ವಯಸ್ಸು 70. ಆದರೆ ಹುರುಪು 20 ರದ್ದು. ಯೋಚನಾ ಲಹರಿಗೂ ಮುಪ್ಪು ಬಂದಿಲ್ಲ. ಈ ವಯಸ್ಸಿನಲ್ಲಿಯೂ ತೇಜಸ್ವಿ ಕಂಗಳು, ಬತ್ತದ ಉತ್ಸಾಹ. ನಾನು ದೇಶಕ್ಕಾಗಿ, ದೇಶದ ಜನರಿಗಾಗಿ ಏನೋ ಮಾಡಬೇಕಲ್ಲಾ ಎಂಬ ತುಡಿತ. ಅದಕ್ಕಾಗಿ ಕೇವಲ ಆರೇ ವರ್ಷದಲ್ಲಿ ಸಾಲು ಸಾಲು ಜನಸ್ನೇಹಿ ಯೋಜನೆಗಳು. ಚಿಂತೆಗೆ ದಾರಿಯೇ ಸಾಧ್ಯವಿಲ್ಲ ಎಂಬಂತ ಸಾವಿರಾರು ಚಿಂತನಾ ಲಹರಿಗಳ ಯಶಸ್ವಿ ಅನುಷ್ಠಾನ. ತಮ್ಮ ಕಾರ್ಯದ ಮೂಲಕವೇ ವಿರೋಧಿಗಳಿಗೆ ಭಯ ಹುಟ್ಟಿಸಿರುವ ಭಾರತದ ಹೆಮ್ಮೆಯ ಸರದಾರ ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ ಅವರ ಜೀವನವೇ ಯುವ ಜನರಿಗೆ ಸ್ಫೂರ್ತಿಯ ಸೆಲೆ ಎನ್ನಬಹುದು.
ಅವರು ಭಾರತದ ಪ್ರಧಾನಿ ಅಭ್ಯರ್ಥಿ ಎಂದು 2014 ರ ಚುನಾವಣಾ ಸಂದರ್ಭದಲ್ಲಿ ಘೋಷಣೆಯಾಗುತ್ತಿದ್ದಂತೆಯೇ ವಿರೋಧಿಗಳ, ಭಾರತವನ್ನು ಹುರಿದು, ಹರಿದು ಮುಕ್ಕುತ್ತಿದ್ದ ವಿರೋಧಿಗಳ ಎದೆಯಲ್ಲಿ ನಡುಕ ಆರಂಭವಾಗಿತ್ತು. ಗುಜರಾತ್ನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮೋದಿ ಅವರು ಆಯ್ಕೆಯಾದ ಬಳಿಕ ಅಲ್ಲಿನ ಅಭಿವೃದ್ಧಿ ಕಾರ್ಯಗಳು, ಅಲ್ಲಿ ಬೀಸಿದ ಸಕಾರಾತ್ಮಕ ಬದಲಾವಣೆಯ ಗಾಳಿ ಮೋದಿ ಅವರನ್ನು ರಾಷ್ಟ್ರೀಯ ಮಟ್ಟದ ನಾಯಕನಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದು ಯಾವುದೇ ಸಂದೇಹವಿಲ್ಲದೆ ನಾವು ಹೇಳಬಹುದು. ಇವರನ್ನು ಭಾರತೀಯ ಜನತಾ ಪಕ್ಷ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ದೇಶದ ಪುಟ್ಟ ಹಳ್ಳಿಯ ಸಾಮಾನ್ಯ ವ್ಯಕ್ತಿಯೂ ಅವರನ್ನು ಒಪ್ಪಿಕೊಂಡದ್ದು, ಅವರ ಗೆಲುವಿಗಾಗಿ ಪ್ರಾರ್ಥನೆ ಮಾಡಿದ್ದು ಮೋದಿ ಅವರ ಎಲ್ಲರನ್ನೊಳಗೊಳ್ಳುವ ಅಭಿವೃದ್ಧಿಯ ದೃಷ್ಟಿಕೋನ ಜನಮಾನಸದಲ್ಲಿ ಮನೆಮಾತಾಗಿದೆ ಎಂಬುದಕ್ಕೆ ಸಾಕ್ಷಿ ನುಡಿಯುವಂತಿತ್ತು. ಆ ಸಂದರ್ಭದಿಂದ ಈ ವರೆಗೂ ದೇಶದ ಹೆಚ್ಚಿನ ಜನರ ಬಾಯಲ್ಲಿ (ಪುಟಾಣಿ ಮಕ್ಕಳಿಂದ ಹಿಡಿದು ವಯೋ ವೃದ್ಧರ ವರೆಗೆ) ನಮೋ ಮಂತ್ರ ಕೇಳಿ ಬರುತ್ತಿದೆ. ಈ ಮಂತ್ರ ಜಗತ್ತಿನಾದ್ಯಂತ ಅನುರಣಿಸುತ್ತಿದೆ. ಹೌದು ಮೋದಿ ಅವರು ಇಂದು ವಿಶ್ವ ನಾಯಕನ ಮಟ್ಟಕ್ಕೆ ಬೆಳೆದಿದ್ದಾರೆ. ಜೊತೆಗೆ ಭಾರತ ದೇಶದ ಕೀರ್ತಿಯನ್ನು, ಅಭಿವೃದ್ಧಿಯನ್ನು ಇಡೀ ಪ್ರಪಂಚದ ಹಲವು ರಾಷ್ಟ್ರಗಳಿಗೆ ತಲುಪಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.
