ನವದೆಹಲಿ: ಕೋವಿಡ್-19 ವೈರಸ್ ತೀವ್ರವಾಗಿ ಆವರಿಸಲಾರಂಭಿಸಿದ್ದು, ದೇಶದಲ್ಲಿ ಆಗಸ್ಟ್ ತಿಂಗಳ ಕೊನೆಯವರೆಗೆ ಶಾಲಾ ಕಾಲೇಜುಗಳನ್ನು ಆರಂಭ ಮಾಡಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಆಗಸ್ಟ್ 1 ರಿಂದ ಅನ್ವಯವಾಗುವಂತೆ ಲಾಕ್ಡೌನ್ ತೆರವಿನ 3 ನೇ ಹಂತದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಆಗಸ್ಟ್ ಅಂತ್ಯದವರೆಗೆ ಶಾಲಾರಂಭ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಕಲಾಗಿದ್ದ ರಾತ್ರಿ ಕರ್ಫ್ಯೂ ವನ್ನು ತೆಗೆದು ಹಾಕಲಾಗಿದೆ ಎಂದೂ ಸರ್ಕಾರ ಈ ಮಾರ್ಗಸೂಚಿಯಲ್ಲಿ ಮಾಹಿತಿ ನೀಡಿದೆ. ಜೊತೆಗೆ ಕಂಟೈನ್ಮೆಂಟ್ ವಲಯಗಳನ್ನು ಬಿಟ್ಟು ಉಳಿದೆಡೆಯಲ್ಲಿ ಆಗಸ್ಟ್ 5 ರಿಂದ ತೊಡಗಿದಂತೆ ಯೋಗ ಕೇಂದ್ರಗಳು, ಜಿಮ್ ಗಳನ್ನು ಆರಂಭ ಮಾಡಬಹುದಾಗಿದೆ ಎಂದೂ ಸರ್ಕಾರ ತಿಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತೊಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿರುವುದಾಗಿಯೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕಂಟೈನ್ಮೆಂಟ್ ಪ್ರದೇಶಗಳಿಗೆ ಸಂಬಂಧಿಸಿದಂತೆ ಆಗಸ್ಟ್ 31 ರವರೆಗೂ ಲಾಕ್ಡೌನ್ ಮುಂದುವರಿಯಲಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಲಾಕ್ಡೌನ್ ತೆರವು ಅಥವಾ ಮತ್ತಷ್ಟು ಕಠಿಣ ಪ್ರಕ್ರಿಯೆಗಳು ನಡೆಯಲಿವೆ. ಈ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯಾಯ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಕ್ರೀಡಾ ಸಮಾರಂಭ ಮೊದಲಾದ ಹೆಚ್ಚು ಜನರು ಭಾಗವಹಿಸುವ ಯಾವುದೇ ಕಾರ್ಯಕ್ರಮಗಳಿಗೂ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.
ಈಜುಕೊಳ, ಮೆಟ್ರೋ, ಅಡಿಟೋರಿಯಂ, ಚಿತ್ರಮಂದಿರ ಮೊದಲಾದವುಗಳನ್ನು ತೆರೆಯುವಂತಿಲ್ಲ. ಜೊತೆಗೆ ಸಾರ್ವಜನಿಕವಾಗಿ ಹೆಚ್ಚು ಜನರು ಸೇರುವುದನ್ನು ಸಹ ನಿಷೇಧಿಸಲಾಗಿದೆ ಎಂದೂ ಕೇಂದ್ರದ ಮಾರ್ಗಸೂಚಿ ಸ್ಪಷ್ಟವಾಗಿ ಹೇಳಿದೆ. ದೇಶದೆಲ್ಲೆಡೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆಯೂ ಕೇಂದ್ರ ಸರ್ಕಾರ ಈ ಮಾರ್ಗಸೂಚಿಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.