ಸದಾ ಕಾಲ ಒಂದಿಲ್ಲೊಂದು ರೀತಿಯ ಕುತಂತ್ರಗಳ ಮೂಲಕ, ಸಮಾಜಕ್ಕೆ ಮಾರಕವಾಗುವಂತಹ ಕ್ರಮಗಳನ್ನು ವಿಶ್ವದ ಇತರ ದೇಶಗಳ ಮೇಲೆ ಪ್ರಯೋಗಿಸುವ ಮೂಲಕವೇ ಚೀನಾ ಸುದ್ದಿಯಾಗುತ್ತಿದೆ. ಬೇರೆ ರಾಷ್ಟ್ರಗಳಿಗೆ ತೊಂದರೆ ಮಾಡದಿದ್ದಲ್ಲಿ ತಿಂದಿದ್ದು ಅರಗುವುದಿಲ್ಲವೇನೋ ಎಂಬಂತೆ ಚೀನಾ ವರ್ತಿಸುತ್ತಲೇ ಇರುತ್ತದೆ. ಭಾರತದ ಮೇಲೆಯೂ ಚೀನಾ ಇದೇ ಕ್ರಮವನ್ನು ಅನುಸರಿಸುವ ಮೂಲಕ ನರಿ ಬುದ್ಧಿ ಪ್ರದರ್ಶನ ಮಾಡಿತ್ತು. ಇನ್ನು ಬೌದ್ಧ ಧರ್ಮಕ್ಕೆ ಹೆಸರು ಪಡೆದಿರುವ ಟಿಬೆಟ್ ಮೇಲೆಯೂ ಚೀನಾ ತನ್ನ ಪ್ರಹಾರ ಮಾಡುತ್ತಲೇ ಬಂದಿದೆ. ಟಿಬೆಟ್ನ ಸ್ವಾತಂತ್ರ್ಯ ಸಂಗ್ರಾಮ ಹತ್ತಿಕ್ಕುವ ನಿಟ್ಟಿನಲ್ಲಿಯೂ ಚೀನಾ ಪ್ರಯತ್ನ ನಡೆಸಿದೆ. ಜೊತೆಗೆ ತಾನು ವಿಧಿಸಿದ ನಿಯಮಗಳನ್ನು ಒಪ್ಪಿಕೊಳ್ಳುವಂತೆಯೂ ಚೀನಾ ಟಿಬೆಟ್ ಎಂಬ ಪುಟಾಣಿ ರಾಷ್ಟ್ರದ ಮೇಲೆ ಒತ್ತಡ ಹೇರುತ್ತಲೇ ಬಂದಿದೆ.
ಕೆಲವು ದಶಕಗಳಿಂದಲೂ ಟಿಬೆಟ್ನ ಧಾರ್ಮಿಕತೆಯ ಮೇಲೆ ದಾಳಿಯನ್ನು ಮಾಡುತ್ತಲೇ ಬಂದಿರುವ ಚೀನಾ, ಕ್ಸಿ ಜಿನ್ ಪಿಂಗ್ ಅವರು ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಅತಿರೇಕಕ್ಕೆ ಏರಿದೆ ಎಂದೇ ಹೇಳಬಹುದು. ಟಿಬೆಟ್ನ ಧಾರ್ಮಿಕತೆಯನ್ನು, ಆಚರಣೆ, ಸಂಪ್ರದಾಯಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿಯೂ ಟಿಬೆಟ್ನಲ್ಲಿ ಚೀನಾ ಸರ್ಕಾರ ಇತ್ತೀಚೆಗೆ ಹಲವಾರು ಅಭಿಯಾನಗಳನ್ನು ನಡೆಸಿಕೊಂಡೇ ಬಂದಿದೆ. ಬೌದ್ಧ ಧರ್ಮ ಹರಡುವುದನ್ನು ತಡೆಯುವ ಉದ್ದೇಶದಿಂದ ಚೀನಾ ಸರ್ಕಾರ ಹಲವು ರೀತಿಯ ಅನ್ಯಾಯಗಳನ್ನು ನಡೆಸುತ್ತಲೇ ಬಂದಿದೆ. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ಪಂಚೆನ್ ಲಾಮಾ ಅವರ ಅಪಹರಣ. ಪಂಚೆನ್ ಲಾಮಾ ಅವರು ಬದುಕಿದ್ದಾರೋ, ಸತ್ತಿದ್ದಾರೋ ಎಂಬ ಸುಳಿವೂ ಸಹ ಇನ್ನೂ ಪತ್ತೆಯಾಗಿಲ್ಲವಾಗಿದ್ದು, ಇದು ಚೀನಾ ಟಿಬೆಟ್ನ ಮೇಲೆ ನಡೆಸುತ್ತಿರುವ ನಿರಂತರ ಅನ್ಯಾಯಕ್ಕೆ ಸಾಕ್ಷಿ ಎಂದೇ ಹೇಳಬಹುದಾಗಿದೆ.
ಜೊತೆಗೆ ಟಿಬೆಟ್ನ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಬೌದ್ಧ ಧರ್ಮದ ಆಚರಣೆಗಳನ್ನು ಆಚರಿಸದಂತೆ ನಿಷೇಧ ಹೇರಿ ಟಿಬೆಟ್ನಲ್ಲಿ ಬೌದ್ಧ ಧರ್ಮದ ಪ್ರಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಸಿತ್ತು. ಟಿಬೆಟ್ನ ಪರಿಸರ, ಅಲ್ಲಿನ ಜನರ ದೇಶಪ್ರೇಮ, ಜನಾಂಗೀಯ ಏಕತೆ ಹಾಗೂ ಪ್ರವಾಸೋದ್ಯಮಗಳನ್ನು ಸಹ ಬಳಕೆ ಮಾಡಿಕೊಂಡು ಅಲ್ಲಿ ಬೌದ್ಧ ಧರ್ಮವನ್ನು ಕುಗ್ಗಿಸುವ, ಅಲ್ಲಿನ ಜನರೊಳಗಿನ ದೇಶಪ್ರೇಮ, ಸ್ವಾತಂತ್ರ್ಯದ ಕಿಚ್ಚನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಸಹ ಕುತಂತ್ರಿ ಚೀನಾ ಮಾಡುತ್ತಲೇ ಬರುತ್ತಿದೆ.
ಸ್ವಚ್ಛ ಪರಿಸರ ನಿರ್ಮಾಣ ಎಂಬ ಹೆಸರಿನಲ್ಲಿ ಟಿಬೆಟ್ನಲ್ಲಿ ಅಲ್ಲಿನ ಧಾರ್ಮಿಕತೆಗೆ ಸಂಬಂಧಿಸಿದ ಧ್ವಜಗಳನ್ನು ತೆಗೆದು ಹಾಕುವಂತೆಯೂ ಅಲ್ಲಿನ ಅಧಿಕಾರಿಗಳಿಗೆ, ಮಠ ಮಂದಿರಗಳಿಗೂ ಚೀನಾ ಆದೇಶವನ್ನು ಹೊರಡಿಸಿದೆ. ಪೂರ್ವ ಟಿಬೆಟ್ನ ಪ್ರತಿ ಹಳ್ಳಿಗಳಲ್ಲಿನ ಮಠ ಮಂದಿರಗಳಿಗೆ ಪ್ರಾರ್ಥನಾ ಧ್ವಜಗಳನ್ನು ತೆರವು ಮಾಡುವಂತೆಯೂ ಅಲ್ಲಿನ ಬಿಕ್ಕುಗಳಿಗೆ, ಜನರಿಗೆ ಚೀನಾ ಪ್ರೇರಿತ ಅಧಿಕಾರಿಗಳು ಸೂಚಿಸಿದ್ದಾರೆ. ಇವೆಲ್ಲವುಗಳೂ ಪರಿಸರ ನೈರ್ಮಲ್ಯ ಭಾಗ ಎಂಬುದಾಗಿಯೇ ನಂಬಿಸುವ ಕೆಲಸವನ್ನು ಚೀನಾ ಮಾಡಿದೆ. ಮಾಚಿನ್ ಕೌಂಟಿ ಮತ್ತು ಗೊಗೋಯ್ ಪ್ರದೇಶಗಳಲ್ಲಿಯೂ ಎನ್ವಿರಾನ್ಮೆಂಟಲ್ ಕ್ಲೀನ್ ಅಪ್ ಡ್ರೈವ್ ಹೆಸರಿನಲ್ಲಿ ಧಾರ್ಮಿಕ ನಂಬಿಕೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದೂ ಫ್ರೀ ಟಿಬೆಟ್ (ಟಿಬೆಟನ್ನು ಸ್ವಾತಂತ್ರ್ಯಗೊಳಿಸಿ) ಮಾಹಿತಿ ನೀಡಿದೆ.