ಇದಕ್ಕೆ ಹಲವಾರು ಉದಾಹರಣೆಗಳು ನಮಗೆ ಸಿಗುತ್ತವೆ. ಅದರಲ್ಲಿ ಒಂದನ್ನು ನಾವಿಲ್ಲಿ ನೆನಪಿಸಿಕೊಳ್ಳುವುದಾದರೆ, ‘ವಿಶ್ವದ ದೊಡ್ಡಣ್ಣ ಎಂದೇ ಹೆಸರಾಗಿದ್ದ ಅಮೆರಿಕ ಮೋದಿ ಅವರು ಪ್ರಧಾನಿಯಾಗುವುದಕ್ಕೂ ಮೊದಲು ಅವರಿಗೆ ಅಮೆರಿಕ ದೇಶಕ್ಕೆ ಪ್ರಯಾಣ ಕೈಗೊಳ್ಳುವುದಕ್ಕೆ ನಿಷೇಧ ಹೇರಿತ್ತು. ಆದರೆ ಇಂದಿನ ಸ್ಥಿತಿಯಲ್ಲಿ ಅದೇ ಅಮೆರಿಕ ಮೋದಿ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ಕೋರಿ ಆಹ್ವಾನಿಸುವ ಮಟ್ಟಕ್ಕೆ ಮೋದಿ ಅವರ ಸಾಧನೆ ಹರಡಿದೆ. ಜೊತೆಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿಯೂ ಮೋದಿ ಅವರ ಹೆಸರಿನಲ್ಲಿ ಗೆಲ್ಲುವ ಪ್ರಯತ್ನ ನಡೆಯುತ್ತಿದೆ’. ಒಬ್ಬ ವ್ಯಕ್ತಿ ಸಮರ್ಥ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ.
ನಡೆಯುವ ಹಾದಿಯಲ್ಲಿ ಧರ್ಮವಿದ್ದರೆ, ಮಾಡುವ ಕರ್ಮ ನಿಷ್ಕಲ್ಮಶವಾಗಿದ್ದರೆ ಗೆಲುವು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಆ ವರೆಗೆ ಕಾಯುವ ತಾಳ್ಮೆ ನಮ್ಮಲ್ಲಿರಬೇಕು. ಇದಕ್ಕೆ ಸಾಕ್ಷಿ ಮೋದಿ ಅವರ ಜೀವನ. ಯಾರಾದರೂ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ ಎಂದಾದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಅದಕ್ಕೆ ಮೋದಿ ಅವರ ಜೀವನವೂ ಹೊರತಾಗಿರಲಿಲ್ಲ. ಆದರೆ ಅದಕ್ಕೆ ತಲೆ ಕೆಡಿಸಿಕೊಂಡು, ಅದಕ್ಕೆ ಉತ್ತರಿಸುತ್ತಾ ಕುಳಿತುಕೊಂಡರೆ ಅಂದುಕೊಂಡ ಗುರಿ ತಲುಪಲು ಸಾಧ್ಯವಿಲ್ಲ. ಈ ಮಾತನ್ನು ನಮೋ ಚೆನ್ನಾಗಿ ಅರಿತುಕೊಂಡಿದ್ದವರು. ಅವರನ್ನು ಟೀಕಿಸಿದವರಿಗೆ ಮೋದಿ ಉತ್ತರ ಕೊಡುತ್ತಾ ಕೂರಲಿಲ್ಲ. ಬದಲಾಗಿ ತಮ್ಮ ಸಾಧನೆಯ ಮೂಲಕವೇ ವಿರೋಧಿಗಳಿಗೆ ಸರಿ, ತಪ್ಪುಗಳನ್ನು ಮನವರಿಕೆ ಮಾಡಿ ಕೊಡುವ ಕೆಲಸಕ್ಕೆ ಮುಂದಾದರು. ತಮ್ಮ ಬಗ್ಗೆ ತಿಳಿದೋ, ತಿಳಿಯದೆಯೋ ತಪ್ಪು ಅಭಿಪ್ರಾಯ ಹಬ್ಬಿಸಿದವರ ಬಗ್ಗೆ ಚಿಂತಿಸಲಿಲ್ಲ. ಬದಲಾಗಿ ಪ್ರಧಾನಿಯಾಗಿ ದೇಶದ ಸಾಮಾನ್ಯ ಜನರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕೆಲಸ ಮಾಡಿದರು. ಜನಸ್ನೇಹಿ ಆಡಳಿತ ನೀಡುವ ಮೂಲಕ ಭಾರತೀಯರ ಮನಸ್ಸು ಗೆದ್ದರು. ಭಾರತವನ್ನು ವಿಶ್ವ ಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡಿದರು.
ವಿರೋಧಿಗಳಿಗೆ ಉರಿ ಏರಿತು. ಮೋದಿ ಅವರ ಬಗ್ಗೆ, ಅವರ ಆಡಳಿತದ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನ ನಡೆಸಿದರು. ಆದರೆ ಮೋದಿ ಈ ಬಗ್ಗೆ ಚಿಂತಿಸಲಿಲ್ಲ. ಜನರೂ ಮೋದಿ ಅವರ ಮೇಲೆ ನಂಬಿಕೆ ಕಳೆದುಕೊಳ್ಳಲಿಲ್ಲ. ವಿರೋಧಿಗಳಿಗೆ ಈಗ ಕೊಳ್ಳೆ ಹೊಡೆಯಲು ತಮಗೇನೂ ಸಿಗುತ್ತಿಲ್ಲ ಎಂಬ ನೋವು ಒಂದು ಕಡೆಯಾದರೆ, ಹೀಗೇ ಮುಂದುವರಿದರೆ ಮುಂದೊಮ್ಮೆ ನಾವು ಇದ್ದೇವೆ ಎಂಬುದನ್ನೇ ಜನರು ಮರೆತು ಬಿಡುವರಲ್ಲಾ ಎಂಬ ಪುಕಪುಕ, ತಳಮಳ. ಇದಕ್ಕಾಗಿ ಮೋದಿ ಸರ್ಕಾರದ ಮೇಲೂ ಸಾಲು ಸಾಲು ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವ ಅನ್ಯಾಯದ ಹಾದಿಗೆ ಇಳಿದಿರುವುದು ಹಾಸ್ಯಾಸ್ಪದ. ಏಕೆಂದರೆ ಅನ್ಯಾಯದ ಕೋಟೆಗೆ ಬಾಳಿಕೆ ಕಡಿಮೆ. ನ್ಯಾಯದ ಕೋಟೆ ಕಟ್ಟಲು ಹೆಚ್ಚು ಸಮಯ ಹಿಡಿಯುತ್ತದೆ. ಆದರೆ ಅದನ್ನು ಒಡೆಯಲು ಅಸಾಧ್ಯ. ಮೋದಿ ಅವರ ನ್ಯಾಯ ಸಮ್ಮತ ಕೆಲಸಗಳ ಮುಂದೆ, ವಿರೋಧಿಗಳ ಅನ್ಯಾಯದ ಆಟ ಟುಸ್ ಪಟಾಕಿಯಂತೆ. ಸದ್ದು ಮಾಡುತ್ತದೆ. ಆದರೆ ಸುದ್ದಿಯಾಗುವುದಿಲ್ಲ. ನಕಾರಾತ್ಮಕ ಪರಿಣಾಮ ಬೀರುವಲ್ಲಿಯೂ ವಿಫಲವಾಗುತ್ತಿದೆ. ಏಕೆಂದರೆ ಈಗ ಮೋದಿ ಜನರೊಂದಿಗಿದ್ದಾರೆ. ಹಾಗೆಯೇ ಜನತೆ ಮೋದಿ ಅವರ ಜೊತೆಗಿದ್ದಾರೆ.
