ಭೂಮಿಯ ಮೇಲಿನ ಕಲ್ಪವೃಕ್ಷ ಎಂದೇ ಪ್ರಖ್ಯಾತಿ ಪಡೆದಿರುವ ಮರ ತೆಂಗಿನ ಮರ. ಈ ಮರದ ಕಾಯಿ, ಹಣ್ಣು, ಹೂ, ಗರಿ, ಕಾಂಡ, ಬೇರು ಹೀಗೆ ಪ್ರತಿಯೊಂದು ಸಹ ಮಾನವನ ಉಪಯೋಗಕ್ಕೆ ಯೋಗ್ಯವೇ ಹೌದು. ದಿನಬಳಕೆಯಿಂದ ಹಿಡಿದು ದೈವಿಕ ಕಾರ್ಯದವರೆಗೂ ತೆಂಗು ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ತೆಂಗಿನ ಮರದ ಗರಿಗಳಿಂದ ಮನೆಯ ಮೇಲ್ಚಾವಣಿ, ಪೊರಕೆ, ಚೀಲ, ಟೂತ್ಪಿಕ್ ಗಳು ಸೇರಿದಂತೆ ಇನ್ನೂ ಅನೇಕ ಪರ್ಯಾಯ ವಸ್ತುಗಳನ್ನು ತಯಾರಿಸಬಹುದಾಗಿದೆ. ಸದ್ಯ ಬೆಂಗಳೂರು ಮೂಲದ ಪ್ರಾಧ್ಯಪಕರೊಬ್ಬರು ತೆಂಗಿನ ಗರಿಗಳಿಂದ ಪರಿಸರ ಸ್ನೇಹಿ ಸ್ಟ್ರಾಗಳನ್ನು ತಯಾರಿಸಿದ್ದು, ಅವುಗಳ ಮೂಲಕ ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಸ್ಟ್ರಾ ಗಳಿಗೆ ಪರ್ಯಾಯವನ್ನು ಕಂಡುಹುಡುಕಿದ್ದಾರೆ.
ಬೆಂಗಳೂರಿನ ಕ್ರೈಸ್ಟ್ ವಿಶ್ವ ವಿದ್ಯಾಲಯದ ಶಾಜಿ ವರ್ಗಿಸ್ ಅವರೇ ತೆಂಗಿನ ಗರಿಗಳ ಸ್ಟ್ರಾ ಸಂಶೋಧನೆ ಮಾಡಿದ ವ್ಯಕ್ತಿ. 2017 ರಲ್ಲಿಯೇ ತೆಂಗಿನ ಗರಿಗಳ ಸ್ಟ್ರಾ ಗಳನ್ನು ಸಿದ್ಧಪಡಿಸುವ ಮೂಲಕ ಹೀಗೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ತಮ್ಮ ಕ್ಯಾಂಪಸ್ ನಲ್ಲಿ ಬಿದ್ದಿದ್ದ ತೆಂಗಿನ ಗರಿಗಳನ್ನು ಕಂಡಾಗ ಅವರ ಮನಸ್ಸಿನಲ್ಲಿ ಇದರಿಂದ ಏನನ್ನಾದರೂ ಸಿದ್ಧಪಡಿಸಬೇಕು ಎಂಬ ಬಯಕೆಯೊಂದು ಹುಟ್ಟಿಕೊಳ್ಳುತ್ತದೆ. ಆ ಬಯಕೆಯ ಮೂರ್ತ ರೂಪವೇ ತೆಂಗಿನ ಗರಿಗಳ ಸ್ಟ್ರಾ. ಹಳ್ಳಿ ಪ್ರದೇಶಗಳಲ್ಲಿ ಬೆಂಕಿಯುರಿಸಲು ಬಳಕೆ ಮಾಡುವ ತೆಂಗಿನ ಗರಿಗಳನ್ನು ವಾಣಿಜ್ಯ ಉದ್ಯಮಕ್ಕಾಗಿ ಹೇಗೆಲ್ಲಾ ಬಳಸುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಕೀರ್ತಿ ಶಾಜಿ ವರ್ಗಿಸ್ ಅವರಿಗೆ ಸಲ್ಲುತ್ತದೆ ಎಂದರೂ ತಪ್ಪಾಗಲಾರದು.
