ಎರಡು ದಿನಗಳ ಹಿಂದೆ ನನ್ನ ತಮ್ಮ ದೇವೇಂದ್ರ ಛಾಯಾಚಿತ್ರ ಪ್ರತಿಯೊಂದನ್ನು ಕಳಿಸಿದ್ದ. ಮನೆಯ ಹಳೆ ವಸ್ತುಗಳ ವಿಲೇವಾರಿ ಮಾಡುವಾಗ ದೊರಕಿತೆಂದ. ನನ್ನ ತಂದೆ 1992 ರ ಕರಸೇವೆ 3ರಲ್ಲಿ ಭಾಗವಹಿಸಲು ಅಯೋಧ್ಯೆಗೆ ತೆರಳಿದ್ದಾಗ ನನಗೆ ಬರೆದ ಪತ್ರವದು.
1992 ನವೆಂಬರ್. ನಾನು ಆರನೇಯ ತರಗತಿಯಲ್ಲಿದ್ದೆ. ಎಂದಿನಂತೆ ಅಪ್ಪ ಅಂದು ಸಂಜೆ ಶಾಖೆಗೆ ತೆರಳಿದ್ದರು. ರಾತ್ರಿ ಎಂಟು, ಎಂಟೂವರೆಗೆ ಮರಳುವುದು ಅವರ ದಿನಚರಿ. ಆ ದಿನ ಗಂಟೆ ಒಂಭತ್ತು ಹತ್ತಾದರೂ ಅಪ್ಪ ಮನೆಗೆ ಬಂದಿರಲಿಲ್ಲ. ನಮಗೆ ಇದೇನೂ ಹೊಸತಲ್ಲ. ಸಂಘದ ಸಂಪರ್ಕವೋ, ಯಾವುದೋ ಬೈಠಕ್ ಅಥವಾ ಸಂಘದ ಹಿರಿಯರ ಭೇಟಿ ಆಗಾಗ ಇದ್ದುದೇ. ಅವರ ತಡ ರಾತ್ರಿಯ ಆಗಮನ ಚೋದ್ಯವೇನಲ್ಲ. ಅಮ್ಮ ಅಪ್ಪನಿಗಾಗಿ ಕಾಯುತ್ತಿದ್ದರು. ನಾನು ನಿದ್ದೆಗೆ ಜಾರಿದ್ದೆ.
ಬೆಳಗ್ಗೆ ಎದ್ದಾಗ ಅಪ್ಪನ ಮುಖ ದರ್ಶನವಾಯಿತು. ಅಮ್ಮ ಬಟ್ಟೆ ಬರೆ ಇತ್ಯಾದಿ ದೈನಂದಿನ ಸಾಮಾಗ್ರಿಗಳನ್ನು ಅಪ್ಪನಿಗೊದಗಿಸುತ್ತಿದ್ದರು. ಅಪ್ಪ ಚೀಲವೊಂದರಲ್ಲಿ ಅವುಗಳನ್ನು ತುಂಬುತ್ತಿದ್ದರು. ಆಶ್ಚರ್ಯ ಚಕಿತನಾದೆ. ನಿನ್ನೆ ರಾತ್ರಿ ಎಲ್ಲಿ ಹೋಗಿದ್ದೆ ಇತ್ಯಾದಿ ವಿಚಾರ ವಿನಿಮಯವಾದ ಮೇಲೆ ತಾನು ಕರಸೇವೆಗೆ ಗಮಿಸುವ ವಿಷಯವನ್ನು ಬಿಚ್ಚಿಟ್ಟರು. ನಾನು ದಂಗಾದೆ.
