ಇತ್ತೀಚಿನ ದಿನಗಳಲ್ಲಿ ಚಿತ್ರ ರಂಗದ ಹಲವು ಕರಾಳ ಮುಖಗಳು ಒಂದೊಂದಾಗಿ ಹೊರ ಬರುತ್ತಿದೆ. ಕಾಸ್ಟಿಂಗ್ ಕೌಚ್, ಮೀ ಟೂ ಆರೋಪ, ಸ್ವಜನ ಪಕ್ಷಪಾತದ ಆರೋಪದ ಬಳಿಕ ಇದೀಗ ಮಾದಕ ದ್ರವ್ಯ ಸೇವನೆಯ ಆರೋಪಗಳು ಕೇಳಿ ಬರುತ್ತಿವೆ. ಬಣ್ಣದ ಲೋಕದಲ್ಲಿ ಗುಪ್ತವಾಗಿ ನಡೆಯುತ್ತಿರುವ ಅಪರಾಧಗಳು ಈಗ ಜನಸಾಮಾನ್ಯನ ಮುಂದೆ ಬಟಾಬಯಲಾಗುತ್ತಿದೆ. ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ ಹೀಗೆ ಯಾವ ಭಾಷೆಯ ಚಿತ್ರರಂಗಗಳು ಕೂಡ ಆರೋಪಗಳಿಂದ ಮುಕ್ತವಾಗಿಲ್ಲ. ತುಸು ಮಟ್ಟಿಗೆ ಘನತೆಯನ್ನು ಕಾಪಾಡಿಕೊಂಡು ಬಂದಿದ್ದ ಕನ್ನಡ ಚಿತ್ರರಂಗ ಕೂಡ ಈಗ ಮಾದಕ ದ್ರವ್ಯದ ಜಾಲದಲ್ಲಿ ಸಿಲುಕಿಕೊಂಡಿರುವುದು ದುರಾದೃಷ್ಟ.
ಕಳೆದ ಗುರುವಾರ ಮೂವರು ಹೈಟೆಕ್ ಡ್ರಗ್ ಪೆಡ್ಲರ್ಗಳನ್ನು ಎನ್ಸಿಬಿ ಬೆಂಗಳೂರಿನಲ್ಲಿ ಬಂಧಿಸಿತ್ತು. ಈ ಮೂವರು ನೀಡಿದ ಮಾಹಿತಿಯ ಆಧಾರದಲ್ಲಿ ಡ್ರಗ್ಸ್ ದಂಧೆಯಲ್ಲಿ ಕೆಲ ಕನ್ನಡ ನಟ-ನಟಿಯರು ಮತ್ತು ಸಂಗೀತ ನಿರ್ದೇಶಕರು ಇರುವ ಸುಳಿವು ಸಿಕ್ಕಿದೆ. ಅವರು ಯಾರು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಇಂತಹ ಯಾವುದೇ ವ್ಯಸನ ಚಿತ್ರರಂಗದಲ್ಲಿ ಇಲ್ಲ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಕೆಲವರು ಇದೆ ಎಂದು ವಾದ ಮಾಡುತ್ತಿದ್ದಾರೆ. ಆದರೆ ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಡ್ರಗ್ ಪೆಡ್ಲರ್ಗಳ ಜೊತೆ ಕನ್ನಡ ಚಿತ್ರರಂಗದ ಕೆಲವರ ನಂಟು ನಿಜಕ್ಕೂ ಆಘಾತಕಾರಿಯೇ ಆಗಿದೆ.
ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತೆರೆ ಮೇಲೆ ಮೂಡಿಸಿ ಜನರಿಗೆ ಮನೋರಂಜನೆಯ ಜೊತೆಗೆ ಒಂದಿಷ್ಟು ಬುದ್ಧಿವಾದ ಹೇಳುತ್ತಿದ್ದ ಚಿತ್ರರಂಗ ಈಗ ಜನರ ಮುಂದೆ ತಲೆತಗ್ಗಿಸುವ ಮಟ್ಟಿಗೆ ನೈತಿಕತೆಯನ್ನು ಕೆಡಿಸಿಕೊಂಡಿದೆ ಎಂದರೆ ಅದಕ್ಕಿಂತ ದೊಡ್ಡ ದುರಾದೃಷ್ಟ ಬೇರೊಂದಿಲ್ಲ. ಚಿತ್ರರಂಗದ ಒಂದಿಬ್ಬರು ಮಾಡುವ ತಪ್ಪುಗಳು ಇಡೀ ಇಂಡಸ್ಟ್ರಿಯ ಹೆಸರನ್ನು ಹಾಳು ಮಾಡುತ್ತಿದೆ ಎಂಬುದು ನಿಜ. ಆದರೆ ಆ ಒಂದಿಬ್ಬರ ಬಗ್ಗೆ ಗೊತ್ತಿದ್ದೂ ಮೌನವಹಿಸಿ ಕೂತ ಅನೇಕರಿದ್ದಾರೆ. ಅವರು ಕೂಡ ಚಿತ್ರರಂಗದ ಘನತೆ ಹಾಳಾಗುವುದುಕ್ಕೆ ಪರೋಕ್ಷ ಕಾರಣೀಕರ್ತರೇ ಆಗಿದ್ದಾರೆ.
