ದೇಶದ ಸಾಮಾನ್ಯ ವರ್ಗಗಳಾದ ಮಧ್ಯಮ ಮತ್ತು ಬಡ ವರ್ಗದ ಅಭ್ಯುದಯವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಈ ಆರು ವರ್ಷಗಳಲ್ಲಿ ಅನೇಕ ಜನಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜನರನ್ನು ಆರ್ಥಿಕವಾಗಿ ಸಬಲಗೊಳಿಸಲು, ಅವರಿಗೆ ಜೀವನಕ್ಕೆ ಅಗತ್ಯವಾದ ಪೂರಕ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಮೋದಿ ಅನೇಕ ಸಮಾಜ ಸ್ನೇಹಿ ಯೋಜನೆಗಳನ್ನು ಪರಿಚಯಿಸಿದ್ದಾರೆ. ಆ ಮೂಲಕ ದುರ್ಬಲ ವರ್ಗದ ನೈಜ ಬಡವರಿಗೆ ಆಹಾರ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಹೆಜ್ಜೆ ಮುಂದಿಟ್ಟಿದ್ದಾರೆ. ಆ ಮೂಲಕ ದೇಶದ ಕೋಟ್ಯಾನುಕೋಟಿ ಜನರ ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ನಮೋ ಮಾಡಿದ್ದಾರೆ.
ಹೀಗೆ ಸಾಮಾನ್ಯ ಜನರಿಗೆ ಆರೋಗ್ಯ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಮಹತ್ವಾಕಾಂಕ್ಷೆಯ ಯೋಜನೆ ‘ಆಯುಷ್ಮಾನ್ ಭಾರತ್’ಗೆ 2 ವರ್ಷ. ಆಯುಷ್ಮಾನ್ ಭಾರತ್- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ದೇಶದ ಜನರಿಗೆ ಉಚಿತ ಆರೋಗ್ಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಈ ಯೋಜನೆಗೆ ಪೂರಕ ರೂಪುರೇಶೆಗಳನ್ನು ನಮೋ ಸರ್ಕಾರ ನೀಡಿದೆ. ಈ ಯೋಜನೆಯನ್ನು 2018 ರ ಸೆ. 23 ರಂದು ರಾಷ್ಟ್ರೀಯ ಆರೋಗ್ಯ ನೀತಿಯ ಭಾಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಅಗತ್ಯವುಳ್ಳ ಜನರಿಗೆ ಉಚಿತ ದ್ವಿತೀಯ ಮತ್ತು ತೃತೀಯ ದರ್ಜೆಯ ಆರೋಗ್ಯ ಭದ್ರತೆಯನ್ನು ನೀಡಲು ಕ್ರಮ ಕೈಗೊಂಡಿದೆ.
ಈ ಯೋಜನೆಯನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವನ್ನೂ ಸ್ಥಾಪಿಸಿತು. ಆ ಮೂಲಕ ಆರೋಗ್ಯ ಸಮಸ್ಯೆಯಿಂದ, ಚಿಕಿತ್ಸೆಗಾಗಿ ಪೂರಕ ಆರ್ಥಿಕ ಸಂಪತ್ತು ಹೊಂದಿರದವರಿಗೆ ಈ ಯೋಜನೆಯ ಮೂಲಕ ಸೂಕ್ತ ನೆರವನ್ನು ಉಚಿತ ಚಿಕಿತ್ಸೆಯ ಮೂಲಕ ನೀಡಲು ಕ್ರಮ ಕೈಗೊಂಡಿದೆ. ಈ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ವಾರ್ಷಿಕ 5 ಲಕ್ಷಗಳ ವರೆಗಿನ ಉಚಿತ ಚಿಕಿತ್ಸೆ ಮತ್ತು ಎಪಿಎಲ್ ಕಾರ್ಡು ಹೊಂದಿರುವವರಿಗೆ ವಾರ್ಷಿಕ 1.5 ಲಕ್ಷಗಳ ಉಚಿತ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಈ ವರೆಗೆ ದೇಶದಲ್ಲಿ ಸುಮಾರು 15,500 ಕೋಟಿ ರೂ. ಗಳಿಗೂ ಅಧಿಕ ಮೌಲ್ಯದ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ನೀಡಲಾಗಿದೆ. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಆರೋಗ್ಯ ಕಾಳಜಿ ವಹಿಸಲು ಸೂಕ್ತ ಕ್ರಮ ತೆಗೆದುಕೊಂಡಿದೆ.