ಅಯೋಧ್ಯೆ ಎಂದರೆ ನನಗೆ ಎದೆಯಲ್ಲಿ ಢವ ಢವ. 1990 ರ 2ನೇ ಹಂತದ ಕರ ಸೇವೆಯಲ್ಲಿ ಅದೆಷ್ಟು ಜನರ ಹತ್ಯೆಯನ್ನು ಮುಲಾಯಂ ಸಿಂಗ್ ಸರಕಾರ ಮಾಡಿತ್ತು?. ಕೊಠಾರಿ ಸಹೋದರರು ಭಗವಾಧ್ವಜವನ್ನು ವಿವಾದಗ್ರಸ್ಥ ಕಟ್ಟಡದ ಗುಂಬಜ್ ಮೇಲೆ ಹಾರಿಸಿ ರಣ ಕಹಳೆ ಮೊಳಗಿಸಿದಾಗ ಪೊಲೀಸರ ಗುಂಡಿಗೆ ಗುಂಡಿಗೆಯೊಡ್ಡಿ ಬಲಿಯಾದ ಸಾಹಸ ಗಾಥೆಗಳನ್ನು ಓದಿದ್ದೆ. ಅನೇಕ ಕರಸೇವಕರ ಬರ್ಬರ ಕೊಲೆ, ಕೊಳೆತ ಶವಗಳು, ಪೊಲೀಸರ ಅಮಾನುಷ ಥಳಿತಗಳು ಇತ್ಯಾದಿಗಳ ಭೀಭತ್ಸ ಚಿತ್ರಣಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ ಅನೇಕ ಲೇಖನಗಳು, ಪತ್ರಿಕೆಗಳನ್ನು ಓದಿದ್ದೆ. ಸಂಬಂಧಿಸಿದ ಚಿತ್ರಗಳನ್ನೂ ಯಾರದೋ ಮನೆಯ ದೂರದರ್ಶನದಲ್ಲೂ ಕಂಡಿದ್ದೆ. ಅವುಗಳು ನನ್ನನ್ನು ಅಯೋಧ್ಯೆಯ ಬಗ್ಗೆ ತೀರಾ ಭಯವಿಹ್ವಲನನ್ನಾಗಿ ಮಾಡಿದ್ದವು.
ಬಹುಸಂಖ್ಯಾತ ಹಿಂದೂಗಳಂತೆ ನನಗೂ ರಾಮಮಂದಿರ ಆಗಬೇಕೆನ್ನುವ ಆಸೆ. ರಾಮ ಶಿಲಾ ಪೂಜನ, ರಥಯಾತ್ರೆಗಳಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿದ್ದೆ. ದಾಸ್ಯದ ಪ್ರತೀಕವಾಗಿ ನಿಂತಿದ್ದ ಕಟ್ಟೋಣವೊಂದರ ಮೇಲೆ ಸುಂದರವಾದ ರಾಮಮಂದಿರ ರಾಜಿಸಬೇಕೆಂದು ಹುಡುಗನಾದ ನನ್ನ ಮುಗ್ಧ ಆಶಯ. ವಿಶ್ವ ಹಿಂದೂ ಪರಿಷತ್, ಭಾಜಪಾ ಮತ್ತು ಸಂಘದ ಹಿರಿಯರು ಮೂರನೇ ಹಂತದ ಕರಸೇವೆಗೆ ಕರೆಕೊಟ್ಟಾಗ ನನಗೆ ರೋಮಾಂಚನ. ಈ ಸಾರಿಯಾದರೂ ರಾಮಜನ್ಮಭೂಮಿ ದಾಸ್ಯ ಶೃಂಖಲೆಯಿಂದ ಮುಕ್ತವಾಗಬಹುದೆಂಬ ಕನಸು. ಕರಸೇವಕರು ಪೊಲೀಸರು ಒಡ್ಡಿದ ಬೇಲಿಗಳನ್ನು ಭೇದಿಸಿ ವಿಜಯಪತಾಕೆ ಹಾರಿಸಿಯಾರೆಂಬ ಅಮಿತ ವಿಶ್ವಾಸ. ಇವೆಲ್ಲಾ ಬಾಲನೋರ್ವನ ಬಾಲಿಶತನದ ಕನಸುಗಳಷ್ಟೆ. ಈಗ ನಿಜ ಜೀವನದಲ್ಲಿ ಅಪ್ಪ ಕರಸೇವೆಗೆ ಹೊರಡಲಣಿಯಾಗುತ್ತಿದ್ದಾರೆಂದಾಗ ಕನಸುಗಳೊಡೆದು ನನಗೆ ಕಾಣತೊಡಗಿದ ಚಿತ್ರಣಗಳೇ ಬೇರೆ.
