ಅನುಭವಿ ಪ್ರಣಬ್ ಮುಖರ್ಜಿ ಅವರು ಇಂದಿರಾ ಗಾಂಧಿ ವಿಧಿಸಿದ ತುರ್ತು ಪರಿಸ್ಥಿತಿಯನ್ನು ನೋಡಿದವರು. ಆದರೆ ಅವರು ಆ ಅವಧಿಯನ್ನು ಹೇಗೆ ವಿವರಿಸುತ್ತಾರೆ ಗೊತ್ತೆ? “… ಆ ಸಮಯದಲ್ಲಿ (ನಾನು ಕಿರಿಯ ಮಂತ್ರಿಯಾಗಿದ್ದೆ) ಅದರ (ತುರ್ತುಸ್ಥಿತಿ) ಆಳವಾದ ಮತ್ತು ದೂರಗಾಮಿ ಪರಿಣಾಮವನ್ನು ಅರ್ಥಮಾಡಿಕೊಳ್ಳಲಿಲ್ಲ” ಎಂದಿದ್ದಾರೆ . ರಾಷ್ಟ್ರಪತಿಯಾಗಿ ಅವರು ತುರ್ತು ಪರಿಸ್ಥಿತಿಯ ‘ಸಕಾರಾತ್ಮಕತೆ’ ಬಗ್ಗೆಯೂ ಮಾತನಾಡಿದ್ದಾರೆ.
ತಮ್ಮ ʼದಿ ಡ್ರಮಾಟಿಕ್ ಡಿಕೇಡ್-ದಿ ಇಂದಿರಾ ಗಾಂಧಿ ಇಯರ್ಸ್ (ಪ್ರಕಟ 2014) ಪುಸ್ತಕದ ʼಜಯಪ್ರಕಾಶ್ ನಾರಾಯಣ್ಸ್ ಅಫೆನ್ಸಿವ್ʼ ಅಧ್ಯಾಯದಲ್ಲಿ ಮುಖರ್ಜಿ ಅವರು ಬರೆಯುತ್ತಾರೆ- “ಇದು ಕೆಲವು ಪ್ರಮುಖ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ ಎಂಬುದರಲ್ಲಿ ಸಂದೇಹವಿಲ್ಲ – ಸಾರ್ವಜನಿಕ ಜೀವನದಲ್ಲಿ ಶಿಸ್ತು, ಬೆಳೆಯುತ್ತಿರುವ ಆರ್ಥಿಕತೆ, ನಿಯಂತ್ರಿತ ಹಣದುಬ್ಬರ, ಮೊದಲ ಬಾರಿಗೆ ವ್ಯತಿರಿಕ್ತ ವ್ಯಾಪಾರ ಕೊರತೆಯಲ್ಲಿ ಸಕಾರಾತ್ಮಕತೆ ಮೂಡಿದೆ ” ಎಂದಿದ್ದರು.
ಡಿಸೆಂಬರ್ 11, 1935 ರಂದು ಜನಿಸಿದ ಅವರು ಜೀವನ ಮತ್ತು ರಾಜಕೀಯ ಎಲ್ಲವನ್ನೂ ಸಂಪೂರ್ಣವಾಗಿ ಅನುಭವಿಸಿದವರು. ಭಾರತೀಯ ರಾಜಕೀಯದ ಅನೇಕ ಅಧ್ಯಾಯಗಳನ್ನು ಅವರು ಹತ್ತಿರದಿಂದ ನೋಡಿದ್ದಾರೆ. ಅವರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಷ್ಟ್ರಪತಿ, ಹಣಕಾಸು ಸಚಿವರು, ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯದ ಉಸ್ತುವಾರಿ ಹೀಗೆ ಅನೇಕ ಹುದ್ದೆಯಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಆದರೆ ಅವರು ಗೃಹ ಖಾತೆಯನ್ನು ತಪ್ಪಿಸಿಕೊಂಡರು. ಯುಪಿಎ-2 ಅವಧಿಯಲ್ಲಿ ಮನಮೋಹನ್ ಸಿಂಗ್ ಅವರ ಸ್ವಂತ ಸಂಪುಟ (ಪಿ ಚಿದಂಬರಂ)ದ ಒಬ್ಬ ಗೃಹ ಸಚಿವರು ಅವರ ಮೇಲೆ ಬೇಹುಗಾರಿಕೆ ನಡೆಸಿದರು ಎಂಬ ಆರೋಪವೂ ಇದೆ.
ತುರ್ತು ಪರಿಸ್ಥಿತಿಯ ಬಗ್ಗೆ ಅವರು ಹೀಗೆ ಹೇಳಿದ್ದಾರೆ: “… ತರ್ಕಬದ್ಧವಾಗಿ ಹೇಳುವುದಾದರೆ ನನಗೆ ಆಂದೋಲನವನ್ನು ಬೆಂಬಲಿಸಲು ಸಾಧ್ಯವಾಗಲಿಲ್ಲ. ನನಗೆ ಅದು ದಿಕ್ಕುದಿಸೆಯಿಲ್ಲದಂತೆ ಗೋಚರಿಸಿತು. ಇದು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಒಂದು ಚಳುವಳಿಯಾಗಿತ್ತು, ಆದರೂ ಸಮಗ್ರತೆಯನ್ನು ಆದ್ಯತೆಯಾಗಿರಿಸದ ಜನರು ಮತ್ತು ಪಕ್ಷಗಳಿಂದ ಕೂಡಿತ್ತು”. ಖಂಡಿತವಾಗಿ, ನಂತರದ ವರ್ಷಗಳಲ್ಲಿ ಪ್ರಣಬ್ ಅವರು ಕಾಂಗ್ರೆಸ್ ನಾಯಕತ್ವಕ್ಕೆ ಮತ್ತು ಪ್ರಧಾನಿ ಕಛೇರಿಗೆ ಸದಾ ಬೇಕಾದ ವ್ಯಕ್ತಿಯಾಗಿ ರೂಪುಗೊಂಡರು.