ಆ ಮೂಲಕ ಶತಮಾನಗಳಿಂದ ಟಿಬೆಟ್ ಸಂಸ್ಕೃತಿಯ ಭಾಗವಾಗಿರುವ ಪ್ರಾರ್ಥನಾ ಧ್ವಜಗಳಿಗೆ ಚೀನಾ ಅವಮಾನ ಮಾಡುತ್ತಿದೆ. ಟಿಬೆಟ್ ನ ಪ್ರತಿ ಹಳ್ಳಿಗಳಲ್ಲಿನ ಮನೆಗಳಲ್ಲಿಯೂ, ಮಠಗಳು, ಪರ್ವತ, ಗುಡ್ಡ ಪ್ರದೇಶಗಳು ಹಾಗೂ ಇನ್ನಿತರ ಪವಿತ್ರ ಸ್ಥಳಗಳ ಮೇಲೆಯೂ ಬೌದ್ಧ ಧರ್ಮದ ಪ್ರಾರ್ಥನಾ ಧ್ವಜಗಳು ಹಾರಾಡುತ್ತಿರುತ್ತವೆ. ಆದರೆ ಈ ಸಂಪ್ರದಾಯದ ಮೇಲೆಯೂ ಚೀನಾ ತನ್ನ ಕೆಂಗಣ್ಣು ಬೀರಿದೆ. ಅವುಗಳನ್ನು ನಿಷೇಧಿಸುವಂತೆಯೂ ನಿಯಮ ರೂಪಿಸಿದೆ.
ಜೊತೆಗೆ ಹೊಸ ಜನಾಂಗೀಯ ಏಕತೆ ಕಾನೂನನ್ನು ಉತ್ತೇಜಿಸುವ ಸಲುವಾಗಿ ಟಿಬೆಟ್ ಜನರನ್ನು ಬ್ರೈನ್ ವಾಷ್ ಮಾಡುವತ್ತಲೂ ಚೀನಾ ಚಿತ್ತ ಹರಿಸಿದೆ. ಟಿಬೆಟ್ನ ಜನರಲ್ಲಿ ಬೌದ್ಧ ವಿರೋಧಿ ಅಭಿಯಾನವನ್ನು ನಡೆಸುವ ಮೂಲಕ ಧರ್ಮವನ್ನು ಛಿದ್ರಗೊಳಿಸುವ ಜೊತೆಗೆ ಜನರೊಳಗಿನ ಏಕತೆಯನ್ನು ಮುರಿದು ಹಾಕುವ ಕೆಲಸವನ್ನು ಚೀನಾ ಮಾಡುತ್ತಲೇ ಬಂದಿದೆ. ಇಂತಹ ಬೌದ್ಧ ವಿರೋಧಿ ಅಭಿಯಾನಗಳನ್ನು ನಡೆಸಲು ಚೀನಾ ಸಮಿತಿಗಳನ್ನು ಆರಂಭಿಸಿದೆ. 2020ರ ಜನವರಿ ತಿಂಗಳಲ್ಲಿ ಅಂಗೀಕರಿಸಲ್ಪಟ್ಟ ಹೊಸ ಜನಾಂಗೀಯ ಏಕತೆ ಕಾನೂನಿನ ಮೂಲಕ ಭಿಕ್ಷುಗಳಲ್ಲಿ ಪ್ರತ್ಯೇಕವಾದವನ್ನು ವಿರೋಧಿಸುವ ಮತ್ತು ಯುನೈಟೆಡ್ ಚೀನಾ ವನ್ನು ಬೆಂಬಲಿಸುವಂತೆಯೂ ತಿಳಿಸುವ ಕೆಲಸವನ್ನು ಚೀನಾ ಮಾಡುತ್ತಿದೆ. ಜೊತೆಗೆ ದೇಶಭಕ್ತರಾಗುವುದು, ಚೀನಾಗೆ ಬೆಂಬಲ ಸೂಚಿಸುವುದು ತಮ್ಮ ಕರ್ತವ್ಯ ಎಂದು ನಂಬಿಸುವ, ಬಿಂಬಿಸುವ ಕೆಲಸವನ್ನೂ ಚೀನಾ ಮಾಡುತ್ತಿದೆ. ಜೊತೆಗೆ ಬಿಕ್ಕುಗಳನ್ನು ಬಳಸಿಕೊಂಡು ಯುನೈಟೆಡ್ ಚೀನಾ ದೇಶಕ್ಕಾಗಿ ಆಧ್ಯಾತ್ಮಿಕತೆಯನ್ನು ಬಳಸಿಕೊಳ್ಳುವ ಕೆಲಸವನ್ನು ಚೀನಾ ಟಿಬೆಟ್ನಲ್ಲಿ ಮಾಡುತ್ತಿದೆ.