ಮೋದಿ ಪ್ರಧಾನಿಯಾದ ಬಳಿಕ ಭ್ರಷ್ಟಾಚಾರ ಕಡಿಮೆಯಾಗಿದೆ. ಅಧಿಕಾರಿಗಳು ಹೆಚ್ಚು ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಹಾಗಾಗಿದೆ. ಬಡವರಿಗೆ ಆರ್ಥಿಕ, ಸಾಮಾಜಿಕ, ಆಹಾರ, ಶೈಕ್ಷಣಿಕ ಭದ್ರತೆ ದೊರೆಯುವಂತಾಗಿದೆ. ಭಾರತದ ಪ್ರತಿಭೆಗಳಿಗೆ ಭಾರತದಲ್ಲಿಯೇ ತಮ್ಮ ಕೌಶಲಗಳನ್ನು ಪ್ರದರ್ಶನ ಮಾಡುವ ವೇದಿಕೆ ನಿರ್ಮಾಣವಾಗಿದೆ. ತಪ್ಪಿತಸ್ಥರು ತಪ್ಪಸಿಕೊಳ್ಳಲು ಸಾಧ್ಯವಾಗದ ಕಾನೂನುಗಳು ಜಾರಿಯಾಗಿವೆ, ದೇಶದ ಭದ್ರತಾ ದೃಷ್ಟಿಯಿಂದ ಸೇನೆಗೆ ಸಂಪೂರ್ಣ ಸ್ವತಂತ್ರ, ಅವರ ಅಗತ್ಯತೆಗಳ ಪೂರೈಕೆಗೆ ಬೇಕಾದ ವ್ಯವಸ್ಥೆ ಮೋದಿ ಸರ್ಕಾರ ಮಾಡಿಕೊಟ್ಟಿದೆ. ಸೇನೆಗೆ ಹೆಚ್ಚಿನ ಬಲ ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ಸಾಮಾನ್ಯ ಜನರಿಗೂ ಉದ್ಯೋಗದ ಭರವಸೆ, ಸ್ವ ಉದ್ಯೋಗದ ದೃಷ್ಟಿಯಿಂದ ಸಾಲ ಸೌಲಭ್ಯ, ಉಚಿತ ಎಲ್ಪಿಜಿ, ಒನ್ ನೇಷನ್, ಒನ್ ರೇಷನ್, ಆರೋಗ್ಯ ಕಾರ್ಡ್ಗಳು ಹೀಗೆ ಇನ್ನೂ ಅನೇಕ ಸಾಲು ಸಾಲು ಯೋಜನೆಗಳ ಮೂಲಕ ಭಾರತ ಬಲಿಷ್ಠವಾಗುವತ್ತ ಹೆಜ್ಜೆ ನೆಟ್ಟಿದೆ. ಕೊರೋನಾ ಸಂದರ್ಭದಲ್ಲಿಯಂತೂ ಆರ್ಥಿಕ ಕ್ಷೇತ್ರ ಸಮತೋಲನ ಕಳೆದುಕೊಂಡಾಗಲೂ, ಅದನ್ನು ಬ್ಯಾಲೆನ್ಸ್ ಮಾಡಿದ ಮೋದಿ ವೈಖರಿಗೆ ಹ್ಯಾಟ್ಸ್ ಅಪ್ ಹೇಳಲೇಬೇಕು.
