ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಜನರು ತಮ್ಮ ಜೀವ, ಜೀವನವನ್ನು ಬಲಿ ಕೊಟ್ಟಿದ್ದಾರೆ. ಅಂತಹ ಸಾಹಸಿಗಳ ಸಾಲಿನಲ್ಲಿ ಮದನ್ ಲಾಲ್ ಧಿಂಗ್ರ ಸಹ ಒಬ್ಬರು. ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿ ದಿಂಗ್ರ. 1883 ರಲ್ಲಿ ಅಮೃತಸರದ ಶ್ರೀಮಂತ ಕುಟುಂಬವೊಂದರಲ್ಲಿ ಧಿಂಗ್ರ ಅವರ ಜನನವಾಯಿತು. ಈತನ ತಂದೆ ವೈದ್ಯ. ಆ ಕಾಲದಲ್ಲಿಯೇ ಇವರ ತಂದೆ ಸಾಹಿಬ್ ದಿತ್ತಾನಿಗೆ 23 ಮನೆ, 6 ಬಂಗಲೆ, ಕಾರು ಎಲ್ಲವೂ ಇತ್ತು. ಜೊತೆಗೆ ಈತ ಬ್ರಿಟಿಷರಿಗೂ ತೀರಾ ಆಪ್ತನಾಗಿದ್ದವನೂ ಹೌದು.
ಆದರೆ ಮದನ್ ಲಾಲ್ ಧಿಂಗ್ರ ತನ್ನ ತಂದೆಯ ಆಶಯಗಳಿಗೆ ವಿರುದ್ಧ ಮನಸ್ಥಿತಿ ಹೊಂದಿದ್ದವರು. ಇವರಿಗೆ ದೇಶಕ್ಕಿಂತ ದೇವರಿಲ್ಲ ಎಂಬ ಭಾವ. ಬಾಲ್ಯದಲ್ಲಿ ಧಿಂಗ್ರರೂ ಮೋಜು ಮಸ್ತಿ ಎಂಬ ಆಶಯದ ಜೊತೆಗೇ ಕಾಲ ಕಳೆದವರು. ಆದರೆ, ಇವರು ತನ್ನ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸದ ಬಳಿಕ ಕಾಲೇಜು ಶಿಕ್ಷಣಕ್ಕಾಗಿ ಲಾಹೋರಿನ ಕಾಲೇಜಿಗೆ ಸೇರುತ್ತಾರೆ. ಕೆಲವೇ ಸಮಯದಲ್ಲಿ ಕಾಲೇಜು ಮತ್ತು ಇವರ ನಡುವೆ ಸಂಬಂಧ ಸರಿ ಹೊಂದದೆ ಕಾಲೇಜಿನಿಂದ ಹೊರದಬ್ಬಲ್ಪಡುತ್ತಾರೆ. ತಂದೆಯೂ ಮಗನ ವಿರುದ್ಧ ತಿರುಗಿ ಬೀಳುತ್ತಾರೆ. ಪರಿಣಾಮ ದಿಂಗ್ರ ಮನೆ ಬಿಡುವ ಸ್ಥಿತಿ ಬರುತ್ತದೆ. ಆ ಬಳಿಕ ಕೆಲ ಸಮಯ ಜೀವನ ನಡೆಸಲು ಕೆಲಸ ಮಾಡುತ್ತಾರೆ. ಈ ಸಂದರ್ಭದಲ್ಲಿ ಅವರು ಅಕ್ಷರಶಃ ಒಂಟಿ. ಕೊನೆಗೆ ಹಿಗೋ ಹೀಗೋ ಮಾಡಿ ಮನೆ ಸೇರಿ ಉನ್ನತ ವಿದ್ಯಾಭ್ಯಾಸದ ಆಶಯದಿಂದ ಎಂಜಿನಿಯರಿಂಗ್ ಪದವಿ ಪಡೆಯಲು ಇಂಗ್ಲೆಂಡ್ಗೆ ತೆರಳುತ್ತಾರೆ.
ಆವರೆಗೆ ಸ್ವದೇಶ, ಸ್ವಾತಂತ್ರ್ಯ ಎಂಬ ಕಲ್ಪನೆಗಳೇ ಗೊತ್ತಿಲ್ಲದ ದಿಂಗ್ರರಿಗೆ ಇಂಗ್ಲೆಂಡ್ ಮತ್ತೊಂದು ಲೋಕದ ಪರಿಚಯ ಮಾಡುವಲ್ಲಿ ಮುನ್ನುಡಿ ಬರೆಯುತ್ತದೆ. ಇಂಗ್ಲೆಂಡ್ನಲ್ಲಿ ಕಾನೂನು ಪದವಿ ಪಡೆಯಲು ಬಂದಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಹೆಸರು ಪಡೆದ ಯುವಕ ವೀರ ಸಾವರ್ಕರ್ರ ಪರಿಚಯವಾಗುತ್ತದೆ. ಸಾವರ್ಕರ್ ಅಲ್ಲಿ ಭಾರತೀಯ ವಿದ್ಯಾರ್ಥಿಗಳಲ್ಲಿ ಬ್ರಿಟಿಷರ ವಿರುದ್ಧ ಮನಸ್ಥಿತಿ ಬದಲಾಗುವ ಮತ್ತು ದೇಶಕ್ಕೆ ಸ್ವಾತಂತ್ರ್ಯ ಬೇಕೆಂಬ ಕಿಚ್ಚನ್ನು ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದರು. ವೀರ ಸಾವರ್ಕರ್ ಅವರ ತೀಕ್ಷ್ಣ ಭಾಷಣಗಳಿಂದ ಪ್ರಭಾವಿತರಾದ ದಿಂಗ್ರ, ಅಲ್ಲಿಂದಲೇ ಬದಲಾಗತೊಡಗುತ್ತಾರೆ. ಸಾವರ್ಕರ್ ಅವರ ಸಹವಾಸದ ಕೆಲವೇ ಸಮಯದಲ್ಲಿ ಧಿಂಗ್ರ ಸಹ ಓರ್ವ ಮಹಾನ್ ದೇಶಭಕ್ತರ ಸಾಲಿಗೆ ಸೇರಿಕೊಂಡು ಬಿಟ್ಟರು. ಸ್ವಾತಂತ್ರ್ಯದ ಕಿಚ್ಚಾಗಿ ರೂಪುಗೊಂಡಿದ್ದರು.
ವೀರ ಸಾವರ್ಕರ್ ನುಡಿಯುತ್ತಿದ್ದ ‘ಭಾರತವನ್ನು ದಾಸ್ಯದಿಂದ ಮುಕ್ತಗೊಳಿಸಬೇಕು, ಈ ಹೋರಾಟಕ್ಕೆ ಪ್ರತಿಯೊಬ್ಬ ಭಾರತೀಯನೂ ಕೈ ಜೋಡಿಸಬೇಕು, ಬ್ರಿಟಿಷರ ದಬ್ಬಾಳಿಕೆ ಕೊನೆಯಾಗಬೇಕು’ ಎಂಬ ಕಿಚ್ಚಿನ ನುಡಿಗಳು ಅದಾಗಲೇ ದಿಂಗ್ರ ಎಂಬ ಯುವಕನ ಮನಸ್ಸಿನ ಆಳದಲ್ಲಿ ಬೇರೂರಿ ಬಿಟ್ಟಿತ್ತು. ಇತ್ತ ಸಾವರ್ಕರ್ ಅವರ ಈ ಪ್ರಯತ್ನಕ್ಕೆ ಬ್ರಿಟಿಷರು ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಮೂಲಕ ಅಡ್ಡಗಾಲು ಹಾಕುತ್ತಲೇ ಬಂದಿದ್ದರು. ಈ ಸಂದರ್ಭಕ್ಕೆ ಪೂರಕ ಎಂಬಂತೆ ಭಾರತದಲ್ಲಿ ಖುದೀರಾಂ ಬೋಸ್, ಕನಯ್ಯ ಲಾಲ್ ದತ್ತಾ ಮತ್ತು ಸತ್ಯೇಂದ್ರ ಬೋಸ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಈ ಘಟನೆ ಸ್ವಾಭಿಮಾನಿ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತಷ್ಟು ರೋಷವನ್ನು ಉಂಟುಮಾಡಿತು.
ಇದೇ ಸಂದರ್ಭದಲ್ಲಿ ಸಾವರ್ಕರ್ ಅವರ ಸಹೋದರನನ್ನು ಬ್ರಿಟಿಷರು ಅಂಡಮಾನ್ ಜೈಲಿಗೆ ಕಳಿಸುತ್ತಾರೆ. ಈ ಎಲ್ಲ ಘಟನೆಗಳೂ ಇಂಗ್ಲೆಂಡ್ನಲ್ಲಿ ಸಾವರ್ಕರ್ ಜೊತೆಗಿದ್ದ ಭಾರತೀಯ ದೇಶಪ್ರೇಮಿಗಳಲ್ಲಿ ಮತ್ತಷ್ಟು ಕ್ರೋಧ ಉಕ್ಕುವಂತೆ ಮಾಡಿತು. ಈ ಸಂದರ್ಭದಲ್ಲಿ ಯಾವುದೋ ಒಂದು ದೃಢ ನಿಶ್ಚಯ ಮಾಡಿದ ದಿಂಗ್ರ, ಬ್ರಿಟಿಷ್ ಅಧಿಕಾರಿ ಸರ್ ವಿಲಿಯಂ ಕರ್ಜನ್ ವೈಲಿ ಎಂಬಾತನ ಪ್ರಾಣವನ್ನು ತೆಗೆದು ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡುವತ್ತ ಮನಸ್ಸು ಮಾಡುತ್ತಾರೆ. 1909/7/1 ರಂದು ಇಂಗ್ಲೆಂಡ್ನಲ್ಲಿ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ವಾರ್ಷಿಕೋತ್ಸವ ಸಂದರ್ಭದಲ್ಲಿ ವೈಲಿ ಪ್ರಧಾನ ಭಾಷಣಕಾರನಾಗಿದ್ದ. ಈ ವಿಚಾರ ಅರಿತ ದಿಂಗ್ರ ಆ ಸಭೆಗೆ ಹಾಜರಾಗುತ್ತಾರೆ. ರಾತ್ರಿ ಸುಮಾರು ಹತ್ತರ ಸಮಯ. ವೈಲಿ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿಯುವ ವೇಳೆ ದಿಂಗ್ರ ಯಾರಿಗೂ ಅನುಮಾನ ಬಾರದಂತೆ ವೈಲಿ ಬಳಿ ತೆರಳಿ ತನ್ನ ಕೈಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರು. ಈ ಸಂದರ್ಭದಲ್ಲಿ ವೈಲಿಯ ರಕ್ಷಣೆಗೆ ಬಂದ ಪಾಸರ್ ಕೂಡಾ ಬಲಿಯಾಗುತ್ತಾನೆ.
ಇದಾದ ಬಳಿಕ ಅವರು ಅಲ್ಲಿಂದ ತಪ್ಪಿಸಿಕೊಳ್ಳಲಿಲ್ಲ. ಬದಲಾಗಿ ಹಿಂದೆ ಜರ್ಮನಿ ವಿರುದ್ಧ ಇಂಗ್ಲೆಂಡ್ ಯಾವ ಕೆಲಸವನ್ನು ಮಾಡಿತ್ತೋ, ಈಗ ಭಾರತವನ್ನು ಉಳಿಸಲು ನಾನೂ ಅದೇ ಕೆಲಸ ಮಾಡಿದ್ದೇನೆ ಎಂದು ದಿಂಗ್ರ ರಾಜಾರೋಷದಿಂದ ಹೇಳುತ್ತಾರೆ. ಈ ಕೃತ್ಯವೆಸಗಿದ ಕಾರಣಕ್ಕೆ ಮದನ್ ಲಾಲ್ ದಿಂಗ್ರ ನನ್ನು ಬಂಧನಕ್ಕೆ ಒಳಪಡಿಸಲಾಗುತ್ತದೆ. ಹತ್ತು ದಿನಗಳ ಕಾಲ ಅವರು ಬಂಧನದಲ್ಲಿ ಇರಬೇಕಾಯಿತು. ಹೆಸರಿಗೆ ಮಾತ್ರ ಎಂಬಂತೆ ಒಂದು ದಿನ ಈ ವಿಚಾರಕ್ಕೆ ಸಂಬಂಧಿಸಿದಂತೆ ಧಿಂಗ್ರಗ್ರನ ವಿಚಾರಣೆಯನ್ನು ಬ್ರಿಟಿಷರು ನಡೆಸಿದರು. ಆತನಿಗೆ ಬ್ರಿಟಿಷ್ ಸರ್ಕಾರ ಗಲ್ಲು ಶಿಕ್ಷೆ ವಿಧಿಸಿತು. 199 ರ ಆಗಸ್ಟ್ 17 ರಂದು ಅವನಿಗೆ ಗಲ್ಲು ಶಿಕ್ಷೆ ನೀಡಲು ಸೂಚಿಸಲಾಗಿತ್ತು.