ಇದು ನನ್ನದು ಮಾತ್ರವಲ್ಲ ಬಹುತೇಕ ಸಾಮಾನ್ಯರ ಭಾವನೆಗಳು ಕೂಡಾ. ಎಲ್ಲರೂ ವಿವೇಕಾನಂದ, ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಮರಳಿ ಹುಟ್ಟಬೇಕೆಂದು ಆಶಿಸುತ್ತಾರೆ. ಆದರೆ ನಮ್ಮನೆಯಲ್ಲಲ್ಲ. ನೆರೆ ಮನೆಯಲ್ಲಿ. ಅಲ್ಲವೆ?
ಅಪ್ಪನನ್ನು ಕಳೆದುಕೊಂಡ ತಬ್ಬಲಿಯಾಗುವ ಆತಂಕ ಮೆಲ್ಲನೆ ಸುತ್ತಲಾರಂಭಿಸಿತು. ಕೊರಳು ಹಿಗ್ಗಿತ್ತು. ಜೋರಾಗಿ ಅಳಲಾರಂಭಿಸಿದೆ. ನೀನು ಹೋಗಲೇಬಾರದೆಂದು ತಬ್ಬಿಕೊಂಡು ಗೋಳಾಡಿದೆ. ಅಮ್ಮನ ಮೇಲೆ ರೇಗಿದೆ. ನೀನೇಕೆ ಸಮ್ಮತಿಸಿದೆಯೆಂದು ರಂಪಾಟ ಮಾಡಿದೆ. ಅಜ್ಜ ಅಜ್ಜಿಯರನ್ನೂ ಪ್ರಶ್ನಿಸಿದೆ. ನಿಮಗೆ ಮಗನನ್ನು ಕಳಕೊಳ್ಳುವ ಭಯವಿಲ್ಲವೇ ಎಂದು ಗದರಿಸಿ ಕೇಳಿದ್ದೆ. ತಮ್ಮ ಸಣ್ಣವ. ಏನಾಗುತ್ತಿದೆ ಎಂಬುದರ ಅರಿವು ಅವನಿಗೆ ಇದ್ದಂತಿಲ್ಲ. ಅಪ್ಪ ನಗುತ್ತಿದ್ದರು.
ಅಪ್ಪನೇ ಹಾಗೆ. ಅವರದ್ದು ನೈತಿಕತೆಯ ಪರಮಾವಧಿ. ಕಠೋರ ನಿಲುವುಗಳು. ಬದ್ಧತೆ ಎಂದರೆ ಶಿಲೆಯಷ್ಟೆ ಗಟ್ಟಿ. ಅಚಲ. ಅದೂ ಸಂಘದ ದಿಗ್ದರ್ಶನ ಎಂದರೆ ಕೇಳಬೇಕೆ. ಸಂಘದ ಅಪೇಕ್ಷೆ ಏನಿದೆಯೋ ಅದನ್ನು ಇಂದಿಗೂ ನಿಸ್ವಾರ್ಥ ದಿಂದ ನಡೆಸಿಕೊಂಡು ಬರುವ ವ್ಯಕ್ತಿತ್ವ ಅವರದು. ಸಂಘದ ಕೆಲಸಕ್ಕಾಗಿ ಕಾಲ್ನಡಿಗೆಯಲ್ಲಿ ರಾತ್ರಿ ಹಗಲೆನ್ನದೆ ಊರೂರು ಸುತ್ತಿದವರವರು. ನೇರ ನುಡಿ . ಕೊಟ್ಟ ಮಾತೆಂದರೆ ಮುಗಿಯಿತು. ಜಪ್ಪಯ್ಯ ಅಂದರೂ ನಿಲುವು ಬದಲಾಯಿಸರು. ಗ್ರಾಮ್ಯ ಭಾಷೆಯಲ್ಲಿ ಹೇಳುವದಾದರೆ ‘ಗಂಟು’ ಯಾ ‘ತರ್ಕಿ’. ದಿನಪತ್ರಿಕೆ ಎಂದರೆ ಹೊಸದಿಗಂತ. ವಾರಪತ್ರಿಕೆ ಎಂದರೆ ವಿಕ್ರಮ. ಮಾಸ ಪತ್ರಿಕೆ ಎಂದರೆ ಉತ್ಥಾನ. ಅಂತಹ ಸಂಘ ಕಾರ್ಯಕರ್ತ. ಅಡಿಕೆ ಎಂದರೆ ಕ್ಯಾಂಪ್ಕೊ. ಯಾವುದೋ ಬ್ಯಾರಿ 10 ರೂ ಜಾಸ್ತಿ ಕೊಡುತ್ತೇನೆಂದರೂ ಕ್ಯಾಂಪ್ಕೊ ಬಿಟ್ಟರೆ ಬೇರಾರಿಗೂ ವಿಕ್ರಯಿಸದ ಜಿಗುಟುತನ. ಈ ಎಲ್ಲಾ ಕಾರಣಕ್ಕೆ ಅಪ್ಪ ಎಂದರೆ ನನಗೂ ಭಯ. ಇತರರಿಗೂ ಸ್ವಲ್ಪ ಮಟ್ಟಿನ ಭಯವಿತ್ತು.
ಬಿಡಿಸಿ ಹೇಳಬೇಕಾಗಿಲ್ಲ . ಅಪ್ಪ ಜಗ್ಗಲಿಲ್ಲ. ನನ್ನಿಂದ ಒಲಿಸಲಾಗಲಿಲ್ಲ. ಮ್ಲಾನವದನನನಾಗಿ ಶಾಲೆಗೆ ತೆರಳಿದೆ.
ಅಂದು ಸಂಜೆ ಊರಿನ ಮಹಿಷಮರ್ದಿನೀ ದೇವಸ್ಥಾನದಲ್ಲಿ ಕರಸೇವಕರಿಗೆ ಬೀಳ್ಕೊಡುಗೆ. ನಮ್ಮೂರು ಪುಣಚ. ಹೇಳಿ ಕೇಳಿ ಸಂಘದ ಗಂಡು ಮೆಟ್ಟಿನ ನಾಡು. ಮನೆ ಮನೆಯಲ್ಲಿ ಸ್ವಯಂಸೇವಕರು. ಆದ್ದರಿಂದ ಸಂಖ್ಯೆಗೇನೂ ಕಡಮೆಯಿಲ್ಲ. ನನ್ನ ಇನ್ನೋರ್ವ ಚಿಕ್ಕಪ್ಪನೂ(ಆದಿದೇವ) ತನ್ನ ಮಡದಿಯ ಚೊಚ್ಚಲ ಬಸಿರನ್ನೂ ಬಿಟ್ಟು ಹೊರಟು ನಿಂತಿದ್ದ.