ಹೀಗೆ ಚೀನಾವು ಟಿಬೆಟ್ ನ ಜನರ ಮನಸ್ಸನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಟಿಬೆಟ್ ಮತ್ತು ಚೀನಾ ನಡುವಿನ ಮದುವೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಚೀನಾ ಮಾಡುತ್ತಿದೆ.
ಜೊತೆಗೆ ಟಿಬೆಟ್ನ ಜನರಲ್ಲಿ ಆಳವಾಗಿ ಬೇರೂರಿರುವ ಧಾರ್ಮಿಕ ನಂಬಿಕೆಗಳನ್ನು ಮುರಿಯುವ ನಿಟ್ಟಿನಲ್ಲಿಯೂ ಚೀನಾ ಪ್ರಯತ್ನಗಳನ್ನು ನಡೆಸುತ್ತಲೆ ಬಂದಿದೆ. ಚೀನಾ ಸರ್ಕಾರವು ಟಿಬೆಟ್ ನಲ್ಲಿ ಸಾರ್ವಜನಿಕ ಮಾಹಿತಿ, ಸುರಕ್ಷತೆ ಮೊದಲಾದ ಹೆಸರಿನಲ್ಲಿ ಬೌದ್ಧ ವಿರೋಧಿ ಅಭಿಯಾನಗಳನ್ನು ಆರಂಭ ಮಾಡಿದೆ. ಧಾರ್ಮಿಕ ಮೂಢನಂಬಿಕೆ ಗಳನ್ನು ದಮನ ಮಾಡುವ ಹೆಸರಿನಲ್ಲಿ ಜನರಲ್ಲಿರುವ ನಂಬಿಕೆಯನ್ನು ಹತ್ತಿಕ್ಕುವ ಕೆಲಸವನ್ನೂ ಚೀನಾ ಸರ್ಕಾರ ಮಾಡುತ್ತಲೇ ಬಂದದೆ. ಟಿಬೆಟ್ನ ಪುರಾತನ ಪದ್ಧತಿಗಳಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿಯೂ ಚೀನಾ ಸರ್ಕಾರ ಪೂರಕ ಕುತಂತ್ರಗಳನ್ನು ನಡೆಸುತ್ತಲೇ ಬಂದಿದೆ. ಕೊರೋನಾ ಸಂದರ್ಭದಲ್ಲಿಯೂ ಚೀನಾ ದಲೈ ಲಾಮಾ ಬಗ್ಗೆ ಮಾತನಾಡುವ, ಬೌದ್ಧ ಧರ್ಮವನ್ನು ಪ್ರಚಾರ ಪಡಿಸುವ ಜನರ ವಿರುದ್ಧ ಅಕ್ರಮಗಳನ್ನೆಸಗುವ, ಆ ಮೂಲಕ ಅವರನ್ನು ಹತ್ತಿಕ್ಕುವ ಕೆಲಸವನ್ನೂ ಚೀನಾ ಮಾಡಿದೆ. ಜೊತೆಗೆ ಚೀನಾ ಸರ್ಕಾರವನ್ನು ಟೀಕಿಸುವ ಜನರನ್ನು ಬಂಧಿಸುವ ಕೆಲಸವನ್ನು ಚೀನಾ ಮಾಡುತ್ತಿದೆ.
