ಜೂನ್ 26 ಕಾರ್ಗಿಲ್ ವಿಜಯ ದಿವಸ್, ಕಾಲ್ಕೆರೆದು ಯುದ್ಧಕ್ಕೆ ಬಂದ ಪಾಕಿಗಳನ್ನು ಭಾರತೀಯ ಸೇನೆ ಅಟ್ಟಾಡಿಸಿ ಹೊರ ನೂಕಿದ ಸ್ಮರಣೀಯ ದಿನ. ಎದೆತಟ್ಟಿ ನಮ್ಮ ಸಾಮರ್ಥ್ಯದ ಅರಿವನ್ನು ಜಗತ್ತಿಗೆ ತೋರಿಸಿದ ದಿನ. ಭಾರತಾಂಬೆಯ ರಕ್ಷಣೆಗೆ ಬಲಿದಾನಗೈದ ನೂರಾರು ವೀರ ಯೋಧರ ತ್ಯಾಗವನ್ನು ಸ್ಮರಿಸಿ ಕಂಬನಿ ಮಿಡಿಯಬೇಕಾದ ದಿನ.
ಕಾರ್ಗಿಲ್ ವಿಜಯೋತ್ಸವ ಎಂಬುದು ಕುಣಿದು ಕುಪ್ಪಳಿಸುವ ದಿನವಲ್ಲ. ಇಲ್ಲಿ ಪಾಕಿಸ್ಥಾನಿಯರನ್ನು ನಾವು ಸೋಲಿಸಿದ್ದೇವೆ ಎಂಬ ಹೆಮ್ಮೆ ಇದೆ ನಿಜ, ಆದರೆ ಇದಕ್ಕಾಗಿ ನಮ್ಮ ಯೋಧರ ರಕ್ತ ಹರಿದಿದೆ ಎಂಬ ನೆನಪೂ ನಮಗೆ ಇರಲಿ. ಇಲ್ಲಿ ಬಲಿದಾನ ಮಾಡಿದ ಯೋಧರು ಯಾರೂ ರಾಜಕಾರಣಿಗಳ, ಉದ್ಯಮಿಗಳ, ಶ್ರೀಮಂತರ ಮಕ್ಕಳಲ್ಲ. ಈ ಮಣ್ಣಿನ ಬಡವರ ಮಕ್ಕಳು. ಅವರವರ ಕುಟುಂಬಕ್ಕೆ ಬೆನ್ನೆಲುಬಾಗಿದ್ದವರು. ತಾಯ್ನಾಡಿನ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿ ಅಮರರಾದವರು.
1999ರ ಕಾರ್ಗಿಲ್ ಯುದ್ಧದಲ್ಲಿ ಮೊದಲು ಹುತಾತ್ಮರಾದವರು ಕರ್ನಲ್ ಸೌರಭ್ ಕಾಲಿಯಾ. ಯುದ್ಧದ ವೇಳೆ ಕ್ರೂರ ಪಾಕಿಗಳ ಕೈಗೆ ಸಿಕ್ಕಿ ಬಿದ್ದು ಯುದ್ಧ ಕೈದಿಯಾಗಿ ಬಳಿಕ ಅತ್ಯಂತ ಅಮಾನುಷವಾಗಿ ಗುರುತೂ ಸಿಗದ ರೀತಿಯಲ್ಲಿ ಹತ್ಯೆಯಾಗಿ ಹೋದವರು. ಹುತಾತ್ಮರಾದಾಗ ಇವರಿಗೆ ಕೇವಲ 23 ವರ್ಷ. ಆದರೆ ಇವರ ಸಾವಿಗೆ ನ್ಯಾಯ ಕೊಡುವಂತೆ ಈಗಲೂ ಅವರ ಕುಟುಂಬ ಸರ್ಕಾರವನ್ನು ಅಂಗಲಾಚುತ್ತಿದೆ. ಕಾಲಿಯಾ ಹತ್ಯೆಯನ್ನು ಖಂಡಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕ್ ವಿರುದ್ಧ ದಾವೆ ಹೂಡುವಂತೆ ಬೇಡುತ್ತಿದೆ. ಆದರೆ ನಮ್ಮ ಸರ್ಕಾರ ಕಣ್ಣಿದ್ದೂ ಕುರುಡಾದಂತೆ ವರ್ತಿಸುತ್ತಿದೆ.
