ಕೆಲವು ಮನಸ್ಥಿತಿಗಳೇ ಹಾಗೆ. ಬಹು ಸಂಸ್ಕೃತಿ, ಬಹು ಧರ್ಮದ ಬೀಡಾಗಿರುವ ಭಾರತದಲ್ಲೇ ಇದ್ದರೂ, ಇಲ್ಲಿನ ಸಂಸ್ಕೃತಿ, ಸಂವಿಧಾನ, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದರಲ್ಲಿಯೇ ಅದೇನೋ ವಿಕೃತ ಸಂತೋಷವನ್ನು ಕಾಣುತ್ತದೆ. ತಮ್ಮ ಮತಾಂಧ ಹಿತಾಸಕ್ತಿಗಳ ಕಾರಣಕ್ಕೆ ಇನ್ಯಾವುದೋ ಬಡಪಾಯಿ ಜೀವಕ್ಕೆ ನೋವು, ಹಿಂಸೆ ನೀಡಿ ದೇವರೂ ಕ್ಷಮಿಸಲಾರದ ಬದುಕನ್ನು ಬದುಕುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದಕ್ಕೆ ಹೆಚ್ಚೆಚ್ಚು ಸಾಕ್ಷಿಯಾಗುತ್ತಿರುವುದು ‘ಮತಾಂತರ’ ಎಂಬ ಭೂತ.
ಒಬ್ಬ ವ್ಯಕ್ತಿ ಅವನ ಸ್ವ ಇಚ್ಛೆಯ ಕಾರಣಕ್ಕೆ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗುತ್ತಾನೆ ಎಂದಾದರೆ ಇಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೆ ಯಾವುದೋ ಒಂದು ಧರ್ಮದ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಬಲವಂತವಾಗಿ ತನ್ನ ಧರ್ಮಕ್ಕೆ ಸೇರಿಸಿಕೊಳ್ಳುವುದು, ಹಿಂಸೆ, ನೋವು, ಆತನ ಮನಸ್ಸಿನಲ್ಲಿ ಭಯವನ್ನು ಉತ್ಪಾದನೆ ಮಾಡಿ ತನ್ನ ಮತಕ್ಕೆ ವರ್ಗಾಯಿಸಿಕೊಳ್ಳುವುದರಲ್ಲೇ ಸಮಾಜ ಸಮಸ್ಯೆ ಅನುಭವಿಸುವಂತಾಗಿರುವುದು. ನಮ್ಮ ದೇಶದ ವಿಚಾರಕ್ಕೆ ಬಂದರೆ ಈ ಬಲವಂತದ ಮತಾಂತರ ಎಂಬುದು ಇಂದು ನಿನ್ನೆಯ ಪ್ರಶ್ನೆಯಲ್ಲ. ಬದಲಾಗಿ ಸ್ವಾತಂತ್ರ್ಯ ಪೂರ್ವ ಭಾರತದ ಮೇಲೆ ಮಹಮ್ಮದೀಯರ ದಾಳಿ, ಬ್ರಿಟಿಷರ ದಾಳಿಯ ಸಂದರ್ಭದಿಂದಲೂ ಈ ಸಮಸ್ಯೆ ನಮ್ಮ ದೇಶಕ್ಕೆ ಮಾರಕ ಪಿಡುಗಿನಂತೆಯೇ ಪರಿಣಮಿಸಿದೆ ಎನ್ನಬಹುದು.