ಟಿಬೆಟ್ ಅನ್ನು ವಶಕ್ಕೆ ಪಡೆದುಕೊಳ್ಳುವ ಸಲುವಾಗಿ ಚೀನಾ ಕೈಗೊಂಡ ಮತ್ತೊಂದು ಕ್ರಮವೆಂದರೆ, ಪ್ರವಾಸೋದ್ಯಮಗಳನ್ನು ಉತ್ತೇಜಿಸುವ ಹೆಸರು ಹೇಳಿ ಬೌದ್ಧ ತಾಣಗಳನ್ನು ನಾಶಪಡಿಸಿದ್ದು. ಸೆಪ್ಟೆಂಬರ್ 2019ರಲ್ಲಿ ಟಿಬೆಟ್ನ ಅತೀ ದೊಡ್ಡ ಪ್ರವಾಸಿ ತಾಣವಾದ ಯಾರ್ಚೆನ್ ಗಾರ್ಡ್ನ ಅರ್ಧದಷ್ಟು ಪ್ರದೇಶವನ್ನು ಚೀನಾ ನೆಲಸಮ ಮಾಡಿದೆ. ಆ ಪ್ರದೇಶದಲ್ಲಿ ವಾಸಿಸುವ ಜನರ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚೀನಾ ಈ ಹುಚ್ಚು ಸಾಹಸವನ್ನು ನಡೆಸಿತ್ತು. ಚೀನಾದ ಈ ಕುಕೃತ್ಯದಿಂದಾಗಿ ಅಲ್ಲಿ ವಾಸಿಸುತ್ತಿದ್ದ ಸನ್ಯಾಸಿಗಳು, ಸಾಮಾನ್ಯ ಜನರು ವಾಸ್ತವ್ಯ ಕಳೆದುಕೊಳ್ಳಬೇಕಾಗಿ ಬಂತು. ಅಲ್ಲಿ ವಾಸವಿದ್ದ ಸನ್ಯಾಸಿಗಳನ್ನು ಚೀನಾ ಬಂಧಿಸುವ ಕೆಲಸವನ್ನೂ ಮಾಡಿತ್ತು. ಅಲ್ಲಿಂದ ಚೀನಾವನ್ನು ಬೆಂಬಲಿಸುವಂತಹ ಶಿಕ್ಷಣವನ್ನು ಅವರಲ್ಲಿ ಹೇರುವ ಕೆಲಸವನ್ನೂ ಚೀನಾ ಸರ್ಕಾರ ಮಾಡಿತು. ಚೀನಾದ ಈ ನಡೆಯನ್ನು ಟಿಬೆಟ್ ನಿಂದ ಗಡೀಪಾರು ಶಿಕ್ಷೆಗೊಳಪಟ್ಟ ಬೌದ್ಧ ಧರ್ಮಗುರು ದಲೈ ಲಾಮಾ ಅವರು ಖಂಡಿಸಿದ್ದಾರೆ.
ಯಾರ್ಚಿನ್ ಪ್ರದೇಶದಲ್ಲಿ ಟಿಬೆಟ್ನ ಬೌದ್ಧ ಭಿಕ್ಷುಗಳು ಸ್ವತಂತ್ರರಾಗಿ ಜೀವಿಸುವುದಕ್ಕೆ ಬೇಕಾದ ಸನ್ಯಾಸಿಗಳ ನಗರವನ್ನು 1985 ರಲ್ಲಿ ಟಿಬೆಟ್ ಸಮುದಾಯವು ಸ್ಥಾಪನೆ ಮಾಡಿತು. ಇಲ್ಲಿ ಸುಮಾರು 10,000 ಕ್ಕೂ ಅಧಿಕ ಸನ್ಯಾಸಿಗಳು ಆ ಕಾಲದಲ್ಲಿಯೇ ಅಲ್ಲಿ ನೆಲೆಯೂರಿದ್ದರು. ಚೀನೀಯರು ಈ ಸನ್ಯಾಸಿಗಳ ನಗರದ ಮೇಲೆಯೂ ಆಕ್ರಮಣ ನಡೆಸಿ, ಅವರ ಜೀವನದ ಮೇಲೆಯೂ ಹಾನಿಯನ್ನೆಸಗುವ ಕೆಲಸವನ್ನು ಮಾಡಿದ್ದಾರೆ. ಆ ಮೂಲಕ ಸನ್ಯಾಸಿಗಳ ನಗರ ಎಂಬ ಚೀನಾ ಪ್ರಸಿದ್ಧ ಪ್ರವಾಸಿ ತಾಣವನ್ನು ನಾಶಗೊಳಿಸಿದ್ದಾರೆ. ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಚೀನಾ ಟಿಬೆಟ್ನ ಅದೆಷ್ಟೋ ಪ್ರದೇಶಗಳನ್ನು ನಾಶಗೊಳಿಸುವ ದುಷ್ಕೃತ್ಯವನ್ನು ಎಸಗಿದೆ. ಬೌದ್ಧ ಭಿಕ್ಷುಗಳು ತಮಗೆ ತೊಂದರೆ ನೀಡದಂತೆ ಚೀನಾಗೆ ಪದೇ ಪದೆ ಮನವಿ ನೀಡಿದರೂ, ಚೀನಾ ಮಾತ್ರ ಅವರನ್ನು ಕಾಡುವ, ಅವರ ಆಶ್ರಯವನ್ನು ಮುರಿಯುವ ಕೆಲಸವನ್ನು ಮಾಡಿದೆ.
