೊಂದಿಗೆ ಮಾತ್ರ ಈ ಬಾರಿಯ ಹಬ್ಬವನ್ನು ಆಚರಿಸುವುದು ಅನಿವಾರ್ಯವಾಗಿದೆ. ಆದರೂ ಹಬ್ಬ ಎಂದರೆ ಖರೀದಿ ಇದ್ದೇ ಇರುತ್ತದೆ. ವರ್ಷಕ್ಕೊಮ್ಮೆ ಬರುವ ದೀಪಾವಳಿಯನ್ನೇ ಮೆಚ್ಚಿಕೊಂಡು ಅನೇಕ ಕುಟುಂಬಗಳು ಜೀವಿಸುತ್ತವೆ. ಕೊರೋನಾ ಕಾರಣದಿಂದಾಗಿ ನಷ್ಟ ಅನುಭವಿಸಿ ಸಂಕಷ್ಟಕ್ಕೆ ತುತ್ತಾಗಿರುವ ಕುಟುಂಬಗಳಿಗೆ ಈ ಬಾರಿಯ ದೀಪಾವಳಿ ಹೊಸ ಭರವಸೆಯನ್ನು ಹೊತ್ತು ತರುತ್ತಿದೆ.
ಭಾರತ ಮತ್ತು ಚೀನಾದ ನಡುವೆ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷ ಭಾರತೀಯರಲ್ಲಿ ಚೀನಾ ವಿರೋಧಿ ಮನಸ್ಥಿತಿಯನ್ನು ಹುಟ್ಟುಹಾಕಿದೆ. ಹೀಗಾಗಿ ಈ ಬಾರಿ ಹಬ್ಬಗಳಿಗೆ ಚೀನಾದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದು ಎಂಬ ಧೃಢ ನಿರ್ಧಾರವನ್ನು ಅನೇಕ ಮಂದಿ ಭಾರತೀಯರು ಮಾಡಿದ್ದಾರೆ. ಇದು ಅಪ್ಪಟ ದೇಶೀಯ ವ್ಯಾಪಾರಿಗಳಿಗೆ ಹೊಸ ಭರವಸೆಯನ್ನು ಮೂಡಿಸಿದೆ. ಚೀನಾದ ವಸ್ತುಗಳನ್ನು ಜನ ಧಿಕ್ಕರಿಸಿ ತಮ್ಮತ್ತ ಬರುತ್ತಾರೆ ಎಂಬ ಆಶಾವಾದ ಅವರಲ್ಲಿ ಮೂಡಿದೆ. ಅವರ ಈ ನಿರೀಕ್ಷೆಯನ್ನು ಸತ್ಯವಾಗುವಂತೆ ಮಾಡುವ ಪಣವನ್ನು ಪ್ರತಿಯೊಬ್ಬ ಭಾರತೀಯ ತೊಡಬೇಕಿದೆ.
