ಮನುಷ್ಯನಿಗೆ ದೇಹದ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮಾನಸಿಕ ಆರೋಗ್ಯ ಕೂಡ. ಮನಸ್ಸು ಮತ್ತು ಮನಸ್ಥಿತಿ ಆರೋಗ್ಯವಾಗಿದ್ದರೆ ಮಾತ್ರ ಮನುಷ್ಯ ತನ್ನ ಜೀವನದ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾನೆ. ಇಲ್ಲವಾದರೆ ಆತನ ಜೀವನ ನಿಯಂತ್ರಣವಿಲ್ಲದ ವಾಹನದಂತೆ. ದುರದೃಷ್ಟವೆಂದರೆ, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀಡುವಷ್ಟು ಕಾಳಜಿಯನ್ನು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ನೀಡುತ್ತಿಲ್ಲ ಎಂಬುದು. ವಾಸ್ತವವಾಗಿ, ಮನಸ್ಸಿಗೂ ಆರೋಗ್ಯವೆಂಬುದು ಇದೆ ಎನ್ನುವುದನ್ನು ಬಹಳಷ್ಟು ಮಂದಿ ಅರ್ಥಮಾಡಿಕೊಳ್ಳುವುದೇ ಇಲ್ಲ. ಖಿನ್ನತೆ, ಒತ್ತಡ, ಅನಾರೋಗ್ಯಕರ ಜೀವನಶೈಲಿ ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಹೀಗಾಗಿ ಜೀವನಪದ್ಧತಿ ಉತ್ತಮವಾಗಿದ್ದರೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟವೇನಲ್ಲ.
ಇಂದು ವಿಶ್ವ ಮಾನಸಿಕ ಅರೋಗ್ಯ ದಿನ. ಜಾಗತಿಕ ಮಾನಸಿಕ ಆರೋಗ್ಯ ಶಿಕ್ಷಣ, ಜಾಗೃತಿ ಮತ್ತು ಸಾಮಾಜಿಕ ತಪ್ಪು ತಿಳುವಳಿಕೆ ವಿರುದ್ಧ ಧ್ವನಿಯೆತ್ತುವ ಅಂತರರಾಷ್ಟ್ರೀಯ ದಿನವಾಗಿದೆ. 150 ಕ್ಕೂ ಹೆಚ್ಚು ದೇಶಗಳನ್ನು ಸದಸ್ಯನಾಗಿ ಹೊಂದಿರುವ ಜಾಗತಿಕ ಮಾನಸಿಕ ಆರೋಗ್ಯ ಸಂಸ್ಥೆಯಾದ ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ನ ಉಪಕ್ರಮದಲ್ಲಿ ಇದನ್ನು ಮೊದಲು 1992 ರಲ್ಲಿ ಆಚರಿಸಲಾಯಿತು. ಮಾನಸಿಕ ಅಸ್ವಸ್ಥತೆ ಮತ್ತು ವಿಶ್ವಾದ್ಯಂತ ಜನರ ಜೀವನದ ಮೇಲೆ ಅದರ ಪ್ರಮುಖ ಪರಿಣಾಮಗಳ ಬಗ್ಗೆ ಗಮನ ಸೆಳೆಯುವುದು ಈ ಆಚರಣೆಯ ಮುಖ್ಯ ಉದ್ದೇಶ.
ಇತ್ತೀಚಿನ ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಆಗಿದೆ. ನಿತ್ಯ ಒಂದಲ್ಲ ಒಂದು ಸಮಸ್ಯೆಗಳು, ಸವಾಲುಗಳು ಮನುಷ್ಯನನ್ನು ಕಾಡುತ್ತಲೇ ಇರುತ್ತದೆ. ಕೆಲವೊಮ್ಮೆ ಸಮಸ್ಯೆಗಳ ಸುಳಿಯಿಂದ ಹೊರಬರಲಾರದೆ ಮನುಷ್ಯ ಖಿನ್ನತೆಗೆ ಜಾರುತ್ತಾನೆ. ಖಿನ್ನತೆಗೆ ಒಳಗಾದ ಮನುಷ್ಯನಿಗೆ ಆತ್ಮಹತ್ಯೆಯಂತಹ ಅಪಾಯಕಾರಿ ಯೋಚನೆಗಳು ಬರುತ್ತವೆ. ಅದರಲ್ಲೂ ಕರೋನವೈರಸ್ ಎಂಬ ಮಹಾಮಾರಿ ಜಗತ್ತಿಗೆ ಲಗ್ಗೆ ಇಟ್ಟ ಬಳಿಕ ಮನುಷ್ಯನ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಖಿನ್ನತೆ ಮತ್ತು ಆತಂಕದಂತಹ ಭಾವಗಳು ಹೆಚ್ಚಿನವರಲ್ಲಿ ಕಾಡುತ್ತಿವೆ. ಉದ್ಯೋಗ ನಷ್ಟ, ಆದಾಯ ಕುಸಿತ ಮುಂತಾದವುಗಳು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ.