ಊರಿನ ತರುಣ ಕರಸೇವಕರು ಉತ್ಸಾಹದಲ್ಲಿದ್ದರು. ತಮ್ಮ ಸಂಸಾರಕ್ಕೆ ಧೈರ್ಯ ತುಂಬಿದರು. ಎಲ್ಲರಿಗೂ ಆತಂಕವೂ ಇತ್ತು. ನನ್ನ ತಂದೆ ಉತ್ತರಪ್ರದೇಶದಲ್ಲಿ ನಮ್ಮದೇ ಸರಕಾರ(ಕಲ್ಯಾಣ ಸಿಂಗ್) ವಿದೆ. ಆದ್ದರಿಂದ ಭಯ ಬೇಡ ಅಂದರು. ದೆಹಲಿಯಲ್ಲಿ ನರಸಿಂಹ ರಾವ್ ಅಲ್ವೇ ಅಂದೆ. ನಕ್ಕರು. ಯಾತ್ರೆಯಲ್ಲಿ, ತಲಪಿದ ಮೇಲೆ ಪತ್ರ ಬರೆಯುತ್ತೇನೆ ಅಂದು ಮೈದಡವಿದರು.(ಅವರು ಬರೆದ ಅನೇಕ ಪತ್ರಗಳಲ್ಲಿ ನನ್ನ ತಮ್ಮನಿಗೆ ದೊರಕಿದ ಪತ್ರವನ್ನು ಲಗತ್ತೀಕರಿಸಿದ್ದೇನೆ. ಆ ಪತ್ರಗಳು ನನ್ನನ್ನು ಸಮಾಧಾನ ಪಡಿಸುತ್ತಿದ್ದುದು ಮಾತ್ರವಲ್ಲ ಅನೇಕ ಜೀವನ ಪಾಠಗಳನ್ನೂ ಕಲಿಸಿತ್ತು).
ಎಲ್ಲರ ಹಣೆಗಳಲ್ಲಿ ಕುಂಕುಮ ರಾರಾಜಿಸುತ್ತಿತ್ತು. ಕೇಸರಿ ಪಡೆ ದಿಗ್ವಿಜಯಕ್ಕೆ ಹೊರಟು ನಿಂತಿತ್ತು. ಜೈ ಶ್ರೀರಾಮ್ ಘೋಷಣೆ ತಾರಕಕ್ಕೇರುತ್ತಿದ್ದಂತೆ ಕರಸೇವಕರನ್ನು ಹೊತ್ತ ವಾಹನ ಮುಂದೆ ಸಾಗಿತು. ಅಪ್ಪನನ್ನು ಇನ್ನೆಂದೂ ಕಾಣಲಾರೆನೆಂಬಂತೆ ಬಿಕ್ಕಿ ಬಿಕ್ಕಿ ಅತ್ತೆ. ಮೇಲೆತ್ತಿದ ಕೈ ಕೆಳಗಿಳಿಸಿದೆ. ನಗು ನಗುತ್ತಾ ಕಳುಹಿಸಬೇಕೆಂದು ತಾಯಿ ಅಂದರು. ಸಂಘದ ಹಿರಿಯರು ನನ್ನನ್ನು ಸಮಾಧಾನ ಪಡಿಸಲೆತ್ನಿಸಿದ ನೆನಪು. ಮೆಲ್ಲನೆ ಮನೆಯತ್ತ ಹೆಜ್ಜೆಯಿರಿಸಿದೆ.
ಅಂದಿನಿಂದ ಮಾನಸಿಕವಾಗಿ ಕುಗ್ಗಿದ್ದೆ. ದುಃಖ ಒತ್ತೊತ್ತಿ ಬರುತ್ತಿತ್ತು. ನನ್ನ ಸ್ನೇಹಿತ ಗಣೇಶನ ತಂದೆಯೂ ಕರಸೇವಕರಾಗಿ ತೆರಳಿದ್ದರು. ಈ ವಿಷಯದಲ್ಲಿ ನಾವು ಸಮಾನ ದುಃಖಿಗಳು. ಶಾಲಾ ಅಧ್ಯಾಪಕರೂ ಸಂಘದ ಹಿತೈಷಿಗಳು. ಅವರೂ ಆಗ್ಗಾಗ್ಗೆ ಸಮಾಧಾನ ಪಡಿಸುತ್ತಿದ್ದರು.
