ಚೀನಾದ ಕ್ಸಿನ್ಜಿಯಾಂಗ್ಉಯಿಘರ್ನ ಅತುಶ್ ಎಂಬಲ್ಲಿ ನೆಲಸಮವಾಗಿರುವ ಮಸೀದಿಯ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯವನ್ನು ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ನಿರ್ಮಿಸುವ ಮೂಲಕ ಮುಸ್ಲಿಂ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಈ ವಿಚಾರವನ್ನು ಪಾಕಿಸ್ಥಾನ ತಿಳಿದಿದ್ದರೂ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡದೆ ತನಗೇನೂ ತಿಳಿದೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಈ ವಿಚಾರ ವಿಶ್ವಮಟ್ಟದಲ್ಲಿ ಇದೀಗ ಚರ್ಚೆಗೂ ಗ್ರಾಸವಾಗಿದೆ.
ಮುಸ್ಲಿಂ ಸಮುದಾಯದ ಮೇಲೆ ಚೀನಾದ ಕಮ್ಯುನಿಸ್ಟ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದ್ದರೂ, ಪಾಕಿಸ್ಥಾನ ಇಸ್ಲಾಂ ಧರ್ಮದ ಉಳಿವಿಗಾಗಿ ಪ್ರಯತ್ನ ನಡೆಸುತ್ತಿರುವ ಧರ್ಮ ರಕ್ಷಕ ರಾಷ್ಟ್ರ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರೂ, ಚೀನಾದ ಈ ನಡವಳಿಕೆಯ ವಿರುದ್ಧ ಮಾತ್ರ ಚಕಾರವೆತ್ತಿಲ್ಲ. ಆದ್ದರಿಂದ ತನ್ನ ವಿದೇಶೀ ನೀತಿಗಳಲ್ಲಿ ಪಾಕಿಸ್ಥಾನ ವಿರೋಧಾಭಾಸವನ್ನು ಹೊಂದಿದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನದ ವಿರುದ್ಧ ಟೀಕೆಗಳೂ ವ್ಯಕ್ತವಾಗಿವೆ.
ಇನ್ನು ಚೀನಾದ ಈ ನಿಲುವಿನ ಬಗ್ಗೆ ಹೇಳುವುದಾದರೆ, ದೇಶದಲ್ಲಿ 11 ಮಿಲಿಯನ್ ಉಯಿಘರ್ಗಳು, 22 ದಶಲಕ್ಷಕ್ಕೂ ಅಧಿಕ ಮುಸ್ಲಿಂ ಸಮುದಾಯಗಳು ವಾಸವಿದೆ. 2016 ರಲ್ಲಿ ಚೀನಾ ಸರ್ಕಾರ ಮಸೀದಿ ತಿದ್ದುಪಡಿ ಅಭಿಯಾನವೊಂದನ್ನು ಆರಂಭಿಸಿದ್ದು, ಈ ಅಭಿಯಾನದ ಭಾಗವಾಗಿ ಇಸ್ಲಾಂಗೆ ಸೇರಿದ ಪ್ರಾರ್ಥನಾ ಮಂದಿರಗಳನ್ನು ಸಾಮೂಹಿಕವಾಗಿ ನೆಲಸಮ ಮಾಡುವ, ನಾಶಗೊಳಿಸುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಸಿತ್ತು. ಸದಸ್ಯ ಅತುಶ್ ನಲ್ಲಿರುವ ಮಸೀದಿಯನ್ನೂ ನೆಲಸಮ ಮಾಡಲಾಗಿದ್ದು, ಅಲ್ಲಿರುವ ಮಸೀದಿಯ ಅವಶೇಷಗಳನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಈ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಚೀನಾ ಮತ್ತು ಪಾಕಿಸ್ಥಾನ ಈ ಎರಡೂ ರಾಷ್ಟ್ರಗಳ ನಿಲುವನ್ನು ಗಮನಿಸಿದರೆ, ಚೀನಾ ತಾನು ಅಭಿವೃದ್ಧಿ ಹೊಂದಲು, ತನಗೆ ಅನಗತ್ಯ ಎನಿಸಿದ್ದನ್ನು ತೊಡೆದು ಹಾಕಲು ಯಾವುದೇ ಮುಲಾಜಿಲ್ಲದೆ ಅದೆಷ್ಟೇ ದುಷ್ಟತನದ ಪ್ರದರ್ಶನಕ್ಕೂ ಸಿದ್ಧವಿರುತ್ತದೆ. ಭಾರತದ ವಿರುದ್ಧ ಮಸಲತ್ತು ನಡೆಸುವ ವಿಚಾರವಾಗಿ ಚೀನಾ ಜೊತೆಗೆ ಕೈ ಜೋಡಿಸಿದ್ದ ಅಥವಾ ಭಾರತದ ವಿರುದ್ಧ ಜಂಟಿ ಯೋಜನೆಗಳನ್ನು ಹಾಕಿಕೊಂಡು ಗಡಿಯಲ್ಲಿ ತಂಟೆ ಮಾಡುತ್ತಿದ್ದ ಪಾಕಿಸ್ಥಾನ ಈಗ ಇಸ್ಲಾಂ ಧರ್ಮಕ್ಕೆ ತನ್ನ ಸ್ನೇಹಿತ ಚೀನಾದಿಂದಲೇ ಈ ರೀತಿಯ ಅಪಾಯ ಎದುರಾಗಿದ್ದರೂ ಸದ್ದು ಮಾಡದೆ ಬಾಯ್ಮುಚ್ಚಿ ಕುಳಿತಿರುವುದು ಪಾಕಿಸ್ಥಾನ ನಿಜಕ್ಕೂ ಇಸ್ಲಾಂ ಧರ್ಮ ರಕ್ಷಣೆಗಾಗಿ ಹೋರಾಡುವ ರಾಷ್ಟ್ರವೇ ಎಂಬ ಸಂದೇಹವನ್ನು ಜಗತ್ತಿನಲ್ಲಿ ಮೂಡಿಸಿದೆ ಎಂದರೂ ತಪ್ಪಾಗಲಾರದು.
ಭಾರತದಲ್ಲಿ ಇಸ್ಲಾಂ ಧರ್ಮ ಯಾವುದೇ ಭಯವಿಲ್ಲದೆ, ನಿರಾತಂಕವಾಗಿ ಜೀವಿಸುವ ಅವಕಾಶ ಇದ್ದರೂ ಭಾರತದ ಅಜನ್ಮ ಶತ್ರು ಎಂದೇ ಗುರುತಿಸಿಕೊಂಡಿರುವ ಪಾಕಿಸ್ಥಾನ ಭಾರತದ ಮುಸ್ಲಿಮರಿಗೆ ಭಾರತ ರಕ್ಷಣೆ ನೀಡುತ್ತಿಲ್ಲ ಎಂಬಂತೆ ಬಿಂಬಿಸುವ ಪ್ರಯತ್ನಗಳನ್ನು ನಡೆಸುತ್ತದೆ. ಕಣಿವೆ ರಾಜ್ಯ ಕಾಶ್ಮೀರದಲ್ಲಿ ವಿನಾ ಕಾರಣ ಮುಸ್ಲಿಂ ಬಾಂಧವರಲ್ಲಿ ರಾಗ ದ್ವೇಷಗಳನ್ನು ತುಂಬುವ ವ್ಯರ್ಥ ಪ್ರಯತ್ನಗಳನ್ನೂ ನಡೆಸುತ್ತದೆ. ಅಲ್ಲಿನ ಯುವಕರನ್ನು ಶಿಕ್ಷಣದ ಹೆಸರಿನಲ್ಲಿ ಆಕರ್ಷಿಸಿ ಅವರ ತಲೆ ಕೆಡಿಸಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ತಾನೇ ಸಾಕಿ ಸಲಹಿರುವ ಉಗ್ರರನ್ನು ಭಾರತದೊಳಕ್ಕೆ ಬಿಟ್ಟು ಇಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಅನೇಕ ಪ್ರಯತ್ನಗಳನ್ನೂ ಕುತಂತ್ರಿ ಪಾಕ್ ಬಹುಕಾಲದಿಂದಲೂ ಮಾಡಿಕೊಂಡೇ ಬರುತ್ತಿದೆ. ಗಡಿಯಲ್ಲಂತೂ ಅಪ್ರಚೋದಿತ ದಾಳಿ, ಕದನ ವಿರಾಮ ಉಲ್ಲಂಘನೆಯಂತಹ ಕೃತ್ಯಗಳನ್ನು ನಡೆಸದೇ ಹೋದಲ್ಲಿ ಪಾಕಿಸ್ಥಾನಕ್ಕೆ ತಿಂದ ಆಹಾರ ಕರಗುವುದೇ ಇಲ್ಲವೇನೋ ಎಂಬಂತ ಸ್ಥಿತಿ ಇದೆ. ಇವೆಲ್ಲಕ್ಕೂ ಭಾರತ ಸರಿಯಾಗಿ ಪಾಠ ಕಲಿಸಿದರೂ ಮತ್ತೆ ಮತ್ತೆ ಅದೇ ಕೆಲಸ ಮಾಡುವ ಪಾಕಿಸ್ಥಾನ, ಚೀನಾ ಇಸ್ಲಾಂ ಧರ್ಮಕ್ಕೆ ನಿಜವಾಗಿಯೂ ಅವಹೇಳನ ಮಾಡುತ್ತಿದ್ದರೂ ಕೈಕಟ್ಟಿ, ಅವರ ಎಂಜಲು ನೆಕ್ಕುವ ಕೆಲಸವನ್ನೇ ಮಾಡುತ್ತಿರುವುದನ್ನು ಕಂಡಾಗ ಪಾಕಿಸ್ಥಾನದ ನಿಲುವುಗಳ ಬಗ್ಗೆ ಗೊಂದಲಗಳು ಹುಟ್ಟುತ್ತವೆ.
ಹಾಗಾದರೆ ತೋರಿಕೆಗಷ್ಟೇ ಪಾಕಿಸ್ಥಾನ ತನ್ನನ್ನು ಧರ್ಮ ರಕ್ಷಕ ಎಂದು ಹೇಳಿಕೊಳ್ಳುತ್ತಿದೆಯೇ ಎಂದೆನಿಸುತ್ತದೆ. ಇತ್ತ ಚೀನಾ ಸಹ ಭಾರತದ ವಿರುದ್ಧ ಬಳಸಿಕೊಳ್ಳಲು ಮಾತ್ರವೇ ಪಾಕಿಸ್ಥಾನದ ಜೊತೆಗೆ ಸಂಬಂಧ ಇಟ್ಟುಕೊಂಡಿದೆಯೇ?. ತನ್ನ ದೇಶದಲ್ಲೇ ಇತರ ಧರ್ಮಗಳಿಗೆ ಬೆಲೆ ಕೊಡದ ಚೀನಾ ಇತರ ರಾಷ್ಟ್ರಗಳಿಗೆ ಗೌರವ ನೀಡಬೇಕು ಎಂದು ಬಯಸಿದರೆ ಅದಕ್ಕಿಂತ ಹಾಸ್ಯಾಸ್ಪದ ವಿಚಾರ ಮತ್ತೊಂದಿರಲಾರದೇನೋ. ಈ ಅಂಶವನ್ನು ಅರಿತುಕೊಳ್ಳದ ಪಾಕಿಸ್ಥಾನ ಚೀನಾದ ಜೊತೆಗೆ ಭಾಯ್ ಭಾಯ್ ಎಂಬಂತೆ ಗುರುತಿಸಿಕೊಳ್ಳುವುದಕ್ಕೆ ಹೊರಟಿದೆ. ಶತ್ರುವಿನ ಶತ್ರು ಅಂದರೆ ಭಾರತದ ಶತ್ರು ಚೀನಾ ತನ್ನ ಪರಮ ಮಿತ್ರ ಎಂದೇ ನಂಬಿಕೊಂಡಿರುವ ಪಾಕಿಸ್ಥಾನಕ್ಕೆ ಇದೇ ಚೀನಾದಿಂದ ಮುಂದೊಮ್ಮೆ ಅಪಾಯ ಬಂದೊದಗಿದರೂ ಅದಕ್ಕೆ ಅಚ್ಚರಿ ಪಡಬೇಕಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.