ಧಾರವಾಡ: ಈ ಬಾರಿಯ ಎಲ್ಲಾ ಹಬ್ಬಗಳ ಮೇಲೆಯೂ ಕೊರೋನಾ ಕರಿನೆರಳು ಹಬ್ಬಿದೆ. ಗಣೇಶ ಚೌತಿಯನ್ನೂ ಬಿಡದ ಈ ಹಬ್ಬ, ನೂರಾರು ವಿಗ್ರಹ ತಯಾರಕರ ಬದುಕಿನ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು.
ಧಾರಾವಾಡದ ವಿಗ್ರಹ ತಯಾರಕ ಕಲಾವಿದ ಮಂಜುನಾಥ್ ಹಿರೇಮಠ್ ಅವರೂ ಕೊರೋನಾ ಸಂಕಷ್ಟದ ಅವಧಿಯಿಂದಾಗಿ ಮೂರ್ತಿ ಕೊಳ್ಳುವವರಿಲ್ಲದೆ ಸಂಕಷ್ಟದ ಸ್ಥಿತಿ ಅನುಭವಿಸುವಂತಾಗಿತ್ತು. ಈ ಹಿಂದೆ ಮೂರ್ತಿಗಳನ್ನು ಮಾಡಲು ಒಪ್ಪಂದ ಮಾಡಿಕೊಳ್ಳುತ್ತಿರುವವರೂ ಈ ಬಾರಿ ಮೂರ್ತಿ ಕೊಳ್ಳಲು ಮುಂದಾಗಿರಲಿಲ್ಲ. ಈ ಸಂಬಂಧ ಗಣೇಶೋತ್ಸವ ಸಂದರ್ಭದಲ್ಲಿ ಅವರು ವಿಡಿಯೋ ಮೂಲಕ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದರು.
ಈ ವಿಡಿಯೋವನ್ನು ಗಮನಿಸಿದ ಅಮೆರಿಕ, ಬಹರೈನ್, ಆಸ್ಟ್ರೇಲಿಯಾ, ಕ್ಯಾಲಿಫೋರ್ನಿಯಾ ಮೊದಲಾದ ದೇಶಗಳಲ್ಲಿರುವ ಅನಿವಾಸಿ ಭಾರತೀಯರು ಅವರಿಂದ ತಯಾರಾದ 25 ಮೂರ್ತಿಗಳನ್ನು ಆನ್ಲೈನ್ ಮೂಲಕವೇ ಖರೀದಿಸಿ, ಅವರಿಂದಲೇ ಚೌತಿಯ ಪೂಜೆ ಮಾಡಿಸಿ ಆನ್ಲೈನ್ ಮೂಲಕವೇ ಆ 25 ಮೂರ್ತಿಗಳಿಗೂ ಏಕ ಕಾಲಕ್ಕೆ ಪೂಜೆ ಮಾಡಿಸಿ ಬಳಿಕ ವಿಸರ್ಜಿಸಲು ಸೂಚಿಸಿದ್ದಾರೆ. ಐದು ದಿನಗಳಲ್ಲಿಯೂ ಇದೇ ರೀತಿ ಶಾಸ್ತ್ರೋಕ್ತವಾಗಿ ಪೂಜೆ ನಡೆಸಿ ಗಣಪತಿಯನ್ನು ಕಲಾವಿದನೇ ಖರೀದಿಸಿದವರ ಹೆಸರಲ್ಲಿ ಸಂಕಲ್ಪಿಸಿ ಪೂಜೆ ನಡೆಸಿದ್ದಾರೆ. ಆ ಮೂಲಕ ವರ್ಚುವಲ್ ಗ್ಲೋಬಲ್ ಗಣೇಶೋತ್ಸವ ಕಾನ್ಸೆಪ್ಟ್ಗೆ ಚಾಲನೆ ಸಿಕ್ಕಿದೆ.
ಈ ಸಂಬಂಧ ಕಲಾವಿದ ಮಂಜುನಾಥ್ ಮಾತನಾಡಿದ್ದು, ಈ ಬಾರಿ ಸೋಂಕಿನ ಕಾರಣದಿಂದ ಗಣೇಶೋತ್ಸವಕ್ಕೆ ಸರ್ಕಾರ ಮಿತಿ ಹೇರಿತ್ತು. ಆ ಸಂದರ್ಭದಲ್ಲಿ ಮೂರ್ತಿ ಕೊಳ್ಳುವವರು ತಮ್ಮ ಬುಕ್ಕಿಂಗ್ ರದ್ದುಪಡಿಸಿ ಸಂಕಷ್ಟ ಎದುರಾಗಿತ್ತು. ಇದೇ ಸಂದರ್ಭದಲ್ಲಿ ವಿದೇಶಗಳಲ್ಲಿನ ಅನಿವಾಸಿ ಭಾರತೀಯರು ಮೂರ್ತಿ ಖರೀದಿಸಿ ಸಹಾಯ ಮಾಡಿದ್ದಾರೆ. ಜೊತೆಗೆ ಆನ್ಲೈನ್ ಪೇಮೆಂಟ್, ಅನ್ಲೈನ್ ಪೂಜೆ, ಗಣಪತಿ ವಿಸರ್ಜನೆಯನ್ನು ಆನ್ಲೈನ್ ಮೂಲಕವೇ ಕಣ್ತುಂಬಿಕೊಂಡರು ಎಂದು ತಿಳಿಸಿದ್ದಾರೆ. 25 ಮೂರ್ತಿಗಳನ್ನು ವಿದೇಶದ ಭಾರತೀಯರು ಖರೀದಿಸಿದ್ದರೆ, ಉಳಿದ 15 ಮೂರ್ತಿಗಳನ್ನು ಸ್ಥಳೀಯ ಮಂಡಳಿಗಳು ಖರೀದಿಸಿದ್ದಾಗಿಯೂ ತಿಳಿಸಿದ್ದಾರೆ.
ಜೂಮ್ ಅಪ್ಲಿಕೇಶನ್ ಮೂಲಕ ಪೂಜೆ, ಗಣಹೋಮಗಳಲ್ಲಿ ಮೂರ್ತಿ ಖರೀದಿಸಿದ್ದವರು ಭಾಗವಹಿಸಿ ಪುನೀತರಾದರು ಎಂದು ತಿಳಿಸಿದರು. ಅಲ್ಲದೆ ತಮ್ಮಂತ ಅನೇಕ ಕಲಾವಿದರು ಕೊರೋನಾ ಸೋಂಕಿನಿಂದ ಸಮಸ್ಯೆಗೆ ಗುರಿಯಾಗಿದ್ದು ಅಂತಹ ಎಲ್ಲ ಕಲಾವಿದರಿಗೂ ತಲಾ 10 ಸಾವಿರ ರೂ. ಸಹಾಯ ಧನ ವಿತರಿಸಲು ಅನಿವಾಸಿ ಭಾರತೀಯರು ತೀರ್ಮಾನ ಕೈಗೊಂಡಿದ್ದು, ಆ ಮೂಲಕ ಕಲಾವಿದರ ಸಂಕಷ್ಟಕ್ಕೆ ದನಿಯಾಗಲು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.