ಅವರ ಜೀವನವು ಪೂರ್ಣ ಚಕ್ರವಾಗಿತ್ತು. ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಬಿಸಿನೆಸ್ ಮ್ಯಾಗ್ನೇಟ್ ಧೀರೂಭಾಯಿ ಅಂಬಾನಿಯೊಂದಿಗೆ ನಿಕಟವಾಗಿ ಕಾರ್ಯ ಮಾಡಿದರು. ರಾಜೀವ್ ಗಾಂಧಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ ಕೂಡ ಕಾಂಗ್ರೆಸ್ನಿಂದ ದೂರವಾಗಲಿಲ್ಲ ಮತ್ತು ಪಿ.ವಿ.ನರಸಿಂಹ ರಾವ್, ಸೀತಾರಾಮ್ ಕೇಸ್ರಿ ಮತ್ತು ಮತ್ತೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಂ .2 ಸ್ಥಾನ ಪಡೆದರು.
ತನಗಿಂತ ಕಳಗಿದ್ದ ಡಾ.ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡಲು ಅವರು ಹಿಂದೇಟು ಹಾಕಿದವರಲ್ಲ. ಅದೃಷ್ಟ ಮತ್ತು ರಾಜಕೀಯದ ವಿರೋಧಾಭಾಸವೆಂದರೆ 2019 ರಲ್ಲಿ ನರೇಂದ್ರ ಮೋದಿ ಸರ್ಕಾರ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಿತು.
ಅವರ ಸುದೀರ್ಘ ವೃತ್ತಿಜೀವನದಲ್ಲಿ ಪ್ರಣಬ್ ಮುಖರ್ಜಿ ಅವರನ್ನು ಮೂಲಭೂತವಾಗಿ ರಾಜ್ಯಸಭೆಯ ವ್ಯಕ್ತಿಯಾಗಿಯೇ ಇಡಲಾಗಿತ್ತು. 2004 ರಲ್ಲಿ ಮಾತ್ರ ಮುಖರ್ಜಿ ಜಂಗೀಪುರದಿಂದ ತಮ್ಮ ಮೊದಲ ಲೋಕಸಭಾ ಸ್ಥಾನವನ್ನು ಗೆದ್ದಿದ್ದರು.
2018ರಲ್ಲಿ, ಅವರು ಆರ್ಎಸ್ಎಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ದೊಡ್ಡ ಸುದ್ದಿ ಮಾಡಿದರು. ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿ ಐತಿಹಾಸಿಕ ನಡೆಯನ್ನು ಸ್ವಾಗತಿಸಿದ್ದರು. ಕಾಂಗ್ರೆಸ್ ಜೊತೆ ದಶಕಗಳ ಒಡನಾಟದ ಹೊರತಾಗಿಯೂ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಮುಖರ್ಜಿ ಅವರು ಭೇಟಿ ನೀಡಿದ್ದನ್ನು “ಅನುಗ್ರಹ” ಎಂದು ಅಡ್ವಾಣಿ ಬಣ್ಣಿಸಿದ್ದರು.
“ಇದು ಭಾರತೀಯ ರಾಷ್ಟ್ರೀಯತೆಯ ಉದಾತ್ತ ಕಲ್ಪನೆ ಮತ್ತು ಆದರ್ಶಗಳ ಉಜ್ವಲ ನಡೆಯಾಗಿದೆ” ಎಂದು ಅಡ್ವಾಣಿ ಆರ್ಎಸ್ಎಸ್ ಸಭೆಯಲ್ಲಿ ಮುಖರ್ಜಿ ಅವರ ಭಾಷಣವನ್ನು ಉಲ್ಲೇಖಿಸಿ ಶ್ಲಾಘಿಸಿದ್ದರು. ಪ್ರಣಬ್ ಮುಖರ್ಜಿ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೈದ್ಧಾಂತಿಕ ಸಂಬಂಧಗಳು ಮತ್ತು ಭಿನ್ನತೆಗಳನ್ನು ಮೀರಿದ ಸಂಭಾಷಣೆಗೆ ನಿಜವಾಗಿಯೂ ಪ್ರಶಂಸನೀಯ ಉದಾಹರಣೆಯನ್ನು ನೀಡಿದ್ದಾರೆ ಎಂದು ಅಡ್ವಾಣಿ ಹೇಳಿದ್ದರು.
ಕಾಂಗ್ರೆಸ್ಗೆ ಸಂಬಂಧಿಸಿದಂತೆ ಪ್ರಣವ್ ಮುಖರ್ಜಿ ಅವರಿಗೆ ಹಲವಾರು ಸಿಕ್ರೇಟ್ಗಳು ಗೊತ್ತಿದ್ದವು, ಆದರೆ ಅವರು ಯಾವುದನ್ನೂ ಬಿಟ್ಟು ಕೊಡಲಿಲ್ಲ ಎಂಬುದು ನಿಜ.
https://www.organiser.org/Encyc/2020/9/1/Remembering-Intellectual-Protagonist-among-politicians-Pranab-Mukherjee-.html
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.