ಇನ್ನು ಚೀನಾ ನಾಶ ಮಾಡಿರುವ ಯಾರ್ಚಿನ್ ಪ್ರದೇಶವನ್ನು ಸದ್ಯ ಪ್ರವಾಸಿ ತಾಣವಾಗಿ ಮಾಡಿದೆ. ಅಲ್ಲಿ ಕಾರು ಪಾರ್ಕಿಂಗ್, ಹೊಟೇಲ್ ಮೊದಲಾದ ಎಲ್ಲಾ ಅನುಕೂಲಗಳನ್ನು ಪ್ರವಾಸಿಗರಿಗೆ ಮಾಡಿಕೊಡುವ ಮೂಲಕ ಚೀನಾ ತನ್ನ ಭಂಡಾರ ಭದ್ರ ಮಾಡಿಕೊಳ್ಳುವ ನಿಟ್ಟಿನಲ್ಲಿಯೂ ಗಮನ ಕೇಂದ್ರೀಕರಿಸಿದೆ. ಜೂನ್ 2016 – ಮೇ 2017 ರ ವರೆಗೆ ಚೀನಾ ಟಿಬೆಟ್ ನ ಅದೆಷ್ಟೋ ಬೌದ್ಧ ತಾಣಗಳನ್ನು ನಾಶಗೊಳಿಸಿ, ಸನ್ಯಾಸಿಗಳನ್ನು ಬಲವಂತವಾಗಿ ಅಲ್ಲಿಂದ ಹೊರಹಾಕುವ ಕೆಲಸವನ್ನೂ ಮಾಡಿದೆ. ಟಿಬೆಟ್ ನ ಲಾರಂಗ್ ಘರ್ ಪ್ರದೇಶದಲ್ಲಿ 4700 ಕ್ಕೂ ಅಧಿಕ ಕಟ್ಟಡಗಳನ್ನು ಕೆಡವಿ ಹಾಕುವ ಕೆಲಸ ಚೀನಾದಿಂದ ನಡೆದಿದೆ. ಆ ಪ್ರದೇಶದಲ್ಲಿ ರಸ್ತೆ ಅಗಲೀಕರಣ, ಹೊಟೇಲ್ ಮೊದಲಾದವುಗಳನ್ನು ನಿರ್ಮಿಸಿ ಪ್ರವಾಸಿಗರನ್ನು ಸೆಳೆಯುವ ಮೂಲಕವೂ ಚೀನಾ ತನ್ನ ಬೊಕ್ಕಸ ತುಂಬಿಸುವ ಕೆಲಸ ಮಾಡುತ್ತಿದೆ.
ಒಟ್ಟಿನಲ್ಲಿ ಅಹಿಂಸೆಯೇ ಪರಮಧರ್ಮ ಎಂದು ನಂಬಿರುವ ಬೌದ್ಧರ ನಾಡು ಟಿಬೆಟ್ ಮೇಲೆಯೂ ಚೀನಾದ ವಕ್ರದೃಷ್ಟಿ ಬಿದ್ದಿದೆ. ಅಲ್ಲಿನ ಜನರ ಸ್ವಾತಂತ್ರ್ಯದ ಕನಸನ್ನು ಭಗ್ನ ಮಾಡುವುದಕ್ಕೆ ಬೇಕಾದ ಎಲ್ಲ ರೀತಿಯ ಅನ್ಯಾಯಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಚೀನಾ ನೀಡುತ್ತಲೇ ಬಂದಿದೆ. ಧಾರ್ಮಿಕ ನಂಬಿಕೆಗಳ ಮೇಲೆ ತನ್ನ ಹಿಡಿತವನ್ನು ಸಾಧಿಸುವುದು ,ಪರಿಸರದ ಹೆಸರಿನಲ್ಲಿ ವಂಚನೆ, ಪ್ರವಾಸೋದ್ಯಮ ಹೆಸರಿನಲ್ಲಿ ಅಲ್ಲಿನ ಜನರ ಬದುಕನ್ನು ಬೀದಿಗೆ ತರುವ ಮೂಲಕವೇ ಟಿಬೆಟ್ಗೆ ಇನ್ನಿಲ್ಲದ ಹಿಂಸೆ ಚೀನಾ ನೀಡುತ್ತಿದೆ ಎಂದರೂ ತಪ್ಪಾಗಲಾರದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.