ಯಶಸ್ಸು ಯಾರ ಮನೆಯ ಸೊತ್ತೂ ಅಲ್ಲ. ಗುರಿ ತಲುಪಲೇ ಬೇಕು ಎಂಬ ಆಶಯದ ಜೊತೆಗೆ ಪೂರಕವಾದ ಪ್ರಯತ್ನಗಳ ಜೊತೆ ಸಾಗಿದರೆ ನಮ್ಮಲ್ಲಿನ ದೈಹಿಕ, ಮಾನಸಿಕ ಕೊರತೆಗಳು ಸಾಧನೆಯ ಹಾದಿಯಲ್ಲಿ ತೊಡಕಾಗಲಾರವು. ಇದಕ್ಕೆ ಸಾಕ್ಷಿ ಮಧುರೈನ 25 ವರ್ಷದ ಹುಡುಗಿ ಪೂರ್ಣ ಸುಂದರಿ. ಕಣ್ಣು ಕಾಣದ ಈ ಹುಡುಗಿ ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ 286 ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಎಲ್ಲರೂ ಅವರತ್ತ ತಿರುಗಿ ನೋಡುವಂತಹ ಸಾಧನೆ ಮೆರೆದಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪರಿಶೀಲಿಸಿದಾಗ ತನಗೆ 286 ನೇ ಸ್ಥಾನ ದೊರೆತಿರುವುದು ತಿಳಿಯಿತು. ಫಲಿತಾಂಶ ಘೋಷಣೆಯಾದ ಸಂದರ್ಭದಲ್ಲಿ ತಾನು ಸ್ಥಾನ ಗಳಿಸಿದ್ದನ್ನು ನಂಬಲಾಗದೆ, ತಮ್ಮ ಕುಟುಂಬದವರ ಬಳಿ ಮತ್ತೆ ಮತ್ತೆ ಪರಿಶೀಲನೆ ಮಾಡುವಂತೆ ತಿಳಿಸಿದೆ, ಆ ಬಳಿಕವೇ ಫಲಿತಾಂಶವನ್ನು ನಂಬಿದ್ದಾಗಿ ಹೇಳಿದ್ದಾರೆ. ನಾಲ್ಕನೇಯ ಬಾರಿ ಬರೆದ ಯುಪಿಎಸ್ಸಿ ಪರೀಕ್ಷೆಯಲ್ಲಿ ತಾನು 286 ನೇ ಸ್ಥಾನ ಗಳಿಸಿರುವುದಾಗಿ ಹೇಳಿರುವ ಪೂರ್ಣ ಸುಂದರಿ, ಇದಕ್ಕಾಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಈಗ ನಾನು ಕನಸಿನ ಚಂದ್ರನನ್ನು ತಲುಪಿದ ಖುಷಿಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಈ ಪರೀಕ್ಷೆಗಾಗಿ ಅವರು ಚೆನ್ನೈನಲ್ಲಿ ತರಬೇತಿಯನ್ನು ಪಡೆದಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಅಧ್ಯಯನ ಮಾಡುತ್ತಿದ್ದಾಗಲೇ ಐಎಎಸ್ ಆಗಬೇಕೆಂಬ ಕನಸು ಕಂಡವರು ಪೂರ್ಣ ಸುಂದರಿ. ಆದರೆ ದೃಷ್ಟಿಹೀನತೆ ತನ್ನ ಈ ಕನಸಿಗೆ ತೊಡಕಾಗಿ ಬಾಧಿಸಬಹುದೇನೋ ಎಂಬ ಸಂದೇಹವೊಂದು ತನ್ನಲ್ಲಿತ್ತು. ಆದರೆ ಇದೊಂದು ಲೋಪವಲ್ಲ. ನಿನ್ನಿಂದ ಸಾಧನೆ ಸಾಧ್ಯ ಎಂದು ಹುರಿದುಂಬಿಸಿ ಅದಕ್ಕಾಗಿ ತನ್ನನ್ನು ಸಿದ್ಧಗೊಳಿಸುವಲ್ಲಿ ತನ್ನ ಕುಟುಂಬ ಮತ್ತು ಸ್ನೇಹಿತರ ಸಹಕಾರ ಅಪಾರ ಎಂದು ಅವರು ಈ ಸಂತೋಷದ ಸಂದರ್ಭದಲ್ಲಿ ತನ್ನ ಸಾಧನೆಗೆ ನೆರವಾದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದ್ದಾರೆ. ಜೊತೆಗೆ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕಾರ್ಯ ನಿರ್ವಹಿಸುವ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇನ್ನು ಯುಪಿಎಸ್ಸಿ ಪರೀಕ್ಷೆಗೆ ಅಧ್ಯಯನ ನಡೆಸಲು ತಾವು ಪಟ್ಟ ಪರಿಶ್ರಮ, ಕಷ್ಟದ ಬಗ್ಗೆಯೂ ಇವರು ಮಾತನಾಡಿದ್ದಾರೆ. ತಾವೇ ಓದಿಕೊಳ್ಳೋಣ ಎಂದರೆ ದೃಷ್ಟಿಹೀನತೆಯ ಸಮಸ್ಯೆ. ತಯಾರಿಗೆ ಬೇಕಾದ ಎಲ್ಲಾ ವಸ್ತು ವಿಷಯಗಳು ಆಡಿಯೋ ರೂಪದಲ್ಲಿಯೂ ದೊರೆಯುವುದಿಲ್ಲ. ಇಂಥಹ ಸಂದರ್ಭದಲ್ಲಿ ತಮ್ಮ ಕುಟುಂಬ ಸದಸ್ಯರು ಪುಸ್ತಕಗಳನ್ನು ಓದಿ ಹೇಳಿ, ಅದನ್ನು ಕೇಳಿಸಿಕೊಂಡು ಅಧ್ಯಯನ ನಡೆಸಿದ್ದಾಗಿ ತಿಳಿಸಿದ್ದಾರೆ. ರಾತ್ರಿ ಹಗಲೆನ್ನದೆ ಈ ಪ್ರಕ್ರಿಯೆ ಸಾಗಿತ್ತು. ತಮ್ಮ ಕುಟುಂಬ ಸದಸ್ಯರ ಸಹಕಾರವಿಲ್ಲದೆ ಹೋಗಿದ್ದರೆ ತಾವು ಈ ಸಾಧನೆ ಮಾಡುವುದು ಸಾಧ್ಯವಿರಲಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ ಪುರಾಣ ಸುಂದರಿ. ಇವರೆಲ್ಲರ ಪ್ರೋತ್ಸಾಹವೇ ತಾನಿಂದು ತನ್ನ ಐಎಎಸ್ ಕನಸನ್ನು ನನಸಾಗಿಸಿಕೊಂಡು ಜಗತ್ತಿನೆದುರು ಜಯದ ನಗು ಬೀರುವಂತಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ತಮಿಳುನಾಡಿನ ಗ್ರಾಮ ಬ್ಯಾಂಕ್ ಒಂದರಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡುತ್ತಿರುವ ಇವರು, ಯುಪಿಎಸ್ಸಿ ಸಾಧಕಿಯಾಗಿ ನಿಂತಿದ್ದಾರೆ. ಆ ಮೂಲಕ ಸಾಧನೆಗೆ ಯಾವುದೇ ವೈಕಲ್ಯ ಅಡ್ಡಿಯಾಗಲಾರದು. ಸಾಧಿಸುವ ಛಲವೊಂದಿದ್ದರೆ ಸಾಕು. ಆ ಛಲವೇ ನಮ್ಮನ್ನು ನಾವು ಕಟ್ಟಿಕೊಂಡ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
ಸಾಧನೆಯ ಕನಸುಗಳನ್ನಿಟ್ಟುಕೊಳ್ಳಿ. ಆ ಕನಸುಗಳನ್ನು ನನಸಾಗಿಸುವತ್ತಲೂ ಪ್ರಯತ್ನ ನಿಮ್ಮ ಕಡೆಯಿಂದಾಗುತ್ತಿರಲಿ. ನಿಮ್ಮ ಮಾನಸಿಕ, ದೈಹಿಕ ಸಮಸ್ಯೆಗಳು ನಿಮ್ಮ ಕನಸಿನ ಹಾದಿಗೆ ತೊಡಕಲ್ಲ ಎಂಬುದಾಗಿ ದೃಢನಿಶ್ಚಯ ನಿಮ್ಮ ಮನಸ್ಸಿನಲ್ಲಿಯೇ ಮಾಡಿಕೊಳ್ಳಿ. ಆಗ ನಿಮ್ಮ ದಾರಿ ಸ್ಪಷ್ಟವಾಗುತ್ತದೆ. ಅಂದುಕೊಂಡ ಗುರಿ ಸಾಧನೆಯೂ ಸಾಧ್ಯವಾಗುತ್ತದೆ. ನನ್ನಿಂದ ಸಾಧ್ಯ ಎಂಬ ಮನಸ್ಸುಳ್ಳವನಿಗೆ ಈ ಪ್ರಪಂಚದಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ. ಇದೇ ಯಶಸ್ಸಿನ ಮಂತ್ರ ಎನ್ನುತ್ತಾರೆ ಸಾಧಕಿ ಪುರಾಣ ಸುಂದರಿ.
ಎಲ್ಲಾ ಅಂಗಗಳೂ ಸರಿಯಾಗಿರುವ ಹಲವರು ಬದುಕಿನ ಬಗ್ಗೆ ನಿರಾಸಕ್ತಿ ತಾಳುವುದನ್ನು ಕಾಣುತ್ತೇವೆ. ಕೊರಗುವುದನ್ನು ಕಾಣುತ್ತೇವೆ. ಆದರೆ ಪೂರ್ಣ ಸುಂದರಿ ತಮಗಿದ್ದ ಅಂಧತ್ವವನ್ನು ಅದೊಂದು ತೊಡಕೇ ಅಲ್ಲ ಎಂಬಂತೆ ಭಾವಿಸಿ, ಯುಪಿಎಸ್ಸಿಯಲ್ಲಿ ಸಾಧಿಸಿ ತೋರಿಸಿದ್ದಾರೆ. ಅವರ ಪರಿಶ್ರಮವೇ ಜನರು ಅವರನ್ನು ತಿರುಗಿ ನೋಡಿ, ಶಹಬ್ಬಾಸ್ ಎನ್ನುವಂತೆ ಮಾಡಿದೆ. ಸಾಧಿಸುವವರಿಗೆ ಪೂರ್ಣ ಸುಂದರಿ ಅವರಿಗಿಂತ ಪ್ರೇರಣೆ ಬೇರೆ ಇಲ್ಲ ಎಂದು ನಾವಿಂದು ನಿಸ್ಸಂಶಯವಾಗಿ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.