ಇದೇ ಸಂದರ್ಭದಲ್ಲಿ ದಿಂಗ್ರನನ್ನು ಸಾವರ್ಕರ್ ಭೇಟಿ ಮಾಡಿದರು. ಈ ವೇಳೆ ಧಿಂಗ್ರ ‘ನನ್ನ ಸಾವು ಬ್ರಿಟಿಷ್ ಆಡಳಿತಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ನನ್ನ ಅಂತಿಮ ಸಂಸ್ಕಾರ ಭಾರತೀಯ ಸಂಸ್ಕೃತಿಯಂತೆಯೇ ನಡೆಯಬೇಕು. ನನ್ನ ಹೆಣವನ್ನು ಬ್ರಿಟಿಷರು ಮುಟ್ಟಬಾರದು. ನನ್ನ ವಸ್ತುಗಳನ್ನು ಹರಾಜು ಹಾಕಿ ಅದರಿಂದ ದೊರೆತ ಮೌಲ್ಯವನ್ನು ನ್ಯಾಷನಲ್ ಫಂಡ್ಗೆ ನೀಡಬೇಕು’ ಎಂದು. ಈ ಸಂದರ್ಭದಲ್ಲಿ ದಿಂಗ್ರರಿಗೆ ಕೇವಲ 24 ವರ್ಷ. ತನ್ನ ಸಾವಿನ ದಿನಗಣನೆ ನಡೆಯುತ್ತಿದ್ದರೂ ಎದೆಗುಂದದ ಈ ಸ್ವಾಭಿಮಾನಿ ವೀರ ಹುಡುಗ, ದೇಶದ ಸ್ವಾತಂತ್ರ್ಯ, ಭಾರತಾಂಬೆಯ ದಾಸ್ಯ ವಿಮೋಚನೆ ಇಷ್ಟನ್ನೇ ಬಯಸುತ್ತಿದ್ದರು. ಇದು ದೇಶಭಕ್ತಿಯ ಕಿಚ್ಚಲ್ಲದೆ ಈ ಎದೆಗಾರಿಕೆಗೆ ಮತ್ತಿನ್ನೇನು ಹೆಸರಿಡಲು ಸಾಧ್ಯ?. ಅವರು ತನಗೆ ಇನ್ನೊಂದು ಜನ್ಮವಿದ್ದರೆ ಅದು ಭಾರತಾಂಬೆಯ ಮಡಿಲಲ್ಲೇ ಆಗಬೇಕು ಎಂಬ ಆಶಯದ ಜೊತೆಗೆ ನೇಣು ಕುಣಿಕೆಗೆ ಕೊರಳೊಡ್ಡಿದ್ದರು.
ಇವರ ಸಾವು ಭಾರತ ದೇಶದ ತುಂಬೆಲ್ಲ ಸುದ್ದಿಯಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಮನಸ್ಸಿನಲ್ಲಿದ್ದ ಬ್ರಿಟಿಷರ ವಿರುದ್ಧದ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ. ಬ್ರಿಟಿಷರ ವಿರುದ್ಧ ಹೋರಾಟ ಮತ್ತಷ್ಟು ತೀಕ್ಷ್ಣವಾಗುತ್ತದೆ. ಆದರೆ ಇವರ ತಂದೆ ಬ್ರಿಟಿಷರ ಅನುಯಾಯಿಯಾಗಿದ್ದರಿಂದ ಮಗನ ಸಾವಿಗೆ ಮರುಗುವುದಿರಲಿ, ಬದಲಾಗಿ ಈತ ತನ್ನ ಮಗನೇ ಅಲ್ಲವೆಂದು ತಿಳಿಸುತ್ತಾನೆ. ಆದರೆ ಇಡೀ ಭಾರತದ ದೇಶದ ಅನೇಕ ಮನೆಗಳಲ್ಲಿ, ಮನಗಳಲ್ಲಿ ಮದನ್ ಲಾಲ್ ಧಿಂಗ್ರ ಮನೆ ಮಗನಾಗಿ ನೆಲೆಯೂರಿ ಬಿಟ್ಟಿರುತ್ತಾರೆ. ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಕಣ್ಣಿನಲ್ಲಿ ಧಿಂಗ್ರ ಸಾವಿಗೆ ಕಣ್ಣೀರು ಹರಿಯುತ್ತದೆ. ಯುವ ಮನಗಳಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಮತ್ತಷ್ಟು ತೀಕ್ಷ್ಣಗೊಳಿಸುವಲ್ಲಿ ದಿಂಗ್ರನ ಸಾವು ಕೆಲಸ ಮಾಡುತ್ತದೆ.