ಇಂದಿನಂತೆ ಆಗ ಪತ್ರಿಕೆ, ರೆಡಿಯೋ ಬಿಟ್ಟರೆ ಬೇರೆ ಸುದ್ದಿ ಮಾಧ್ಯಮಗಳ ಗೌಜಿಯಿಲ್ಲ. ತಂತು ದೂರವಾಣಿ , ದೂರದರ್ಶನವಿದ್ದವನೇ ದೊಡ್ಡಪ್ಪ. ದಿನ ಪತ್ರಿಕೆ ಮನೆ ತಲಪುವಾಗ ಸಂಜೆಯಾಗುತ್ತಿತ್ತು. ದಿನ ಬೆಳಗಾದರೆ ರೆಡಿಯೋದಲ್ಲಿ ಸಮಾಚಾರ ಆಲಿಸುವುದು, ದಿನ ಪತ್ರಿಕೆ ಓದಿ ನಿರಾತಂಕ ಪಡುವದು ದೈನಿಕ ಕಾಯಕ. ಎಲ್ಲರೂ ನನ್ನನ್ನು ಹುರಿದುಂಬಿಸಲು ಯತ್ನಿಸುತ್ತಿದ್ದರು. ಆದರೆ ಬೆಂಗಡೆಯ ಪರಿಸ್ಥಿತಿ ಸಮಾಧಾನಕರವಿಲ್ಲ ಎಂಬ ಕಹಿಸತ್ಯ ಅರಿಯಲು ಬಹುದಿನ ಬೇಕಾಗಿರಲಿಲ್ಲ.
ಮುರಳೀಕೃಷ್ಣ ನನ್ನ ಸಹಪಾಠಿ. ಆತನಿಗೂ ಸಂಘದ ಹಿನ್ನೆಲೆಯಿತ್ತು. ಆತ ನನ್ನ ಮುಂದೆ “ಏನಾಗುವುದಿಲ್ಲ ಮಾರಾಯ” ಅಂದರೂ ಹಿಂದಿನಿಂದ “ಈ ಸರ್ತಿ ಪೆಟ್ಟಾವಂದೆ ಬರ್ಪುಜ್ಜೆರ್”(ಈ ಸಲ ರಕ್ತಪಾತ ವಾಗುತ್ತದೆ) ಎಂದು ಹೇಳಿದ ಮಾತನ್ನು ನಾನು ಮರೆಯಿಂದ ಕೇಳಿಸಿಕೊಂಡಿದ್ದೆ. ಹಾಲು ಹಾಕಲು ಡಿಪೋಗೆ ಹೋದಾಗ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರಾಮಚಂದ್ರ ಭಟ್ಟರು “ಪರಿಸ್ಥಿತಿ ಗಂಭೀರವಾಗಿದೆ” ಎಂದು ಅನ್ನುತ್ತಿದ್ದುದನ್ನೂ ಕೇಳಿಸಿಕೊಂಡಿದ್ದೆ. ಡಿಸೆಂಬರ್ 6, 1992 ಕರಸೇವೆಯ ದಿನ ಸಮೀಪವಾದಂತೆಲ್ಲ ನನ್ನ ಆತಂಕ ಹೆಚ್ಚಾಗುತ್ತಿತ್ತು.
ಯಾತ್ರೆಯ ಮಾರ್ಗದಿಂದೆಲ್ಲ ಅಪ್ಪ ಪತ್ರ ಬರೆಯುತ್ತಿದ್ದರು. ರೈಲು ನಿಲ್ದಾಣಗಳಿಂದ ಪೋಸ್ಟ್ ಮಾಡುತ್ತಿದ್ದರು. ಅವರ ಕೊನೆಯ ಪತ್ರ ಬಂದುದು ಝಾನ್ಸಿಯಿಂದ. ಅದಾದ ಮೇಲೆ ಯಾವುದೇ ಪತ್ರವಿಲ್ಲ. ಬಂಧಿಸಲ್ಪಟ್ಟರೋ ಅಥವಾ ಅಯೋಧ್ಯೆಗೆ ತಲಪಿದ್ದಾರೋ ನನಗದರಿಯದು.