ಕೇವಲ ಎರಡೇ ವರ್ಷಗಳಲ್ಲಿ ಈ ಯೋಜನೆ ದೇಶದ 1.26 ಕೋಟಿಗೂ ಅಧಿಕ ಆರ್ಥಿಕವಾಗಿ ಹಿಂದುಳಿದ, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಜನರಿಗೆ ಚಿಕಿತ್ಸೆ ಪಡೆದುಕೊಳ್ಳಲು ಅಗತ್ಯ ನೆರವು ಒದಗಿಸಿಕೊಟ್ಟಿದೆ. ಈ ಯೋಜನೆಯೊಳಗೆ ದೇಶದ ಸುಮಾರು 23 ಸಾವಿರಕ್ಕೂ ಅಧಿಕ ಆಸ್ಪತ್ರೆಗಳು ಸೇರಿವೆ. ದೇಶದ ಸುಮಾರು 12 ಕೋಟಿಗೂ ಅಧಿಕ ಜನರಿಗೆ ಆಯುಷ್ಮಾನ್ ಇ-ಕಾರ್ಡುಗಳನ್ನು ನೀಡಲಾಗಿದೆ. ಇದರಲ್ಲಿ ಎಲುಬು ಸಂಬಂಧಿ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಈ ಯೋಜನೆಯ ಮೂಲಕ ಚಿಕಿತ್ಸೆ ಪಡೆಯಲು ಈಗಾಗಲೇ ಈ ಯೋಜನೆಯಲ್ಲಿ ನೋಂದಾಯಿಸಲಾಗಿರುವ ಆಸ್ಪತ್ರೆಗಳಲ್ಲಿ ಪೂರಕ ದಾಖಲೆಗಳನ್ನು ಒದಗಿಸುವ ಮೂಲಕ, ಆಯುಷ್ಮಾನ್ ಕಾರ್ಡ್ಗಳನ್ನು ತೋರಿಸುವ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ. ಆ ಮೂಲಕ ಆರ್ಥಿಕ ಸಮಸ್ಯೆ ಇರುವವರು ಈ ಕಾರ್ಡ್ ಮೂಲಕವೇ ಉಚಿತ ಚಿಕಿತ್ಸೆ ಪಡೆಯುವ ಎಲ್ಲಾ ಅವಕಾಶವನ್ನು ಮೋದಿ ಸರ್ಕಾರ ಮಾಡಿಕೊಟ್ಟಿದೆ. ಆಯುಷ್ಮಾನ್ ಯೋಜನೆಯ ಮೂಲಕ ನಮೋ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಜನರ ಆರೋಗ್ಯ ಭಾಗ್ಯಕ್ಕೆ ಅಗತ್ಯ ಸೌಲಭ್ಯ, ಅವಕಾಶ ಕಲ್ಪಿಸಿದೆ ಎಂದರೂ ತಪ್ಪಾಗಲಾರದು.
ಆರೋಗ್ಯ ಇದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಆದರೆ ದೇಶದ ಅನೇಕ ಬಡ ಕುಟುಂಬಗಳು ಆರ್ಥಿಕ, ಹಣಕಾಸಿನ ಸಮಸ್ಯೆಯ ಕಾರಣದಿಂದ ಜೀವನ ಸಾಗಿಸುವುದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿದೆ. ಇಂತಹ ಸ್ಥಿತಿಯಲ್ಲಿ ಆರೋಗ್ಯ ದ ಅವಶ್ಯಕತೆಗಳನ್ನು ಪೂರೈಸುವುದು ಬಡ ವರ್ಗಕ್ಕೆ ಸವಾಲೇ ಸರಿ. ದೇಶದ ಬಡ ಜನರ ಈ ಸಮಸ್ಯೆಯನ್ನು ಮೋದಿ ಸರ್ಕಾರ ಮನಗಂಡು, ಅಂತಹವರಿಗೆ ನೆರವಾಗಲು ಮೋದಿ ಮತ್ತು ತಂಡ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಆ ಮೂಲಕ ಜನರಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ಮೂಲಕ ದೇಶವನ್ನು ಆರೋಗ್ಯಪೂರ್ಣವಾಗಿ ನಿರ್ಮಿಸುವ ಪಣ ತೊಟ್ಟು ಕಾರ್ಯ ನಿರತವಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಮೋದಿ ಅವರ ಕನಸಿನ ‘ಆಯುಷ್ಮಾನ್ ಭಾರತ್’ ಯೋಜನೆ ನಿಜಕ್ಕೂ ದೂರದರ್ಶಿತ್ವವುಳ್ಳದ್ದಾಗಿದೆ. ಇದು ಜನರಿಗೆ ಆರ್ಥಿಕ ಸ್ಥಿತಿ ಕೆಳ ಹಂತದಲ್ಲಿದ್ದರೂ ಆರೋಗ್ಯದ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮಹತ ಪಡೆದಿದೆ ಎನ್ನಬಹುದು. ಈ ಯೋಜನೆಯಿಂದ ದೇಶದ ಕೋಟ್ಯಂತರ ಜನರು ಉಚಿತ ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ. ಇದು ಅಭಿವೃದ್ಧಿಯಲ್ಲದೆ ಮತ್ತೇನು?. ಹೌದು ದೇಶ ಅಭಿವೃದ್ಧಿ ಹೊಂದಬೇಕಾದರೆ ಆರೋಗ್ಯ ಸುಸ್ಥಿರವಾಗಿರುವುದೂ ಅತೀ ಮುಖ್ಯ. ಆಗಲೇ ಜನರೂ ಬಲಿಷ್ಠರಾಗುತ್ತಾರೆ. ಜೊತೆಗೆ ದೇಶವೂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.