ಇನ್ನು ಕೊರೋನಾ ಸಂದರ್ಭದಲ್ಲಿ ಇಡೀ ವಿಶ್ವ ತಲೆಗೆ ಕೈಹೊತ್ತು ಕುಳಿತಾಗ, ಭಾರತ ಮಾತ್ರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಈ ಸಂದರ್ಭವನ್ನು ಅವಕಾಶವಾಗಿ ಪರಿವರ್ತನೆ ಮಾಡಿಕೊಳ್ಳುವತ್ತಲೇ ಚಿಂತನೆ ನಡೆಸಿ ಅದಕ್ಕೆ ಪೂರಕ ಹಾದಿಯನ್ನು ಸೃಷ್ಟಿಸಿ ಜಗತ್ತಿಗೆ ಬೆರಗು ಮೂಡಿಸಿತ್ತು. ಇದರ ಪರಿಣಾಮ ಎಂಬಂತೆ ಈ ಹಿಂದೆ ಭಾರತದಲ್ಲಿ ಉತ್ಪಾದನೆ ಆಗದೇ ಇದ್ದ ವೈದ್ಯಕೀಯ ಸಲಕರಣೆಗಳು ಈಗ ಭಾರತದಲ್ಲಿ ಉತ್ಪಾದನೆಯಾಗಹತ್ತಿವೆ. ಅನೇಕ ಆಸ್ಪತ್ರೆಗಳು ಆರಂಭವಾಗಿವೆ. ನಿಷ್ಠಾವಂತ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಕೃಷಿ ಕ್ಷೇತ್ರದಲ್ಲಿ ಅಮೋಘ, ಸಕಾರಾತ್ಮಕ ಬದಲಾವಣೆಯಾಗಿದೆ. ಚೀನಾ ಜೊತೆಗಿನ ಲಡಾಕ್ ಸಂಘರ್ಷದ ಬಳಿಕ ಭಾರತೀಯರಿಂದಲೇ ಸ್ವದೇಶೀ ಚಳುವಳಿಯನ್ನು ಆತ್ಮನಿರ್ಭರ ಭಾರತ ಕನಸಿನ ಮೂಲಕ ಸಾಕಾರಗೊಳಿಸಲು ಪ್ರಯತ್ನವನ್ನು ನಮೋ ಸರ್ಕಾರ ನಡೆಸಿದೆ. ಇದಕ್ಕಾಗಿ ಜನರಿಗೆ ಬೇಕಾದ ಎಲ್ಲಾ ಪೂರಕ ಅಗತ್ಯಗಳನ್ನು ಕೇಂದ್ರ ಬಿಜೆಪಿ ಒದಗಿಸುತ್ತಿದೆ. ದೇಶದ ಕೋಟ್ಯಂತರ ಜನರ ಬಹು ಕಾಲದ ಕನಸು ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ನಮ್ಮ ಹಿರಿಯರ ಕನಸಾಗಿದ್ದ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನಿಷೇಧದ ಕನಸು ನನಸಾಗಿದೆ.
ಹೀಗೆ ಹತ್ತು ಹಲವು ಅಭಿವೃದ್ಧಿ ಚಿಂತನೆಗಳ, ಕಾರ್ಯಗಳ ಮೂಲಕವೇ ಮೋದಿ 70 ರ ವಯಸ್ಸಿನಲ್ಲೂ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಜೊತೆಗೆ ಅವರನ್ನು ಪ್ರೀತಿಸುವ ಭಾರತೀಯರಿಗೆ ಅಭಿವೃದ್ಧಿಯ ಮಂತ್ರದ ಮೂಲಕವೇ ನ್ಯಾಯ ಒದಗಿಸಿಕೊಡುವ ಕೆಲಸವನ್ನು ನಿಸ್ವಾರ್ಥದಿಂದ ಮಾಡುತ್ತಿದ್ದಾರೆ. ತಮಗೆ, ತಮ್ಮ ಕುಟುಂಬಕ್ಕೆ, ನಮ್ಮವರಿಗಾಗಿ ಎಂಬಂತಿದ್ದ ರಾಜಕಾರಣವನ್ನು ತಮ್ಮ ಕಾರ್ಯ ವೈಖರಿಯ ಮೂಲಕವೇ ದೇಶಕ್ಕಾಗಿ ನಾವು ಎಂಬುದಾಗಿ ಮಾರ್ಪಡಿಸುವ ಮಹತ್ಕಾರ್ಯ ಮೋದಿ ಮಾಡಿದ್ದಾರೆ.
ಸಾಧನೆಯ ಹಾದಿಯಲ್ಲಿ ಅಡೆತಡೆಗಳು ಸಾಮಾನ್ಯ. ಅವುಗಳನ್ನು ದಾಟಿ ಹೊರಟಾಗ ಮಾತ್ರ ಗೆಲುವು ಸಾಧ್ಯ. ಇದಕ್ಕೆ ಸಾಕ್ಷಿ ನಮೋ ಜೀವನ. ದೇಶದ ಅಭಿವೃದ್ಧಿ, ಜನರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ನಾ ಕಂಡ ಭಾರತದ ಅಭಿವೃದ್ಧಿಯ ಮಹಾ ಸಂತ ನರೇಂದ್ರ ಮೋದಿ ಅವರಿಗೆ ಜನುಮ ದಿನದ ಶುಭಾಶಯಗಳು.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.