ಹೃದಯ… ಮನುಷ್ಯನ ಭಾವನೆಗಳ ಹೊರಹೊಮ್ಮುವಿಕೆಗೆ ಮತ್ತು ಆತನ ಜೀವಂತಿಕೆಗೆ ಆಧಾರ ಸ್ತಂಭ. ಹೃದಯ ಬಡಿತ ಇದ್ದಷ್ಟು ದಿವಸ ದೇಹದಲ್ಲಿ ಉಸಿರು ಇರುತ್ತದೆ. ಹೃದಯ ಬಡಿತ ನಿಂತಾಗ ಇಹಲೋಕದ ಪ್ರಯಾಣ ಕೊನೆಯಾಗುತ್ತದೆ. ಮನುಷ್ಯನ ದುಗುಡ ದುಮ್ಮಾನ, ಸಂತೋಷ ಸಂಭ್ರಮ ಎಲ್ಲವೂ ಹೃದಯದ ಮೂಲಕ ಮುಖಭಾವದಲ್ಲಿ ಹೊರಹೊಮ್ಮುತ್ತದೆ. ಗಟ್ಟಿ ಹೃದಯವಿದ್ದರೆ ಪರ್ವತವನ್ನೂ ಅಲುಗಾಡಿಸುವ ಸ್ಥೈರ್ಯ, ಧೈರ್ಯ ಮನುಷ್ಯನಿಗೆ ಬರುತ್ತದೆ. ಅದೇ ಹೃದಯ ದುರ್ಬಲವಾದರೆ ಆತ ಬದುಕಿದ್ದೂ ಸತ್ತಂತೆ. ದುರ್ಬಲತೆಯೇ ಆತನ ಜೀವನವಾಗುತ್ತದೆ. ಇಂತಹ ಪುಟ್ಟ ಹೃದಯವನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಳ್ಳಬೇಕಾದುದು ಮನುಷ್ಯನ ಕರ್ತವ್ಯ. ಅದು ಆತನ ಅಸ್ತಿತ್ವಕ್ಕೆ ಅನಿವಾರ್ಯವೂ ಹೌದು.
ಇಂದು ವಿಶ್ವ ಹೃದಯ ದಿನ. ಹೃದಯ ಕಾಯಿಲೆಗಳು ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರ ಗಮನವನ್ನು ಸೆಳೆಯುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 29 ಅನ್ನು ವಿಶ್ವ ಹೃದಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ಈ ಉಪಕ್ರಮವನ್ನು ವರ್ಲ್ಡ್ ಹಾರ್ಟ್ ಫೆಡರೇಶನ್ 2000 ರಲ್ಲಿ ವಾರ್ಷಿಕ ಕಾರ್ಯಕ್ರಮವಾಗಿ ಪ್ರಾರಂಭಿಸಿತು ಮತ್ತು ಅಂದಿನಿಂದ ಸೆಪ್ಟೆಂಬರ್ 29 ರಂದು ಇದನ್ನು ಆಚರಿಸಲಾಗುತ್ತದೆ.