ಕ್ಯಾಪ್ಟನ್ ವಿಕ್ರಮ್ ಬಾತ್ರಾ ಕೂಡ ಕಾರ್ಗಿಲ್ ಯುದ್ಧ ಮಾಡುತ್ತಾ ಶತ್ರು ಪಾಳಯದಲ್ಲಿ ನಡುಕ ಹುಟ್ಟಿಸಿ ಬಳಿಕ ವೀರಮರಣವನ್ನು ಹೊಂದಿದವರು. ಇವರನ್ನು ಶೇರ್ ಶಾ ಎಂದೇ ಕರೆಯಲಾಗುತ್ತದೆ. ಪರಮವೀರ ಚಕ್ರ ನೀಡಿ ಗೌರವಿಸಲಾಗಿದೆ.
ಕ್ಯಾಪ್ಟನ್ ಅಂಜು ನಾಯರ್ ಮತ್ತೋರ್ವ ಕಾರ್ಗಿಲ್ ಹುತಾತ್ಮ. ಯುದ್ಧದ ವೇಳೆ ಇವರು ತೋರಿಸಿದ ಅಪ್ರತಿಮ ಸಾಹಸಕ್ಕಾಗಿ ಇವರಿಗೆ ಮಹಾವೀರ ಚಕ್ರ ಪ್ರಶಸ್ತಿಯನ್ನು ನಿಡಿ ಗೌರವಿಸಲಾಗಿದೆ.
ಹವಾಲ್ದಾರ್ ಯೋಗೇಂದ್ರ ಸಿಂಗ್, ತನಗೆ 15ಗುಂಡುಗಳು ತಗುಲಿದ್ದರೂ ೭ ಪಾಕಿಸ್ಥಾನಿ ಸೈನಿಕರನ್ನು ಕೊಂದ ಗೌರವ ಇವರದ್ದು.
ಕ್ಯಾಪ್ಟನ್ ವಿಜಿಯಾಂತ್, ಲೆ.ಕೋಲೋನಿಯಲ್ ವಿಶ್ವನಾಥ್, ಲೆ.ವಿಜಯರಾಘವನ್, ಮೇಜರ್ ಕಮಲೇಶ್ ಪಾಠಕ್, ಮೇಜರ್ ರಾಜೇಶ್ ಸಿಂಗ್ ಅಧಿಕಾರಿ, ಸಚಿನ್ ಕುಮಾರ್ ಖಂಡೇರಿಯಾ, ಕ್ಯಾ. ಹರ್ಮಿಂಧರ್ ಪಾಲ್ ಸಿಂಗ್, ಮೇ. ಮನೋಜ್ ತಲ್ವಾರ್, ಮೇ. ವಿವೇಕ್ ಗುಪ್ತಾ, ಕ್ಯಾ. ಅಮೋಲ್ ಕಾಲಿಯಾ, ಕ್ಯಾ. ಸುಮಿತ್ ರಾಯ್, ನಾಯ್ಕ್ ಚಮನ್ ಸಿಂಗ್ ಸೇರಿದಂತೆ ಅನೇಕ ಕಾರ್ಗಿಲ್ ಯುದ್ಧ ಹುತಾತ್ಮರ ಯಶೋಗಾಥೆಗಳು ನಮ್ಮ ಹೃದಯವನ್ನು ಕಲುಕುತ್ತವೆ.
ನಮ್ಮ ಮಕ್ಕಳು ಈ ದೇಶಕ್ಕಾಗಿ ಅಮರರಾಗಿದ್ದಾರೆ ಎಂಬ ಹೆಮ್ಮೆ ಈ ಯೋಧರ ಹೆತ್ತವರಿಗಿದೆ. ಆದರೆ ನಮ್ಮ ಸರ್ಕಾರವಾಗಲಿ, ನಾಗರಿಕರು ಎನಿಸಿಕೊಂಡವರಾಗಲಿ ಯಾರೂ ಇಂದು ಮೃತ ಯೋಧರ ಕುಟುಂಬಿಕರನ್ನು ನೆನೆಯುತ್ತಿಲ್ಲ. ಮಕ್ಕಳನ್ನು ಕಳೆದುಕೊಂಡು ಅವರ ಅನುಭವಿಸುತ್ತಿರುವ ದುಃಖಗಳೂ ನಮಗೆ ಅರ್ಥವಾಗುತ್ತಿಲ್ಲ. ದೇಶದ ಕೋಟ್ಯಾಂತರ ನಾಗರಿಕರಲ್ಲಿ ಅವರೂ ಒಬ್ಬರು ಎಂಬುದು ನಿಜ. ಆದರೆ ಈ ದೇಶಕ್ಕಾಗಿ ಹೋರಾಡಿದ ವೀರ ಕಲಿಗಳನ್ನು ಹೆತ್ತವರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಕಾರ್ಗಿಲ್ ವಿಜಯೋತ್ಸವ ಎಂದು ಪಾಕ್ ವಿರುದ್ಧ ನಾಲ್ಕು ಘೋಷಣೆಗಳನ್ನು ಹಾಕಿ, ಸಭೆ, ಸಮಾರಂಭಗಳನ್ನು ಏರ್ಪಡಿಸಿ, ಗಂಟೆಗಟ್ಟಲೆ ರಾಜಕಾರಣಿಗಳಿಂದ, ಸೆಲೆಬ್ರಿಟಿಗಳಿಂದ ಭಾಷಣ ಮಾಡಿಸಿ, ಫೇಸ್ಬುಕ್, ವಾಟ್ಸಾಪ್ನಲ್ಲಿ ವಿಜಯದ ಬಗ್ಗೆ ಸ್ಟೇಟಸ್ಗಳನ್ನು ಹಾಕಿಬಿಟ್ಟರೆ ಮಡಿದ, ಯುದ್ಧದಲ್ಲಿ ಅಂಗಾಂಗ ಕಳೆದುಕೊಂಡ ನೂರಾರು ಯೋಧರ ಬಲಿದಾನದ ಋಣ ಸಂದಾಯವಾಗಲಾರದು.