ಉಳ್ಳವರು ಸಣ್ಣ ಸಣ್ಣ ವ್ಯಾಪಾರಿಗಳಿಂದ ಖರೀದಿ ಮಾಡುವ ಸಂಕಲ್ಪವನ್ನು ಈ ಬಾರಿ ತೊಡಬೇಕು. ದೀಪಾವಳಿ ಎಂದರೆ ಉಡುಪುಗಳ ಖರೀದಿ ಸರ್ವೇಸಾಮಾನ್ಯ. ದೊಡ್ಡ ದೊಡ್ಡ ಬ್ರ್ಯಾಂಡ್ಗಳ ಉಡುಪುಗಳನ್ನು ಖರೀದಿ ಮಾಡುವ ಬದಲು ಭಾರತೀಯ ನೇಕಾರರು ತಯಾರಿಸಿದ ಉಡುಪುಗಳನ್ನು ನಾವು ಕಂಡುಕೊಳ್ಳಬೇಕಿದೆ. ಇದರಿಂದ ಕೈಮಗ್ಗ ಕೈಗಾರಿಕೆ ಬೆಳೆಯುತ್ತದೆ, ಜೊತೆಗೆ ವ್ಯಾಪಾರಿಗಳ ಬದುಕು ಕೂಡ ಬೆಳಗುತ್ತದೆ. ಹಣತೆಗಳ ವಿಷಯದಲ್ಲೂ ಅಷ್ಟೇ. ಮಣ್ಣಿನ ಹಣತೆಯಿಂದ ದೀಪವನ್ನು ಬೆಳಗಿಸುವುದು ನಾವು ರೂಢಿ ಮಾಡಿಕೊಳ್ಳಬೇಕು. ಇದರಿಂದ ಹಣತೆ ತಯಾರಿಸುವವರ ಬದುಕು ಬಂಗಾರವಾಗುತ್ತದೆ. ಜೊತೆಗೆ ನಮ್ಮ ನೆಲದ ಮಣ್ಣು ನಮಗೆ ಸಮೃದ್ಧಿಯನ್ನು ತಂದುಕೊಡುತ್ತದೆ. ಚೀನಾದ ಜಗಮಗಿಸುವ ಬಲ್ಬುಗಳ ಬದಲು ಸಾಲಾಗಿ ಹಣತೆ ಹಚ್ಚಿದರೆ ನಮ್ಮ ಮನೆ ದೀಪಾವಳಿಯಂದು ಕಂಗೊಳಿಸುತ್ತದೆ. ಗೂಡುದೀಪಗಳ ವಿಷಯದಲ್ಲೂ ಅಷ್ಟೇ. ಭಾರತೀಯರು ತಯಾರಿಸಿದ ದೇಶಿಯ ವಸ್ತುಗಳಿಂದ ತಯಾರಾದ ಗೂಡುದೀಪಗಳನ್ನೇ ಬಳಸೋಣ. ಪ್ಲಾಸ್ಟಿಕ್ನಂತಹ ಹಾನಿಕಾರಕ ವಸ್ತುಗಳಿಂದ ನಾವು ದೂರವಿರೋಣ. ರಾಸಾಯನಿಕ ಬಳಸಿ ತಯಾರಿಸಿದ ರಂಗೋಲಿ ಪುಡಿಗಳಿಂದಲೂ ನಾವು ದೂರವಿರಬೇಕು. ನೈಸರ್ಗಿಕ ಬಣ್ಣಗಳ ಮೂಲಕ ರಂಗೋಲಿಯನ್ನು ಬಿಡಿಸೋದು ಮನಮೋಹಕವಾಗಿಯೂ ಮತ್ತು ಸುರಕ್ಷಿತವಾಗಿಯೂ ಇರುತ್ತದೆ.
ಈ ಬಾರಿ ಹೆಚ್ಚಿನ ಜನರ ಆದಾಯ ಕುಸಿತವಾಗಿದೆ. ಹೀಗಾಗಿ ಸಹಜವಾಗಿಯೇ ಖರೀದಿ ಪ್ರಕ್ರಿಯೆ ಕೂಡ ಕುಂಠಿತವಾಗುವ ಸಾಧ್ಯತೆ ಇದೆ. ಅದೇನೇ ಇದ್ದರೂ ಹಬ್ಬದ ಸಂದರ್ಭದಲ್ಲಿ ಒಂದಿಷ್ಟಾದರೂ ಖರೀದಿ ಮಾಡುವುದು ಭಾರತೀಯನ ಪರಂಪರೆ. ಆದರೆ ಈ ಬಾರಿ ಭಾರತೀಯ ಭಾರತೀಯನಿಂದಲೇ ಖರೀದಿ ಮಾಡಬೇಕು. ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡುವ ದೃಢ ಸಂಕಲ್ಪವನ್ನು ಸಾಕಾರಗೊಳಿಸಲು ಕಟಿಬದ್ಧರಾಗಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.