ಸಮಸ್ಯೆ ಎಂಬುದು ಮನುಷ್ಯನ ಬೆನ್ನಿಗೆ ಬಿದ್ದ ಬೇತಾಳನಂತೆ. ಯಾವುದೇ ಸಮಸ್ಯೆ ಇಲ್ಲದ ಮನುಷ್ಯ ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ. ಬಡವನಿಗೆ ಒಂದು ತರನಾದ ಸಮಸ್ಯೆಯಾದರೆ, ಸಿರಿವಂತನಿಗೆ ಇನ್ನೊಂದು ತರನಾದ ಸಮಸ್ಯೆ ಇರುತ್ತದೆ. ಪ್ರೇಮ ವೈಫಲ್ಯಗಳು, ವ್ಯಾಪಾರದಲ್ಲಿನ ನಷ್ಟ, ಶಿಕ್ಷಣದಲ್ಲಿ ವೈಫಲ್ಯ ಇವೆಲ್ಲವೂ ತಾತ್ಕಾಲಿಕ ಸಮಸ್ಯೆಗಳು. ಇಂದಲ್ಲ ನಾಳೆ ಆ ಸಮಸ್ಯೆಗೆ ಪರಿಹಾರ ಸಿಕ್ಕೇ ಸಿಗುತ್ತದೆ. ಕಾಲಕಳೆದಂತೆ ಅದರ ನೋವೂ ಮರೆಯಾಗುತ್ತದೆ. ಆರೋಗ್ಯದ ವ್ಯತ್ಯಯ ಮತ್ತು ಪ್ರೀತಿಪಾತ್ರರ ಅಗಲುವಿಕೆ ನಮ್ಮನ್ನು ಕೆಲವೊಮ್ಮೆ ಜೀವನಪರ್ಯಂತವಾಗಿ ನೋವಲ್ಲಿ ಇರುವಂತೆ ಮಾಡುತ್ತದೆ, ಆದರೆ ಮನುಷ್ಯನ ಇಚ್ಛಾಶಕ್ತಿಗೆ ಎಲ್ಲವನ್ನೂ ಮರೆಸುವ ಶಕ್ತಿಯಿದೆ. ಸಿಡಿಲಿನಂತೆ ಬಂದೆರಗಿದ ಆಘಾತ ಕಾಲ ಕಳೆದಂತೆ ಮರೆಯಾಗುತ್ತದೆ. ಇಂತಹ ಸಮಸ್ಯೆಗಳಿಗೆ ನಾವು ತಲೆಕೆಡಿಸಿಕೊಂಡು ಕೊರಗಿ ಕೊರಗಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಬಂದದ್ದನ್ನು ಬಂದಹಾಗೆ, ಇದ್ದದ್ದನ್ನು ಇದ್ದಹಾಗೆ ಸ್ವೀಕರಿಸುವ, ಬಂದದ್ದು ಬರಲಿ, ಹೋದದ್ದು ಹೊಗಲಿ ಎನ್ನುವ ಮನಸ್ಥಿತಿ ನಮ್ಮದಾದಾಗ ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿರುತ್ತದೆ.
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮೊದಲು ನಮ್ಮ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡಬೇಕು. ನಿರಂತರ ಯೋಗಾಭ್ಯಾಸ, ಧ್ಯಾನ ಮುಂತಾದ ಕಾರ್ಯಗಳಿಂದ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಸಕಾರಾತ್ಮಕ ಚಿಂತನೆಗಳು, ಸಕಾರಾತ್ಮಕ ಕಾರ್ಯಗಳು ಮಾನಸಿಕ ಆರೋಗ್ಯ ವೃದ್ಧಿಗೆ ಹೆಚ್ಚು ಪೂರಕವಾಗಿವೆ. ಮಕ್ಕಳೊಂದಿಗೆ, ಪ್ರಾಣಿಗಳೊಂದಿಗೆ ಮತ್ತು ಹಿರಿಯರೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯುವುದನ್ನು ರೂಢಿಸಿಕೊಂಡಾಗ ಒತ್ತಡ ಮತ್ತು ಖಿನ್ನತೆಗಳು ದೂರವಾಗುತ್ತವೆ. ಸಂಗೀತ, ನೃತ್ಯ, ಗಿಡ ನೆಡುವುದು, ದೇಗುಲ ದರ್ಶನ, ಪ್ರಾರ್ಥನೆ ಅಥವಾ ಇನ್ನಿತರ ಹವ್ಯಾಸಗಳು ನಮ್ಮನ್ನು ಕ್ರಿಯಾಶೀಲವಾಗಿರಿಸುವುದರ ಜೊತೆಗೆ ನಮ್ಮ ಮನಸ್ಸಿನ ಆರೋಗ್ಯವನ್ನೂ ಕಾಪಾಡುತ್ತದೆ. ಹೀಗಾಗಿ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಾರ್ಯ ನಮ್ಮಿಂದ ಮಾತ್ರ ಸಾಧ್ಯ.
✍️ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.