ನವದೆಹಲಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳು ತಮ್ಮಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ಎಷ್ಟು ಪ್ರಾತಿನಿಧ್ಯ ನೀಡುತ್ತದೆ ಎಂಬುದನ್ನು ಆಧರಿಸಿ ಅವುಗಳಿಗೆ ಶ್ರೇಯಾಂಕ ನೀಡಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಮುಂದಾಗಿದೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿ ಅಶುತೋಶ್ ಶರ್ಮಾ ಮಾಹಿತಿ ನೀಡಿದ್ದು, ನೂತನ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ನೀತಿಯಡಿ ಈ ರೇಟಿಂಗ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ವೈವಿಧ್ಯವನ್ನು ಆಧರಿಸಿ ಈ ರೇಟಿಂಗ್ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಭಾಷೆ ಮತ್ತು ಪ್ರಾದೇಶಿಕತೆಯನ್ನೂ ಈ ವೇಳೆ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಿಜ್ಞಾನ, ತಂತ್ರಜ್ಞಾನ, ಗಣಿತ, ಎಂಜಿನಿಯರಿಂಗ್ ಮೊದಲಾದ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಇದೆ. ಈ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ಮತ್ತು ಸಂಶೋಧನಾ ವಲಯದಲ್ಲಿ ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಮಹಿಳೆಯರಿಗೆ ವಿಜ್ಞಾನ, ತಂತ್ರಜ್ಞಾನ ವಲಯದಲ್ಲಿ ಪ್ರೋತ್ಸಾಹ ನೀಡುವ ಸಲುವಾಗಿ ನಾಲೆಜ್ ಇನ್ವಾಲ್ಮೆಂಟ್ ಇನ್ ರಿಸರ್ಚ್ ಅಡ್ವಾನ್ಸ್ಮೆಂಟ್ ಥ್ರೂ ನರ್ಚರಿಂಗ್ ಯೋಜನೆ ಪರಿಚಯಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಎಸ್ಟಿಪಿಐ 2020 ನೀತಿಯು ಡಿಸೆಂಬರ್ ತಿಂಗಳಲ್ಲಿ ಜಾರಿಯಾಗಲಿದ್ದು ಇದರ ಮೂಲಕವೇ ಸರ್ಕಾರಿ ಮತ್ತು ಖಾಸಗಿ ವಿಜ್ಞಾನ, ತಂತ್ರಜ್ಞಾನ ಸಂಸ್ಥೆಗಳಿಗೆ ಅಂಕ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.