ಇದಕ್ಕೆ ಪೂರಕ ಎಂಬಂತೆ ಪಶ್ಚಿಮ ಬಂಗಾಳದಲ್ಲಿ ಒಂದು ಘಟನೆ ನಡೆದಿದೆ. ರಾಜ್ಯದ ಮೇವತ್ ಗೋಯ್ಲಾ ಗ್ರಾಮದಲ್ಲಿ ವಾಸವಿದ್ದ ಹಸನ್ ಖಾನ್ ಮತ್ತವನ ಕುಟುಂಬ ಕಳೆದ ಐದು ವರ್ಷಗಳಿಂದ ರಾಜು ಎಂಬ ಹಿಂದೂ ಹುಡುಗನನ್ನು ಕೆಲಸ ನೀಡುವ ಆಸೆ ಹುಟ್ಟಿಸಿ ಕರೆದುಕೊಂಡು ಹೋಗಿ, ಗೃಹಬಂಧನದಲ್ಲಿಟ್ಟು ಹಿಂಸಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಪ್ರಯತ್ನ ನಡೆಸಿದೆ. ಆತನಿಗೆ ಆಹಾರ, ಬಟ್ಟೆ ಯಾವುದನ್ನೂ ಒದಗಿಸಿ ಕೊಡದೆ ಮತಾಂತರವಾಗುವಂತೆ ಬಲವಂತ ಹೇರಲಾಗಿದೆ. ಪೈಶಾಚಿಕ ರೀತಿಯಲ್ಲಿ ಹಸನ್ ಆತನನ್ನು ಹಿಂಸಿಸಿ ಮತಾಂತರವಾಗುವಂತೆ ಒತ್ತಾಯಿಸಿದ್ದಾನೆ. ದೀರ್ಘ 5 ವರ್ಷಗಳ ಬಳಿಕ ಈ ಪ್ರಕರಣ ಭಜರಂಗದಳದ ಗಮನಕ್ಕೆ ಬಂದಿದೆ. ಕನ್ವೀನರ್ ಮೋನು ಮಾನೆಸರ್ ಅವರ ನೇತೃತ್ವದಲ್ಲಿ ಭಜರಂಗಿಗಳು ಈ ಹುಡುಗನನ್ನು ಮತಾಂಧ ರಾಕ್ಷಸ ಹಸನ್ನ ಕಪಿಮುಷ್ಠಿಯಿಂದ ಕಾಪಾಡಿದ್ದಾರೆ. ಮತ್ತೆ ಆ ಹುಡುಗನನ್ನು ತನ್ನ ಕುಟುಂಬದ ಜೊತೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಘಟನೆಯ ಕುರಿತಂತೆ ಈ ಕ್ರೂರತ್ವಕ್ಕೆ ಒಳಗಾದ ಬಾಲಕ ರಾಜು ಮಾಹಿತಿ ನೀಡಿದ್ದಾರೆ. ಐದು ವರ್ಷಗಳ ಹಿಂದೆ ತಮ್ಮ ಸ್ನೇಹಿತರ ಜೊತೆಗೆ ಕೆಲಸವರಸಿ ಮೇವತ್ಗೆ ತೆರಳಿದ್ದು, ಅಲ್ಲಿ ಹಸನ್ ಕೈಗೆ ರಾಜು ಸಿಕ್ಕಿದ್ದಾರೆ. ರಾಜು ಅವರಿಗೆ ಉದ್ಯೋಗ ಒದಗಿಸಿಕೊಡುವ ಆಸೆ ಹುಟ್ಟಿಸಿ ಹಸನ್ ಖಾನ್ ತನ್ನೊಂದಿಗೆ ಕರೆದೊಯ್ದು, ಆ ಬಳಿಕ ಒತ್ತೆಯಾಳಾಗಿಸಿ, ಸರಿಯಾದ ಆಹಾರ, ಬಟ್ಟೆಬರೆ ಏನನ್ನೂ ನೀಡದೆ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾನೆ. ಜೊತೆಗೆ ಹಿಂದೂ ಧರ್ಮದ ರಾಜು ನನ್ನು ತನ್ನ ಮತಕ್ಕೆ ಮತಾಂತರವಾಗುವಂತೆಯೂ ಚಿತ್ರಹಿಂಸೆ ನೀಡಿದ್ದಾನೆ. ನಾಲ್ಕು ವರ್ಷಗಳ ಬಳಿಕ ತಾನು ದಿನಸಿ ಖರೀದಿಸಲು ಅಂಗಡಿಯೊಂದಕ್ಕೆ ತೆರಳಿದ್ದಾಗ, ಆ ಅಂಗಡಿಯವರಲ್ಲಿ ತನ್ನ ಕರುಣಾಜನಕ ಕಥೆಯನ್ನು ಹೇಳಿದ್ದೆ. ಅವರು ಅದನ್ನು ಕನ್ವೀನರ್ಗೆ ತಲುಪಿಸಿ, ಭಜರಂಗದ ದಳದ ಮೂಲಕ ತನ್ನನ್ನು ರಕ್ಷಿಸಿದ್ದಾಗಿ ಹೇಳಿದ್ದಾರೆ.