ಡಿಸೆಂಬರ್ 6, 1992. ಬಾಬರಿ ಮಸೀದಿ ಎಂದು ಕರೆಯಲ್ಪಡುತ್ತಿದ್ದ ಕಟ್ಟಡದ ಅವಶೇಷವಾಯಿತು. ಕರಸೇವಕರ ವಿಜಯಪತಾಕೆ ಹಾರಾಡಿದ ವಿಚಾರ ರೆಡಿಯೋ ಮೂಲಕ ಬಿತ್ತರವಾಯಿತು. ಮರುದಿನದ ಪತ್ರಿಕೆಗಳಲ್ಲಿ ಅದೇ ರಂಜನೀಯ ವರದಿ. ದೇಶದ ಪ್ರಜೆಯಾಗಿ ಖುಷಿ ಪಟ್ಟಿದ್ದೆ. ಆದರೆ ಮನೆಯ ಮಗನಾಗಿ ಅಪ್ಪನಿಗೇನಾಯಿತೋ ಆತಂಕ ಕಾಣೆಯಾಗಲೇ ಇಲ್ಲ.
ಡಿಸೆಂಬರ್ 15 ಇರಬಹುದೇನೋ. ಊರಿನ ಕೆಲ ಕರಸೇವಕರು ಮರಳಿದರು. ಅಪ್ಪ ಕ್ಷೇಮವಾಗಿದ್ದಾರೆಂಬ ವಾರ್ತೆ ಅರುಹಿದರು. ತಂದೆಯ ರೈಲು ಮಾರ್ಗ ಬೇರೆಯಾದ್ದರಿಂದ ತಡವಾಗಬಹುದೆಂದೂ ತಿಳಿಸಿದರು. ಆತಂಕ ಮಾಯವಾಯಿತು. ಕರಸೇವಕನ ಮಗನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಬೀಗುತ್ತಿದ್ದೆ.
ಎರಡೋ ಮೂರೋ ದಿನಗಳ ನಂತರ ಅಪ್ಪ ಜೈತ್ಯಯಾತ್ರೆ ಮುಗಿಸಿ ಬಂದರು. ಕಟ್ಟಡದ ಧ್ವಂಸ ಕಾರ್ಯವನ್ನು ಅವರು ಕಣ್ಣಾರೆ ಕಂಡದ್ದು, ಸಂಘದ ಹಿರಿಯರು ಇದನ್ನು ಸಾಧಿಸಲು ಅದೆಷ್ಟು ಯೋಜನೆಯನ್ನು ಹಾಕಿಕೊಂಡಿದ್ದರು, ತಾತ್ಕಾಲಿಕ ದೇವಾಲಯ ನಿರ್ಮಾಣಕ್ಕೆ ಅಪ್ಪ ಕರ ಜೋಡಿಸಿದ್ದು, ಇತ್ಯಾದಿಗಳ ಕಥನ ಮಾಡುತ್ತಿದ್ದರೆ ನನಗೆ ರೋಮಾಂಚನ. ಅನೇಕ ಬಂಧು ಮಿತ್ರರು ಭೇಟಿಕೊಟ್ಟು ‘ಅಯೋಧ್ಯಾ ವಿಜಯ’ ಕಥಾಶ್ರವಣ ಮಾಡುವುದು ಹಲವು ತಿಂಗಳು ನಡೆದಿತ್ತು. ನಂತರದ್ದೆಲ್ಲ ಇತಿಹಾಸ.