ಕೆಲವರು ಹೇಳುತ್ತಾರೆ, ಕೇವಲ ಅಹಿಂಸಾತ್ಮಕ ಚಳುವಳಿಗಳ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು. ಆದರೆ ಆ ಅಂಶ ಕೊಂಚ ಮಟ್ಟಿಗೆ ನಿಜವಾದರೂ, ಇಂತಹ ಕ್ರಾಂತಿಕಾರಿಗಳ ಹೋರಾಟ ದೇಶದ ಸ್ವಾತಂತ್ರ್ಯದ ವಿಚಾರದಲ್ಲಿ ಹೆಚ್ಚಿನ ಪಾಲನ್ನು ನೀಡಿದೆ ಎಂಬುದನ್ನು ನಾವು ಒಪ್ಪಲೇ ಬೇಕಾಗುತ್ತದೆ. ಭಾರತದ ದಾಸ್ಯ ವಿಮೋಚನೆಗೆ ಧಿಂಗ್ರನಂತಹ ಅದೆಷ್ಟೋ ಭಾರತೀಯರು ತಮ್ಮ ಜೀವದಾನ ಮಾಡಿದ ಇತಿಹಾಸ ಇಂದಿನ ಯುವಕರಿಗೆ ಸ್ಫೂರ್ತಿಯೂ ಹೌದು. ಇತಿಹಾಸದ ಆ ಪುಟಗಳನ್ನು ತಿರುಗಿಸಿದಾಗ ಇವರುಗಳ ಸಾಹಸಕ್ಕೆ ಮೈ ರೋಮಾಂಚನಗೊಳ್ಳದೇ ಇರದು.
ಹೌದು, ಭಾರತೀಯತೆ, ಸ್ವಾತಂತ್ರ್ಯ ಎಂಬ ಕಲ್ಪನೆಗಳೇ ಇರದ ದಿಂಗ್ರ, ಅಂತಹ ವಾತಾವರಣದಲ್ಲಿಯೇ ಬೆಳೆಯದ ಧಿಂಗ್ರ ಸಾವರ್ಕರ್ ಸಹವಾಸದಿಂದ ಇಂಗ್ಲೆಂಡ್ನಲ್ಲಿದ್ದ ಮೂರು ವರ್ಷಗಳಲ್ಲೇ ದೇಶಭಕ್ತನಾಗಿ ಮಾರ್ಪಾಡು ಹೊಂದಿದ್ದು ಒಂದು ಇತಿಹಾಸವೇ ಹೌದು. ಅಲ್ಲದೆ ದೇಶದ ಸ್ವಾತಂತ್ರ್ಯದ ವಿಚಾರದಲ್ಲಿ ತನ್ನದೂ ಪಾಲಿರಬೇಕು, ತಾನು ಮಾಡುವ ಆ ಕಾರ್ಯ ಬ್ರಿಟಿಷರಿಗೆ ಎಚ್ಚರಿಕೆಯ ಸಂದೇಶವಾಗಬೇಕು ಎಂಬ ದಿಂಗ್ರನ ಆ ದೃಢ ನಿಶ್ಚಯ ಅವರನ್ನು ಭಾರತೀಯ ಮನೆ ಮಗನಂತಾಗಿಸಿದ್ದು ಆತನ ಸಾಹಸ, ಸಾಧನೆಗೆ ಸಿಕ್ಕ ಜಯವೇ ಸರಿ. ಕೇವಲ 24 ವರ್ಷದಲ್ಲಿಯೇ ದೇಶಕ್ಕಾಗಿ ಹುತಾತ್ಮನಾದ ಮದನ್ ಲಾಲ್ ದಿಂಗ್ರ ಅವರ ಜನ್ಮ ದಿನವಿಂದು.
ಈ ಸುಸಂದರ್ಭದಲ್ಲಿ ನಾವೂ ದೇಶಕ್ಕಾಗಿ ಹೋರಾಡುತ್ತೇವೆ, ದೇಶ ವಿರೋಧಿ ಶಕ್ತಿಗಳ ವಿರುದ್ಧ ನಮ್ಮ ಹೋರಾಟ.. ಭಾರತದ ಅನ್ನ ತಿಂದು ಭಾರತಕ್ಕೇ ಎರಡು ಬಗೆಯುವ ಶಕ್ತಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ನಮ್ಮ ಹೋರಾಟ ಎಂಬಂತೆ ನಾಡು, ನಾಡಿನ ರಕ್ಷಣೆಗಾಗಿ ಕಂಕಣಬದ್ಧರಾಗೋಣ. ದೇಶದ ಸಂಪೂರ್ಣ ಪ್ರಗತಿ, ಅಭಿವೃದ್ಧಿಗೆ ಸವಾಲಾಗುವ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸುವತ್ತ ಚಿತ್ತ ಹರಿಸೋಣ. ಇದೇ ನಾವು ಅಂದರೆ ದೇಶಭಕ್ತ ಭಾರತೀಯರು ದಿಂಗ್ರ ಅವರಂತಹ ಅಗಣಿತ ಕ್ರಾಂತಿಕಾರಿ ವೀರರಿಗೆ ಸಲ್ಲಿಸುವ ನಿಜವಾದ ಗೌರವ.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.