ಈ ಬಾಲಕನನ್ನು ರಕ್ಷಿಸಲು ಹಸನ್ ಖಾನ್ನ ಮನೆಗೆ ಹೋಗಿದ್ದಾಗ ಆತನ ಕುಟುಂಬ ಭಜರಂಗದಳದ ಕಾರ್ಯಕರ್ತರ ಮೇಲೆಯೂ ಹಲ್ಲೆಗೆ ಮುಂದಾಗಿದೆ. ರಾಜುವನ್ನು ರಕ್ಷಿಸುವ ಕಾರ್ಯಕ್ಕೆ ಅಡ್ಡಿ ಉಂಟುಮಾಡಲು ಶತಾಯಗತಾಯ ಪ್ರಯತ್ನ ನಡೆಸಿದರೂ ಹಸನ್ ಅದರಲ್ಲಿ ಸಫಲನಾಗಲಿಲ್ಲ ಎಂದು ಮೋನು ಮಾನೆಸರ್ ತಿಳಿಸಿದ್ದಾರೆ. ಐದು ವರ್ಷಗಳಿಂದ ಕಾಣದಾಗಿದ್ದ ಮಗ ರಾಜು ಸತ್ತೇ ಹೋಗಿದ್ದಾನೆ ಎಂದು ಆತನ ಕುಟುಂಬ ತಿಳಿದುಕೊಂಡಿತ್ತು. ಆದರೆ ಭಜರಂಗ ದಳದ ಪ್ರಯತ್ನದ ಫಲವಾಗಿ ರಾಜು ಮತ್ತೆ ಜೀವಂತವಾಗಿ ಮತ್ತು ಮತಾಂತರವಾಗದೆಯೇ ತನ್ನ ಕುಟುಂಬವನ್ನು ಸೇರುವಂತಾಗಿದೆ. ಸದ್ಯ ರಾಜುವಿಗೆ ಮತಾಂತರವಾಗದೆ ಬದುಕುಳಿದ ಮತ್ತು ಮತ್ತೆ ತನ್ನವರನ್ನು ಸೇರಿದ ಖುಷಿಯಾದರೆ, ಕುಟುಂಬಕ್ಕೆ ತಾವು ಇನ್ನಿಲ್ಲವೆಂದೇ ಭಾವಿಸಿದ್ದ ಮಗ ಸಿಕ್ಕ ಖುಷಿ.
ಇದು ಒಂದು ನಿದರ್ಶನವಷ್ಟೇ. ಇಂತಹ ಅದೆಷ್ಟೋ ಮತಾಂತರದ ಕರಾಳ ಮುಖ ನಮ್ಮ ಸುತ್ತಮುತ್ತಲಲ್ಲಿಯೇ ನಮ್ಮ ಅನುಭವಕ್ಕೂ ಬಂದಿರಬಹುದು. ಓದಿ , ಕೇಳಿಯೂ ಗೊತ್ತಿರಬಹುದು. ಬಲವಂತದ ಮತಾಂತರದ ಕಾರಣದಿಂದಾಗಿ ಅದೆಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಂಡ ನಿದರ್ಶನಗಳೂ ನಮಗೆ ಸಿಗುತ್ತವೆ. ಅನ್ಯ ಧರ್ಮದ ಯುವತಿಯರನ್ನು ಬಲೆಗೆ ಹಾಕಿಕೊಂಡು ಪ್ರೀತಿಯ ಹೆಸರಲ್ಲಿ ಮತಾಂತರ, ಹಣದ ಆಮಿಷವೊಡ್ಡಿ ಮತಾಂತರ ಮೊದಲಾದ ವಿಚಾರಗಳೂ ನಮಗೆ ಹೊಸತೇನಲ್ಲ. ಇಂತಹ ಮತಾಂತರದ ಕೂಪಕ್ಕೆ ಬಿದ್ದು, ಆ ಬಳಿಕ ಪಶ್ಚಾತ್ತಾಪ ಪಟ್ಟವರು, ನೋವನುಭವಿಸಿದವರು ,ಆತ್ಮಹತ್ಯೆಗೆ ಶರಣಾದವರು ನಮ್ಮ ಸಮಾಜದಲ್ಲಿ ಹಲವರಿದ್ದಾರೆ. ಮತಾಂತರದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಿತ್ಯ ನಿರಂತರ ಎಂಬಂತೆ ನಡೆಯುತ್ತಿದ್ದರು, ಈ ಪ್ರಚೋದನೆಗೆ ಜನರು ಒಳಗಾಗುತ್ತಿದ್ದಾರೆ ಎಂದರೆ ಅದು ಖೇದಕರ ವಿಚಾರ.
ಕೆಲವರು ಪ್ರಚೋದನೆಗೊಳಗಾಗಿ ಮತಾಂತರದತ್ತ ಚಿತ್ತ ನೆಟ್ಟರೆ, ಮತ್ತೆ ಕೆಲವರು ಇಲ್ಲಿ ಉದಾಹರಣೆಯಾಗಾರುವ ರಾಜುವಿನಂತೆ ಆ ಕೂಪದೊಳಕ್ಕೆ ಅಚಾನಕ್ ಆಗಿ ಬಿದ್ದು ನಲುಗಿ ಹೋಗುತ್ತಾರೆ. ಇಂತಹ ದುರಂತಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವ ಮೂಲಕ, ನಮ್ಮ ಸಮಾಜವನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಮನಸ್ಸಿನೊಳಗೇ ಒಂದು ಜಾಗೃತ ಸ್ಥಿತಿ ನಿರ್ಮಾಣವಾದಲ್ಲಿ ಮಾತ್ರ ಮತಾಂಧ ಶಕ್ತಿಗಳ ಮತಾಂತರದಂತಹ ಅನ್ಯಾಯದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದಷ್ಟೇ. ಹಾಗಾದಲ್ಲಿ ಮಾತ್ರ ಮತಾಂತರವೆಂಬ ಮತಾಂಧತೆ ಕೊನೆಯಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.