2017ರಲ್ಲಿಯೇ ಈ ಆಲೋಚನೆಗೆ ಮೂರ್ತ ರೂಪ ಕೊಟ್ಟ ಶಾಜಿ ಅವರಿಗೆ ಆ ಸಂಧರ್ಭದಲ್ಲಿಯೇ 10ಕ್ಕೂ ಅಧಿಕ ದೇಶಗಳಿಂದ 20 ದಶಲಕ್ಷಕ್ಕೂ ಅಧಿಕ ತೆಂಗಿನ ಗರಿಯ ಸ್ಟ್ರಾ ಗೆ ಬೇಡಿಕೆಗಳು ಬರುತ್ತದೆ. 2018ರಿಂದ ತೊಡಗಿದಂತೆ ಸನ್ಬರ್ಡ್ ಸ್ಟ್ರಾ ಎಂಬ ಬ್ರಾಂಡ್ ಹೆಸರಿನಲ್ಲೇ ಈ ಸ್ಟ್ರಾ ಗಳನ್ನು ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ತೆಂಗಿನ ಗರಿಗಳಿಂದ ನೈಸರ್ಗಿಕ ಮೇಣವನ್ನು ತಯಾರಿಸಿ ಸ್ಟ್ರಾ ಗಳನ್ನು ಶಿಲೀಂಧ್ರ ಮುಕ್ತವನ್ನಾಗಿ ಮಾಡುವಲ್ಲಿ ಸಹ ಇವರು ಪ್ರಯತ್ನ ಮಾಡಿದ್ದಾರೆ. ಇವರ ಈ ಕೆಲಸಕ್ಕೆ ಅವರ ಸಂಸ್ಥೆಯೂ ಸಹ ಬೆಂಬಲ ನೀಡಿದೆ. ಇವರ ಈ ಸಂಶೋಧನೆಯನ್ನು ಮುಖ್ಯ ಭೂಮಿಕೆಗೆ ತರುವಲ್ಲಿ ಇವರ ವಿದ್ಯಾರ್ಥಿಗಳು ಸಹ ಕೈಜೋಡಿಸಿದ್ದಾರೆ.
ಇನ್ನು ಇವರು ತಯಾರಿಸಿದ ಸ್ಟ್ರಾಗಳನ್ನು ಎಲ್ಲಾ ರೀತಿಯ ಪಾನೀಯಗಳನ್ನು ಸೇವಿನೆ ಮಾಡುವ ಮೂಲಕ ಪರೀಕ್ಷೆ ಮಾಡಲಾಗಿದೆ. 4 ರಿಂದ 6 ಮೀಟರ್ ಉದ್ದವಿರುವ ಈ ಸ್ಟ್ರಾಗಳು ಸುಮಾರು 6 ತಿಂಗಳುಗಳ ಕಾಲ ಬಾಳಿಕೆ ಬರುತ್ತವೆ ಎಂಬುದು ಇವರ ಅಂಬೋಣ. ಇವುಗಳನ್ನು ಎಲ್ಲಾ ರೀತಿಯ ಹೊಟೇಲ್, ರೆಸ್ಟೋರೆಂಟ್ ಗಳಲ್ಲಿಯೂ ಬಳಕೆ ಮಾಡಬಹುದಾಗಿದ್ದು, ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಬಳಕೆ ಮಾಡಬಹುದಾಗಿದೆ. ಜೊತೆಗೆ ಪ್ರಕೃತಿಗೂ ಇದರಿಂದ ಯಾವುದೇ ಹಾನಿ ಇಲ್ಲ. ಹಾಗೆಯೇ ಇದು ಹೆಚ್ಚು ಸ್ಟೈಲಿಶ್ ಸಹ ಆಗಿದ್ದು ಗ್ರಾಹಕರನ್ನು ಗೆಲ್ಲುತ್ತದೆ ಎಂಬುದರಲ್ಲಿಯೂ ಯಾವುದೇ ಸಂದೇಹವಿಲ್ಲ.
ಮೂರು ವಿಧಾನಗಳಲ್ಲಿ ತೆಂಗಿನ ಗರಿಗಳನ್ನು ಶುದ್ಧೀಕರಣಗೊಳಿಸಿ ಬಳಿಕ ಈ ಸ್ಟ್ರಾಗಳನ್ನು ತಯಾರು ಮಾಡಲಾಗುತ್ತಿದೆ. ಇದಕ್ಕಾಗಿ ಯಂತ್ರೋಪಕರಣಗಳನ್ನೂ ಬಳಕೆ ಮಾಡಲಾಗುತ್ತದೆ. ಸಂಪೂರ್ಣವಾಗಿ ರಾಸಾಯನಿಕ ಮುಕ್ತ ಕ್ರಮಗಳ ಮೂಲಕವೇ ಇದನ್ನು ತಯಾರು ಮಾಡಲಾಗುತ್ತದೆ.