ಮಾದಕ ವ್ಯಸನದ ವಿಷ ವರ್ತುಲದಲ್ಲಿ ಚಿತ್ರರಂಗ ಮಾತ್ರವಲ್ಲ ಸಾಮಾನ್ಯ ಯುವ ಜನತೆ ಕೂಡ ಸಿಲುಕಿ ಹಾಕಿಕೊಂಡಿದ್ದಾರೆ. ನೈಟ್ ಕ್ಲಬ್, ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ಸಾಮಾನ್ಯ ಎಂಬಂತೆ ಅಗಿ ಬಿಟ್ಟಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಕೂಡ ಗಾಂಜಾ ನಶೆ ಇದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹಲವು ಅಪರಾಧ ಪ್ರಕರಣಗಳಿಗೂ ಡ್ರಗ್ಸ್ ಸಂಬಂಧ ಇರುವ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ ಡ್ರಗ್ಸ್ ಜಾಲವನ್ನು ಭೇದಿಸಿ ಮಟ್ಟ ಹಾಕುವಲ್ಲಿ ಮಾತ್ರ ಪೊಲೀಸ್ ವ್ಯವಸ್ಥೆ ಸಂಪೂರ್ಣ ವೈಫಲ್ಯವನ್ನು ಕಂಡಿದೆ.
ಕೆಲವೊಂದು ಕಡೆ ಡ್ರಗ್ಸ್ ಎಲ್ಲಿ ಮಾರಾಟವಾಗುತ್ತಿದೆ ಎಂಬ ಬಗ್ಗೆ ಜನಸಾಮಾನ್ಯರೂ ಊಹಿಸಬಲ್ಲರು, ಆದರೆ ಪೊಲೀಸರಿಗೆ ಮಾತ್ರ ಈ ದಂಧೆ ಗೋಚರಿಸುವುದೇ ಇಲ್ಲ. ಶಾಲಾ ಮಕ್ಕಳು, ಕಾಲೇಜು ಯುವಕರೂ ಕೂಡ ಇದರ ಭಯಾನಕತೆಯ ಅರಿವಿಲ್ಲದೆ ಸುಲಭವಾಗಿಯೇ ನಶೆಗೆ ಸಿಲುಕುತ್ತಿದ್ದರೆ, ಪೊಲೀಸರು ಮಾತ್ರ ತಮಗೆ ಈ ಬಗ್ಗೆ ಎನೂ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿರುವುದು ಪೊಲೀಸ್ ವ್ಯವಸ್ಥೆಯ ಮೇಲೆಯೇ ಅನುಮಾನ ಬರುವಂತೆ ಮಾಡುತ್ತದೆ.
ಚಿತ್ರರಂಗದ ಪಾರ್ಟಿಗಳಲ್ಲಿ ಡ್ರಗ್ಸ್ ಸಾಮಾನ್ಯ ಎಂಬ ಗುಸು ಗುಸುಗಳು ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಆದರೆ ಎನ್ಸಿಬಿ ಮಾತ್ರ ಇಷ್ಟು ದಿನ ಮಲಗಿ ಈಗ ಯಾರೋ ಬಡಿದೆಬ್ಬಿಸಿದಂತೆ ಎಚ್ಚರಗೊಂಡಿದೆ. ದೇಶದಲ್ಲಿ ಇಷ್ಟೊಂದು ವ್ಯಾಪಕವಾಗಿ ಮಾದಕ ವ್ಯಸನದ ಜಾಲ ಹಬ್ಬುತ್ತಿರುವಾಗ ಅದು ಏನು ಮಾಡುತ್ತಿತ್ತು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಸದ್ಯ ಈಗಲಾದರೂ ಎಚ್ಚರಗೊಂಡಿತ್ತಲ್ಲ ಎಂದು ತುಸು ಸಮಾಧಾನ ಪಟ್ಟುಕೊಳ್ಳೋಣ, ಆದರೆ ಈಗ ಅದು ಭೇದಿಸಿರುವ ಡ್ರಗ್ಸ್ ಜಾಲ ಪ್ರಕರಣದ ಹಿಂದಿರುವ ಕಾಣದ ಕೈಗಳನ್ನು ಅದು ವ್ಯವಸ್ಥೆಯ ಮುಂದೆ ತಂದು ನಿಲ್ಲಿಸಬಲ್ಲುದೇ? ಡ್ರಗ್ಸ್ ದೇಶದೊಳಗೆ ಎಲ್ಲಿಂದ ಬರುತ್ತಿದೆ? ಯಾರ ಕಮ್ಮಕ್ಕಿನಿಂದ ಬರುತ್ತಿದೆ? ಇದರ ಹಿಂದೆ ಯಾರು ಯಾರು ಇದ್ದಾರೆ? ಎಂಬುದನ್ನು ಅದು ನಿಖರವಾಗಿ ಪತ್ತೆ ಹಚ್ಚಬಲ್ಲದೇ?. ಭಾರತವನ್ನು ಮಾದಕ ವ್ಯಸನ ಮುಕ್ತ ರಾಷ್ಟ್ರವನ್ನಾಗಿಸುವ ಆಶಯದೊಂದಿಗೆ ಸ್ಥಾಪಿತಗೊಂಡಿರುವ ಎನ್ಸಿಬಿ ತನ್ನ ಕರ್ತವ್ಯವನ್ನು ಇನ್ನಾದರೂ ಪ್ರಾಮಾಣಿಕವಾಗಿ ನಿರ್ವಹಿಸಬಲ್ಲದೇ?. ಉತ್ತರಕ್ಕಾಗಿ ಕಾಯದೆ ಬೇರೆ ವಿಧಿ ಇಲ್ಲ.
✍️ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.