ಹೃದಯಾಘಾತ, ಪಾರ್ಶ್ವವಾಯು, ಹೃದಯ ವೈಫಲ್ಯ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಸ್ಥಿತಿಯಂತಹ ಯಾವುದೇ ಹೃದಯ ಸಂಬಂಧಿ ಕಾಯಿಲೆಗಳನ್ನು ತಪ್ಪಿಸಲು ವಿಭಿನ್ನ ತಡೆಗಟ್ಟುವಿಕೆ ಕ್ರಮಗಳು ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಉತ್ತೇಜಿಸಲು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ಸರಾಸರಿ 17 ದಶಲಕ್ಷಕ್ಕೂ ಹೆಚ್ಚು ಜನರು ಹೃದಯ ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಾರೆ ಎಂದು ವರದಿಗಳು ಹೇಳುತ್ತವೆ. ಮನುಷ್ಯ ತನ್ನ ಹೃದಯದ ಬಗ್ಗೆ ಕಾಳಜಿ ವಹಿಸದೇ ಇರುವುದೇ ಇದಕ್ಕೆ ಮೂಲ ಕಾರಣ. ಮ್ಯಾರಥಾನ್ಗಳು, ನಡಿಗೆಗಳು, ಸಾರ್ವಜನಿಕ ಮಾತುಕತೆಗಳು, ಫಿಟ್ನೆಸ್ ಸೆಷನ್ಗಳು, ಪ್ರದರ್ಶನಗಳು ಮತ್ತು ವಿಜ್ಞಾನ ಮೇಳಗಳಂತಹ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ವಿವಿಧ ಸಂಸ್ಥೆಗಳು ವಿಶ್ವದಾದ್ಯಂತ ವಿಶ್ವ ಹೃದಯ ದಿನವನ್ನು ಆಚರಿಸುತ್ತವೆ. ಆದರೆ ಇದು ಒಂದು ದಿನಕ್ಕೆ ಸೀಮಿತಗೊಂಡರೆ ಪ್ರಯೋಜನ ಖಂಡಿತಾ ದೊರೆಯಲಾರದು.
ದೈಹಿಕ ವ್ಯಾಯಾಮದಲ್ಲಿ ಪಾಲ್ಗೊಳ್ಳುವುದು, ಧೂಮಪಾನವನ್ನು ನಿಲ್ಲಿಸುವುದು, ಆಲ್ಕೊಹಾಲ್ ತ್ಯಜಿಸುವುದು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದನ್ನು ಪ್ರಾರಂಭಿಸುವುದು ಹೃದಯದ ಆರೋಗ್ಯವನ್ನು ಕಾಪಾಡಲು ನಾವು ಅನುಸರಿಸಲೇ ಬೇಕಾದ ರೂಢಿಯಾಗಿದೆ.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೃದಯ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಆಗಾಗ್ಗೆ ಪರೀಕ್ಷಿಸುವುದು ಒಳ್ಳೆಯದು ಎಂಬುದನ್ನು ವೈದ್ಯರುಗಳು ಹೇಳುತ್ತಲೇ ಇರುತ್ತಾರೆ. ಆದರೆ ಅನೇಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಪ್ರತಿ ವರ್ಷವೂ 17.1 ಮಿಲಿಯನ್ ಜನರು ಹೃದಯದ ಸಮಸ್ಯೆಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೇ ಶೇ 80 ರಷ್ಟು ಹೃದಯದ ಕಾಯಿಲೆ ಅಭಿವೃದ್ದಿಯಾಗಿರುವುದು ಆತಂಕದ ಸಂಗತಿ. ಏಕಾಏಕಿ ಸಂಭವಿಸುವ ಹೃದಯಾಘಾತಗಳು ಮನುಷ್ಯನ ನಿರ್ಲಕ್ಷ್ಯದ ಕಾರಣದಿಂದಲೇ ಸಂಭವಿಸುತ್ತದೆ ಎಂಬುದನ್ನು ನಾವು ಮರೆಯಬಾರದು.
ಒತ್ತಡ ಕಡಿಮೆಮಾಡಿಕೊಳ್ಳುವುದು, ಮಧುಮೇಹ ನಿಯಂತ್ರಣದಲ್ಲಿರಿಸುವುದು, ಬೊಜ್ಜು ಅತಿಯಾಗದಂತೆ ನೋಡಿಕೊಳ್ಳುವುದು, ಯಾವಾಗಲೂ ಚಟುವಟಿಕೆಯಿಂದಿರುವುದು, ರಕ್ತದಲ್ಲಿ ಕೊಬ್ಬು ಸೇರಿಕೊಳ್ಳದಂತೆ ನೋಡಿಕೊಳ್ಳುವುದು, ವೈದ್ಯರ ಸಲಹೆಯನ್ನು ನಿರ್ಲಕ್ಷ್ಯ ಮಾಡದೇ ಇರುವುದು, ಒಳ್ಳೆಯ ಆಹಾರ ಕ್ರಮ ಅನುಸರಿಸುವುದು ನಾವು ನಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಇರುವ ದಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.