ಆರಂಭದಲ್ಲಿ, ಕಾಲೇಜು ಅವರ ಆವಿಷ್ಕಾರಕ್ಕೆ ಧನಸಹಾಯ ನೀಡಿದೆ. ಆ ಬಳಿಕ ಅಕ್ಸೆಂಚರ್ ಮತ್ತು ಎಚ್ಸಿಎಲ್ನಂತಹ ಹಲವಾರು ಕಾರ್ಪೊರೇಟ್ಗಳು ಅಹಮದಾಬಾದ್ ಮೂಲದ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಯೋಜನೆಗೆ ಕೈ ಜೋಡಿಸಿತು. ಮಧುರೈ, ಕಾಸರಗೋಡು ಮೊದಲಾದೆಡೆಗಳಲ್ಲಿಯೂ ಸದ್ಯ ಸ್ಟ್ರಾ ತಯಾರಿಕಾ ಕಂಪನಿಗಳನ್ನು ತೆರೆಯಲಾಗಿದ್ದು, ಅಲ್ಲಿ ಗ್ರಾಮೀಣ ಭಾಗದ ಜನರಿಗೂ ಉದ್ಯೋಗಾವಕಾಶವನ್ನು ನೀಡಲಾಗಿದೆ. ಈ ಉತ್ಪಾದನಾ ಘಟಕಗಳಲ್ಲಿ 18 ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಮಹಿಳೆಯರನ್ನು ಸಬಲಗೊಳಿಸುವ ನಿಟ್ಟಿನಲ್ಲಿಯೂ ಇದು ಸಹಾಯವನ್ನು ಮಾಡುತ್ತಿದೆ ಎಂಬುದು ಶಾಜಿ ಅವರ ಅಭಿಪ್ರಾಯ. ಭಾರತದ ಹಳ್ಳಿಗಳಲ್ಲಿ 20 ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಇರಾದೆ ಇದ್ದು, 200ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಕನಸಿದೆ ಎಂದು ತಿಳಿಸಿದ್ದಾರೆ.
ಇನ್ನು ಭಾರತವನ್ನು ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸ್ವಾವಲಂಬನೆಯ ದೇಶವನ್ನಾಗಿಸುವಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿಯೂ ಈ ಕೆಲಸ ಸಕಾರಾತ್ಮಕ ವಾಗಿ ಕೆಲಸ ಮಾಡಲಿದೆ. ಜೊತೆಗೆ ಪರಿಸರದ ಮೇಲೂ ಅಡ್ಡ ಪರಿಣಾಮ ಬೀರುವುದಿಲ್ಲ. ಹಾಗೆಯೇ ಈ ಸ್ಟ್ರಾ ಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಬೇಡಿಕೆ ಇದ್ದು, ನಮ್ಮನ್ನು ನಾವು ಸಬಲಗೊಳಿಸಲು ಸಾಧ್ಯವಾಗಲಿದೆ ಎಂಬುದು ಶಾಜಿ ಅವರ ಅಭಿಪ್ರಾಯ.
ಅವರ ಈ ಸಾಧನೆಗೆ ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (ಇಡಿಐಐ) ಯಿಂದ ಶ್ರೇಷ್ಠ ಉದ್ಯಮಿ ಗುರು ಪುರಾಸ್ಕರ 2020 ಮತ್ತು ನವದೆಹಲಿಯ ಅಸ್ಸೋಚಮ್ ಸ್ಟಾರ್ಟ್-ಅಪ್ ಲಾಂಚ್ಪ್ಯಾಡ್ನಲ್ಲಿ ಮೊದಲ ಸ್ಥಾನ ಸೇರಿದಂತೆ ಹಲವಾರು ಪುರಸ್ಕಾರಗಳೂ ಲಭಿಸಿದೆ.
ಹೌದು, ಬದುಕುವುದಕ್ಕೆ ಏನಾದರೂ ಮಾಡಬೇಕು ಎಂದು ನಂಬಿದವರಿಗೆ ಪ್ರಕೃತಿ ಹಲವಾರು ವಿಧದಲ್ಲಿ ಸಹಾಯ ಮಾಡುತ್ತದೆ. ಈ ವರೆಗೆ ಸುಡಲು ಬಳಸುತ್ತಿದ್ದ ತೆಂಗಿನ ಗರಿಗಳಿಂದ ಶಾಜಿ ಅವರು ಸ್ಟ್ರಾ ತಯಾರಿಸಿ ಈ ಮಾತನ್ನು ಸಾಧಿಸಿ ತೋರಿಸಿದ್ದಾರೆ. ಇಂತಹ ಸಾಧನೆಗೆ ಬೇಕಿರುವುದು ಮನೋಭಿಲಾಷೆ ಮತ್ತು ಇಚ್ಛಾಶಕ್ತಿ ಅಷ್ಟೇ.
ಬೆಂಗಳೂರು ಪ್ರೋಫೆಸರ್ ಶಾಜಿ ವರ್ಗೀಸ್ ಅವರು ತೆಂಗಿನ ಗರಿಗಳಿಂದ ಸ್ಟ್ರಾಗಳನ್ನು ತಯಾರಿಸಿ ಜಾಗತಿಕ ಮಟ್ಟದಲ್ಲಿ ಬೇಡಿಕೆಯನ್ನು ಸೃಷ್ಟಿಸಿದ್ದಾರೆ. 2017ರಿಂದ ಅವರು ಈ ಪರಿಸರ ಸ್ನೇಹಿ ಸ್ಟ್ರಾಗಳನ್ನು ತಯಾರಿಸುತ್ತಿದ್ದಾರೆ, ಅವರ ಸಾಧನೆಗೆ ಹಲವು ಪುರಸ್ಕಾರಗಳೂ ಲಭಿಸಿವೆ. ಅವರ ಕಾರ್ಯ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಪೂರಕವಾಗಿದ್ದು, ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುತ್ತಿದೆ, ಆತ್ಮನಿರ್ಭರ ಭಾರತವನ್ನು ಪ್ರೋತ್ಸಾಹಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.