ನಮ್ಮ ಯೋಧರ, ಅವರ ಕುಟುಂಬಗಳ ಸ್ಥಿತಿಗತಿಗಳನ್ನು ಸುಧಾರಿಸುವ ಕಾರ್ಯ ನಮ್ಮಿಂದ ನಡೆಯಬೇಕು, ಕಾರ್ಗಿಲ್ನಂತಹ ಮತ್ತೊಂದು ಯುದ್ಧ ನಡೆಯದಂತೆ, ದೇಶದಲ್ಲಿ, ಗಡಿಯಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಈ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ. ಭಾರತ ಎಂದಿಗೂ ಇತರ ದೇಶದ ಮೇಲೆ ದಂಡೆತ್ತಿ ಹೋಗಿಲ್ಲ, ಹೋಗುವುದೂ ಇಲ್ಲ ಎಂಬುದು ಇತಿಹಾಸದಿಂದ ಸಾಬೀತಾಗಿದೆ. ನಮ್ಮ ಮೇಲೆ ದಂಡೆತ್ತಿ ಬರುವವರನ್ನೂ ನಾವು ಎಂದಿಗೂ ಸಮ್ಮನೆ ಬಿಡಲಾರೆವು ಎಂಬುದೂ ಶತಸಿದ್ಧ. ಇದರ ಅರಿವು ಪಾಕಿಸ್ಥಾನಕ್ಕೆ ಈಗಾಗಲೇ ಆಗಿದೆ. ಆದರೆ ಗಡಿಯಲ್ಲಿ ವಾಮಮಾರ್ಗದ ಮೂಲಕ ಅದು ನಮ್ಮನ್ನು ಕೆರಳಿಸುವ ಪ್ರಯತ್ನ ನಡೆಸುತ್ತಲೇ ಇದೆ. ಇದಕ್ಕೆ ತಕ್ಕನಾದ ಉತ್ತರವನ್ನು ನಮ್ಮ ಸೈನಿಕರು ನೀಡುತ್ತಲೇ ಇದ್ದಾರೆ. ನಮ್ಮ ಆ ವೀರ ಸೈನಿಕರಿಗೆ ನೈತಿಕ ಧೈರ್ಯ ತುಂಬುವ ಕಾರ್ಯವೂ ನಮ್ಮಿಂದಾಗಬೇಕಿದೆ.
ಇಂದಿನ ನಮ್ಮ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್, ಮುಂದೆಂದೂ ಕಾರ್ಗಿಲ್ನಂತಹ ಯುದ್ಧ ನಡೆಯಲು ಬಿಡಲಾರೆವು ಎಂಬ ಮಾತನ್ನಾಡಿದ್ದಾರೆ. ಅವರ ಮಾತುಗಳು ನಿಜವಾಗಲಿ, ನಮ್ಮ ಯೋಧರ ಬಲಿದಾನ ಸಾರ್ಥಕವಾಗಲಿ, ಶತ್ರುಗಳೆಂದೂ ನಮ್ಮ ಮೇಲೆ ದಂಡೆತ್ತಿ ಬರುವ ಸಾಹಸ ಮಾಡದಿರಲಿ. ಶತ್ರುಗಳು ನಮ್ಮನ್ನು ಕಣ್ಣೆತ್ತಿ ನೋಡಲೂ ಭಯ ಪಡುವಂತೆ ಬಲಿಷ್ಠರಾಗೋಣ, ಶಾಂತಿ ಪ್ರಿಯರಾಗೋಣ, ಯೋಧರ ಸಾಹಸ, ಧೈರ್ಯ, ತ್ಯಾಗಗಳಿಂದ ಸದಾ ಪ್ರೇರಿತರಾಗೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.