ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಆಗಸ್ಟ್ 20ರಂದು ಆಚರಣೆ ಮಾಡಲಾಗಿದೆ. ದೇಶದಾದ್ಯಂತದ ಕಾಂಗ್ರೆಸ್ ಘಟಕಗಳು ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ತಮ್ಮ ಅಗಲಿದ ನಾಯಕನಿಗೆ ಗೌರವ ನಮನವನ್ನು ಸಲ್ಲಿಸಿದೆ. ಆದರೆ ವಿಶೇಷವೆಂದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜೀವ್ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿರುವುದು. ಠಾಕ್ರೆ ಅವರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಪಕ್ಷಬೇಧ ಮರೆತು ಅಗಲಿದ ದೇಶದ ಮಾಜಿ ಪ್ರಧಾನಿಗೆ ಗೌರವ ನಮನ ಸಲ್ಲಿಸುವುದು ಉತ್ತಮ ಸಂಪ್ರದಾಯವೇ. ಕಾಂಗ್ರೆಸ್ ಪಕ್ಷದೊಂದಿಗೆ ಮಹಾಘಟಬಂಧನ್ ಅನ್ನು ಮಾಡಿಕೊಂಡಿರುವ ಶಿವಸೇನೆ ತನ್ನ ಮೈತ್ರಿ ಪಕ್ಷವನ್ನು ಸಂತೋಷಪಡಿಸುವುದಕ್ಕಾಗಿಯಾದರೂ ಈ ಕಾರ್ಯವನ್ನು ಮಾಡಲೇಬೇಕಿತ್ತು. ಮಾಡಿ ತೋರಿಸಿದೆ.
ಆದರೆ ಈಗ ಇರುವ ಪ್ರಶ್ನೆಯೆಂದರೆ, ಯಾವತ್ತೂ ಕಾಂಗ್ರೆಸ್ ಮುಖಂಡರಿಗೆ ಗೌರವ ಸಲ್ಲಿಸದ ಶಿವಸೇನೆಯ ನಾಯಕರು ಇದೀಗ ಕಾಂಗ್ರೆಸ್ ನಾಯಕರಿಗೆ ಗೌರವ ಸಲ್ಲಿಕೆಯನ್ನು ಪ್ರಾರಂಭ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ, ಅದರ ಮುಖಂಡರಾದ ರಾಹುಲ್, ಸೋನಿಯಾ ಎಂದಾದರೂ ಶಿವಸೇನೆ ಧುರೀಣ ದಿವಂಗತ ಭಾಳ ಸಾಹೇಬ್ ಠಾಕ್ರೆ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಬಹುದೇ? ಎಂಬುದು.
ಭಾಳ ಸಾಹೇಬ್ ಠಾಕ್ರೆ ಅವರು ಕಾಂಗ್ರೆಸ್ ಪಕ್ಷದ ಕಟ್ಟಾ ವಿರೋಧಿಯಾಗಿದ್ದರು. ನೆಹರೂ ಅವರಿಂದ ಹಿಡಿದು ಸೋನಿಯಾ ಗಾಂಧಿವರೆಗೆ ಎಲ್ಲರನ್ನೂ ಅವರು ಟೀಕಿಸಿದ್ದಾರೆ. ಆದರೆ ಅವರ ಪುತ್ರ ಉದ್ಧವ್ ಠಾಕ್ರೆ ಕೇವಲ ಮುಖ್ಯಮಂತ್ರಿಯಾಗುವ ಲಾಲಸೆಗೆ ಒಳಪಟ್ಟು ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಅವರು ಈಗ ಕಲಿತುಕೊಂಡಿದ್ದಾರೆ. ತಮ್ಮ ತಂದೆ ನಂಬಿಕೊಂಡು ಬಂದಿದ್ದ ಮತ್ತು ಕಟುವಾಗಿ ಪಾಲಿಸಿಕೊಂಡು ಬಂದಿದ್ದ ಸಿದ್ಧಾಂತವನ್ನು ಅವರು ಗಾಳಿಗೆ ತೂರುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ, ಕಟ್ಟಾ ಹಿಂದುತ್ವವಾದಿಯಾಗಿದ್ದ ಶಿವಸೇನೆ ಈಗ ಹುಸಿ ಜಾತ್ಯತೀತರಂತೆ ವರ್ತಿಸತೊಡಗಿದೆ. ಹಿಂದುಗಳ ಮೇಲೆ ಎಲ್ಲೇ ದೌರ್ಜನ್ಯವಾದರೂ ಖಂಡಿಸುತ್ತಿದ್ದ ಶಿವಸೇನೆ, ಇತ್ತೀಚಿಗೆ ಪಾಲ್ಘರ್ ನಲ್ಲಿ ನಡೆದ ಸಾಧುಗಳ ಗುಂಪು ಹತ್ಯೆ ಬಗ್ಗೆ ಗಾಢ ಮೌನವನ್ನು ವಹಿಸಿರುವುದೇ ಅದರ ಬದಲಾದ ವರಸೆಗೆ ಸಾಕ್ಷಿ. ಕಾಂಗ್ರೆಸ್ ಪಕ್ಷದ ಜೊತೆಗಿನ ಮೈತ್ರಿ ಅದರ ಸಿದ್ಧಾಂತವನ್ನೇ ಅದಕ್ಕೆ ಮರೆಯುವಂತೆ ಮಾಡಿದೆ.
ಕಾಂಗ್ರೆಸ್ ಪಕ್ಷದ ಜೊತೆಗಿನ ಮೈತ್ರಿಗಾಗಿ ಶಿವಸೇನೆ ಇಷ್ಟೆಲ್ಲಾ ಮಾಡುತ್ತಿದೆ, ಆದರೆ ಕಾಂಗ್ರೆಸ್ ಶಿವಸೇನೆ ಜೊತೆಗಿನ ತನ್ನ ಮೈತ್ರಿಗಾಗಿ ತನ್ನ ಸಿದ್ಧಾಂತವನ್ನು ಬಿಟ್ಟು ಕೊಡಬಹುದೇ? ರಾಜೀವ್ ಗಾಂಧಿ ಭಾವಚಿತ್ರಕ್ಕೆ ಉದ್ಧವ್ ಠಾಕ್ರೆ ಅವರು ಪುಷ್ಪನಮನ ಸಲ್ಲಿಸಿದಂತೆ, ಕಾಂಗ್ರೆಸ್ ನಾಯಕರು ಭಾಳ ಸಾಹೇಬ್ ಠಾಕ್ರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷ ಶಿವಸೇನೆಯ ಸಿದ್ಧಾಂತಕ್ಕೆ ಮತ್ತು ಅದರ ನಾಯಕರಿಗೆ ಗೌರವ ನೀಡಲು ಎಂದಿಗೂ ಸಾಧ್ಯವಿಲ್ಲ. ಯಾಕೆಂದರೆ ಅದಕ್ಕೆ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭಯ ಇದೆ. ಅಧಿಕಾರದ ಆಸೆಗಾಗಿ ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ಸಿದ್ಧಾಂತಗಳನ್ನು ಬಲಿ ಕೊಟ್ಟಿದ್ದಾರೆ. ಇದು ಶಿವಸೇನೆಯ ಅಪ್ಪಟ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
✍️ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.