28 ವರ್ಷಗಳು ಸಂದವು. ಅನೇಕ ರಾಜಕೀಯ ಪಲ್ಲಟ , ಧ್ರುವೀಕರಣಗಳಾದವು. ಕಲ್ಯಾಣ ಸಿಂಗ್, ಉಮಾಭಾರತಿಯರು ಹೊರಹೋಗಿ ಮತ್ತೆ ಒಳಬಂದರು. ಆಗ ಅರ್ಜುನನೋ ಅಥವಾ ಬಲಭೀಮನೋ ಆಗಿದ್ದ ಅಡ್ವಾಣಿಯವರು ಇಂದು ಭೀಷ್ಮನೆಂಬ ನೆಗಳ್ತೆಗೆ ಪಾತ್ರರಾದರು. ಸಂಘದ ಸರ ಸಂಘಚಾಲಕರು ಬದಲಾದರು. ನ್ಯಾಯಾಲಯದ ಧನಾತ್ಮಕ ತೀರ್ಪು ಬಂತು. ಇದೀಗ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಪರ್ವ ಕಾಲ. ಮಂದಿರ ನಿರ್ಮಾಣದ ಕ್ರಾಂತಿಯೆಂಬ(ನನ್ನ ಪ್ರಕಾರ ಇದು ಆಂದೋಲನವಷ್ಟೆ ಅಲ್ಲ) ಸಿಂಧೂವಿನಲ್ಲಿ ನನ್ನಪ್ಪನಾಗಲೀ, ನಾನಾಗಲೀ ಕೇವಲ ಒಂದು ಬಿಂದುವಷ್ಟೆ. ಸಾವಿರ ಸ್ವಯಂಸೇವಕರ ಬೆವರು ಮತ್ತು ರಕ್ತದ ಹನಿಯೇ ಮಂದಿರ ನಿರ್ಮಾಣದ ಯಶೋಗಾಥೆ. ನನ್ನ ಕಥೆ ಸುಖಾಂತ್ಯವಾಗಿದೆ. ಆದರೆ 1990 ರ ಕರಸೇವೆಯಲ್ಲಿ ಭಾಗಿಯಾದ ಅನೇಕ ಕರಸೇವಕರ ಮಕ್ಕಳು ಮತ್ತೆ ಅವರ ತಂದೆಯನ್ನು ನೋಡಿದ್ದಿಲ್ಲ. ಹೆಂಗಳೆಯರು ಗಂಡದಿರನ್ನು ಮತ್ತೆ ಕಂಡಿಲ್ಲ. ಅನೇಕರು ಪುತ್ರಶೋಕ ನಿರಂತರಮ್ ಭಾವದಲ್ಲಿರಬಹುದು. ಅನೇಕರು ಸ್ವರ್ಗಸ್ಥರಾಗಿದ್ದಾರೆ. ಹಲವರ ತ್ಯಾಗ, ಬಲಿದಾನ ಹಾಗೂ ಸಂಘದ ಹಿರಿಯರ ದೂರದೃಷ್ಟಿ ಇಂದು ಫಲ ಕೊಟ್ಟಿದೆ. ಬೃಹತ್ ಮಂದಿರ ನಿರ್ಮಾಣ ಒಂದು ನಿಮಿತ್ತವಾಗಿ ಭವ್ಯ ಭಾರತ ನಿರ್ಮಾಣವಾಗಲಿ.
ಕೊನೇ ಹನಿ: ರಕ್ತದೋಕುಳಿ ಇಲ್ಲದ ಚರಿತ್ರೆ ಇಲ್ಲ. ನಮ್ಮ ಈಗಿನ ಸುಖೀ ಜೀವನ ಇನ್ಯಾರದೋ ತ್ಯಾಗ ಬಲಿದಾನಗಳ ಕೊಡುಗೆ. ಅದರ ಪರಿವೆಯಿಲ್ಲದಿರೆ ಕೃತಘ್ನತೆಯಾದೀತು ಎಂಬ ಅರಿವು ಇದ್ದರೆ ಸಾಕು. ಸಾಧ್ಯವಾದಲ್ಲಿ ಮುಂದಿನ ಪೀಳಿಗೆಗೆ ಇಂದಿನ ಶಾಂತಿಯನ್ನು ದಾಟಿಸೋಣ.
ಮುರಾರಿ ಚಕ್ರಕೋಡಿ ✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.