ಭಾರತ ಪ್ರಸ್ತುತ ಎರಡು ಕಡೆಯಿಂದ ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಚೀನಾ ಮತ್ತು ಇನ್ನೊಂದು ಕಡೆ ಪಾಕಿಸ್ಥಾನ ಭಾರತದ ವಿರುದ್ಧ ಸಮರ ಸಾರಲು ತುದಿಗಾಲಲ್ಲಿ ನಿಂತಿವೆ. ಈ ಎರಡು ಶತ್ರು ರಾಷ್ಟ್ರಗಳನ್ನು ನಿಭಾಯಿಸುವ ಶಕ್ತಿ ಮತ್ತು ಸಾಮರ್ಥ್ಯ ಭಾರತೀಯ ರಕ್ಷಣಾ ಪಡೆಗಳಿಗೆ ಇವೆ. ಆದರೆ ಹೆಚ್ಚಿನ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬೇಕಾದ ಅನಿವಾರ್ಯತೆ ಕೂಡ ಇದೆ. ಹೀಗಾಗಿ ಭಾರತವು ಪ್ರಸ್ತುತ ತನ್ನ ರಕ್ಷಣಾ ಶಕ್ತಿಯನ್ನು ವೃದ್ಧಿ ಮಾಡುವತ್ತ ಗಮನ ಹರಿಸುತ್ತಿದೆ. ಇದಕ್ಕಾಗಿ ದೇಶೀಯವಾಗಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತಿದೆ.
ಭಾರತ ಕಳೆದ 35 ದಿನಗಳಲ್ಲಿ 10 ಕ್ಷಿಪಣಿಗಳನ್ನು ಪರೀಕ್ಷೆ ನಡೆಸಿದೆ. ಭದ್ರತೆಯ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಕಳೆದ ಮೇ ತಿಂಗಳಿನಿಂದ ಲಡಾಖ್ ಗಡಿಯಲ್ಲಿ ಚೀನಾ ಮತ್ತು ಭಾರತದ ಸಂಘರ್ಷ ತಾರಕಕ್ಕೇರುತ್ತಾ ಬಂದಿದೆ. ಹೀಗಾಗಿ ಅಲ್ಲಿಂದ ಭಾರತ ತನ್ನ ಕ್ಷಿಪಣಿ ಯೋಜನೆಗಳನ್ನು ಒಂದರ ನಂತರ ಒಂದು ಎಂಬಂತೆ ಪರೀಕ್ಷೆಗೆ ಒಳಪಡಿಸುತ್ತಿದೆ. ಭವಿಷ್ಯದ ಯಾವುದೇ ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ತಾನು ಸರ್ವ ಸನ್ನದ್ಧನಾಗಿದ್ದೇನೆ ಎಂಬುದನ್ನು ಭಾರತದ ಈ ಕಾರ್ಯಗಳು ಸಾರಿ ಹೇಳುತ್ತಿವೆ. ಭಾರತ ನಡೆಸಿದ ಎಲ್ಲಾ ಕ್ಷಿಪಣಿ ಪರೀಕ್ಷೆಗಳು ಯಶಸ್ವಿ ಆಗಿರುವುದು ಮೈಲಿಗಲ್ಲಿನ ವಿಷಯವಾಗಿದೆ.
ಸೆಪ್ಟಂಬರ್ 7ರಂದು ಭಾರತ ಹೈಪರ್ಸೋನಿಕ್ ಟೆಕ್ನಾಲಜಿ ಡೆಮೋನ್ಸ್ಟ್ರೇಟರ್ ವೆಹಿಕಲ್ ಅನ್ನು ಪರೀಕ್ಷೆಗೊಳಪಡಿಸಿ ಯಶಸ್ವಿಯಾಗಿದೆ. ಸೆಪ್ಟೆಂಬರ್ 22ರಂದು ಭಾರತವು ಅಭ್ಯಾಸ್ ಕ್ಷಿಪಣಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಸೆಪ್ಟೆಂಬರ್ 22ರಂದು ಟ್ಯಾಂಕ್ ಅನ್ನು ಧ್ವಂಸ ಮಾಡಬಲ್ಲ ಲೇಸರ್ ನಿರ್ದೇಶಿತ ಕ್ಷಿಪಣಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಸೆಪ್ಟೆಂಬರ್ 23ರಂದು ಪೃಥ್ವಿ-2 ಕ್ಷಿಪಣಿಯ ರಾತ್ರಿ ಪರೀಕ್ಷೆ ಯಶಸ್ವಿಯಾಗಿದೆ. ಸೆಪ್ಟೆಂಬರ್ 30ರಂದು ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಅಕ್ಟೋಬರ್ 1ರಂದು ಲೇಸರ್ ನಿರ್ದೇಶಿತ ಯ್ಯಾಂಟಿ ಟ್ಯಾಂಕ್ ಕ್ಷಿಪಣಿಯನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಅಕ್ಟೋಬರ್ 3ರಂದು ಶೌರ್ಯ ಸೂಪರ್ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಅಕ್ಟೋಬರ್ 5ರಂದು ಕ್ಷಿಪಣಿ ಸಹಾಯದ ಟಾರ್ಪಿಡೊ ಪರೀಕ್ಷೆ ಯಶಸ್ವಿಯಾಗಿದೆ. ಅಕ್ಟೋಬರ್ 9ರಂದು ರಾಡರ್ ಧ್ವಂಸಗೊಳಿಸಬಲ್ಲ ರುದ್ರಂ-1 ಪರೀಕ್ಷೆ ಯಶಸ್ವಿಯಾಗಿದೆ.
ಒಟ್ಟಿನಲ್ಲಿ ಈ ಕ್ಷಿಪಣಿಗಳು ಭಾರತದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿವೆ. ಚೀನಾದಂತಹ ದೈತ್ಯ ರಾಷ್ಟ್ರವನ್ನು ಮಣಿಸಲು ಭಾರತಕ್ಕೆ ಇಂತಹ ರಕ್ಷಣಾ ವ್ಯವಸ್ಥೆಗಳು ಅನಿವಾರ್ಯ ಕೂಡ ಆಗಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಮಣಿಸುವುದು ಭಾರತಕ್ಕೆ ಒಂದು ವಿಷಯವೇ ಅಲ್ಲ. ಆದರೂ ಶತ್ರುವನ್ನು ಅಷ್ಟು ಸುಲಭವಾಗಿ ಪರಿಗಣಿಸುವ ಜಾಯಮಾನ ಭಾರತದಲ್ಲ. ಭಾರತ ಎಂದಿಗೂ ಬೇರೊಂದು ರಾಷ್ಟ್ರದ ಮೇಲೆ ದಂಡೆತ್ತಿ ಹೋಗಿಲ್ಲ, ಆದರೆ ಬೇರೆ ರಾಷ್ಟ್ರ ನಮ್ಮ ಮೇಲೆ ಆಕ್ರಮಣ ಮಾಡಲು ಬಂದಾಗ ಅದು ದಿಟ್ಟ ಉತ್ತರವನ್ನು ನೀಡುತ್ತಲೇ ಬಂದಿದೆ. ಮುಂದೆಯೂ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.